Friday, 29th November 2024

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ

ಯಶೋ ಬೆಳಗು

ಯಶೋಮತಿ ಬೆಳಗೆರೆ

ಸದಾ ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತಿದ್ದವರು ಇದ್ದಕ್ಕಿದ್ದಂತೆ ಕೈಕೊಡವಿ ಕೊಂಡು ಬಾರದ ಲೋಕಕ್ಕೆ ಹೊರಟು ಹೋದಾಗ ಜೀವನದಲ್ಲಿ ಮೊದಲ ಬಾರಿಗೆ ಅನಾಥ ಳಾಗಿ ಹೋದ ಅನುಭವ. ಹಟ, ಮುನಿಸು, ಜಗಳ, ಪ್ರೀತಿ, ಹೊಂದಾಣಿಕೆ ಎಲ್ಲವೂ ಸ್ತಬ್ಧ! ಕಾಡಿ ಬೇಡಿ ವರವಾಗಿ ಪಡೆದ  ಮಗುವಿಗೆ ದೊಡ್ಡ ಆಸರೆಯಾಗಿ ನಿಲ್ಲಬೇಕಿದ್ದ ರಕ್ಷಕ ಈ ಅಸಂಖ್ಯ ಜನಜಂಗುಳಿಯ ನಡುವೆ ಒಂದು ಸಣ್ಣ ಸುಳಿವೂ ಕೊಡದೆ ಶಾಶ್ವತವಾಗಿ ಮರೆಯಾಗಿ ಹೋದಾಗ ನಿಂತಿದ್ದ ಧರೆಯೇ ಕುಸಿದು ಹೋದಂತಾಗಿತ್ತು.

ಮನ ಸಿನಾಳದಲ್ಲಿ ನಿರಂತರ ಮೌನ. ಎಲ್ಲದರೆಡೆಗೆ ನಿರಾಸಕ್ತಿ. ಸದಾ ತುಂಬಿ ತುಳುಕುವ ಕಣ್ಣೀರಿನಿಂದಾಗಿ ಕನಸು ಗಳು ದೂರ ಸರಿದು ಹೋದವು. ಎಲ್ಲರಿಂದ,  ಎಲ್ಲದ ರಿಂದ ದೂರಾಗಿ ನಾವಾಗೇ ಕಟ್ಟಿಕೊಂಡ ನಮ್ಮ ಪುಟ್ಟ ಗೂಡಿಗೆ ಸಿಡಿಲು ಬಡಿದಿತ್ತು. ರಕ್ಷಿಸಲು ಆ ಭಗವಂತ ನೂ ಬರಲಿಲ್ಲ. ಆದರೆ ಇನ್ನೂ ಲೋಕ ವರಿಯದ ಕಂದ, ಸದಾ ನಗುನಗುತ್ತಿದ್ದ ತನ್ನಮ್ಮ ಒಮ್ಮೆಲೇ ಹೀಗೆ ಮಂಕಾಗಿ ಕುಳಿತಿರುವುದನ್ನು ನೋಡಲಾಗದೆ ಪರಿಪರಿ ಯಾಗಿ ಅವಳನ್ನು ನಗಿಸುವ ಆಟವಾಡುತ್ತಿದ್ದರೆ ಮತ್ತಷ್ಟು ದುಃಖ ಒತ್ತರಿಸಿ ಬರುತ್ತಿತ್ತು.

ಬಂಗಾರದಂಥ ಬದುಕಿಗೆ ಅದ್ಯಾರ ದೃಷ್ಟಿ ತಾಕಿತೋ ಅನ್ನುವ ಹಲುಬಾಟ. ಸಾಂತ್ವನದ ನುಡಿಗಳು ಈಟಿಗಳಂತೆ ಚುಚ್ಚಲಾರಂಭಿಸಿದ್ದವು. ಕಣ್ಣೊರೆ ಸುವ ನೆಪದಲ್ಲಿ ಕಣ್ಣು ಹಾಕುವ ಅವಕಾಶವಾದಿಗಳು, ಕಿಚ್ಚಿನಿಂದ ಕುದಿಯು ತ್ತಿದ್ದ ಮನಸುಗಳ ಸಾವಿರ ಸಾವಿರ ಪ್ರಶ್ನೆಗಳು ಉತ್ತರ ವಿಲ್ಲದೆ ಸುಮ್ಮನೆ ಮಲಗಿಬಿಟ್ಟವು. ಮುಂದಿನ ಭವಿಷ್ಯ ದ ಗತಿಯೇನು ಎಂಬ ಚಿಂತೆ ಆವರಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದೆ. ಇದರ ಪರಿಣಾಮವಾಗಿ ದೇಹದ ತೂಕ ಹೆಚ್ಚಾಗಿ ಕಾಲುಗಳಲ್ಲಿ ವಿಪರೀತ ನೋವು. ಹೆಜ್ಜೆ ಎತ್ತಿಡ ಲಾಗದಷ್ಟು ಭಾರ. ಎದ್ದರೆ ತಲೆಸುತ್ತು, ಅಜೀರ್ಣ ಸಮಸ್ಯೆ Acidity, Constipation, Dry skin, hair fall, ಓದಲು, ಬರೆಯಲು ಕಣ್ಣಿಗೆ ಕನ್ನಡಕ, ನಿದ್ರೆಗೆ ಮಾತ್ರೆಯ ಅನಿವಾರ್ಯತೆ ಉಂಟಾ ಗಿ ಉಲ್ಲಾಸ ರಹಿತ ಬದುಕಿನಿಂದಾಗಿ ಮೆಲ್ಲಗೆ ಮುಪ್ಪು ಆವರಿಸಿಕೊಳ್ಳತೊಡಗಿತು. ದಿನೇದಿನೆ ಬದುಕು ಮುಂ ದೆ ಸಾಗುವ ಬದಲು ಹಿಂದಕ್ಕೆ ಸರಿಯಲಾ ರಂಭಿಸಿತ್ತು.

ಇದನ್ನೆಲ್ಲ ಕಂಡ ಗೆಳತಿ, ನನ್ನ ಸ್ಥಿತಿಯನ್ನು ನೋಡಲಾಗದೆ, ಚಿಂತೆ ಮಾಡುವುದರಿಂದ ಏನಾದರೂ ಪರಿಹಾರ ದೊರೆಯುವುದಿದ್ದರೆ ದಿನಪೂರ್ತಿ,
ವರ್ಷಪೂರ್ತಿ ಚಿಂತೆ ಮಾಡುತ್ತಲೇ ಇರು. ಆದರೆ ಅದರಿಂದ ನಿನ್ನನ್ನು ನೀನು ಕಳೆದುಕೊಳ್ಳುವುದಲ್ಲದೆ, ನಿನ್ನ ಮಗನನ್ನು ಇನ್ನೂ ಹೆಚ್ಚಿನ ಸಂಕಷ್ಟಕ್ಕೆ
ದೂಡುತ್ತೀಯ. ನಿನಗೇನಾದರೂ ಆದರೆ ನಿನ್ನ ಮಗನನ್ನು ಯಾರು ಆರೈಕೆ ಮಾಡುತ್ತಾರೆ? Have gratitude for whatever the time you shared with your husband.

ಮಗನೊಂದಿಗೆ ಇಷ್ಟು ವರ್ಷ ಕಳೆಯಲಿಕ್ಕೆ ಅವಕಾಶವಿತ್ತ ಬದುಕಿಗೆ ಋಣಿಯಾ ಗಿರು. ಅಪ್ಪನ ಮುಖವನ್ನೇ ಕಾಣದೆ ಹುಟ್ಟುವ ಮಕ್ಕಳೆಷ್ಟಿಲ್ಲ? ಯಾರಿಗೆ ಗೊತ್ತು? ಯಾರ ಬದುಕು ಯಾವ ಕ್ಷಣದಲ್ಲಿ ಕೊನೆಗೊಳ್ಳುತ್ತದೆ ಎಂದು… Life is still with you. So celebrate it. And build it the way you want….  ಅನ್ನುವ ಮಾತುಗಳು ಜೀವಕ್ಕೆ ಉಸಿರು ತುಂಬಿದಂತಾದವು. ಇದು ನನಗೆ ಒದಗಿಬಂದ ಚಿಂತೆಯ ಸ್ವರೂಪವಾದರೆ, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಚಿಂತೆಯಿಂದ ನರಳುತ್ತಿರುವುದನ್ನು ನಾವು ಕಾಣಬಹುದು. ಬೆಳ್ಳಗಿನವರೆದುರಿಗೆ ತಾವು ಕಪ್ಪಾಗಿರುವುದರ ಚಿಂತೆ, ಎತ್ತರದವರೆದುರು ತಾವು ಕುಳ್ಳಗಿರುವುದರ ಚಿಂತೆ, ದಪ್ಪಗಿರುವವರಿಗೆ ತೆಳ್ಳಗಾಗುವ ಚಿಂತೆ, ತೆಳ್ಳಗಿರುವವರಿಗೆ ದಪ್ಪಗಾಗುವ ಚಿಂತೆ, ಮಕ್ಕಳೊಂದಿಗರೆದುರಿಗೆ ಮಕ್ಕಳಾಗದವರ ಚಿಂತೆ, ವಿವಾಹಿತರೆದುರಿಗೆ ಅವಿವಾಹಿತರ ಚಿಂತೆ, ಸಿರಿವಂತನಾಗಲು ಬಡವನ ಚಿಂತೆ, ಆರೋಗ್ಯವಂತ ರಾಗಲು ಅನಾರೋಗ್ಯದವರ ಚಿಂತೆ.

ಪಕ್ಕದ ಮನೆ ಯ ಮಗುವಿನಂತೆ ನಮ್ಮ ಮಗು ಚೆನ್ನಾಗಿ ಓದಿ ಬರೆದು, ಅಂಕಗಳಿಸುತ್ತಿಲ್ಲವೆಂಬ ಚಿಂತೆ, ಅವರ ಹೆಂಡತಿಯಷ್ಟು ನನ್ನ ಹೆಂಡತಿ ಸುಂದರಿ ಯಲ್ಲವೆನ್ನುವ ಚಿಂತೆ ಹಾಗೆಯೇ ಅವರ ಗಂಡನಷ್ಟು ನನ್ನ ಗಂಡ ಚತುರ ನಲ್ಲ ಎನ್ನುವ ಚಿಂತೆ. ಕುರೂಪಿಗಳಿಗೆ ಸುರದ್ರೂಪದ ಚಿಂತೆ, ಹಳ್ಳಿಗಳಲ್ಲಿರು ವವರಿಗೆ ಝಗಮಗಿಸುವ ಪಟ್ಟಣ ಸೇರುವ ಚಿಂತೆ, ಪಟ್ಟಣದಲ್ಲಿರುವವರಿಗೆ ಗಗನಕ್ಕೇರುತ್ತಿರುವ ಬೆಲೆಗಳ ನಡುವೆ ದುಡಿಯುವ ಒತ್ತಡದ ಬದುಕಿನಿಂದ ತಪ್ಪಿಸಿಕೊಂಡು ಹಳ್ಳಿಯಲ್ಲಿ ಶುದ್ಧ ಗಾಳಿ, ಬೆಳಕಿನ ನಡುವೆ ಪ್ರಶಾಂತವಾದ ಬದುಕು ಕಟ್ಟಿಕೊಳ್ಳುವ ಚಿಂತೆ. ಅವರಿಗಿರುವಷ್ಟು ಚೆಂದದ ಮನೆಯಿಲ್ಲವೆಂಬ ಚಿಂತೆ, ಅವರಷ್ಟು ದೇಶ ಸುತ್ತಿಲ್ಲವೆಂಬ ಚಿಂತೆ, ಅವರಂತೆ ಅಧಿಕಾರವಿಲ್ಲ ವೆನ್ನುವ ಚಿಂತೆ, ಅವರಷ್ಟು ಯಶಸ್ಸು ಸಿಗಲಿಲ್ಲವೆಂಬ ಚಿಂತೆ, ಅವರ ಬಳಿಯಿರುವಂತಹ ಕಾರು, ಬೈಕು ನಮ್ಮ ಬಳಿ ಇಲ್ಲವೆನ್ನುವ ಚಿಂತೆ, ಮಗಳ ಮದುವೆಯ ಚಿಂತೆ, ಮಗನಿಗೆ ತಕ್ಕ ಹೆಂಡತಿ ಸಿಗಲಿಲ್ಲವೆಂಬ ಚಿಂತೆ, ಅವರಷ್ಟು ವಿಜೃಂಭಣೆಯ ಬದುಕು ನಮ್ಮದಾಗಲಿಲ್ಲವೆಂಬ ಚಿಂತೆ, ಅವರಲ್ಲಿರುವಷ್ಟು ಹಣ, ಆಸ್ತಿ, ಆಭರಣ ನಮ್ಮಲ್ಲಿಲ್ಲವೆಂಬ ಚಿಂತೆ, ಮಾಡಿದ ಸಾಲ ತೀರಲಿಲ್ಲವೆಂಬ ಚಿಂತೆ, ಕೊಟ್ಟ ಹಣ ಬರಲಿಲ್ಲವೆಂಬ ಚಿಂತೆ, ನೆಟ್ಟ ಬೆಳೆಗೆ ಹುಳ ಬಿದ್ದೀತೆಂಬ ಚಿಂತೆ, ಹಾಕಿದ ಬಂಡವಾಳ ನಷ್ಟವಾದೀತೆಂಬ ಚಿಂತೆ, ಬಯಸಿದ ಸಂಗಾತಿ ದೊರೆಯಲಿಲ್ಲವೆಂಬ ಚಿಂತೆ, ಅಷ್ಟೆಲ್ಲ ಕಷ್ಟಪಟ್ಟು ಓದಿ ಅಂಕ ಗಳಿಸಿದರೂ ಅದಕ್ಕೆ ತಕ್ಕ ಉದ್ಯೋಗ ದೊರೆಯಲಿಲ್ಲವೆಂಬ ಚಿಂತೆ, ಅವರಷ್ಟು ದೊಡ್ಡ ಹೆಸರು ಮಾಡಲಿಲ್ಲವೆಂಬ ಚಿಂತೆ, ಅವರಿಗಿರುವ ಜನಪ್ರಿಯತೆ ನಮಗಿಲ್ಲವೆಂಬ ಚಿಂತೆ, ಅವರಿಗೆ ಸಿಗುವ ಮಾನ್ಯತೆ ನಮಗೆ ಸಿಗಲಿಲ್ಲವೆಂಬ ಚಿಂತೆ, ಅವರಷ್ಟು ಚೆಂದಗೆ ಮಾತನಾಡಲು ಬರುವುದಿಲ್ಲವೆಂಬ ಚಿಂತೆ, ಕಂಡ ಕನಸು ಈಡೇರಲಿಲ್ಲ ವೆಂಬ ಚಿಂತೆ….. ಹೀಗೆ ನೋವಿಲ್ಲದ ಮನೆಯಿಂದ ಸಾಸಿವೆ ತರುವಷ್ಟೇ ಕಷ್ಟ ಚಿಂತೆಯಿಲ್ಲದ ಜನರನ್ನು ಹುಡುಕುವುದು.

ಅಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಯಾವುದಾದರೂ ಒಂದು ನಿಗದಿತ ವಿಷಯದ ಕುರಿತು ಆಳವಾಗಿ
ಚಿಂತಿಸುತ್ತಾ, ಪರಿಹಾರವಾಗಿ ಅದಕ್ಕೊಂದು ವಿಶೇಷ ಅರ್ಥವನ್ನು ಗ್ರಹಿಸಿಕೊಂಡು ಅದಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಳ್ಳುವುದು ಚಿಂತನೆ. ಈ
ನಿಟ್ಟಿನಲ್ಲಿ ಶ್ರೀ ಶಂಕರಾಚಾರ್ಯ, ಭಗವಾನ್ ಬುದ್ಧ, ಬಸವಣ್ಣ, ಆಚಾರ್ಯ ರಜನೀಶ್, ಜಿಡ್ಡು ಕೃಷ್ಣಮೂರ್ತಿ, ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್,
ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಡಿ.ವಿ.ಜಿ ಮುಂತಾದವರ ಕೊಡುಗೆ ಅಪಾರ. ಆದರೆ ಯಾವುದೋ ಒಂದು ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಕೇವಲ ಅದರ ಬಗ್ಗೆ ವಿಪರೀತವಾಗಿ ಆಲೋಚನೆ ಮಾಡುತ್ತಾ ನಮ್ಮ ಮನಸ್ಸಿಗೆ ದೀರ್ಘಕಾಲದ ಕೊರಗು ತಂದುಕೊಂಡರೆ ಅದು ಪರಿಹಾರ ಕಾಣದ ಚಿಂತೆಯಾಗಿ, ಕ್ರಮೇಣವಾಗಿ ಅದು ನಮ್ಮ ಮೆದುಳಿನ ಮೇಲೆ ಒತ್ತಡ ಬೀರಲು ಆರಂಭವಾಗುತ್ತದೆ.

ಇದರಿಂದಾಗಿ ನಮ್ಮ ದೇಹದಲ್ಲಿ ಕಾರ್ಟಿಸೋಲ್ ಎಂಬ ಗ್ರಂಥಿ ಹೆಚ್ಚು ಸ್ರವಿಸಲಾರಂಭವಾಗಿ, ನಮ್ಮ ಮೆದುಳಿನ ಜೀವಕೋಶಗಳು ಹಾನಿಯಾಗುವುದು ಮಾತ್ರವಲ್ಲದೆ ಮೆದುಳಿನ ಕಾರ್ಯ ಚಟುವಟಿಕೆ ಗಣನೀಯವಾಗಿ ತಗ್ಗುತ್ತದೆ. ದೀರ್ಘಕಾಲದಲ್ಲಿ ಇದು ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತದೆ. ಊಟದಲ್ಲಿ ನಿರಾಸಕ್ತಿ ತಂದೊಡ್ಡುತ್ತದೆ. ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಮಲಬದ್ಧತೆ ಉಂಟಾಗುತ್ತದೆ. ಹಾಗೂ ಕರುಳಿನಲ್ಲಿ ಸ್ರವಿಸುವ ಹಾರ್ಮೋನಿನ ಏರಿಳಿತಗಳಿಂದಾಗಿ ಹೆಣ್ಣುಮಕ್ಕಳಿಗೆ ಋತುಚಕ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ಗಳು ದೊರೆಯದೇ, ದೇಹದಲ್ಲಿ ರೋಗನಿರೋಧಕ ಶಕ್ತಿಯು ಕ್ಷೀಣಿಸುತ್ತದೆ.

ಇದರಿಂದಾಗಿ ದೇಹ ದುರ್ಬಲವಾಗಿ ಅನೇಕ ಸೋಂಕುಗಳು ತಗುಲುವ ಸಾಧ್ಯತೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಮಾನಸಿಕ ಅಸಮತೋಲನದಿಂದಾಗಿ
ಹೃದಯದ ಮೇಲೆ ಉಂಟಾಗುವ ಒತ್ತಡದಿಂದಾಗಿ ರಕ್ತನಾಳಗಳು ಹಿಗ್ಗಿ ರಕ್ತನಾಳಗಳ ಸಮಸ್ಯೆಯ ಜತೆಗೆ ಅಽಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಗಳಂ
ತಹ ರೋಗಗಳಿಗೆ ಆಹ್ವಾನವಿತ್ತಂತಾಗುತ್ತದೆ. ಅಲ್ಲದೇ, ಹೃದಯಾಘಾತದಂತಹ ಮಾರಣಾಂತಿಕ ರೋಗಗಳನ್ನೂ ತಂದೊಡ್ಡುತ್ತದೆ.

ನಿರಂತರವಾದ ಮಾನಸಿಕ ಒತ್ತಡಗಳಿಂದ ದೇಹದ ಒಳಗಷ್ಟೇ ಅಲ್ಲದೆ ದೇಹದ ಮೇಲ್ಭಾಗವನ್ನೂ ಆವರಿಸಿಕೊಂಡು ದೇಹರಕ್ಷಣೆಯ ಜತೆಗೆ ಸೌಂದ
ರ್ಯಕ್ಕೂ ಕಾರಣವಾದ ನಮ್ಮ ದೇಹದ ಚರ್ಮದಲ್ಲಿ ರುವ ಎಂಡೋಕ್ರೈನ್ ಗ್ರಂಥಿಗಳ ಉತ್ಪಾದನೆಕುಂಠಿತಗೊಂಡು ಚರ್ಮವು ಅನಾರೋಗ್ಯಗೊಂಡು
ಸೋರಿಯಾಸಿಸ್, ಡರ್ಮಸೈಟೀಸ್, ಅಲೋಪೆಸಿಯಾ ಇತ್ಯಾದಿ ಸಮಸ್ಯೆಗಳುಂಟಾಗುತ್ತದೆ.

ಒಂದು ಸಂಶೋಧನೆಯ ಪ್ರಕಾರ ಇತ್ತೀಚೆಗೆ ಹೆಚ್ಚಾಗುತ್ತಿರುವ ಕ್ಯಾನ್ಸರ್ ರೋಗಕ್ಕೆ ಪರೋಕ್ಷವಾಗಿ ಕಾರಣ ಈ ದೀರ್ಘಕಾಲದ ಚಿಂತೆ. ಮೇಲ್ನೋಟಕ್ಕೆ
ಎಲ್ಲವೂ ಸರಿಯಾಗಿದೆ ಅನ್ನುವಂತೆ ಕಂಡರೂ ಸುಪ್ತ ಮನಸಿನೊಳಗೆ ಅಡಗಿಕೊಂಡಿರುವ ನೋವಿನ ಎಳೆಗಳು ನಿಧನಿಧಾನಕ್ಕೆ ದೇಹವನ್ನು ತಿಂದು ಹಾಕಲು ಶುರು ಮಾಡುತ್ತವೆ. ಚಿತೆಗೂ ಚಿಂತೆಗೂ ಒಂದು ಸೊನ್ನೆಯಷ್ಟೇ ವ್ಯತ್ಯಾಸವಾದರೂ ಚಿತೆ ಜೀವವಿಲ್ಲದವರನ್ನು ಸುಟ್ಟರೆ, ಚಿಂತೆ ಜೀವಂತ ವಿರುವವರನ್ನು ದಹಿಸುತ್ತದೆ.

ಚಿಂತೆ ಮನಸ್ಸಿನ ಸಂತೋಷವನ್ನು ಹಾಳುಮಾಡಿ, ನಿರುತ್ಸಾಹಿಯನ್ನಾಗಿ ಮಾಡುತ್ತದೆ. ಜತೆಗೆ ದುಡಿಯುವ ಶಕ್ತಿ, ಚೈತನ್ಯವನ್ನು ಕುಗ್ಗಿಸುತ್ತದೆ.
ಚಿಂತಿಸುತ್ತಾ ಹೋದರೆ ನಮ್ಮ ಆಯುಷ್ಯವು ಕ್ಷೀಣಿಸುತ್ತಾ, ಅಕಾಲಿಕ ವೃದ್ಧಾಪ್ಯಕ್ಕೀಡಾಗಿ ಬದುಕನ್ನು ನಶ್ವರಗೊಳಿಸುತ್ತದೆ. ಆದ್ದರಿಂದ ಚಿಂತಿಸುವುದನ್ನು
ಬಿಟ್ಟು ಬದುಕಿರುವಷ್ಟು ಕಾಲ ಸುಖ ಸಂತೋಷದಿಂದ ಜೀವನವನವನ್ನು ಕಳೆಯಬೇಕು. ಮನಸ್ಸಿನ ಸಂತೋಷ ವೃದ್ಧರಲ್ಲೂ ಯೌವನವನ್ನು ಮೂಡಿಸುತ್ತದೆ. ಶಕ್ತಿಯನ್ನು ತುಂಬುತ್ತದೆ. ಯಾರ ಬದುಕಿನಲ್ಲಿ  ಸಂತೋಷ ಇರುವುದೋ ಅವರು ಆರೋಗ್ಯದಿಂದ ಬಾಳುತ್ತಾರೆ. ಬದುಕಬೇಕು, ಸಾಧಿಸಬೇಕು, ಗೆಲ್ಲಬೇಕು ಎಂಬ ಛಲವನ್ನು ಹೊಂದಿರುತ್ತಾರೆ. ಆದ್ದರಿಂದ ನಾವು ನಗುನಗುತ್ತಾ ಸಂತೋಷದಿಂದ ಬಾಳಬೇಕು.

ಚಿಂತೆ ನಮ್ಮನ್ನು ವೃದ್ಧಾಪ್ಯಕ್ಕೆ ದೂಡಿದರೆ, ಸಂತೋಷವು ಯೌವನಾವಸ್ಥೆಯ ಸಾಮರ್ಥ್ಯವನ್ನು ತಂದುಕೊಡುತ್ತದೆ. ನೀವು ಹೃದಯಹೀನಳಾದ ಬ್ರಿಟನ್ನಿನ ಚೆಲುವೆ Salwa hussain ಬಗ್ಗೆ ಕೇಳಿದ್ದೀರಾ? ಈಕೆಗೆ ನಮ್ಮೆಲ್ಲರಂತೆ ದೇಹದೊಳಗೆ ಹೃದಯವೇ ಇಲ್ಲ. ಜಗತ್ತಿನ ಅತ್ಯಪರೂಪದ ಮಹಿಳೆಯಾದ ಈಕೆ ತನ್ನ  ಕೃತಕ ಹೃದಯವನ್ನು ಅದಕ್ಕೆಂದೇ ವಿಶೇಷವಾಗ ತಯಾರಿಸಲಾಗಿರುವ ಒಂದು ಚೀಲದಲ್ಲಿ ಸದಾ (24X7) ಹೊರಬೇಕಾದ ಅನಿವಾರ್ಯತೆ. ಆ ಚೀಲದೊಂದಿಗೆ 6.8 kg ತೂಕವಿರುವಂತಹ ಎರಡು ಬ್ಯಾಟರಿಗಳಿಗೆ ಜೋಡಿಸಲಾದ ಎಲೆಕ್ಟ್ರಿಕ್ ಮೋಟಾರು ಹಾಗೂ ಪಂಪುಗಳು ಮೂಗಿನಿಂದ ಹಾದು ಹೋಗಿ ಗಾಳಿಯನ್ನು ಒಳ ತಳ್ಳುವುದರ ಮುಖಾಂತರ ದೇಹದಲ್ಲಿ ಉಂಟಾಗುವ ರಕ್ತಚಲನೆಯ ಮೂಲಕ ಬದುಕು ಸಾಗಿಸುತ್ತಿರುವ 39 ವರ್ಷ ವಯಸ್ಸಿನ ಸಾಲ್ವಾ ಹುಸೇನ್ ಮದುವೆಯಾಗಿ ಎರಡು ಮಕ್ಕಳ ತಾಯಿ ಕೂಡ ಆಗಿ ತಮ್ಮ ನಗು ಚೆದುರದಂತೆ ಬದುಕುತ್ತಿದ್ದಾರೆಂಬುದು
ಸೋಜಿಗದ ವಿಷಯ.

ಸಣ್ಣಪುಟ್ಟ ವಿಷಯಗಳನ್ನು ವಿಪರೀತವಾಗಿ ಮನಸ್ಸಿಗೆ ಹಚ್ಚಿಕೊಂಡು ಅದರ ಬಗ್ಗೆಯೇ ಚಿಂತಿಸುತ್ತಾ ಕುಳಿತು ಇರುವ ಆರೋಗ್ಯವನ್ನು ಹಾಳು ಮಾಡಿ ಕೊಂಡು ನಂತರ ಆಸ್ಪತ್ರೆಗಳಲ್ಲಿ ವೈದ್ಯರ ಹಿಂದೆ ಅಲೆದಾಡುವ ಪ್ರಮೇಯ ಸೃಷ್ಟಿಸಿಕೊಳ್ಳದಂತೆ ಭೂತ-ಭವಿಷ್ಯಗಳ ನೆನಪು ಕನಸುಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳದೆ ನಮ್ಮೊಂದಿಗಿರುವ ಈ ಕ್ಷಣವನ್ನು ಅತ್ಯಂತ ಉಲ್ಲಾಸಮಯವಾಗಿ, ಅರ್ಥಪೂರ್ಣವಾಗಿ ಕಳೆಯುತ್ತಾ, ಸಾವಿರ ಸಾವಿರ ಚಿಂತೆಗಳನ್ನು ತೊರೆದು ಇರುವಂತೆ ನೆಮ್ಮದಿಯಾಗಿ ಇದ್ದುಬಿಡೋಣ ಅಲ್ಲವೇ?