Saturday, 14th December 2024

ರಾಜ್ಯೋತ್ಸವ ಸನ್ನಿಹಿತದ ಕನ್ನಡದ ಏಳ್ಗೆ, ಅಭಿವೃದ್ದಿ

ತನ್ನಿಮಿತ್ತ

ಸಂದೀಪ್ ಶರ್ಮಾ

ಕನ್ನಡ ರಾಜ್ಯೋತ್ಸವ ಸಂಭ್ರಮಿಸುವ ಘಳಿಗೆ ಬಂದೇ ಬಿಟ್ಟಿತು, ನಾಡು ಕನ್ನಡ ನುಡಿಗಳಿಂದ ಮಿಂದೇಳುವ ಸಮಯ. ಒಂದು ತಿಂಗಳ ಮಟ್ಟಿಗೆ ಹಲವರಿಗೆ ಕನ್ನಡ ಭಾಷೆಯ ಮೇಲೆ ಒಲವು ಬಳಿಕ ಭಾಷೆಯ ಮೇಲೆ ವೈರಾಗ್ಯ. ಮತ್ತೆ ಎಂದಿನಂತೆ ಅನ್ಯ ಭಾಷೆಗಳ ಮೇಲೆ ನಂಟು ಮತ್ತು ಆತುಕೊಳ್ಳುವಿಕೆ ಹೀಗೆಯೇ ಪ್ರತಿ ವರುಷವು. ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನಲೆ ಇದೆ.

ಕನ್ನಡ ಭಾಷೆ ಸರಳ, ಸಹಜ, ಇಂಪು ಸಹ. ಜಾಗತೀಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು, ಹಿನ್ನಡೆಯನ್ನು ಅನುಭವಿಸಿ ತಮ್ಮತನ್ನವನ್ನು ಕಳೆದುಕೊಳ್ಳುತ್ತಿವೆ. ಕಾಲಚಕ್ರವೇ ಒಂದು ಅಚ್ಚರಿ. ಇಲ್ಲಿ ಬದಲಾವಣೆ ನಿರಂತರ. ನಿನ್ನೆ ಹೊಸತು ಇಂದು ಹಳತು. ಇಂದಿನ ಹಳತು ನಾಳೆ ಇಲ್ಲವೇ ಇಲ್ಲ. ಇಲ್ಲಿ ಉಳಿಯುವದು ಕಾಲಕ್ಕೆ ತಕ್ಕಂತೆ ಬದಲಾಗುವ ಸಂಗತಿಗಳು ಮಾತ್ರ. ಹೊಸತು ಹಳೆಯದನ್ನು ಸ್ಥಾನ ಪಲ್ಲಟ ಮಾಡುವಾಗ ಹಳೆಯದನ್ನು ಸಮರ್ಥಿಸಿ ಹೊಸತನ್ನು ವಿರೋಧಿಸಿ ವಾದ ವಿವಾದ ನಡೆಯುತ್ತದೆ. ಕಾಲಕ್ರಮೇಣ ಹೊಸತು ಹಳೆಯದನ್ನು ಹಿಂದಕ್ಕೆ ಹಾಕಿದಾಗ ಈ ವಾದ ವಿವಾದಗಳೆಲ್ಲ ತಣ್ಣಗಾಗಿ ಹಳ್ಳ ಸೇರುತ್ತವೆ. ಇದು ಸಹಜ ಪ್ರವೃತ್ತಿ.

ಜಾಗತೀಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು, ತಮ್ಮತನ ವನ್ನು ಕಳೆದುಕೊಳ್ಳುತ್ತಿವೆ. ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸುವ ಹುನ್ನಾರ ಇರುವುದರಿಂದ ಪ್ರಾದೇಶಿಕ ಭಾಷೆಗಳ ಮೇಲೆ ವ್ಯಾವಸ್ಥಿಕವಾದ ಪ್ರಹಾರ ನಡೆಯುತ್ತಲೇ ಇದೆ. ನಮ್ಮ ಕನ್ನಡ ಭಾಷೆಯನ್ನು ಯಾವ ರೀತಿಯಾಗಿ ಉಳಿಸಿ ಬೆಳೆಸಬೇಕು ಎಂಬುದರ ಬಗ್ಗೆ ಕನ್ನಡಿಗರು ಚಿಂತಿಸುವ ಅಗತ್ಯವಿದೆ. ಪ್ರಾರಂಭದಲ್ಲಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತಾ ನಮ್ಮ ಕನ್ನಡ ನೆಲದಲ್ಲಿಯೇ ಕನ್ನಡಕ್ಕೆ ನೆಲೆ ಇಲ್ಲದ ಉದಾಹರಣೆಗಳು ಕಂಡುಬರುತ್ತಿವೆ.

ಕನ್ನಡ ಭಾಷೆಯ ಏಳ್ಗೆಗಾಗಿ ಸರಕಾರ, ಹತ್ತು ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು, ಸಾಹಿತಿಗಳು ಹೀಗೆ ಅನೇಕರು ಅವರದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇದ್ದಾರೆ. ಕನ್ನಡ ಭಾಷೆಯ ಬಗ್ಗೆ ನಾವು ಜಾಗೃತರಾಗುವುದು ಒಂದು ಕಾವೇರಿ ನೀರು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ, ಉಳಿದಂತೆ ಸಭೆ ಸಮಾರಂಭಗಳಲ್ಲಿ ಮಾತ್ರವಾಗಿದೆ. ನಮ್ಮಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಿರಂತರ ಕಟ್ಟುವ ಕಾರ್ಯ ನಡೆದಿಲ್ಲ ಎಂಬುದು ಅಕ್ಷರಶಃ ಸತ್ಯವಾಗಿದೆ. ವ್ಯವಸ್ಥೆಯಲ್ಲಿ ಪ್ರಮುಖ ಹುದ್ದೆಯಲ್ಲಿರುವವರಿಗೆ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲದ ಮೇಲೆ ವ್ಯವಸ್ಥೆಯ ಪ್ರಮುಖ ಭಾಗೀದಾರರಾದ ಸಾಮಾನ್ಯ ಜನರಿಗೆ ಹೇಗೆ ತಾನೇ ನಂಬಿಕೆ ಬರಲು ಸಾಧ್ಯ? ದಿನ ಕಳೆದಂತೆ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಕನ್ನಡ ಭಾಷೆಯ ಶಿಕ್ಷಣ, ಸರಕಾರಿ ಶಾಲೆ ಬಗ್ಗೆ ಪ್ರಶ್ನೆಗಳು ಬರು ತ್ತಲ್ಲೇ ಇವೆ. ಈ ರೀತಿಯ ಸಮಸ್ಯೆಗಳ ಪರಿಹಾರಕ್ಕಾಗಿ ಕನ್ನಡ ಭಾಷೆಯ ಮೇಲೆ ಒಲವು ಹೆಚ್ಚಾಗಬೇಕಿದೆ. ನಮ್ಮ ಎಲ್ಲಾ ಕನ್ನಡ ಶಾಲೆಗಳಲ್ಲಿ ಜಗತ್ತಿನ ಎಲ್ಲಾ ಬಗ್ಗೆಯ ಮಾಹಿತಿಗಳು ಕನ್ನಡ ಪುಸ್ತಕದಲ್ಲಿಯೇ ಸಿಗುವಂತಹ ವ್ಯವಸ್ಥೆ ಆಗಬೇಕಿದೆ.

ಮಾಧ್ಯಮಗಳು ಕೂಡ ದೇಶ ವಿದೇಶದ ಮಾಹಿತಿಯನ್ನು ಕನ್ನಡದಲ್ಲಿ ತಿಳಿಸುವಂತೆ ಮಾಡಬೇಕು. ಯಾರು ಏನೇ ಓದಲು ತಿಳಿಯಲು ಪ್ರಯತ್ನಿಸಿದರೂ ಅದೂ ಕನ್ನಡದಲ್ಲಿ ಸಿಗುವಂತೆ ಮಾಡಬೇಕಾಗಿದೆ. ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುತ್ತದೆ. ಅನ್ಯಭಾಷೆಗಳ ಸಾಹಿತ್ಯವನ್ನು ಅದರ ಆಳ ಅರಿವನ್ನು ಅರಿತು ಜ್ಞಾನವನ್ನು ಹೆಚ್ಚಿಸಿಕೊಂಡು ನಮ್ಮ ಭಾಷೆಯನ್ನು ಮತ್ತಷ್ಟು ವೃದ್ಧಿಯಾಗುವಂತೆ ನೋಡಿಕೊಳ್ಳಬೇಕಿದೆ. ನಾವೆಲ್ಲರೂ ಒಟ್ಟಾಗಿ ಕನ್ನಡವನ್ನು ಸಕಾರಾತ್ಮಕವಾಗಿ ಬೆಳಸುವ ದಿಶೆಯಲ್ಲಿ ನಿರಂತರವಾಗಿ ಪ್ರಯತ್ನಿಸಬೇಕಾಗಿದೆ. ಭಾಷೆಯ ಗುಣಮಟ್ಟ ವನ್ನು ಹೆಚ್ಚಿಸಲು ಚಿಂತಿಸುವ ಅಗತ್ಯವಿದೆ.

ಕೊನೆಯದಾಗಿ, ಕನ್ನಡ ಎಂಬ ಟೊಳ್ಳು ಹೋರಾಟಕ್ಕಿಂತ, ಭಾಷೆಯ ಜೀವವನ್ನು ಉಳಿಸುವ ಪ್ರಾಮುಖ್ಯತೆ ಹೆಚ್ಚಿಸಬೇಕಿದೆ. ಕನ್ನಡೋತ್ಸವವು ಪ್ರತಿದಿನ ನಡೆಯ ಬೇಕಾದ ಕಾಯಕವೇ ವಿನಾ ಕೇವಲ ನವೆಂಬರ್ ಒಂದರ ಉತ್ಪ್ರೇಕ್ಷೆಯ ಉದ್ಘೋಷವಾಗಬಾರದು.