ಅಭಿಪ್ರಾಯ
ಭಾರತಿ ಎ ಕೊಪ್ಪ
bharathikoppa101@gmail.com
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಶಾಲಾ ಬ್ಯಾಗ್,ಸಮವಸ ತೊಟ್ಟು ಶಾಲೆಗೆ ಹೊರಡುವುದೆಂದರೆ ಪುಟಾಣಿಗಳಿಗೆ ಎಲ್ಲಿಲ್ಲದ ಸಡಗರ. ಪಾಲಕರಿಗಂತೂ ಮಕ್ಕಳನ್ನು ಮುಂಜಾನೆ ಶಾಲೆಗೆ ಅಣಿ ಗೊಳಿಸುವುದು, ಸಂಜೆ ಶಾಲೆಯ ಚಟುವಟಿಕೆಗಳನ್ನು ಕೇಳುತ್ತ ಒಂದಿನಿತು ಹೋಂ ವರ್ಕ್ ನತ್ತ ಮುಖ ಮಾಡುವು ದೆಂದರೆ ಅದೊಂದು ಸಂತೋಷದ ವಿಚಾರ. ಕರೋನ ಎಂಬ ಕಂಟಕ ಬಂದೊದಗಿ ಈ ಎಲ್ಲಾ ಸಂತಸ ಮರೆಯಾಗಿ ಸುದೀರ್ಘ ಒಂದೂವರೆ ವರ್ಷವೇ ಕಳೆಯಿತು.
೧-೫ ನೇ ತರಗತಿವರೆಗಿನ ಪುಟಾಣಿಗಳು ಶಾಲೆಯೆಂಬ ಆಟ-ಪಾಠದ ವಾತಾವರಣದಿಂದ ದೂರವಾಗಿ ಬಹಳ ದೊಡ್ಡ ನಷ್ಟ ಅನುಭವಿಸಿರುವುದಂತೂ ದಿಟ. ಕರೋನ ತಂದೊಡ್ಡಿದ ಸಂಕಷ್ಟಗಳ ಸರಮಾಲೆಯಲ್ಲಿ ಈ ಪುಟಾಣಿಗಳ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಮನೆಯಲ್ಲೇ ಕಲಿಕಾ ಪಯಣ ಸಾಗಿಸುವುದು ಅನಿವಾ ರ್ಯವೂ ಆಗಿತ್ತು. ದಸರಾ ನಂತರ ೧-೫ ನೇ ತರಗತಿಗಳು ಆರಂಭ, ಜತೆಗೆ ದೀರ್ಘ ಕಾಲ ಸ್ಥಗಿತವಾಗಿದ್ದ ಬಿಸಿ ಯೂಟವೂ ಪುನರಾ ರಂಭ ಎಂಬ ಸರಕಾರದ ನಿರ್ಧಾರ ,ಪಾಲಕರಿಗೆ ಮತ್ತು ಪುಟಾಣಿಗಳಿಗೆ ದಸರಾ ಉಡುಗೊರೆ ಸಿಕ್ಕಂತಾಗಿದೆ.
ಪುಟ್ಟ ಮಕ್ಕಳು ತಮ್ಮ ಮನೆಯ ಮತ್ತು ಓರಗೆಯ ೬ ನೇ ತರಗತಿಯ ಮೇಲ್ಪಟ್ಟ ಮಕ್ಕಳು ಶಾಲೆಗೆ ಹೋಗುತ್ತಿರು ವುದನ್ನು ನೋಡಿ,ತಾವೂ ಶಾಲೆಗೆ ಹೋಗುವ ತವಕದಲ್ಲಿದ್ದರು.ಶಾಲೆಯೆಂಬ ಅವರ ಕನಸು ಈಗ ಮತ್ತೆ ಗರಿ ಗೆದರಿದೆ ಎಂದರೆ ತಪ್ಪಾಗಲಾರದು. ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕ ರಾಗಿರುವ ಪಾಲಕರಂತೂ ಕರೋನಾ ಕಾಲಘಟ್ಟದಲ್ಲಿ ಹೈರಾಣಾಗಿದ್ದರು. ಒಂದೆಡೆ ಲಾಕ್ ಡೌನ್ ಸಂದರ್ಭದಲ್ಲಿ ಬಂದೊದಗಿದ ಆರ್ಥಿಕ ಸಂಕಷ್ಟ, ಮತ್ತೊಂದೆಡೆ ಕೂಲಿ ಕೆಲಸ ಆರಂಭವಾದ ಮೇಲೆ ಪುಟ್ಟ ಮಕ್ಕಳನ್ನು ಮಾತ್ರ ಮನೆಯಲ್ಲಿ ಬಿಟ್ಟು ಕೂಲಿಗೆ ತೆರಳುವ ಸಂಕಷ್ಟ ಅನುಭವಿಸುವಂತಾಗಿತ್ತು.
ಅದಲ್ಲದೆ ನೆಟ್‌ವರ್ಕ್ ಲಭ್ಯತೆ ಇಲ್ಲದ, ಆಧುನಿಕ ಸೆಲ್ ಫೋನ್ ಬಳಸದ ಪಾಲಕರಿಗಂತೂ ಮಕ್ಕಳಿಗೆ ಆನ್‌ಲೈನ್ ಕಲಿಕಾ ವಾತಾವರಣ ನೀಡುವುದು ಬಹಳ ಸಂಕಟ ವಾಗಿದೆ. ಗ್ರಾಮೀಣ ಭಾಗದ ಪರಿಸ್ಥಿತಿಗಿಂತ ನಗರ ಪ್ರದೇಶದ ಪಾಲಕರ ಪರಿಸ್ಥಿತಿ ಇನ್ನೂ ಭಿನ್ನವಾಗಿದೆ. ಪುಟ್ಟ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಪಾಠಗಳು,ವಿಡಿಯೋ ಪಾಠಗಳನ್ನು ನಡೆಸಿದರೂ,ಪುಟ್ಟ ಮಕ್ಕಳ ಸಹಾಯಕ್ಕೆ ಪಾಲಕರು ಸದಾ ಆ ಪುಟಾಣಿ ಗಳ ಜತೆಯಲ್ಲೇ ಇರಬೇಕಾದ ಅನಿವಾರ್ಯತೆ ಇತ್ತು. ಮಕ್ಕಳಿಗೆ ಆನ್‌ಲೈನ್ ಪಾಠದಲ್ಲಿ ಏಕಾಗ್ರತೆಯ ಕೊರತೆ, ಮೊಬೈಲ್ ಗೇಮ್‌ಗಳ ಗೀಳನ್ನು ತಪ್ಪಿಸಲು ಮುಖಾಮುಖಿ ತರಗತಿಗಳ ಆರಂಭಕ್ಕೆ ಈ ಪಾಲಕರು ಹಾತೊರೆಯುವಂತಾಗಿದೆ.
ಅದಲ್ಲದೆ ವರ್ಕ್ ಫ್ರಂ ಹೋಮ್ ನಲ್ಲಿ ಕರ್ತವ್ಯ ನಿರತರಾಗಿದ್ದ ದುಡಿಯುವ ಮಹಿಳೆಯರಿಗಂತೂ ಪುಟಾಣಿಗಳ ಪಾಲನೆ,ಆನ್ಲೈನ್ ಶಿಕ್ಷಣ, ತನ್ನ ಕೆಲಸ ಇವೆಲ್ಲವೂ ಒಂದು ನಿರ್ದಿಷ್ಟ ಚೌಕಟ್ಟಿಗೆ ಬರಲು ಶಾಲಾರಂಭವೇ ಸೂಕ್ತ ಎಂಬಂತಾಗಿತ್ತು. ಇನ್ನು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಶಿಕ್ಷಕರ ಮನಸ್ಸು ವಿದ್ಯಾರ್ಥಿಗಳ ಆಗಮನಕ್ಕೆ ಕಾಯುವಂತಾಗಿತ್ತು.ಪುಟ್ಟ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಆಟ-ಪಾಠಗಳಲ್ಲಿ ಮಕ್ಕಳನ್ನು ತೊಡಗಿಸುತ್ತಿದ್ದ ಶಿಕ್ಷಕರು ಒಂದೂವರೆ ವರ್ಷದಿಂದ ಖಾಲಿ ಇರುವ ಕೊಠಡಿಗಳನ್ನು ನೋಡಿ, ಮಕ್ಕಳ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ೨೦೨೦-೨೧ ಮತ್ತು ೨೦೨೧-೨೨ ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿಯಾದ ಮಕ್ಕಳಿಗೂ,ಶಿಕ್ಷಕರಿಗೂ ಶಾಲಾವರಣದಲ್ಲಿ ಮುಖಾಮುಖಿ ಶಿಕ್ಷಣದ ಅವಕಾಶವೇ ಇಲ್ಲದಂತಾದ ಕಾರಣದಿಂದ ಈ ಹೊಸ ಮಕ್ಕಳೊಂದಿಗೆ ಶಿಕ್ಷಕರ ಬಾಂಧವ್ಯ ತುಸು ದೂರವಾಗಿತ್ತು.
ಆನ್‌ಲೈನ್ ಅಂಗಳದಲ್ಲೇ ಮಕ್ಕಳ ಮನಸ್ಥಿತಿ ಅರ್ಥೈಸಿಕೊಂಡು ಕಲಿಕಾ ಚಟುವಟಿಕೆ ನಡೆಸುವುದು ಕಠಿಣವೆನಿಸಿತ್ತು. ಪುಟಾಣಿಗಳ ಹೆಜ್ಜೆ ಸಪ್ಪಳಕ್ಕೆ ಕಾಯುತ್ತಿರುವ ಶಾಲಾ ಆಟದ ಮೈದಾನಗಳು, ಬಿಸಿ ಬಿಸಿ ಊಟದ ತಯಾರಿಗಾಗಿ ಸಿದ್ಧಗೊಳ್ಳುತ್ತಿರುವ ಅಕ್ಷರ ದಾಸೋಹದ ಕೊಠಡಿಗಳು ಮತ್ತೆ ರುಚೈತನ್ಯ ಪಡೆಯುವಲ್ಲಿ ಶಾಲಾರಂಭ ಅತಿ ಮುಖ್ಯವಾಗಿದೆ. ಶಿಶುಗೀತೆಗಳನ್ನು ಉಲಿಯುತ್ತಾ, ಚಿತ್ರಕಥೆಗಳನ್ನು ಓದುತ್ತಾ, ಸ್ನೇಹಿತರಿಗೂ ಕಥೆ ಹೇಳುತ್ತಾ ಶಾಲೆ ಯೆಂಬ ನಂದನವನದಲ್ಲಿ ಅರಳುವ ಪುಟಾಣಿಗಳ ಕಲರವವನ್ನು ಸಾಕ್ಷೀಕರಿಸಲು ೧-೫ ನೇ ತರಗತಿಯ ಆರಂಭ ಸಮಯೋಚಿತವಾಗಿದೆ.
ಕರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ,ಮಕ್ಕಳ ಆರೋಗ್ಯ ರಕ್ಷಣೆಯೊಂದಿಗೆ,ಶಿಕ್ಷಣದ ಲಯ ಪುನಃ ಕಂಡುಕೊಳ್ಳುವತ್ತ ಪ್ರಾಥಮಿಕ ಶಿಕ್ಷಣದ ಪರಿಧಿಯಲ್ಲಿರುವ ಸರ್ವರೂ ಮುಂದಡಿ ಇಡಬೇಕಾಗಿದೆ.