ಹರಪನಹಳ್ಳಿ: ಕರ್ನಾಟಕ ಸಹಿತ ದೇಶದಾದ್ಯಂತ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿರುವು ದರಿಂದಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲು ಕಾರಣ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉಪಚುನಾವಣೆ ಫಲಿತಾಂಶ ಬರು ತ್ತಿದ್ದಂತೆ, ಮತದಾರನ ತೀರ್ಪಿಗೆ ಬಿಜೆಪಿ ನಡುಗಿ ಹೋಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ, ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಈ ಉಪಚುನಾವಣೆ ಫಲಿತಾಂಶದ ನಂತರ ಇಂಧನ ದರ ಇಳಿಕೆಯೇ ಸಾಕ್ಷಿ ಎಂದಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕಡಿಮೆ ಮಾಡಿವೆ. ದೇಶಾದ್ಯಂತ ನಡೆದ ಉಪಚುನಾವಣೆ ಯಲ್ಲಿ ಬಹುತೇಕ ಕಡೆ ಸರ್ಕಾರದ ವಿರುದ್ಧ ಜನ ಮತದಾನ ಮಾಡಿದ್ದಾರೆ. ನಾವು ಕೂಡ ಈ ಚುನಾವಣೆ ಮೂಲಕ ಸಂದೇಶ ರವಾನಿಸಬೇಕು, ಎಚ್ಚರಿಕೆ ನೀಡಬೇಕು ಎಂದು ಮತದಾರರಲ್ಲಿ ಕೇಳಿಕೊಂಡಿದ್ದೆವು. ಅದರಂತೆ ಪ್ರಬುದ್ಧ ಮತದಾರರು ಮತ ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೆ ಮಾಲೀಕರು ಅನ್ನೋದು ಮತ್ತೆ ಸಾಬೀತಾಗಿದೆ. ಹೀಗಾಗಿಯೇ ಇಂಧನ ದರ ಕಡಿಮೆ ಆಗಿದೆ ಎಂದು ಹೇಳಿದರು.
ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಿನ ತೆರಿಗೆಗಳ ಪರಿಣಾಮವಾಗಿದೆ ಮತ್ತು ಹೆಚ್ಚಿನ ತೆರಿಗೆಗಳು ಕೇಂದ್ರ ಸರ್ಕಾರದ ದುರಾಸೆಯ ಪರಿಣಾಮವಾಗಿದೆ. ಮತದಾರ ಸರಿಯಾದ ತೀರ್ಪು ಬರೆದಿದ್ದಾರೆ. ನಾನು ಪ್ರಚಾರ ನಡೆಸಿದ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭೂತಪೂರ್ವ ಗೆಲುವು ಪಡೆದಿದ್ದು, ಅಲ್ಲಿನ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.