Saturday, 23rd November 2024

₹ 130 ಕೋಟಿ ರೂ. ಬಾಕಿ: ಕೆಎಂಎಫ್‌ನಿಂದ ಹಾಲು ಪೂರೈಕೆ ಸ್ಥಗಿತ

ಅಮರಾವತಿ: ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಆಂಧ್ರಪ್ರದೇಶದ ಅಂಗನವಾಡಿ ಗಳಿಗೆ ನಿಗದಿಯಂತೆ ಹಾಲು ಪೂರೈಸಲಾಗದು ಎಂದು ಕರ್ನಾಟಕ ಹಾಲು ಒಕ್ಕೂಟವು ತಿಳಿಸಿದೆ. ಆಂಧ್ರ ಸರ್ಕಾರವು ₹ 130 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

ಹಾಲಿನ ದರವನ್ನು ಪರಿಷ್ಕರಿಸಿ ಲೀಟರಿಗೆ ₹ 5 ಏರಿದ್ದು, ಇದಕ್ಕೆ ಸಮ್ಮತಿ ನೀಡ ಬೇಕಾಗಿದೆ ಎಂದು ಒಕ್ಕೂಟ ತಿಳಿಸಿದೆ.

ಒಕ್ಕೂಟವು ಹಾಲು ಪೂರೈಕೆ ಸ್ಥಗಿತಗೊಳಿಸಿದಲ್ಲಿ ಅಂಗನವಾಡಿಯಲ್ಲಿರುವ 20 ಲಕ್ಷ ಮಕ್ಕಳು ಹಾಲು ಸೌಲಭ್ಯದಿಂದ ವಂಚಿತ ರಾಗಲಿದ್ದಾರೆ. ಆಂಧ್ರ ಸರ್ಕಾರದ ‘ಸಂಪೂರ್ಣ ಪೋಷಣಾ ಯೋಜನೆ’ಯಡಿ ಅಂಗನ ವಾಡಿಗಳ ಎಲ್ಲ ಮಕ್ಕಳಿಗೆ ಅಲ್ಲಿನ ಸರ್ಕಾರ ಹಾಲು ಪೂರೈಸಲು ಒತ್ತು ನೀಡಿದೆ. ಈ ಉದ್ದೇಶಕ್ಕಾಗಿ ಮಾಸಿಕ, ಒಕ್ಕೂಟದಿಂದ ‘ನಂದಿನಿ’ ಬ್ರಾಂಡ್‌ನ 110 ಲಕ್ಷ ಲೀಟರ್ ಹಾಲು ಖರೀದಿಸುತ್ತಿದೆ. ಆದರೆ, ನಾಲ್ಕು ತಿಂಗಳಿಂದ ಹಣ ಪಾವತಿಯಾಗಿಲ್ಲ.

ಹಾಲು ಪೂರೈಕೆ ಸಂಬಂಧ ಒಕ್ಕೂಟ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವೆ 2020ರ ಜೂನ್‌ ತಿಂಗಳಲ್ಲಿ ಒಪ್ಪಂದವಾಗಿತ್ತು. ಇದರ ಪ್ರಕಾರ, ವಾಸ್ತವ ದರಕ್ಕಿಂತ ಕಡಿಮೆ, ಅಂದರೆ ಲೀಟರ್‌ಗೆ ₹ 5ರಂತೆ ಪೂರೈಸುತ್ತಿತ್ತು. ಖರೀದಿ ದರ, ಇಂಧನ ದರ ಏರಿಕೆ ಯಿಂದಾಗಿ ಇದೇ ವರ್ಷದ ಫೆಬ್ರುವರಿಯಲ್ಲಿ ಲೀಟರ್‌ಗೆ ₹ 5 ಏರಿಸಲಾಗಿತ್ತು.

ಬಾಕಿ ಪಾವತಿ ಕುರಿತು ಹಲವು ಬಾರಿ ಸಭೆ ನಡೆದಿದ್ದು, ಪತ್ರ ಬರೆದರೂ ಹಣ ನೀಡಿಲ್ಲ. ದರವನ್ನು ಲಿಖಿತವಾಗಿ ಪರಿಷ್ಕರಿಸಿಲ್ಲ ಎಂದಿರುವ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌, ಈ ಸಂಬಂಧ ಆಂಧ್ರದ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

ಖರೀದಿ ದರ, ಸಂಸ್ಕರಣೆ ವೆಚ್ಚದ ಏರಿಕೆ, ಇಂಧನ ದರ ಏರಿಕೆಯ ಕಾರಣಗಳಿಂದಾಗಿ ಈಗ ಒಕ್ಕೂಟಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಆಂಧ್ರ ಸರ್ಕಾರದಿಂದ ಹಣ ಪಾವತಿ ನಿಯಮಿತವಾಗಿಲ್ಲ ಹಾಗೂ ವಿಳಂಬವಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.