ಅಜಯ್
ಉತ್ತಮ ಆರೋಗ್ಯವು ನಮ್ಮ ಅದೃಷ್ಟ ಎಂದು ಹೇಳುವುದುಂಟು. ಇದು ನಿಜವಿದ್ದರೂ, ನಡುವಯಸ್ಸಿನ ನಂತರ ಅನುಸರಿಸುವ
ಕೆಲವು ಉತ್ತಮ ಅಭ್ಯಾಸಗಳು ನಮ್ಮ ಆರೋಗ್ಯವನ್ನು ಸಾಕಷ್ಟು ಸುಸ್ಥಿತಿಯಲ್ಲಿಡಬಲ್ಲುವು ಎಂದು ಹಲವು ಅಧ್ಯಯನಗಳು ತಿಳಿಸಿವೆ.
ದಿನಚರಿಯಲ್ಲಿನ ಕೆಲವು ಸಣ್ಣ ಬದಲಾವಣೆಗಳು, ಭವಿಷ್ಯದ ದಿನಗಳಲ್ಲಿ ಆರೋಗ್ಯ ಕೂಡಿಬರಲು ಸಹಕಾರಿ. ಮಧ್ಯ ವಯಸ್ಸು ಮತ್ತು ನಿವೃತ್ತಿಯ ವಯಸ್ಸು ಮೀರಿದ ನಂತರ, ಸಾಮಾಜಿಕ ಸಂಪರ್ಕ ಮತ್ತು ಸಂತಸ ಬಹು ಮುಖ್ಯ. ಪರಿಚಿತರನ್ನು, ಗೆಳೆಯ ರನ್ನು ಆಗಾಗ ಭೇಟಿಯಾಗಿ, ಹರಟೆ ಹೊಡೆದು, ಪರಸ್ಪರ ಚರ್ಚಿಸುವ ಅಭ್ಯಾಸವು ಆರೋಗ್ಯವನ್ನು ಖಚಿತವಾಗಿ ಉತ್ತಮಪಡಿಸ ಬಲ್ಲದೆಂದು ಅಧ್ಯಯನಗಳು ತಿಳಿಸಿವೆ.
ಅಂಚೆಯ ಅಣ್ಣನ ರೀತಿ ಇರಬೇಕು, ಮೋಜಿನ ಪ್ರವಾಸಿಗನಂತಲ್ಲ ಎಂಬ ಹೇಳಿಕೆ ಇದೆ. ಎಲ್ಲೆಂದರಲ್ಲಿ ನಡೆಯುಬೇಕು ಎಂಬುದು ಇದರ ಅರ್ಥ. ಮೆಟ್ಟಿಲುಗಳನ್ನು ಏರುವುದು, ಇಳಿಯುವುದು, ಬೆಟ್ಟ ಹತ್ತುವುದು, ನಾಯಿಯ ಜತೆ ನಡಿಗೆ ಎಲ್ಲವೂ ನಡು ವಯಸ್ಸಿನ ನಂತರ ಅತ್ಯುತ್ತಮ ವ್ಯಾಯಾಮ ಎಂದು ಸಂಶೋಧನೆಗಳು ಕಂಡುಕೊಂಡಿವೆ.
ಮನೆಯಿಂದ ಕೆಲಸ ಮಾಡುವವರು, ಯಾವುದೇ ವಯಸ್ಸಿನವರಾದರೂ, ಮೂವತ್ತು ನಿಮಿಷಗಳಿಗೊಮ್ಮೆ ಕುರ್ಚಿ ಬಿಟ್ಟು ಎದ್ದು, ಅತ್ತಿತ್ತ ನಡೆಯುವುದು ಅತಿ ಅವಶ್ಯ.
ನಾಯಿ ಸಾಕಿ, ಅದನ್ನು ವಾಕಿಂಗ್ ಕರೆದುಕೊಂಡು ಹೋಗುವುದು ನಾಯಿಯ ಮಾಲೀಕ ರಿಗೂ ಉತ್ತಮ ವ್ಯಾಯಾಮ ನೀಡಬಲ್ಲದು!
ಹೆಚ್ಚಿನ ಮಧ್ಯವಯಸ್ಕರಿಗೆ ವಿಟಾಮಿನ್ ಡಿ ಕೊರತೆ ಇರುತ್ತದೆ. ಬಿಸಿಲಿನಲ್ಲಿ ಮೂವತ್ತು ನಿಮಿಷ ನಡೆದರೆ ವಿಟಮಿನ್ ಡಿ ದೇಹ ವನ್ನು ಸೇರಿಕೊಳ್ಳುತ್ತದೆ. ಅವಶ್ಯ ಎನಿಸಿದರೆ, ವೈದ್ಯರ ಸಲಹೆ ಮೇರೆಗೆ ವಿಟಮಿನ್ ಡಿ ಸಪ್ಲಿಮೆಂಟ್ಸ್ ಸೇವಿಸಬಹುದು.