ಕುಟುಂಬ ರಾಜಕಾರಣದ ಪರಿಣಾಮವಾಗಿ ಕಳೆದ ಲೋಕಸಭೆಯಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡ ಜೆಡಿಎಸ್ ಇನ್ನೂ ಬುದ್ದಿ ಕಲಿತಿಲ್ಲ ಎನ್ನಬಹುದು. ಕುಟುಂಬ ರಾಜಕಾರಣದ ವಿರುದ್ಧ ದೇಶಾದ್ಯಂತ ಅಲೆ ಎದ್ದಿರುವ ವೇಳೆಯಲ್ಲೇ ಮತ್ತೊಂದು ಕುಡಿಯನ್ನು ಕಣಕ್ಕಿಳಿಸಿಲು ದೊಡ್ಡಗೌಡರು ಸಜ್ಜಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದು ರಾಜಕಾರಣದ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬ ಅರಿವು ಪ್ರಖಾಂಡ ಪಂಡಿತ ರಾದ ಅವರಿಗೆ ಅರಿವಿಲ್ಲವೇ? ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಕುಮಾರಸ್ವಾಮಿ ಅವರು, ನಮ್ಮ ಕುಟುಂಬದಲ್ಲಿ ರೇವಣ್ಣ ಮತ್ತು ನನ್ನನ್ನು ಹೊರತುಪಡಿಸಿ ಉಳಿದವರ‍್ಯಾರು ರಾಜಕಾರಣಕ್ಕೆ ಬರುವುದಿಲ್ಲ ಎಂಬು ಘೋಷಣೆ ಮಾಡಿದ್ದರು.
ಅದಕ್ಕಾಗಿಯೇ ಅವರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಮೂಲಕ ಕುಟುಂಬದಿಂದ ಮತ್ಯಾರಿಗೂ ಟಿಕೆಟ್ ನೀರರಲಿಲ್ಲ. ಆದರೆ, ನಂತರ ರಾಜೀನಾಮೆ ನೀಡಿದ ತಮ್ಮ ಸ್ಥಾನಕ್ಕೆ ಚನ್ನಪಟ್ಟಣದಿಂದ ತಮ್ಮ ಮಡದಿಯನ್ನು ಸ್ಪರ್ಧೆಗಿಳಿಸುವ ಮೂಲಕ ತಾವೇ ನೀಡಿದ್ದ ಮಾತನ್ನು ಮುರಿದರು. ಅಲ್ಲಿಂದ ಕುಟುಂಬ ರಾಜಕಾರಣದ ಮತ್ತೊಂದು ಮಗ್ಗಲು ತೆರೆದುಕೊಂಡು ಸಾಗಿತು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಕುಟುಂಬದಿಂದ ನಿಖಿಲ್ ಕುಮಾರಸ್ವಾಮಿ, ರೇವಣ್ಣ ಕುಟುಂಬದಿಂದ ಪ್ರಜ್ವಲ್ ರೇವಣ್ಣ ಮತ್ತು ಯಥಾಪ್ರಕಾರ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆಗಳಿದರು.
ಮೊಮ್ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಿದ ಗೌಡರು ಹಾಸನದಿಂದ ತುಮಕೂರಿಗೆ ವಲಸೆ ಬಂದರು. ನಿಖಿಲ್ ಮಂಡ್ಯದಿಂದ ಸ್ಪರ್ಧೆ ಮಾಡಿದರು. ಇವರ ಕುಟುಂಬ ರಾಜಕಾರಣದ ದಾಹಕ್ಕೆ ಬೇಸತ್ತ ಮಂಡ್ಯ ಮತ್ತು ತುಮಕೂರಿನ ಮತದಾರರು ಮಾಜಿ ಪ್ರಧಾನಿ ಎಂಬುದನ್ನು ನೋಡದೆ ದೇವೇಗೌಡರನ್ನು ಮಕಾಡೆ ಮಲಗಿಸಿ ದರು. ಸಿಎಂ ಪುತ್ರ ನಿಖಿಲ್ ಹೋನಾಯವಾಗಿ ಸೋತರು. ಇದೆಲ್ಲ ಕುಟುಂಬ ರಾಜಕಾರಣದಿಂದ ಆಗಿದ್ದು ಎಂಬ ಅರಿವು ಅವರಿಗಿನ್ನು ಬರಲಿಲ್ಲವೇ? ಆನಂತರ ಅಧಿಕಾರ ಕಳೆದುಕೊಂಡು, ಉಪಚುನಾವಣೆಯಲ್ಲಿ ಠೇವಣಿಯನ್ನು ಉಳಿಸಿಕೊಳ್ಳದಷ್ಟು ಹೀನಾಯ ಸ್ಥಿತಿಗೆ ಜೆಡಿಎಸ್ ತಲುಪಿದ್ದರೂ, ವಿಧಾನ ಪರಿಷತ್ ಚುನಾ ವಣೆಗೆ ಮತ್ತೊಬ್ಬ ಮೊಮ್ಮಗ ಸೂರಜ್ ರೇವಣ್ಣ ಅವರನ್ನು ಸ್ಪರ್ಧೆಗಿಳಿಸಲು ಗೌಡರು ನಡೆಸುತ್ತಿರುವ ತಯಾರಿ ಮಾತ್ರ ಜೆಡಿಎಸ್ ಕಾರ್ಯಕರ್ತರ ಕಣ್ಣುರಿಯನ್ನು ಹೆಚ್ಚಿಸಿದೆ.
ರಾಷ್ಟ್ರೀಯ ಪಕ್ಷಗಳಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದರೆ, ಇಲ್ಲಿ ಮತ್ತೊಂದು ವಂಶದ ಕುಡಿ ಎಂಟ್ರಿ ಕೊಡುತ್ತಿದೆ ಎಂಬ ಅಸಮಾಧಾನ ಹೆಚ್ಚಿದೆ. ಇದು ಜೆಡಿಎಸ್‌ನ ಮತ್ತಷ್ಟು ಪತನಕ್ಕೆ ಕಾರಣವಾಗಲಿದೆಯೇ ಕಾದು ನೋಡಬೇಕಿದೆ. ಇಷ್ಟೆಲ್ಲದರ ಸುಳಿವು ಸದಾ ರಾಜಕಾರಣವನ್ನೇ ಉಸಿರಾಡುವ ದೇವೇಗೌಡರಿಗೆ ಸಿಕ್ಕಿಲ್ಲವೇ, ಅಥವಾ ಅನಿವಾರ್ಯಕ್ಕೆ ತಲೆ ಬಾಗುತ್ತಿದ್ದಾರೆಯೇ ಎಂಬುದು ಮಾತ್ರ ಕುತೂಹಲವಾಗಿದೆ.