Wednesday, 11th December 2024

ಬಿಟ್ ಕಾಯಿನ್ ಕೊಟ್ಟೆ, ಬಿಟ್‌ ಬಿಟ್ರು

ತುಂಟರಗಾಳಿ

ಹರಿ ಪರಾಕ್

ಲೂಸ್ ಟಾಕ್

ಹ್ಯಾಕರ್ ಶ್ರೀಕಿ  
ಏನಪ್ಪಾ, ಎಂತೆಂಥಾ ದೊಡ್ಡವರೇ ಜೈಲಲ್ಲಿ ಕೊಳೀತಾ ಇದ್ದಾರೆ. ಆದ್ರೆ ನೀನ್ ಮಾತ್ರ ಇಷ್ಟ್ ಬೇಗ ಹೆಂಗ್  ಜೈಲಿಂದ ಬಿಡುಗಡೆ ಆದೆ? ಏನಿಲ್ಲ, ಜೈಲರ್‌ಗೆ ಒಂದೆರಡು ಬಿಟ್ ಕಾಯಿನ್ ಕೊಟ್ಟೆ, ಬಿಟ್ ಬಿಟ್ರು. ಸರಿ ಹಂಗಾದ್ರೆ, ಜೈಲಲ್ಲಿ ಒಳ್ಳೆ ವಿಐಪಿ ಟ್ರೀಟ್ ಮೆಂಟೇ ಸಿಕ್ಕಿರಬೇಕು ಅಲ್ವಾ ಮತ್ತೆ, ನನ್ನ ಹೆಸರೇ ಶ್ರೀಕೃಷ್ಣ, ನಂಗೆ ಜೈಲೇನು ಹೊಸದಾ..

ಸರಿ, ಈ ಬಿಟ್ ಕಾಯಿನ್ ವಿಚಾರ ದೊಡ್ಡ ದೊಡ್ಡವರ ಬಂಡವಾಳ ಬಯಲು ಮಾಡುತ್ತೆ ಅಂತಿದ್ದಾಲ್ಲ. ನಿಜಾನಾ? ಹ್ಞೂ ಮತ್ತೆ, ಏನ್ ಕಮ್ಮಿ ಬಂಡವಾಳ ಹಾಕಿದ್ದಾರಾ ಇದರಲ್ಲಿ. ಅವರನ್ ಬಿಟ್, ಇವರನ್ ಬಿಟ್ ಅವರ್ಯಾರು ಅಂತ ಹುಡುಕ್ತಾ ಇರಿ, ನಿಮಗೇ ಗೊತ್ತಾಗುತ್ತೆ. ಎಲ್ಲಿ ಒಂದಿಬ್ಬರ ಹೆಸರೇಳು ನೋಡಣ..ಹಲೋ, ನಾನೀಗ ಹ್ಯಾಕಿಂಗ್ ಮಾಡ್ಕೊಂಡು, ಕಿಂಗ್ ಥರ ಇದ್ದೀನಿ ಅಂದ್ರೆ ಅದಕ್ಕೆ ಆ ಜನಾನೇ ಕಾರಣ. ಯಾಮಾರಿ ಅವರ ಹೆಸರೇಳಿದ್ರೆ ನಮ್ ಯಾಪಾರ ನಡೀತದಾ..
ಸರಿ ಹಂಗಾದ್ರೆ, ನೀನು ಈಗ ಜೈಲಿಂದ ಬಂದಮೇಲೂ ಮತ್ತೆ ಅದೇ ಹ್ಯಾಕಿಂಗ್ ಕೆಲ್ಸ ಮುಂದುವರಿಸ್ತೀಯ ಅಂತಾಯ್ತು..ಮತ್ತೆ? ನಮಗ್ ಯಾವ್ ಕೆಲ್ಸ ಬರುತ್ತೋ ಅದನ್ನೇ ಮಾಡಬೇಕಲ್ವಾ. ಅದಕ್ಕೇ, ಮೂವರ್ಸ್ ಅಂಡ್ ಹ್ಯಾಕರ್ಸ್ ಅಂತ ಕಂಪನಿ ಓಪನ್ ಮಾಡಬೇಕು ಅಂತಿದೀನಿ.

(ಕಾಲ್ಪನಿಕ ಸಂದರ್ಶನ) 

ಸಿನಿಗನ್ನಡ
ಕರೋನಾ ಲಾಕ್ ಡೌನ್ ಮುಗಿದ ಮೇಲೆ ಸಿನಿಮಾಗಳೇನೋ ಬಿಡುಗಡೆ ಆಗ್ತಾ ಇವೆ. ಆದ್ರೆ ಅವುಗಳಲ್ಲಿ ಚಿತ್ರರಂಗವನ್ನು ಮತ್ತೆ ಪುನಶ್ಚೇತನಗೊಳಿಸುವಂಥ
ಚಿತ್ರಗಳು ಕಡಿಮೆ ಎನ್ನಬಹುದು. ಹೊಸಬರ ಚಿತ್ರಗಳು ಲೆಕ್ಕ ಹಾಕೋದು ಕಷ್ಟ ಎನ್ನುವಂತೆ ಬಿಡುಗಡೆ ಆಗುತ್ತಿವೆ. ಬಿಡುಗಡೆ ಆಗಲು ರೆಡಿಯಾಗಿವೆ. ಆದರೆ ಸ್ಟಾರ್
ಚಿತ್ರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿದ್ದ ದುನಿಯಾ ವಿಜಿ ಸಲಗ ಆರಂಭದಲ್ಲಿ ಒಂದಷ್ಟು ಸದ್ದು ಮಾಡಿ ಸುಮ್ಮನಾಯಿತು.
ಕೋಟಿಗೊಬ್ಬ ೩ ಬರೀ ೩ ದಿನ ಸದ್ದು ಮಾಡಿದ್ದಷ್ಟೇ ಬಂತು. ಇನ್ನು ಭಜರಂಗಿ ಕೂಡಾ ಅಷ್ಟು ಹವಾ ಎಬ್ಬಿಸಲಿಲ್ಲ.

ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆ ಈ ಹಿನ್ನಡೆಗೆ ಇರುವ ಕಾರಣಗಳಲ್ಲಿ ಒಂದು ಎನ್ನಬಹುದು. ಆದರೆ ಸಿನಿಮಾಗಳು ಚೆನ್ನಾಗಿದ್ದಿದ್ರೆ ಜನ ಸ್ವಲ್ಪ ದಿನಗಳ ನಂತರವಾದ್ರೂ ನೋಡ್ತಾ ಇದ್ರು ಎಂದುಕೊಳ್ಳುವ ಹೊತ್ತಿಗೆ ಪ್ರೇಮ್ ಅಭಿನಯದ ೨೫ನೇ ಚಿತ್ರ ಪ್ರೇಮಂ ಪೂಜ್ಯಂ ಬಿಡುಗಡೆ ಆಗಿದೆ. ಚಿತ್ರದ ಮೇಕಿಂಗ್ ಮತ್ತು ಕ್ಲಾಸಿ ಲುಕ್ ಎಲ್ಲರಿಗೂ ಇಷ್ಟವಾಗಿದೆ. ಆದರೆ ಕಥೆ ಹೇಳುವ ಕ್ರಿಯೆ ಕೊಂಚ ಬೋರಿಂಗ್ ಅನ್ನೋದು ಕೆಲವರ ಆರೋಪ. ಹಾಗಾಗಿ ಈ ಚಿತ್ರ ಚಿತ್ರರಂಗವನ್ನು ಮತ್ತೊಂದು ಸ್ಟೆಪ್ ಮೇಲೆ ತೆಗೆದುಕೊಂಡು ಹೋಗುತ್ತಾ ಇಲ್ಲವಾ ಅನ್ನೋದನ್ನ ಕಾದು ನೋಡಬೇಕಿದೆ.

ಇನ್ನು ಬರಲಿರುವ ಸ್ಟಾರ್ ಚಿತ್ರಗಳ ಪಟ್ಟಿ ಕೂಡ ಅಷ್ಟೇನೂ ಆಶಾದಾಯಕವಾಗಿಲ್ಲ. ಈ ಪಟ್ಟಿಯಲ್ಲಿ ಗಣೇಶ್ ಅವರ ಸಖತ, ಶರಣ್ ಅವರ ಅವತಾರ ಪುರುಷ ಇವೆ. ಅದನ್ನು ಬಿಟ್ಟರೆ ಒಂದೆರಡು ಭರವಸೆ ಮೂಡಿಸುವ ಮಿನಿ ಸ್ಟಾರ್ ಗಳ ಮತ್ತು ಹೊಸಬರ ಚಿತ್ರಗಳು. ಸೂಪರ್‌ ಸ್ಟಾರ್ ನಟರ ಕೈಲಿ ಆಗದೇ ಇದ್ದುದನ್ನು ಈ ಚಿತ್ರಗಳು ಮಾಡುತ್ತವಾ ಅನ್ನೋದು ಮುಂದಿನ ಕುತೂಹಲ. ಯಾಕಂದ್ರೆ ಸ್ಟಾರ್ ಗಳು ಎನಿಸಿಕೊಂಡ ಶಿವರಾಜ್ ಕುಮಾರ್‌, ಸುದೀಪ, ವಿಜಿ ಮುಂತಾದವರು ಈಗಾಗಲೇ ತಮ್ಮ ಕೋಟಾ ಮುಗಿಸಿದ್ದಾರೆ. ದರ್ಶನ್ ಮತ್ತು ಯಶ್ ಅವರ ಯಾವ ಸಿನಿಮಾವೂ ಸದ್ಯಕ್ಕೆ ಬಿಡುಗಡೆಗೆ ಸಿದ್ಧವಿಲ್ಲ.

ಹಾಗಾಗಿ ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ ಆದಷ್ಟು ಬೇಗ ಬಿಡುಗಡೆ ಆದರೆ, ಈ ಸಮಯದಲ್ಲಿ ಚಿತ್ರೋದ್ಯಮಕ್ಕೆ ಅದು ದೊಡ್ಡ ಮಟ್ಟದ ಯಶಸ್ಸು ತಂದುಕೊಡಬಹುದು ಅನ್ನೋದು ಗಾಂಧಿನಗರದ ಲೆಕ್ಕಾಚಾರ.

ನೆಟ್ ಪಿಕ್ಸ್
ಖೇಮು ಮತ್ತವನ ಸಂಸಾರ ಒಂದು ನಗರದಿಂದ ದೂರದ ಹಳ್ಳಿಯಲ್ಲಿ ವಾಸವಾಗಿತ್ತು. ಆ ಹಳ್ಳಿಯ ಪಕ್ಕದ ಅಂಟಿಕೊಂಡಂತೆ ಒಂದು ದಟ್ಟವಾದ ಕಾಡು ಇತ್ತು. ಅಲ್ಲಿ ಖೇಮುಗೆ ಅನೇಕ ಗೆಳೆಯರೂ ಇದ್ದರು. ಒಂದು ದಿನ ಖಥೇಮು ಮನೆಯಿಂದ ಹೊರಟ. ಹಳ್ಳಿ ದಾರಿಯಲ್ಲಿ ಹೋಗುವಾಗ ಅಲ್ಲಿ ಅವನ ಸ್ನೇಹಿತ ರಾಮು, ಬೀಡಿ ಸೇದ್ತಾ ಕೂತಿದ್ದ. ಅವನನ್ನು ನೋಡಿದ ಖೇಮು, ಲೋ ರಾಮು, ಬೀಡಿ ಸೇದೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜೊತೆ ಬಾ.

ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಸರಿ ರಾಮು ಖೇಮು ಜತೆ ಹೊರಟ. ಇಬ್ಬರೂ ಹೋಗ್ತಾ ಇದ್ರು. ಅಲ್ಲಿ ಇನ್ನೊಬ್ಬ ಸ್ನೇಹಿತ ಸೋಮು ಹೆಂಡ ಕುಡೀತಾ ಕೂತಿದ್ದ. ಅವನನ್ನು ನೋಡಿದ ಖೇಮು ಲೋ ಸೋಮು, ಹೆಂಡ ಕುಡಿಯೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜೊತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಸರಿ ಸೋಮು ಕೂಡ ಅವರಿಬ್ಬರ ಜೊತೆ ಹೊರಟ. ಮುಮದೆ ಹಗುವಾಗ ಅಲ್ಲಿ ಇನ್ನಷ್ಟು ಸ್ನೇಹಿತರು ಇಸ್ಪೀಟ್ ಆಡ್ತಾ ಕೂತಿದ್ರು. ಅವರನ್ನು ನೋಡಿದ ಖೇಮು ಲೇ, ಇಸ್ಪೀಟ್ ಆಡೋದು ಕೆಟ್ಟದ್ದು ಕಣ್ರೋ, ಅದನ್ನೆ ಬಿಟ್ಟು ನನ್ನ ಜೊತೆ ಬನ್ನಿ.

ಕಾಡಿನ ಒಳಗೆ ನಿಮಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಸರಿ ಗುಂಪುಗೂಡಿಕೊಂಡು ಎಲ್ಲರೂ ಖೇಮುವಿನ ಜೊತೆ ಹೊರಟರು. ಮುಂದೆ ದಾರಿಯಲ್ಲಿ ಅವರಿಗೆ ಇನ್ನೊಬ್ಬ ಗೆಳೆಯ ಮಾರ ಸಿಕ್ಕಿದ. ಅವನು ಹೊಗೆಸೊಪ್ಪು ಅಗಿಯುತ್ತಾ ಕೂತಿದ್ದ. ಅವನನ್ನು ನೋಡಿದ ಖೇಮು ಲೋ ಮಾರ, ಹೊಗೆ ಸೊಪ್ಪು ತಿನ್ನೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜೊತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ.

ತೋರಿಸ್ತೀನಿ ಅಂದ. ಅದಕ್ಕೆ ಮಾರ ಇದ್ದಕ್ಕಿದ್ದಂತೆ ಖೇಮು ಕಡೆ ನುಗ್ಗಿ ಬಂದು ಅವನ್ನನು ಹಿಗ್ಗಾ ಮುಗ್ಗಾ ಹೊಡೆಯೋಕೆ ಶುರು ಮಾಡಿದ. ಎಲ್ಲರೂ ಸೇರಿ ಅವನನ್ನು ಬಿಡಿಸಿ, ಅ ಮಾರ, ಪಾಪ ಅವನು ಒಳ್ಳೇದು ಹೇಳಿದ್ರೆ ನೀನು ಹಿಂಗಾ ಹೊಡೆಯೋದು ಅಂತ ಕೇಳಿದಾಗ ಮಾರ ಹೇಳಿದ, ನಿಮಗ್ ಗೊತ್ತಿಲ್ಲ, ಈ ಬಡ್ಡೀಮಗ ಖೇಮು, ಹೋದ್ ವಾರ ಕೂಡ ಹಿಂಗೇ ಗಾಂಜಾ ಹೊಡ್ಕೊಂಡು ಬಂದು, ಏನೋ ತೋರಿಸ್ತೀನಿ ಅಂತ ಇಡೀ ಕಾಡೆ ಸುತ್ತಿಸಿದ್ದ.

ಲೈನ್ ಮ್ಯಾನ್
ಈ ಚಳಿ- ಮಳೆಗಾಲ ನೋಡಿ ಕನ್ನಡ ಚಿತ್ರರಂಗದ ರಿಯಾಕ್ಷನ್

ಯೋಗರಾಜ್ ಭಟ್ಟರ ರಿಯಾಕ್ಷನ್ 
ಭೂಮಿನೇ ಬಚ್ಚಲ್ ಮನೆ ನಾವೇನ್ ಮಾಡಣ, ಎರೂ ಬೆಡ್ ಶೀಟ್ ಹೊದ್ಕಂಡ್ ಸ್ನಾನ ಮಾಡಣ

ರವಿಚಂದ್ರನ್ ರಿಯಾಕ್ಷನ್
ಏ, ನಡೀರೋ, ಸಾಂಗ್ ಶೂಟಿಂಗ್ ಮಾಡಣ

ಗಣೇಶ್ ರಿಯಾಕ್ಷನ್
ಎಷ್ಟೇ ಮಳೆ ಬಂದ್ರೂ ಮತ್ತೊಂದು ಮುಂಗಾರು ಮಳೆ ಬರೋಕಾಗಲ್ಲ

ಆರ್ಟಿಫಿಶಿಯಲ್ ರೈನ್ ಮಶೀನ್ ಇಟ್ಟುಕೊಂಡವನು
ಥತ, ಈ ದರಿದ್ರ ಮಳೆ ಯಾವಾಗ್ ನಿಲ್ಲುತ್ತಪ್ಪಾ

ಅನಾಮಿಕ ನಿರ್ದೇಶಕ
ಮುಹೂರ್ತದ ಟೈಮ ಕ್ಲೈಮ್ಯಾಕ್ಸ ಸೀನ್ ಬಂತಲ್ಲಪ್ಪ

ಹ್ಯಾಕರ್ ಶ್ರೀಕಿ ಬಿಗ್ ಬಾಸ್ ಗೆ ಹೋಗ್ತಾನಂತೆ
ಈಗ ತಾನೇ ಜೈಲಿಂದ ಬಂದಿದ್ದಾನೆ. ಮತ್ತೆ ಜೈಲಿಗ್ ಹೋಗ್ತಾನಾ?

ಕನ್ನಡ ಚಿತ್ರರಂಗದಲ್ಲಿ ಶತ್ರುಗಳೂ ಜೈಕಾರ ಹಾಕೋ ಒಬ್ಬನೇ ನಟ

ಜೈಜಗದೀಶ್

ಗರ್ಲ್ ಫ್ರೆಂಡ್ ನ ದಿನಾ ಪಿಕ್ ಅಪ್ ಡ್ರಾಪ್ ಮಾಡೋ ಹುಡುಗನದ್ದು
ಹಕ್ಕಿಪಿಕ್ಕಿ ಜನಾಂಗ

ಯಾವಾಗ್ಲೂ ಫಾರಿನ್ ಟ್ರಿಪ್ ಹೋಗೋನು
ಅಬ್ರಾಡ್ ಮೈಂಡೆಡ್

ಬೇಸಿಗೆ ಕಾಲದಲ್ಲಿ ಪೊಲೀಸರ ಕಷ್ಟ
ಎಲ್ಲರೂ ಬೆವರ್ತಾ ಇರ್ತಾರೆ, ಹಂಗಾಗಿ ನಿಜವಾದ ಅಪರಾಧಿ ಯಾರು ಅಂತ ಕಂಡು ಹಿಡಿಯೋದು ಕಷ್ಟ.