ನವದೆಹಲಿ: ದೆಹಲಿಯ ಜಗ್ಪುರ ಬಡಾವಣೆಯಲ್ಲಿ ಮನೆಗೆಲಸದ ಮಹಿಳೆಯ ರನ್ನು ಕೊಂದು ₹ 95 ಲಕ್ಷ ದೋಚಿದ್ದ ಪ್ರಕರಣ ದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಮೀನಾ ರಾಯ್(35), ಸುಜೈಲಾ (40) ಹತ್ಯೆಗೀಡಾದ ಮನೆಗೆಲಸದ ಮಹಿಳೆಯರು. ಜೂನ್ನಲ್ಲಿ ಕೆಲಸ ಆರಂಭಿಸಿದಾಗಿನಿಂದ ಸ್ಟಾಫ್ ಕ್ವಾಟ್ರಸ್ನಲ್ಲಿ ವಾಸಿಸುತ್ತಿದ್ದರು. ಈ ಪ್ರಕರಣದ ಪ್ರಮುಖ ಸಂಚುಕೋರ ಸಚಿತ್ ಸಕ್ಸೇನಾ ಉತ್ತರ ಪ್ರದೇಶ ಮೂಲದವನಾಗಿದ್ದು, ಈ ಹಿಂದಿನ ಮನೆಗೆಲಸದ ಮಹಿಳೆಯ ಸೋದರಳಿಯ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ತನ್ನ ಸಹಚರರಾದ ಪ್ರಶಾಂತ್ ಬಸಿಸ್ತಾ, ಅನಿಕೇತ್ ಝಾ, ರಮೇಶ್ ಮತ್ತು ಧನಂಜಯ್ ಗುಲಿಯಾ ಅವರೊಂದಿಗೆ ಮನೆಯಲ್ಲಿ ದೊಡ್ಡ ಮೊತ್ತದ ನಗದು ಇರುವ ಮಾಹಿತಿಯ ಆಧಾರದ ಮೇಲೆ ದರೋಡೆ ಮಾಡಲು ಸಂಚು ರೂಪಿಸಿದ್ದನು.
ಕಳೆದ ಒಂದು ತಿಂಗಳಿನಿಂದ ಯೋಜನೆ ರೂಪಿಸಿದ್ದು, ಕ್ಲೋರೋಫಾರ್ಮ್, ಟೇಪ್, ಕಟ್ಟರ್, ಪಂಚ್, ಹಗ್ಗ, ಮಾಸ್ಕ್ಗಳು ಮತ್ತು ಇತರ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದಾಗಿ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತೆ (ಆಗ್ನೇಯ) ಇಶಾ ಪಾಂಡೆ ತಿಳಿಸಿದ್ದಾರೆ.
ಗುರುತನ್ನು ಮರೆಮಾಚಲು, ಅವರು ಸಾಮಾನ್ಯ ಫೋನ್ ಕರೆಗಳಿಗೆ ಬದಲಾಗಿ ವಿಒಐಪಿ(ಇಂಟರ್ನೆಟ್ ಆಧಾರಿತ ಕರೆ) ಅನ್ನು ಬಳಸಿದ್ದರು. ಘಟನಾ ಸ್ಥಳಕ್ಕೆ ಮೊಬೈಲ್ ಫೋನ್ಗಳನ್ನು ತೆಗೆದುಕೊಂಡು ಹೋಗಿರಲಿಲ್ಲ. ಅವರು ತಮ್ಮ ಹೆಸರುಗಳನ್ನು ಸಂಖ್ಯೆ 1, 2, 3, 4 ಮತ್ತು 5 ಎಂದು ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.