ಸಕಾಲಿಕ
ಗ.ನಾ.ಭಟ್
ದೇಶ ಹೇಗಿರಬೇಕು ಅನ್ನವುದಕ್ಕೆ ವೇದ, ಉಪನಿಷತ್ತು ಎಲ್ಲವನ್ನೂ ಎಳೆದು ತಂದು ಸಮಕಾಲೀನ ವಿದ್ಯಮಾನಗಳಿಗೆ ಅನ್ವಯಿಸಿ ವಿಶ್ಲೇಷಿಸುತ್ತಿದ್ದ, ಕಾವ್ಯ-ಪುರಾಣಗಳನ್ನೂ ಅತ್ಯಂತ ಸಮಂಜಸವಾಗಿ ಸಮಕಾಲೀನ ಪ್ರಸ್ತುತಿಗೆ ಹೋಲಿಸು ತ್ತಿದ್ದ ನಾರಾಯಣಾ ಚಾರ್ಯರಂಥ ಮತ್ತೊಬ್ಬರನ್ನು ವರ್ತಮಾನ ಕಾಲದಲ್ಲಿ ನೋಡಲು ಸಾಧ್ಯವೇ ಇಲ್ಲ.
ಇಂಗ್ಲಿಷ್ ಸಾಹಿತ್ಯರಾಜ್ಯದ ಸಾರ್ವಭೌಮ ವಿಲಿಯಮ್ ಷೇಕ್ಸ್‌ಪಿಯರ್ ಹುಟ್ಟದೇ ಇದ್ದಿದ್ದರೆ ಏನಾಗುತ್ತಿತ್ತು? ನಿಃಸಂಶಯವಾಗಿ ಯೂ ನಾವು ಹ್ಯಾಮ್ಲೆಟ್, ಮ್ಯಾಕ್‌ಬೆತ್, ಕಿಂಗ್ ಲಿಯರ್, ಜೂಲಿಯಸ್ ಸೀಸರ್, ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್ ನಂತಹ ಸುಪ್ರಸಿದ್ಧ ನಾಟಕಗಳನ್ನು ಪಡೆಯುತ್ತಿ ರಲಿಲ್ಲ. ಇದೇ ಮಾತನ್ನು ವೇದಜ್ಞ ಪ್ರೊ.ಕೆ.ಎಸ್. ನಾರಾಯಣಾ ಚಾರ್ಯರ ವಿಚಾರಕ್ಕೆ ಅನ್ವಯಿಸಿದರೆ? ಅವರು ಹುಟ್ಟದೇ ಇದ್ದಿದ್ದರೆ ಹಿಂದೂ ಧರ್ಮದ ಅರ್ಥೈಕೆಗಳು ಸರಿಯಾದ ದಿಕ್ಕಿನಲ್ಲಿ ಆಗುತ್ತಲೇ ಇರಲಿಲ್ಲ. ಅವುಗಳ ಮರ್ಮಗಳು ನಮಗೆ ತಿಳಿಯುತ್ತಲೇ ಇರಲಿಲ್ಲ. ವೇದ, ಉಪನಿಷತ್ತು, ರಾಮಾಯಣ, ಮಹಾ ಭಾರತ, ಭಾಗವತ, ಭಗವದ್ಗೀತೆ, ಪುರಾಣ ಮೊದಲಾದ ಆರ್ಷಸಾಹಿತ್ಯಗಳ ಅಂತರಂಗ ಅರಿವಾಗುತ್ತಲೇ ಇರಲಿಲ್ಲ. ಅಷ್ಟು ಕೆಲಸ ಮಾಡಿದ್ದಾರೆ ಅವರು.
ನಮ್ಮ ದೇಶದ ಕಮ್ಯೂನಿಷ್ಟರು, ಕ್ರೈಸ್ತರು, ಕಾಂಗ್ರೆಸಿಗರು, ವಿಕೃತಬುದ್ಧಿಜೀವಿಗಳು, ಹಿಂದೂದ್ವೇಷಿಗಳು, ಅರೆಬರೆ ಸಂಸ್ಕೃತಜ್ಞ ರಂಥ ಪಾಖಂಡಿಗಳಿಗೆ ನಿರ್ಭೀತವಾಗಿ, ಸರಿ ಉತ್ತರ ನೀಡಿದವರು, ಅವರನ್ನು ತರಾಟೆಗೆ ತೆಗೆದುಕೊಂಡವರು ಎಂದರೆ ನಾರಾ ಯಣಾಚಾರ್ಯರು. ಹಿಂದೂ ಧರ್ಮ- ಸಂಸ್ಕೃತಿಯನ್ನು ತುಚ್ಛವಾಗಿ, ನಿಕೃಷ್ಟವಾಗಿ ಕಾಣುತ್ತಿರುವ ಸಂದರ್ಭದಲ್ಲಿ ಆಚಾರ್ಯರು ಅದರ ಮಹತ್ವವನ್ನು ತಮ್ಮ ಬರಹದ ಮತ್ತು ಪ್ರವಚನದ ಮೂಲಕ ಎತ್ತಿಹಿಡಿದರು. ಧರ್ಮ, ನ್ಯಾಯದ ಬಗ್ಗೆ ಸೂಕ್ತ ತಿಳಿವಳಿಕೆ ನೀಡಿದರು.
ಆಭಾಸ ಸತ್ಯವನ್ನು ಬಯಲಿಗೆಳೆದರು. ಧರ್ಮ, ನ್ಯಾಯದ ಬಗ್ಗೆ ಸಂದಿಗ್ಧತೆ, ಸಂಶಯವುಂಟಾದಾಗ ಸ್ಪಷ್ಟ, ಖಚಿತವಾದ ಉತ್ತರ ನೀಡಿದರು. ರಾಷ್ಟ್ರಪ್ರೇಮ ಮೆರೆದರು. ಆರ್ಷಸಾಹಿತ್ಯವನ್ನು ಹಗಲಿರುಳೂ ಉಪಾಸಿಸಿದರು. ಆ ಕೆಲಸವನ್ನವರು ಒಂಟಿಯಾಗಿ ಮಾಡಿದರು. ಆನೆ ಇಟ್ಟ ಹೆಜ್ಜೆಯೇ ದಾರಿ ಅನ್ನುವಂತೆ ನಡೆದು ಕೊಂಡವರು ಆಚಾರ್ಯರು. ಯಾರಿಗೂ ಸೊಪ್ಪು ಹಾಕಿದವರಲ್ಲ; ತಲೆ ಬಾಗಲಿಲ್ಲ. ಗುಂಪು ಕಟ್ಟಲಿಲ್ಲ.
ತಾನು ಕಂಡ ಸಾರ್ವಕಾಲಿಕ ಸತ್ಯವನ್ನು ಬಲವಾದ ಸಾಕ್ಷ್ಯಾಧಾರಗಳಿಂದ ಸಮರ್ಥಿಸಿದರು. ಜಗಜ್ಜಾಹೀರುಪಡಿಸಿದರು. ಅವರು ಓದಿದ ವಿಶ್ವಸಾಹಿತ್ಯ, ಇತಿಹಾಸ, ಇಂಗ್ಲಿಷ್ ಸಾಹಿತ್ಯ, ಭಾರತೀಯ ಸಾಹಿತ್ಯ, ಅದರಲ್ಲೂ ವೇದ, ಉಪನಿಷತ್ತು, ಪುರಾಣ, ರಾಮಾ ಯಣ, ಭಾರತೇತ್ಯಾದಿ ಪ್ರಾಚಿನ ಸಾಹಿತ್ಯ, ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯ, ತಮಿಳು ಸಾಹಿತ್ಯ ಮೊದಲಾದವು- ಜತೆಗೆ ಅವರ ದಟ್ಟ ಜೀವನಾನು ಭವ- ಇವೆಲ್ಲವೂ ಅವರಿಗೆ ಎಂತಹ ಶಕ್ತಿಯನ್ನು ತಂದು ಕೊಟ್ಟವು ಎಂದರೆ ಇಡೀ ಆರ್ಷಸಾಹಿತ್ಯಕ್ಕೇ ಹೊಸ ಬೆಳಕು ಚೆಲ್ಲುವಂತೆ ಮಾಡಿದವು.
ಆರ್ಷಸಾಹಿತ್ಯದ ಹಾಸು-ಬೀಸು, ಒಳಗುಟ್ಟು, ನೋಟ, ಮಾರ್ಮಿಕತೆ, ಅವುಗಳ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಮಾ ಜಿಕ, ರಾಜಕೀಯ ಮುಖ, ಸಮಕಾಲೀನ ಪ್ರಸ್ತುತತೆ ಮೊದಲಾದುವನ್ನು ಸರಿಯಾದ ದಿಕ್ಕಿನಲ್ಲಿ, ಯಥಾರ್ಥವಾಗಿ ತಿಳಿಸಿಕೊಡು ವಲ್ಲಿ ಅವರಿಗವರೇ ಸರಿಸಾಟಿ ಅನ್ನುವಂತೆ ಮಾಡಿದವು. ಇಂತಹ ವಿಶೇಷ ಅಧ್ಯಯನ ಸಂಪತ್ತನ್ನು ಹೊಂದಿದ ಮತ್ತೊಬ್ಬ ವ್ಯಕ್ತಿಯನ್ನು ಕನ್ನಡನಾಡು ಕಾಣುವುದು ಅಷ್ಟು ಸುಲಭವಲ್ಲ.
ನಮ್ಮಲ್ಲಿ ಬರೀ ಇಂಗ್ಲಿಷ್ ಓದಿಕೊಂಡವರು, ಬರೀ ಕನ್ನಡ ಓದಿಕೊಂಡವರು ಅಥವಾ ಬರೀ ಸಂಸ್ಕೃತ ಓದಿಕೊಂಡವರು ಎಲ್ಲೆಡೆಯೂ ಸಿಗುತ್ತಾರೆ. ಆದರೆ ಈ ಮೂರನ್ನೂ ಸಮದಂಡಿಯಾಗಿ ಓದಿಕೊಂಡು ಆಯಾ ಭಾಷೆಗಳ ಬುಡಬೇರುಗಳನ್ನೂ, ಸೊಗಸನ್ನೂ, ವ್ಯಾಕರಣವನ್ನೂ ತಿಳಿದವರು ಜತೆಗೆ ಇಂಗ್ಲಿಷ್ ಸಾಹಿತ್ಯದ ಸ್ವತಂತ್ರ ವಿಚಾರಧೋರಣೆಯನ್ನೂ, ವಿಜ್ಞಾನದ ಮನೋಭಾವ ವನ್ನೂ, ಸಂಸ್ಕೃತದ ಸಾಂಪ್ರದಾಯಿಕ ಪಾಂಡಿತ್ಯವನ್ನೂ ಹೊಂದಿದವರು ಬೆರಳೆಣಿಕೆಯಲ್ಲೂ ಸಿಗುವುದು ಕಷ್ಟ. ನಾವು ಆಚಾರ್ಯರಲ್ಲಿ ಈ ಮೂರೂ ಮೇಳೈಸಿದ್ದನ್ನು ಕಾಣಬಹುದು.
ಆಚಾರ್ಯರ ಇನ್ನೊಂದು ವಿಶೇಷತೆಂದರೆ ಅವರಲ್ಲಿ ಸ್ಮತಿ, ಮತಿ, ಬುದ್ಧಿ ಮತ್ತು ಪ್ರಜ್ಞೆ ಸ್ವಲ್ಪವೂ ಮಾಸದೆ, ಅತ್ಯಂತ ಪ್ರಖರವಾಗಿ
ಒಂದಕ್ಕೊಂದು ಸ್ಪರ್ಧೆ ಮಾಡುವ ರೀತಿಯಲ್ಲಿ ಹಾಸು ಹೊಕ್ಕಾಗಿವೆ. ಈ ನಾಲ್ಕೂ ದಟ್ಟವಾಗಿ ಸಂಗಮಿಸಿರುವುದನ್ನು ನಾವು ಅವರ ಎಲ್ಲ ಕೃತಿಗಳಲ್ಲೂ ಕಾಣಬಹುದು. ಅದರಲ್ಲೂ ವಿಶೇಷವಾಗಿ ಹತ್ತು ಸಂಪುಟಗಳಲ್ಲಿ ಬಂದಿರುವ ಅವರ ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು ಕೃತಿಗಳಲ್ಲಿ ಅವು ಎದ್ದು ಕಾಣುತ್ತವೆ.
ದೇಶ ಆಳುವವನ ಚಾರಿತ್ರ್ಯ ಪರಿಶುದ್ಧವಾಗಿರಬೇಕು ಎಂಬುದು ಅವರ ಕಾಳಜಿ. ಅದಕ್ಕಾಗಿ ಅವರು ಎಂತಹ ನಿಷ್ಠುರವನ್ನೂ ಕಟ್ಟಿಕೊಳ್ಳಬಲ್ಲವರಾಗಿದ್ದರು. ಸತ್ಯ ಹೇಳಲು ಅವರು ಎಂದೂ ಹಿಂಜರಿದವರಲ್ಲ. ಹಾಗೆಯೇ ಅವರ ರಾಷ್ಟ್ರಭಕ್ತಿಯೂ ನಿಸ್ಸೀಮ, ಅನನ್ಯವಾದುದು. ಆ ವಿಚಾರಕ್ಕೆ ಬಂದರೆ ಅವರದು ಉಗ್ರರಾಷ್ಟ್ರಭಕ್ತಿ. ಓದುಗನ ರಕ್ತ ಕುದಿಸುವ, ಕಣ್ಣು ತೆರೆಸುವ, ವರ್ಣನಾತೀತ ಸಂಕಟ- ವೇದನೆಗಳಿಗೆ ಗುರಿಮಾಡುವ ಅವರ ಲೇಖನ ಒಂದು ಕ್ಷಣವಾದರೂ ಸತ್ಯದ ಪ್ರಖರ ಬೆಳಕಿನಲ್ಲಿ ದಿಟ್ಟಿಸಿ ನೋಡುವಂತೆ
ಮಾಡುತ್ತದೆ.
ಅವರ ಲೇಖನದ ಇನ್ನೊಂದು ವಿಶೇಷತೆಯೆಂದರೆ- ಪುರಾಣಕ್ಕೂ ಸಮಕಾಲೀನ ಸಂಗತಿಗಳಿಗೂ ಅನ್ವಯಿಸಿ ಬರೆಯುವುದು. ಅದು ಅವರೊಬ್ಬರಿಂದ ಮಾತ್ರ ಸಾಧ್ಯವಾಗಿತ್ತು. ನಿಜಕ್ಕೂ ಆ ಬರವಣಿಗೆ ಚೇತೋಹಾರಿ, ನಿತ್ಯನೂತನವಾದುದು. ಅಂತಹ ಬರವಣಿಗೆಗೆ ಸಾಟಿಯಾದ ಮತ್ತೊಂದು ಬರವಣಿಗೆಯನ್ನು ನಾವು ಇನ್ನೆಲ್ಲಿಯೂ, ಬೇರೊಬ್ಬರಿಂದಲೂ ನೋಡಲು ಸಾಧ್ಯವಿಲ್ಲ. ಅಷ್ಟು
ರೋಚಕ! ಅಷ್ಟು ವಿಸ್ಮಯಾವಹ ಅವು!
ಹಿಂದೂ ಎಂದು ಕರೆಯಲ್ಪಡುವ ಭಾರತೀಯ ಮುಖ್ಯ ವಾಹಿನಿಗೆ, ಇಂದಿನ ಸಮಾಜಕ್ಕೆ ಒಬ್ಬ ಸಮರ್ಥ ನಾಯಕನೋ, ಮುಖಂಡನೋ, ರಕ್ಷಕನೋ, ಮುಂದಾಳುವೋ ಇಲ್ಲ ಎಂದು ಆಚಾರ್ಯರು ಹೇಳುತ್ತಿದ್ದರು. (ಮೋದಿ ಪ್ರಧಾನಿಯಾದ ಮೇಲೆ ಆ ಕೊರತೆ ಸ್ವಲ್ಪ ಮಟ್ಟಿಗೆ ನೀಗಿದ್ದು, ದೇಶದ ಚಹರೆ ಬದಲಾಗಿದ್ದು ಬೇರೆ ವಿಚಾರ.) ಇದನ್ನೇ ಕ್ರೈಸ್ತ, ಮುಸಲ್ಮಾನರಿಗೆ ಹೊಲಿಸಿ ಅವರಲ್ಲಿ ನಾಯಕತ್ವ ಇದೆ. ಅದು ಸರಿಯೋ ತಪ್ರೋ ಅದನ್ನವರು ನಿರ್ವಾಹ ಮಾಡುತ್ತಾರೆ ಎಂದು ಉದಾಹರಣೆ ಮೂಲಕ ವಿವರಿಸುತ್ತಾರೆ. ಆದರೆ ಅದನ್ನವರು ಸಮರ್ಥಿಸುವುದಿಲ್ಲ.
ಸಮರ್ಥಿಸುವುದಕ್ಕೆ ಅವರಲ್ಲಿ ಬೇರೆಯದೇ ಇದೆ. ಕ್ರೈಸ್ತರು ಮತ್ತು ಮುಸಲ್ಮಾನರು ಧರ್ಮ, ರಾಜಕಾರಣ ಮತ್ತು ಸಮಾಜಚಿಂತನೆ ಈ ಮೂರನ್ನೂ ಒಟ್ಟಾಗಿ ನಿಭಾಯಿಸುತ್ತಾರೆ. ನಮ್ಮ ನಾಯಕತ್ವ ಎಷ್ಟು ಅನುಪಮವಾದುದು, ಎಷ್ಟು ಸಮರ್ಥವಾದುದು,
ಲೋಕಾದರ್ಶವಾದುದು ಅದರಲ್ಲಿ ಎಂತೆಂತಹ ಗುಣಾದರ್ಶಗಳು ಅಡಗಿವೆ, ನಾವದನ್ನು ಮರೆತು ಎಂತಹ ಶೋಚನೀಯ ಸ್ಥಿತಿಗೆ ಬಂದಿದ್ದೇವೆ ಎಂಬುದನ್ನು ಹೇಳುತ್ತ ನಮ್ಮ ಆತ್ಮವಿಸ್ಮೃತಿ ಎಂತಹ ಆಘಾತಕರ, ನಮ್ಮ ಅಜ್ಞಾನ ಎಷ್ಟು ಆಳವಾದುದು ಎಂದು ತಲೆತಗ್ಗಿಸುವಂತೆ ಮಾಡಿಬಿಡುತ್ತಾರೆ.
ಶ್ರೀಕೃಷ್ಣ ನಮ್ಮ ದೇಶ ಕಂಡ ಅದ್ಭುತ ನಾಯಕ ಎಂಬುದನ್ನು ಉದ್ದಕ್ಕೂ ಪ್ರತಿಪಾದಿಸಿದ ಆಚಾರ್ಯರು, ಅವನೊಬ್ಬ ಕೇವಲ ಧರ್ಮಗುರು, ಧರ್ಮರಕ್ಷಕನಲ್ಲ. ಸಮಾಜ ಸ್ವಾಸ್ಥ್ಯಚಿಂತಕ, ಸಮಾಜಸಮಗ್ರತೆಯ ಸಮರ್ಥ ಚಿಂತನಕಾರ, ಅತಿವಿಲಕ್ಷಣ ಯೋಧ, ಬೋಧಕ, ಪ್ರಚಾರಕ, ಧರ್ಮದ ವ್ಯಾಖ್ಯಾನಕಾರ, ಅನುಷ್ಠಾನಶೀಲ, ಆಡಳಿತಗಾರ ಎಂದು ಅವನ ವ್ಯಕ್ತಿತ್ವದ ಲೋಕೋಪಕಾರದ
ಮುಖಗಳನ್ನು ಪರಿಚಯಿಸಿಟ್ಟಿದ್ದಾರೆ. ಹಾಗೆಯೇ ಐತಿಹಾಸಿಕ ವ್ಯಕ್ತಿ, ಮಹಾಪುರುಷ, ಆಚಾರ್ಯ ಚಾಣಕ್ಯ, ಪ್ರಾಚೀನ ಮಹರ್ಷಿ ಗಳಾದ ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಪರಶುರಾಮ, ಕಣ್ವ, ಅತ್ರಿ, ಅಗಸ್ತ್ಯ ಮೊದಲಾ ದವರನ್ನು ಮರೆತಿದ್ದರ ಫಲವಾಗಿಯೇ ನಾವಿಂದು ಸಮರ್ಥ ನಾಯಕತ್ವವನ್ನು ಪಡೆಯದೇ ಗೊಂದಲ, ಫಜೀತಿಗಳಿಗೆ ಒಳಪಟ್ಟು ದೇಶವನ್ನು ಅವನತಿಯತ್ತ ತಳ್ಳುತ್ತಿದ್ದೇವೆ ಎಂದು ಮರುಗಿದ್ದರು.
ಇನ್ನು ದೇಶಕ್ಕೊಂದು ಧ್ಯೇಯ, ಆದರ್ಶಗಳು ಬೇಕು, ಅವಿಲ್ಲದಿದ್ದರೆ ದೇಶ ಅಥವಾ ರಾಷ್ಟ್ರ ಸೂತ್ರವಿಲ್ಲದ ಪಟದಂತೆ, ಗುರಿಯಿಲ್ಲದ ದೋಣಿಯಂತೆ ಆಗಿಬಿಡುತ್ತದೆ ಎಂದು ಆಚಾರ್ಯರು ತೀಕ್ಷ್ಣವಾಗಿ ಉದಾಹರಣೆ ಸಹಿತ ವ್ಯಾಖ್ಯಾನಿಸಿದ್ದಿದೆ. ನಮ್ಮ ಧ್ಯೇಯದ ಬಗ್ಗೆ, ಧರ್ಮದ ಬಗ್ಗೆ, ನ್ಯಾಯದ ಬಗ್ಗೆ ಖಚಿತವಾದ ತಿಳಿವಳಿಕೆಯನ್ನು ಕೊಟ್ಟಿದ್ದರು. ನಮ್ಮಲ್ಲಿ ಪ್ರತಿಶತ ೯೦ರಷ್ಟು ಮಂದಿಗೆ ಧರ್ಮ, ನ್ಯಾಯ. ಮತ, ಪಂಥಗಳ ಬಗ್ಗೆ ಗೊಜಲಿವೆ; ಗೊಂದಲಗಳಿವೆ. ಅವೆಲ್ಲವನ್ನೂ ಕಲಸುಮೇಲೋಗರವಾಗಿ ಮಾಡಿಕೊಂಡು ನಾವೂ
ಉಣ್ಣುತ್ತೇವೆ; ಇತರರಿಗೂ ಉಣ್ಣಿಸುತ್ತೇವೆ. ಇದು ನಮ್ಮ ದುರ್ದೈವ. ನಾವು ಹಾದಿ ತಪ್ಪಿರುವುದಕ್ಕೆ, ನಮ್ಮ ರಾಷ್ಟ್ರ ಹಾದಿ ತಪ್ಪಿರುವುದಕ್ಕೆ ಇವೇ ಮೂಲಕಾರಣ.
ಭಾರತೀಯ ಧರ್ಮಪ್ರಜ್ಞೆಯನ್ನು, ನ್ಯಾಯಪರಿಕಲ್ಪನೆಯನ್ನು, ಮತ- ಪಂಥಗಳ ವ್ಯತ್ಯಾಸವನ್ನು ಇದುವರೆಗೂ ನಮಗೆ ಯಾರೂ
ಖಚಿತವಾದ ಭಾಷೆಯಲ್ಲಿ, ನಿಃಸಂದಿಗ್ಧವಾಗಿ, ನಿರ್ದುಷ್ಟವಾಗಿ ತಿಳಿಸಿಕೊಟ್ಟವರಿಲ್ಲ. ಅದನ್ನು ಆಚಾರ್ಯರು ಮಾಡಿದ್ದಾರೆ. ಮಾತ್ರವಲ್ಲ. ಏಕಾಂಗಿಯಾಗಿ ಮಾಡಿದ್ದಾರೆ. ಅವರು ಮಾಡಿದ್ದು ಒಂದು ಸಾಂಸ್ಥಿಕ ಕೆಲಸ. ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸ.
ಧ್ಯೇಯ, ಮೌಲ್ಯ, ಆದರ್ಶ, ನ್ಯಾಯ ಮೊದಲಾದವು ಧರ್ಮದ ಅಡಿಯಲ್ಲಿ ಬಂದಾಗ ಮಾತ್ರ ಅವು ಜಗತ್ತಿನ ಹಿತವನ್ನು ಸಾಽಸಬಲ್ಲವು. ಅದಿಲ್ಲದಿದ್ದರೆ ಅದು ಕುರುಡನು ಹಿಡಿದ ತುಪಾಕಿಯಂತಾಗುತ್ತದೆ; ಕತ್ತಲೆ ಕೋಣೆಯಲ್ಲಿ ಮೂಗನು ಬಡಿಸಿದ ಭೋಜನದಂತಾಗುತ್ತದೆ. ಈಗ ಆಗಿರುವುದು ಅಂತಹದೇ ಸ್ಥಿತಿ. ನಾವು ನಮ್ಮ ವೇದ, ರಾಮಾಯಣ, ಮಹಾಭಾರತ, ಪುರಾಣ, ಮನು, ಕೌಟಿಲ್ಯ, ರಾಮ, ಕೃಷ್ಣ ಮೊದಲಾದವರನ್ನು ಮರೆತಿದ್ದೇವೆ. ಅದನ್ನು ಆತ್ಮವಿಸ್ಮತಿ ಎಂದು ಕರೆಯುತ್ತಾರೆ. ಅದಕ್ಕೀಗ ಬೇಕು ನಮ್ಮ ಪ್ರಾಚೀನರು ಎತ್ತಿಹಿಡಿದ ರಾಷ್ಟ್ರಭಕ್ತಿ, ರಾಷ್ಟ್ರನಿಷ್ಠೆ, ಧ್ಯೇಯ, ಆದರ್ಶ, ಮೌಲ್ಯಗಳ ಬೆಳಕು. ಅವನ್ನು ತಿಳಿಸಿಕೊಟ್ಟವರಲ್ಲಿ
ಆಚಾರ್ಯರ ಪಾತ್ರ ಹಿರಿದಾದುದು.
ಅದಕ್ಕೂ ಮೊದಲು ಇದೇ ದಾರಿಯಲ್ಲಿ ಸಾಗಿದವರು ಡಿ.ವಿ.ಜಿ ಮಾತ್ರ ಕಾಣ ಸಿಗುತ್ತಾರೆ. ಡಿ.ವಿ.ಜಿಯವರ ವಿಸ್ತಾರವೇ ಆಚಾರ್ಯರು
ಆಗಿದ್ದರು ಎಂದರೆ ತಪ್ಪಾಗಲಾರದು. ಆಚಾರ್ಯರು ಒಬ್ಬ ಅಪ್ರತಿಮ ರಾಷ್ಟಭಕ್ತ. ರಾಷ್ಟ್ರ ವಿಚಾರ ಬಂದಾಗ ಅವರು ಅತ್ಯಂತ ಉಗ್ರರಾಗುತ್ತಿದ್ದರು. ಆವೇಶಭರಿತರಾಗುತ್ತಿದ್ದರು. ರಾಜಕಾರಣಿಗಳ ತಪ್ಪನ್ನು ಎಳೆ ಎಳೆಯಾಗಿ ಖಂಡಿಸುತ್ತಿದ್ದರು. ಉದಾಹರಣೆ, ಸಾಕ್ಷ್ಯಾಧಾರಗಳ ಸಹಿತ ಅವರನ್ನು ಝಾಡಿಸುತ್ತಿದ್ದರು. ದೇಶ ದಾರಿತಪ್ಪಿ ಹೋಗುತ್ತಿರುವುದಕ್ಕೆ ಕಣ್ಣೀರ‍್ಗರೆಯುತ್ತಿದ್ದರು.
ದೇಶ ಹೇಗಿರಬೇಕು ಅನ್ನವುದಕ್ಕೆ ವೇದ, ಉಪನಿಷತ್ತು, ಕಾವ್ಯ, ಪುರಾಣ, ಇತಿಹಾಸ, ಸ್ವಾನುಭವ ಎಲ್ಲವನ್ನೂ ಎಳೆದು ತಂದು ಸಮಕಾಲೀನ ವಿದ್ಯಮಾನಗಳಿಗೆ ಅನ್ವಯಿಸಿ ಅವುಗಳ ಸಾಧಕ-ಬಾಧಕ, ಒಳಿತು-ಕೆಡುಗಳನ್ನು ವಿಶ್ಲೇಷಿಸಿದ್ದರವರು. ಕಾವ್ಯ-ಪುರಾಣಗಳನ್ನು ಅತ್ಯಂತ ಸಮಂಜಸವಾಗಿ ಸಮಕಾಲೀನ ಪ್ರಸ್ತುತಿಗೆ ಹೋಲಿಸಿ ಬರೆಯುವ ಮತ್ತು ಪ್ರವಚನ ಮಾಡುವ ಅವರ ಹೊರತು ಮತ್ತೊಬ್ಬರನ್ನು ವರ್ತಮಾನ ಕಾಲದಲ್ಲಿ ನೋಡಲು ಸಾಧ್ಯವೇ ಇಲ್ಲ.
ಅವರಿಗೆ ಅವರೇ ಸರಿಸಾಟಿ. ಅವರೊಬ್ಬ ರಾಷ್ಟ್ರಭಕ್ತರಾಗಿ ಭಾರತವನ್ನು ಕಂಡ ರೀತಿಯನ್ನು ನೋಡಬೇಕು. ಅವರಿಗೆ ಭಾರತ ಇಂಡಿಯಾ ಆಗಿ ಕಂಡಿರಲಿಲ್ಲ. ಇಂಡಿಯಾ ಒಂದು ವ್ಯಭಿಚರಿತ ಹೆಸರು ಎಂದು ಹೇಳುತ್ತಿದ್ದರು. ಅವರ ಇನ್ನೊಂದು ವಿಶೇಷ ವೆಂದರೆ ಇಡೀ ವಿಶ್ವವೇ ಭಾರತ ಆಗಿತ್ತು ಎಂದು ಸಾಕ್ಷ್ಯಾಧಾರಗಳ ಸಹಿತ ಪ್ರತಿಪಾದಿಸುವುದು. ಅದಕ್ಕೆ ಅವರು ಅನುಸರಿಸುವ
ಮಾರ್ಗ- ಇತಿಹಾಸ ಗರ್ಭ ಬಗೆಯುವುದು, ಕಾವ್ಯೇತಿಹಾಸಗಳಲ್ಲಿ ಹುದುಗಿರುವ ಪದಪುಂಜಗಳನ್ನು ಎತ್ತಿಹಿಡಿಯುವುದು, ಕೆಲವೊಮ್ಮೆ ವ್ಯುತ್ಪತ್ತಿಗಳನ್ನು ಆಧರಿಸುವುದು, ಪದಗಳಗಳ ಸಾಮ್ಯತೆಯನ್ನು ಗಮನಿಸುವುದು ಇವೇ ಮೊದಲಾದುವನ್ನು ಉಪಕರಣವಾಗಿ ಬಳಸಿಕೊಂಡಿದ್ದಾರೆ ಅನೇಕ ಕೃತಿಗಳಲ್ಲಿ.
ಇದು ನಿಜಕ್ಕೂ ಒಂದು ರೊಮಾಂಚಕ ಅನುಭವ. ಅವರು ಇಡೀ ಭಾರತವನ್ನು ಕಾಣುವ ರೀತಿಯೇ ರೋಚಕವಾದುದು; ಚಿಂತನೀಯವಾದುದು. ಅದರಲ್ಲೂ ಅವರು ಪುರಾಣಗಳ ಹಿನ್ನೆಲೆಯಲ್ಲಿ, ವ್ಯುತ್ಪತ್ತಿಗಳ ಆಧಾರದಲ್ಲಿ ವಿಶ್ಲೇಷಿಸುವ, ನಿರೂಪಿಸುವ ಕ್ರಮ ನಿಜಕ್ಕೂ ಚೇತೊಹಾರಿಯಾದುದು. ಅವನ್ನು ಓದಿದಾಗ ನಾವು ಬೆಚ್ಚಿ ಬೀಳುತ್ತೇವೆ. ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ
ಅರಸಿದಂತಾಗುತ್ತದೆ. ಅಯ್ಯೋ ನಮ್ಮ ಆತ್ಮವಿಸ್ಮತಿಯೇ? ಎಂದು ಮರುಗುವಂತಾಗುತ್ತದೆ. ಇಂಥಾದ್ದನ್ನು ಹೇಳುವಾಗ ಕೊಡುವ ಉಪಮೆಯನ್ನು ಓದಿಯೇ ಸವಿಯಬೇಕು.
ಆಚಾರ್ಯರು ಭಾರತವನ್ನು ವಿವಿಧಮುಖಗಳಲ್ಲಿ ಸಮರ್ಥಿಸಿಕೊಂಡ ರೀತಿಯೇ ಒಂದು ವಿಶೇಷ ಅನುಭವ. ಭಾರತದ ಭವ್ಯತೆಯನ್ನೂ, ವೈಶಿಷ್ಟ್ಯಗಳನ್ನೂ ಬಗೆದು ಕೊಡುವ ರೀತಿಯೇ ರೊಮಾಂಚಕ. ಭಾರತ ಎಂದೊಡನೆ ಅವರಿಗೆ ಇಲ್ಲಿನ ಋಷಿಪರಂಪರೆ, ಸಂಗೀತ ಪರಂಪರೆ, ಸಾಂಸ್ಕೃತಿಕ ಮೌಲ್ಯ, ಬೃಹತ್ತಾದ ಸಾಹಿತ್ಯರಾಶಿ, ಸನಾತನ ಆದರ್ಶ, ಜೀವನ ಸಿದ್ಧಾಂತ, ಭವ್ಯ ಇತಿಹಾಸ, ವಿಜ್ಞಾನ ಸಾಧನೆ, ಖಗೋಳ, ಗಣಿತ, ವೀರಪುರುಷರ ಶೌರ್ಯ, ಬಲಿದಾನ, ಉತ್ತಮ ಧ್ಯೇಯ ಎಲ್ಲವೂ ನೆನಪಿಗೆ ಬರುತ್ತಿತ್ತು.
ಹಾಗೆಯೇ ನಮ್ಮ ಸಂವಿಧಾನ, ಧ್ವಜ, ರಾಷ್ಟ್ರಗೀತೆ ಯಾವುದನ್ನೂ ಗೌರವಿಸದ ಪ್ರತ್ಯೇಕತಾವಾದಿಗಳ ಬಗ್ಗೆ, ಕೋಮುವಾದಿಗಳ ಬಗ್ಗೆ ಕಿಡಿಕಾರುತ್ತಿದ್ದರು. ಭಾರತದ ಶ್ರೇಷ್ಠತೆ, ಭವ್ಯತೆಯನ್ನು ಮನಗಾಣಿಸುವುದಕ್ಕೆ, ಮತ್ತು ಅದಕ್ಕೆ ಆ ಹೆಸರು (ಭಾರತ ಎಂದು)
ಬರುವುದಕ್ಕೆ ಅವರು ತಿಳಿಸಿರುವ ಕಾರಣವೇ ರೋಚಕ. ಇರುವ ಕಟ್ಟಿಗೆಗಳನ್ನೆಲ್ಲ ಒಟ್ಟುಗೂಡಿಸಿ ದೊಡ್ಡ ಬೆಂಕಿ ಮಾಡುವಂತೆ ದುಃಷಂತಪುತ್ರ ಭರತನನ್ನೂ, ರಾಮ ಸೋದರ ಭರತನನ್ನೂ, ಚಂದ್ರವಂಶೀಯ ಆದಿ (ಜಡ) ಭರತನನ್ನೂ, ಜೈನಪರಂಪರೆಯ ಭರತೇಶನನ್ನೂ ತಂದುನಿಲ್ಲಿಸಿ, ಅಷ್ಟು ಭವ್ಯ, ವೀರ್ಯ, ಶೌರ್ಯ ಪರಂಪರೆಯುಳ್ಳದ್ದು ಈ ದೇಶ ಎಂದು ಸಾರುತ್ತಾರೆ.
ಅವರಿಂದಲೇ ಈ ದೇಶಕ್ಕೆ ಭಾರತ ಎಂಬ ಹೆಸರು ಬಂತು ಎಂದು ದೃಢೀಕರಿಸುವ ಅವರ ರೀತಿ, ರಾಷ್ಟ್ರಪ್ರೇಮ ಅಸದೃಶವಾದುದು. ಒಟ್ಟಾರೆ ನಾರಾಯಣಾಚಾರ್ಯರು ಸನ್ನಿವೇಶದ ಕಟು ವಿಮರ್ಶಕ ಮಾತ್ರವಲ್ಲ ರಾಷ್ಟ ಸಿದ್ಧಾಂತದ ಬಗೆಗಿನ ಆಶಾವಾದಿ. ಅಂಥ ಒಬ್ಬ ಘನವಿದ್ವಾಂಸನೊಬ್ಬನನ್ನು ನಾಡು ಕಳಕೊಂಡಿದೆ.