ಕುಟುಂಬ ರಾಜಕಾರಣಿಗಳೇ ತುಂಬಿರುವ ಮೇಲ್ಮನೆ
ಆಯ್ಕೆಯಾದ 10ಕ್ಕೂ ಹೆಚ್ಚು ಸದಸ್ಯರದ್ದು ಕೌಟುಂಬಿಕ ಹಿನ್ನೆೆಲೆ
ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು
ಕುಟುಂಬ ರಾಜಕಾರಣವನ್ನು ಪರಸ್ಪರ ವಿರೋಧಿಸುವ ರಾಜಕಾರಣಿಗಳು ಪಕ್ಷಾತೀತವಾಗಿ ಕೌಟುಂಬಿಕ ರಾಜಕಾರಣ ಮಾಡುತ್ತಾರೆಂಬುದು ವಿಧಾನ
ಪರಿಷತ್ ಚುನಾವಣೆ ಫಲಿತಾಂಶದಿಂದ ಗೊತ್ತಾಗಿದೆ.
ವಿಧಾನ ಪರಿಷತ್ಗೆ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ ಮೂಲಕ ಆಯ್ಕೆಯಾಗುವ 25 ಸ್ಥಾನಗಳ ಪೈಕಿ, ಸುಮಾರು 10ಕ್ಕಿಂತ ಹೆಚ್ಚು ಸದಸ್ಯರು ರಾಜ ಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಕುಟುಂಬ ರಾಜ ಕಾರಣವನ್ನೇ ಹೊದ್ದು ಮಲಗಿರುವ ಜೆಡಿಎಸ್, ಕುಟುಂಬ ರಾಜಕಾರಣವನ್ನು ಸದಾ ವಿರೋಧಿಸುವ ಬಿಜೆಪಿ ಸೇರಿ ಎಲ್ಲರೂ ಪಕ್ಷಬೇಧವಿಲ್ಲದೆ ಕುಟುಂಬದ ಸದಸ್ಯರನ್ನು ಮೇಲ್ಮನೆಗೆ ತರುವ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿ ಯೂ ಆಗಿದ್ದಾರೆ.
ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ನ ನೆಹರೂ ಕುಟುಂಬ ಮತ್ತು ಜೆಡಿಎಸ್ನ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ವಿರುದ್ಧ ಸದಾ ಕೌಟುಂಬಿಕ ರಾಜಕಾರಣದ ಆರೋಪ ಮಾಡಲಾಗುತ್ತದೆ. ಆದರೆ, ಇತ್ತೀಚೆಗೆ ದೇಶಾ ದ್ಯಂತ ಕುಟುಂಬ ರಾಜಕಾರಣದ ಬೇರುಗಳು ಆಳವಾಗಿ ಬೇರೂರುತ್ತಿವೆ.
ರಾಜ್ಯದಲ್ಲಿಯೂ ಕುಟುಂಬ ರಾಜಕಾರಣದ ಟ್ರೆಂಡ್ ವೇಗವಾಗಿ ಹಬ್ಬುತ್ತಿದೆ. ಅದರಲ್ಲೂ ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಂತೂ ಕುಟುಂಬ ರಾಜಕಾರಣ ಎಲ್ಲೆ ಮೀರಿದ್ದು, ಮೂರು ಪಕ್ಷಗಳು ಪಕ್ಷಾತೀತವಾಗಿ ಕುಟುಂಬ ರಾಜಕಾರಣದಲ್ಲಿ ತೊಡಗಿರುವುದು ಜಗಜ್ಜಾಹೀರಾಗಿದೆ. ಹಾಸನದಲ್ಲಿ ಸೂರಜ್ ರೇವಣ್ಣ ಗೆಲವು ಸಾಧಿಸುವ ಮೂಲಕ ದೇವೇಗೌಡರ ಕುಟುಂಬದ ಎಂಟನೇ ವ್ಯಕ್ತಿ ಸಕ್ರಿಯ ರಾಜಕಾರಣ ಪ್ರವೇಶ ಮಾಡಿದಂತಾ ಗಿದೆ. ಇದನ್ನು ಸದಾ ವಿರೋಧಿಸುವ ಬಿಜೆಪಿಯ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಎರಡನೇ ಬಾರಿಗೆ ಪರಿಷತ್ ಪ್ರವೇಶ ಮಾಡಿದ್ದಾರೆ.
ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಪುತ್ರ ಡಿ.ಎಸ್.ಅರುಣ್ ಶಿವಮೊಗ್ಗದಿಂದ ಪರಿಷತ್ಗೆ ಆಯ್ಕೆಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಪಕ್ಷೇತರವಾಗಿ ಸ್ಪರ್ಧಿಸಿ ಬೆಳಗಾವಿಯಿಂದ ಪರಿಷತ್ಗೆ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಬೆಳಗಾವಿಯಿಂದ ಪರಿಷತ್ಗೆ ಆಯ್ಕೆಯಾಗಿದ್ದರೆ, ತುಮಕೂರಿನ ಹಿರಿಯ ನಾಯಕ ರಾಜಣ್ಣ ಪುತ್ರ ರಾಜೇಂದ್ರ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ಹಾಗೂ ಉತ್ತರ ಕರ್ನಾಟಕದ ಪ್ರಬಲ ರಾಜಕಾರಣಿ ಎಂ.ಬಿ. ಪಾಟೀಲ್ ಸಹೋದರ ಸಂಜಯ್ ಗೌಡ ಪಾಟೀಲ್, ಡಿ.ಕೆ. ಶಿವಕುಮಾರ್ ಅವರ ಕುಟುಂಬದ ಎಸ್. ರವಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪರಿಷತ್ಗೆ ಆಯ್ಕೆಯಾಗುವ ಮೂಲಕ ಕುಟುಂಬ ರಾಜಕಾರಣದಲ್ಲಿ ಯಾವ ಪಕ್ಷವೂ ಕಡಿಮೆಯಿಲ್ಲ ಎಂಬುದನ್ನು ಸಾಕ್ಷಿ ಸಮೇತ ಸಾಭೀತು ಮಾಡಿದಂತಾಗಿದೆ.
ಕುಟುಂಬ ರಾಜಕಾರಣ ಕಾಮನ್
ರಾಜ್ಯದಲ್ಲಿ ಕುಟುಂಬ ರಾಜಕಾರಣ ಕಾಮನ್ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಇದೇ ಕಾರಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ರಾಜ ಕಾರಣದ ವಿರುದ್ಧ ಬೇಕಿದ್ದರೆ ಕಾನೂನು ತನ್ನಿ. ನಮ್ಮ ಕುಟುಂಬದ ಅಭ್ಯರ್ಥಿ ಸ್ಪರ್ಧೆಗೆ ಮಾತ್ರ ವಿರೋಧ ಮಾಡುತ್ತೀರಲ್ಲ ಎಂದು ಕಿಡಿಕಾರಿದ್ದರು. ಅಂತೆಯೇ ರಾಜ್ಯದ ಪ್ರಮುಖ ನಾಯಕರಾದ ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ, ಸಿ.ಎಂ.ಉದಾಸಿ, ಎ.ಬಿ.ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಅನೇಕ ಕುಟುಂಬದ ಒಂದ ಕ್ಕಿಂದ ಹೆಚ್ಚು ಸದಸ್ಯರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿ ಕೊಂಡಿದ್ದಾರೆ. ಆ ಮೂಲಕ ಕುಟುಂಬ ರಾಜಕಾರಣ ಪ್ರಶ್ನಿಸುವ ನೈತಿಕತೆಯನ್ನು ಎಲ್ಲ ಪಕ್ಷಗಳು ಕಳೆದುಕೊಂಡಿವೆ ಎನ್ನಬಹುದು.
ಪರಿಷತ್ನ ಕುಟುಂಬ
? ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಹಟ್ಟಿಹೊಳಿ
? ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ
? ಡಿ.ಎಚ್.ಶಂಕರಮೂರ್ತಿ ಪುತ್ರ ಡಿ.ಎಸ್ ಅರುಣ್
? ರಾಜಣ್ಣ ಪುತ್ರ ರಾಜೇಂದ್ರ
? ರೇವಣ್ಣ ಪುತ್ರ ಸೂರಜ್ ರೇವಣ್ಣ
? ಡಿ.ಕೆ.ಶಿವಕುಮಾರ್ ಸೋದರ ಸಂಬಂಧಿ ರವಿ
? ಎಂ.ಬಿ.ಪಾಟೀಲ್ ಸಹೋದರ ಸಂಜಯ್ ಪಾಟೀಲ್
? ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್