ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕುವ ಮೂಲಕ ತಮ್ಮ ಉದ್ದಟತನ ತೋರಿದ್ದು ಖಂಡನೀಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿದ್ದು ಬಹುದೊಡ್ಡ ಅಪಚಾರ. ಆದರೆ ಘಟನೆ ಮಹಾರಾಷ್ಟ್ರದಲ್ಲಿ ಆಗಿರುವುದರಿಂದ ರಾಜ್ಯ ಸರಕಾರ ಏನೂ ಮಾಡದ ಸ್ಥಿತಿಯಲ್ಲಿದೆ. ಆದರೆ ಮಹಾ ರಾಷ್ಟ್ರ ಸರಕಾರ ಈ ಬಗ್ಗೆ ಎಚ್ಚೆತ್ತು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಇನ್ನೊಂದೆಡೆ ವಿಧಾನಮಂಡಲ ಚಳಿಗಾಲದ ಅಽವೇಶನಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು (ಎಂಇಎಸ್) ಬೆಳಗಾವಿಯಲ್ಲಿ ಹಮ್ಮಿ ಕೊಂಡಿದ್ದ ‘ಮಹಾಮೇಳಾವ’ ಸಂದರ್ಭದಲ್ಲಿ, ಆ ಸಂಘಟನೆಯ ಅಧ್ಯಕ್ಷ ದೀಪಕ ದಳವಿ ಅವರಿಗೆ ಕನ್ನಡ ಪರ ಹೋರಾಟಗಾರ ಸಂಪತ್ಕುಮಾರ್ ದೇಸಾಯಿ ಅವರು ಮಸಿ ಬಳಿದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕನ್ನಡ ಕಾರ್ಯಕರ್ತರ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿರುವುದು ಅಕ್ಷಮ್ಯ. ಅಲ್ಲಿ ನಾಡಧ್ವಜಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳು ರಾಜಾರೋಷವಾಗಿ ಓಡಾಡಿಕೊಂಡು ಇದ್ದರೆ, ಇಲ್ಲಿ ಕನ್ನಡದ ಅಸ್ಮಿತೆಗಾಗಿ ಹೋರಾಡುವ ಕನ್ನಡಿಗರ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗುತ್ತಿದೆ.
ರಾಜ್ಯ ಸರಕಾರದ ಈ ಕ್ರಮ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಹರಿಹಾಯ್ದರೂ ಸರಕಾರದ ಕಿವಿಗೆ ಬೀಳುತ್ತಿಲ್ಲ. ‘ಅಂದು ಬ್ರಿಟಿಷರ ದಬ್ಬಾಳಿ ಕೆಯ ವಿರುದ್ಧ ಸಿಡಿದೆದ್ದ ರಾಯಣ್ಣನ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದರು. ಇಂದು ಎಂಇಎಸ್ ದಬ್ಬಾಳಿಕೆ ವಿರುದ್ಧ ಸಿಡಿದೆದ್ದ ಕನ್ನಡಿಗನ ಮೇಲೆ ಸುಳ್ಳು ಕೇಸ್ ದಾಖಲಿಸಿzರೆ’ ಎಂದು ಬ್ರಿಟಿಷ್ ಸರಕಾರಕ್ಕೆ ಹೋಲಿಸಿದ್ದಾರೆ. ‘ಈ ಹಿಂದೆ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಮಾಡುತ್ತಿದ್ದ ಬೆಳಗಾವಿ ಕನ್ನಡಿಗರ ಮೇಲೆ ಪೆಟ್ರೋಲ್ ಬಾಂಬ್ ಹಾಕಿ, ಕೆಲವರ ಸಾವಿಗೆ ಕಾರಣರಾದ ಎಂಇಎಸ್ ಅವರ ಮೇಲೆ ಯಾವ ಪ್ರಕರಣ ದಾಖಲಿಸಿದ್ದೀರಿ ಎಂಬುದನ್ನು ನಿಮ್ಮ ಸರಕಾರ ಬಹಿರಂಗ ಪಡಿಸಬಹುದೆ?’ ಎಂದು ಪ್ರಶ್ನಿಸುತ್ತಿದ್ದಾರೆ.
ಅಧಿವೇಶನದಲ್ಲಿ ನಿರತರಾದ ಸರಕಾರದ ಮುಖ್ಯಸ್ಥರಿಗೆ ಈ ಪ್ರಶ್ನೆಗಳು ತಲುಪಲಿ. ಕನ್ನಡ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೂಡಲೇ ಕೈಬಿಟ್ಟು, ಬಿಡುಗಡೆ ಮಾಡಲಿ.