Wednesday, 11th December 2024

ಮತಾಂತರ: ಗಾಂಧಿ ಸಮನ್ವಯ ದೃಷ್ಟಿ

ಪ್ರಚಲಿತ

ಮಲ್ಲಿಕಾರ್ಜುನ ಹೆಗ್ಗಳಗಿ

ಮತಾಂತರದ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಈ ಘಳಿಗೆಯಲ್ಲಿ ಗಾಂಧೀಜಿ ನೆನಪಾಗುತ್ತಾರೆ. ತಮ್ಮ ಮಗ ಮತಾಂತರಗೊಂಡಾಗ ಅವರು ತೋರಿದ
ಸಷ್ಣುತೆ, ನಡೆದುಕೊಂಡ ರೀತಿ ಈಗಲೂ ಮಾದರಿ.

ಗಾಂಧೀಜಿ ಜ್ಯೇಷ್ಠ ಪುತ್ರ ಹರಿಲಾಲ ೧೯೩೬ ಮೇ೧೪ರಂದು ಮುಬಯಿಯ ಜಾಮಾ ಮಸೀದಿಯಲ್ಲಿ ಇಸ್ಲಾಂಗೆ ಮತಾಂತರಗೊಂಡು, ’ಅಬ್ದುಲ್ಲಾ ಗಾಂಧಿ’ ಎಂದು ಹೆಸರು ಬದಲಿಸಿಕೊಂಡರು. ಈ ಬಗ್ಗೆ ಪತ್ರಿಕೆಗಳಿಗೆ ಪ್ರಕಟಣೆ ಯನ್ನೂ ನೀಡಿದರು. ಗಾಂಧೀಜಿ ಇದರಿಂದ ಎಳ್ಳಷ್ಟೂ ವಿಚಲಿತರಾಗಲಿಲ್ಲ. ಮಗನ ನಡೆಯನ್ನು ಧಾರ್ಮಿಕ ಸಮನ್ವಯ ದೃಷ್ಟಿಯಿಂದ ನೋಡಿದರು. ದೇಶ-ದೇಶದ ಪತ್ರಿಕೆಗಳಲ್ಲಿ ಈ ವಿಷಯದ ಚರ್ಚೆ ನಡೆಯತೊಡಗಿತು. ಇದನ್ನೆಲ್ಲ ಗಮನಿಸಿದ ಗಾಂಧಿ ತಾವು ಪ್ರಕಟಿಸುತ್ತಿದ್ದ ‘ಹರಿಜನ’ ಪತ್ರಿಕೆಯಲ್ಲಿ ತಮ್ಮ ಪ್ರತಿಕ್ರಿಯೆ ಬರೆದರು. ಅಲ್ಲಿ ವ್ಯಕ್ತವಾಗಿದ್ದ ಅವರ ವಿಚಾರಗಳು ವಿಶ್ವ ಬಂಧುತ್ವಕ್ಕೆ ಸಾಕ್ಷಿ.

ಗಾಂಧೀಜಿ ಪ್ರತಿಕ್ರಿಯೆ ಪೂರ್ಣಪಾಠ: ಹರಿಲಾಲ ನಿಜವಾಗಿಯೂ ಹೃದಯ ಪರಿವರ್ತನೆಯಿಂದ ಲೌಕಿಕ ಲಾಭಗಳಿಗೆ ಆಸೆಪಡದೆ ಶುದ್ಧ ಮನಸ್ಸಿನಿಂದ ಮತಾಂತರ ಗೊಂಡಿದ್ದರೆ ಯಾವ ಅಭ್ಯಂತರವೂ ಇಲ್ಲ. ಇಸ್ಲಾಂ ಎಂಬುದು ನನ್ನ ಧರ್ಮದಷ್ಟೇ ಸತ್ಯವಾದದ್ದು. ಆದರೆ ಇದು ಹೃದಯ ಪರಿವರ್ತನೆಯೇ ಅಥವಾ ಸ್ವಾರ್ಥಕ್ಕಾಗಿ ನಡೆದದ್ದೇ ಎಂಬುದರ ಬಗ್ಗೆ ನನಗೆ ಈಗಲೂ ಸಂದೇಹ ಇದೆ. ಹರಿಲಾಲನ ಬಗ್ಗೆ ಬಲ್ಲವರಿಗೆ ಇದು ಅರ್ಥ ವಾಗುತ್ತದೆ. ಅವನು ಕುಡಿತಕ್ಕೆ ಬಲಿಯಾಗಿದ್ದಾನೆ, ವೇಶ್ಯೆಯರ ಸಹವಾಸ ಮಾಡಿದ್ದಾನೆ, ಹಣಕ್ಕಾಗಿ ಸ್ನೇತರನ್ನು ಪೀಡಿಸುತ್ತಾನೆ.

ಹೆಚ್ಚಿನ ಬಡ್ಡಿಗೆ ಸಾಲ ಪಡೆದು ತೊಂದರೆ ಅನುಭಸುತ್ತಿದ್ದಾನೆ. ಅವನಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ಇವರಿಗೆ ಹರಿಲಾಲನಿಂದ ಯಾವ ಪೊಷಣೆಯ ಉಸಿಗುತ್ತಿಲ್ಲ. ಇಸ್ಲಾಂ ಬಗ್ಗೆ ನನ್ನ ಭಾವನೆ ಏನೆಂದು ಎಲ್ಲ ಮುಸ್ಲಿಮರಿಗೂ ಚೆನ್ನಾಗಿ ಗೊತ್ತು. ಅವನು ಹಿಂದೂ ಧರ್ಮ ಬಿಟ್ಟಿದ್ದ ರಿಂದ ಆ ಧರ್ಮಕ್ಕೆ ಯಾವ ನಷ್ಟವೂ ಆಗಿಲ್ಲ. ಇಸ್ಲಾಂಗೆ ಸೇರಿದ್ದರಿಂದ ಇಸ್ಲಾಂಗೂ ಯಾವ ಲಾಭವೂ ಆಗಿಲ್ಲ. ಅವನು ಪೊಲಿಯಾಗಿಯೇ ಇರು
ತ್ತಾನೆ. ಇದು ಇಸ್ಲಾಂಗೂ ಭೂಷಣವಲ್ಲ. ಹೀಗಾಗಿ ನನ್ನ ಮುಸ್ಲಿಂ ಬಾಂಧವರು ಹರಿಲಾಲ ಮುಂದೆ ಸರಿಯಾದ ದಾರಿಯಲ್ಲಿ ಹೋಗುವಂತೆ ನೋಡಿ
ಕೊಳ್ಳಬೇಕು ಎಂದು ಆಶಿಸುತ್ತೇನೆ. ಅವನು ಹಿಂದಿನ ದುರ್ವ್ಯಸನ ಪೂರ್ಣ ತ್ಯಜಿಸಿ ದೇವರಲ್ಲಿ ಅಚಲ ನಂಬಿಕೆಯಿಟ್ಟು ಯೋಗ್ಯ ಮನುಷ್ಯನಾದರೆ ಸಾಕು.
ಅವನು ಅಬ್ದುಲ್ಲ ಇರಲಿ, ಹರಿಲಾಲ ಇರಲಿ ನನಗೇನೂ ವ್ಯತ್ಯಾಸಲ್ಲ. ಎರಡೂ ಹೆಸರುಗಳ ಅರ್ಥ ದೇವರ ಭಕ್ತ ಎಂದೇ ಆಗುತ್ತದೆ.

ಹರಿಜನ ಪತ್ರಿಕೆಯಲ್ಲಿ ಪ್ರಕಟವಾದ ಈ ಟಿಪ್ಪಣಿ ಗಾಂಧಿ ವಿರೋಧಿಗಳ ಬಾಯಿ ಮುಚ್ಚಿಸಿತು. ಘಟನೆ ನಡೆದ ಕೆಲವು ದಿನಗಳ ನಂತರ ಗಾಂಧೀಜಿಯವರ
ಮೂರನೆ ಮಗ ರಾಮದಾಸ, ಅಣ್ಣ ಹರಿಲಾಲರನ್ನು ಭೇಟಿಮಾಡಲು ಮುಂಬಯಿಗೆ ತೆರಳಿದ್ದರು. ತಾಯಿ ಕಸ್ತೂರ್ ಬಾ ಬರೆದ ಪತ್ರವನ್ನು ಅಣ್ಣನಿಗೆ ತಲುಪಿಸಿದ ಪರಿಣಾಮ ೬ ತಿಂಗಳ ನಂತರ ಹರಿಲಾಲ ಆರ್ಯ ಸಮಾಜದ ಮೂಲಕ ಹಿಂದೂ ಧರ್ಮಕ್ಕೆ ವಾಪಸಾದರು. ಕೆಲಕಾಲ ಹಿಂದೂ ಧರ್ಮದ ಪ್ರಚಾರವನ್ನೂ ಮಾಡಿದರು.

ಗಾಂಧೀಜಿ ೧೯೪೮ರಲ್ಲಿ ಹತ್ಯೆಯಾದ ಮೇಲೆ ಅವರು ಅಂತ್ಯ ಸಂಸ್ಕಾರವನ್ನು ಹಿರಿಯ ಪುತ್ರ ಹರಿಲಾಲ ಮಾಡಬೇಕಾಗಿತ್ತು. ಆದರೆ ಅವರು ಬರಲೇ ಇಲ್ಲ.
ಎರಡನೇ ಪುತ್ರ ವಿದೇಶದಲ್ಲಿದ್ದರು. ಹೀಗಾಗಿ ಮೂರನೆ ಪುತ್ರ ರಾಮದಾಸ ಅಂತ್ಯ ಸಂಸ್ಕಾರದ ವಿಧಿ-ವಿಧಾನ ಪೂರೈಸಿದರು. ಮುಂದೆ ೬ತಿಂಗಳ ನಂತರ ೧೯೪೮ ಜೂನ ೧೮ರಂದು ಹರಿಲಾಲ ಮುಂಬಯಿಯಲ್ಲಿ ನಿಧನರಾದರು. ಅವರಿಗೆ ಆಗ ೬೦ ವರ್ಷ ವಯಸ್ಸಾಗಿತ್ತು