ಸಂದರ್ಶನ: ಎಸ್.ಎಲ್.ಭೈರಪ್ಪ, ಸಾಹಿತಿ
ಸಂದರ್ಶಕ: ಕೆ.ಜೆ.ಲೋಕೇಶ್ ಬಾಬು, ಮೈಸೂರು
ಮೈಸೂರಲ್ಲಿ ಪ್ರತಿಭಟನೆ ಹೆಸರಲ್ಲಿ ಪ್ರತಿನಿತ್ಯ ಗಲಾಟೆ ಮಾಡುವವರ ನಿಗ್ರಹ ಅಗತ್ಯ ವಾಸ್ತವ ಒಪ್ಪದ ಎಡಪಂಥೀಯರ ಧೋರಣೆ ವಿರುದ್ಧ
ಸಿಎಂ ತುರ್ತು ಗಮನ ಹರಿಸಲಿ
ಮೈಸೂರಿನಲ್ಲಿ ಉದ್ದೇಶಿತ ವಾರ್ಷಿಕ ‘ಬಹುರೂಪಿ’ ನಾಟಕೋತ್ಸವಕ್ಕೆ ಅತಿಥಿಯಾಗಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ನಟಿ ಮಾಳವಿಕಾ ಅವಿನಾಶ್ ಅವರನ್ನು ಆಹ್ವಾನಿಸಿರುವುದನ್ನು ಆಕ್ಷೇಪಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಎಡಪಂಥೀಯರ ‘ಗೂಂಡಾಗಿರಿ’ ಎಂದು ಬಣ್ಣಿಸಿರುವ ಭೈರಪ್ಪ ನವರು, ಯಾವುದೇ ಸಂಸ್ಥೆಯ ವಿರುದ್ಧ, ಯಾರೇ ಆಗಲಿ ಪ್ರತಿನಿತ್ಯ ಗಲಾಟೆ ಮಾಡು ವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರಲ್ಲದೇ. ಇದು ಗೂಂಡಾಗಿರಿ. ಸರಕಾರ ಇದನ್ನು ನಿಗ್ರಹಿಸಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕು ಎಂದು ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಒತ್ತಾಯಿಸಿದ್ದಾರೆ.
ಈ ಸಂಬಂಧ ಮೊದಲ ಬಾರಿಗೆ ಮೌನ ಮುರಿದು ‘ವಿಶ್ವವಾಣಿ’ ಜತೆಗೆ ಮಾತನಾಡಿರುವ ಅವರು, ರಂಗಾಯಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕುರಿತು ಹಲವರು ಪ್ರತಿಕ್ರಿಯಿಸುವಂತೆ ಕೇಳಿದ್ದರು. ಭೈರಪ್ಪ ಸೇರಿದಂತೆ ಬಹುತೇಕ ಪ್ರಮುಖರು ಮೈಸೂರಿನಲ್ಲಿದ್ದರೂ ರಂಗಾಯಣದ ಬಗ್ಗೆ ಮಾತ ನಾಡುತ್ತಿಲ್ಲ ಎಂದು ಆಕ್ಷೇಪಿಸಿದ್ದರು. ಹೌದು, ನಾನು ಸ್ಪಷ್ಟವಾಗಿ ಹೇಳುತ್ತೇನೆ. ರಂಗಾಯಣದಿಂದ ನನಗೆ ಏನೂ ಆಗಬೇಕಿಲ್ಲ. ಹಾಗಾಗಿ ಅಲ್ಲಿನ ವಿಚಾರದ ಬಗ್ಗೆ ನಾನು ಏಕೆ ಪ್ರತಿಕ್ರಿಯಿಸಬೇಕು ಎಂದು ಪ್ರಶ್ನಿಸಿದರು.
ಇಷ್ಟಕ್ಕೂ ರಂಗಾಯಣದಲ್ಲಿ ಈವರೆಗೆ ಇದ್ದವರು ಮಾಡುತ್ತಿದ್ದ ಭಾಷಣ ಏನೆಂದರೆ, ‘ನಾಟಕದ ಮೂಲಕ ಸಮಾಜ ವನ್ನು ತಿದ್ದುತ್ತೇವೆ. ಉದ್ಧಾರ ಮಾಡುತ್ತೇವೆ. ನಾಟಕದ ಮೂಲಕ ಬಡತನ ಹೋಗಲಾಡಿಸುತ್ತೇವೆ. ಅಂತಹುದೇ ನಾಟಕ ನಾವು ಮಾಡಬೇಕು. ಥಿಯೇಟರ್ ಸಿಗದಿದ್ದರೆ ಬೀದಿಯಲ್ಲೇ ನಾವು ನಾಟಕ ಮಾಡುತ್ತೇವೆ. ಅದಕ್ಕಾಗಿ ಬೀದಿ ನಾಟಕ ಮಾಡುತ್ತೇವೆ’ ಎನ್ನುತ್ತಾರೆ. ಇಂತಹ ಅವಿವೇಕತನದಿಂದ ಕೂಡಿದ ಭ್ರಮೆಯಲ್ಲೇ ಅವರು ಈವರೆಗೆ ಬಂದಿದ್ದು. ಇಷ್ಟಕ್ಕೂ ಈವರೆಗೆ ಇದ್ದವರು ಸಮಾಜದಲ್ಲಿ ಮಾಡಿದ ಬದಲಾವಣೆ ಗಳಾದರೂ ಏನೆಂಬುದನ್ನು ಸ್ಪಷ್ಟಪಡಿಸಲಿ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಭೈರಪ್ಪ ಹೇಳಿದ್ದಿಷ್ಟು
ವಿಷಯವೆಂದರೆ, ಂದು ರಂಗಾಯಣಕ್ಕೆ ನಿದೇರ್ಶಕರಾಗಿ ಅಡ್ಡಂಡ ಕಾರ್ಯಪ್ಪನವರು ಬಂದಾಗ, ಕೆಲಸ ಮಾಡಲು ಬೇಕಾದ ಸಂಪನ್ಮೂಲದ ತೀವ್ರ ಕೊರತೆ ಇದೆ. ಕರೋನಾ ಸೇರಿದಂತೆ ನಾನಾ ಕಾರಣಗಳಿಗಾಗಿ ರಂಗಾಯಣ ಹಣದ ಮುಗ್ಗಟ್ಟು ಎದುರಿಸುತ್ತಿದೆ. ಹಿಂದೆ ಇದ್ದ ನಿರ್ದೇಶಕರು ಯಾರ್ಯಾರ ಕಾಲದಲ್ಲಿ ಎಷ್ಟೆಷ್ಟು ಹಣ ಸರಕಾರದಿಂದ ಬಂದಿದೆ? ಅದನ್ನು ಏತಕ್ಕಾಗಿ ವೆಚ್ಚ ಮಾಡಿದ್ದಾರೆ? ಅದಕ್ಕೆ ಸರಿಯಾದ ಲೆಕ್ಕ ಇದೆಯೇ? ಆ ಬಗ್ಗೆ ಪರಿಶೀಲನೆ ಆಗಬೇಕು.
ವಿರೋಧದ ಔಚಿತ್ಯವೇನು?
ಬಹುರೂಪಿಗೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಕರೆತರುವುದಕ್ಕೆ ವಿರೋಧ ಮಾಡುತ್ತಿದ್ದಾರೆ. ಸೂಲಿಬೆಲೆಯವರು ಒಳ್ಳೆಯ ತುಂಬಾ ದೊಡ್ಡ
ವಿದ್ವಾಂಸರು, ವಾಗ್ಮಿಗಳು. ಮಾತ್ರವಲ್ಲ,ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡವರು. ಇನ್ನು ಮಾಳವಿಕಾ ಅವಿನಾಶ್ ರಂಗಭೂಮಿಗೆ, ನಾಟಕಕ್ಕೆ ಸಂಬಂಧಪಟ್ಟವರಲ್ಲವೇ? ಆಕೆಯೊಬ್ಬ ನಟಿ.
ನಾಟಕದಲ್ಲಿ ಅಭಿನಯಿಸುವವರ ಮುಂದಿನ ಗುರಿಯೇ ಸಿನಿಮಾ. ಅದು ಸಹಜ ಕೂಡ. ಇಂಥವರನ್ನು ಆಹ್ವಾನಿಸುವುದರಲ್ಲಿ ತಪ್ಪೇನಿದೆ? ಹಾಗಾಗಿ ಅವರ ಬಗ್ಗೆ ವಿರೋಧ ಸಲ್ಲದು. ವಾಸ್ತವಾಂಶ ಹೀಗಿದ್ದರೂ ಕೆಲವರು ಅದನ್ನು ಮರೆಮಾಚಿ ಇಲ್ಲಸಲ್ಲದ ನೆಪ ಮಾಡಿಕೊಂಡು ಓಡಾಡುತ್ತಿದ್ದಾರೆ. ಈಗ ಪ್ರತಿ ಭಟನೆ ಮಾಡುತ್ತಿರುವ ಪೂರ್ವಗ್ರಹ ಪೀಡಿತ ಮನಃಸ್ಥಿತಿಯವರೇ ಕೆಲವರು ಈ ಹಿಂದೆ ಪ್ರಶಸ್ತಿಗಳನ್ನು ಹಿಂತಿರುಗಿಸುವ ಚಳವಳಿ ಮಾಡುವುದಾಗಿ ಬೆದರಿಸಿದ್ದರು. ಆಗ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಇವರಿಗೆ ಪತ್ರ ಬರೆದು, ದಯವಿಟ್ಟು ಪ್ರಶಸ್ತಿಯನ್ನು ವಾಪಸ್ ಕೊಡದಂತೆ ಕೋರಿ ಪತ್ರ ಬರೆದಿದ್ದರು. ಇದನ್ನೇ ನೆಪ ಮಾಡಿಕೊಂಡು ‘ಪ್ರಶಸ್ತಿ ವಾಪಸಿ’ ಹೆಸರಲ್ಲಿ ಪ್ರಚಾರ ಪಡೆದರೇ ಹೊರತು ಒಬ್ಬರೂ ಆ ಹಣ ವಾಪಸು ಕೊಡಲಿಲ್ಲ. ಇದೆಲ್ಲವೂ
ಎಡ ಪಂಥೀಯರೆನಿಸಿಕೊಂಡವರ ತಂತ್ರಗಳು.
ನಗರ ನಕ್ಸಲ್ ಬಂದಿರಲಿಲ್ಲವೇ
ಬಾಬಾ ಬುಡನ್ಗಿರಿಯಲ್ಲಿನ ದತ್ತಪೀಠ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ದತ್ತಮಾಲೆ ಹಾಕಿಕೊಂಡು ಹೋಗವವರನ್ನು ತಡೆಯುತ್ತೇವೆ ಎಂದು ಗಿರೀಶ್ ಕಾರ್ನಾಡ್ ನಾಲ್ವರು ಎಡಪಂಥೀಯರ ಜತೆ ಗುಲ್ಲೆಬ್ಬಿಸುತ್ತಿದ್ದರು. ಪೊಲೀಸರಿಗೆ, ಮಾಧ್ಯಮಗಳಿಗೆ ತಿಳಿಸಿಯೇ ಹೋಗುತ್ತಿದ್ದುದು.
ಹೀಗಾಗಿ ಸಹಜವಾಗಿ ಇವರನ್ನು ಪೊಲೀಸರು ತರಿಕೆರೆ ಬಳಿ ತಡೆಯುತ್ತಿದ್ದರು. ಪೊಲೀಸರು ಕಾರನ್ನು ತಡೆದರು ಎಂದು ವಾಪಾಸು ಬರುತ್ತಿದ್ದರು, ಪ್ರತೀ ಸಾರಿಯೂ ಇವರದ್ದು ಇದೇ ನಾಟಕದ ಕಥೆ. ನಾನು ಈ ವಿಚಾರವನ್ನೂ ಬರೆದ ಬಳಿಕ ಆ ವರ್ಷದಿಂದ ಇವರುಗಳು ಅಲ್ಲಿಗೆ ಹೋಗುವುದನ್ನೇ ನಿಲ್ಲಿಸಿದರು. ಇಷ್ಟಾದರೂ ಆದರೆ, ಆನಂತರ ಅವರು ತಮ್ಮ ಕೆಲಸ ಬಿಡಲಿಲ್ಲ.
‘ನಾನು ಅರ್ಬನ್ ನಕ್ಸಲ್’ ಎಂದು ಬೋರ್ಡ್ ನೇತುಹಾಕಿಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅಂಥವರು ರಂಗಾಯಣಕ್ಕೆ ಬಂದಿರಲಿಲ್ಲವೇ ಆಗೆ ಏಕೆ ವಿರೋಧ, ಪ್ರತಿಭಟನೆಗಳಾಗಲಿಲ್ಲ? ಎಡಪಂಥೀಯರಿಗೆ ಇದೊಂದು ಚಟ ಆಗಿಬಿಟ್ಟಿದೆ. ವಾಸ್ತವಾಂಶಗಳನ್ನು ಒಪ್ಪಿಕೊಳ್ಳಲು ಎಡಪಂಥೀಯರು
ಸಿದ್ದರಿಲ್ಲ. ಬಾಯಿ ಬಿಟ್ಟರೆ ಲೆಫ್ಟಿಸಂ, ಕ್ಯಾಪಿಟಲಿಸಂ ಎನ್ನುತ್ತಾರೆ. ಆ ವಿಚಾರವನ್ನು ರಂಗಾಯಣಕ್ಕೂ ತರುತ್ತಾರೆ. ಇಲ್ಲೂ ಲೆಫ್ಟ್ ಮತ್ತು ರೈಟ್ಸ್ ಎನ್ನುತ್ತಾರೆ. ಇದರಲ್ಲಿ ಯಾವ ನ್ಯಾಯವಿದೆ?
‘ಪರ್ವ’ ನಾಟಕದಿಂದ ಆಗಬೇಕಾದ್ದಿಲ್ಲ: ರಂಗಾಯಣದ ವಿರುದ್ಧ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಈ ಹಿಂದೆಯೇ ನನ್ನ ಅಭಿಪ್ರಾಯ ಹೇಳಬೇಕೆಂದು
ಕೊಂಡಿದ್ದೆ. ಅದರೆ, ನಾನು ಉತ್ತರಭಾರತ ಪ್ರವಾಸದಲ್ಲಿದ್ದ ಕಾರಣ ಈವರೆಗೆ ಹೇಳಲಾಗಿರಲಿಲ್ಲ. ಅಲ್ಲದೇ ಈ ವಿಚಾರದಲ್ಲಿ ತುಸು ಹಿಂಜರಿಕೆಯೂ ಇತ್ತು.
ಕಾರಣವೇನೆಂದರೆ, ನನ್ನ ‘ಪರ್ವ’ ಕಾದಂಬರಿಯನ್ನು ನಾಟಕ ಮಾಡಿದ್ದರಿಂದ ಇವರು ಕಾರ್ಯಪ್ಪನವರಿಗೆ ಉಪಕೃತರಾಗಿದ್ದಾರೆ. ಅದಕ್ಕೋಸ್ಕರವಾಗಿ ಇವರು ಹೀಗೆ ಮಾತನಾಡುತ್ತಿದ್ದಾರೆ ಎಂಬ ಆರೋಪ ಬರುತ್ತದೆಂಬ ಕಾರಣಕ್ಕೆ ಮೌನವಾಗಿದ್ದೆ. ಆದರೆ ‘ಪರ್ವ’ ನಾಟಕ ಸಂಬಂಧ ಮೊದಲೇ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಇಲ್ಲಿ ನನ್ನ ಕಾದಂಬರಿ ನಾಟಕ ಆದ್ದರಿಂದ ನನಗೆ ಯಾವ ಉಪಯೋಗವೂ ಆಗಿಲ್ಲ. ಈ ಕಾದಂಬರಿ ಪ್ರಕಟವಾಗಿ ೪೫ ವರ್ಷ ವಾಯಿತು. ಭಾರತದ ಎಲ್ಲ ಭಾಗಗಳಲ್ಲಿ, ಎಲ್ಲ ಭಾಷೆಗಳಲ್ಲೂ ಕೂಡ ಬಹಳ ಎತ್ತರವಾದ ಸ್ಥಾನ ಪಡೆದುಕೊಂಡಿದೆ. ಭಾರತದ ಹೊರಗಡೆಯಲ್ಲೂ ಒಳ್ಳೆಯ ಸ್ಥಾನ ಗಳಿಸಿದೆ. ಆದ್ದರಿಂದ ನಾಟಕ ಮಾಡಿರುವುದರಿಂದ ನನಗೆ ಯಾವ ಉಪಯೋಗನೂ ಆಗಿಲ್ಲ.
ಯಾವ ಸಂಕೋಚ ನನಗಿಲ್ಲ
ಈಗ ರಂಗಾಯಣದ ಬಗ್ಗೆ ಮಾತನಾಡಲು ನನಗೆ ಯಾವ ಸಂಕೋಚ ಇಲ್ಲ. ನನ್ನ ಕೃತಿಗಳನ್ನು ಆಧರಿಸಿ ನಾಟಕ ಮಾಡುತ್ತೇನೆ ಸಿನೆಮಾ ತೆಗೆಯುತ್ತೇನೆ ಎಂದು ಬರುವ ಎಲ್ಲ ನಿರ್ದೇಶಕರಿಗೆ ಯಾವ ಮಾತು ಹೇಳುತ್ತಿದ್ದೆನೋ ಅದನ್ನೇ ‘ಪರ್ವ’ ಸಂದರ್ಭದಲ್ಲೂ ಹೇಳಿದ್ದೇನೆ ನಾಟಕ ಎನ್ನುವ ವಿಚಾರ ಬಂದಾಗ, ಇವರು ಹೇಗೆ ಮಾಡುತ್ತಾರೋ, ಏನು ಮಾಡುತ್ತಾರೋ ಎಂಬ ಅನುಮಾನ ನನಗೂ ಇತ್ತು. ನನಗೆ ಎಷ್ಟೋ ಜನ ನನ್ನ ಕಾದಂಬರಿ ಕುರಿತು ಸಿನಿಮಾ ಮಾಡಲು ಬಂದಾಗ ನಾನು ಕೇಳುವುದು ಒಂದೇ ವಿಷಯ. ಏನು ಮಾಡ್ತೀರಾ ನೀವು ? ಸ್ಕ್ರಿಪ್ಟ್ ತೆಗೆದುಕೊಂಡು ಬನ್ನಿ, ನಟ-ನಟಿಯರು ಯಾರು? ಎಷ್ಟು ಸಾರಿ ಮರ ಸುತ್ತಿಸುತ್ತೀರಾ ನೀವು? ನಾನು ಇದನ್ನೆಲ್ಲ ಪ್ರಶ್ನೆ ಮಾಡಿದ್ದಾಕ್ಕಾಗಿಯೇ ಅವರೆಲ್ಲ ನನ್ನಿಂದ ದೂರದಲ್ಲಿ ಇರುವುದು. ಹಾಗೆ ಮಾಡಿದೇನೆ. ಈ ನಾಟಕದ ವಿಚಾರದಲ್ಲೂ ನಾಣು ಅದನ್ನೇ ಮಾಡಿದ್ದು.
‘ಪ್ರಕಾಶ್ ಬೆಳವಾಡಿ ಅವರು ಸ್ಕ್ರಿಪ್ಟ್ ಬರೆಯುತ್ತಿದ್ದಾರೆ, ಅವರೇ ಇದನ್ನು ನಿರ್ದೇಶನ ಮಾಡಲಿದ್ದಾರೆ’ ಎಂದು ಹೇಳಿದರು. ನಾನು ಪ್ರಕಾಶ್ ಬೆಳವಾಡಿ ಯವರಿಗೆ ಸಹ ನಿಮ್ಮ ಸ್ಕ್ರಿಪ್ಟ್ ಅನ್ನು ನನಗೆ ತೋರಿಸಿ ಎಂದು ಹೇಳಿದೆ. ಅವರು ತೋರಿಸಿದ ಸ್ಕ್ರಿಪ್ಟ್ ಬಹಳ ಚೆನ್ನಾಗಿತ್ತು. ಆನಂತರ ಮುಂದುವರೆಯಿರಿ ಎಂದೆ. ನಾಟಕವೂ ಬಹಳ ಚೆನ್ನಾಗಿ ಮೂಡಿಬಂತು. ನನಗೆ ತುಂಬ ಸಂತೋಷ ಆಯಿತು.
ಹೀಗಾಗಿ ‘ಪರ್ವ’ ರಂಗ ಪ್ರಯೋಗದಿಂದ ನಾನು ಯಾವುದೇ ಉಪಯೋಗ ಪಡೆದಿಲ್ಲ. ಇದನ್ನು ಸ್ಪಷ್ಟಪಡಿಸಿದ್ದೇನಾದ್ದರಿಂದ ಈಗ ನಾನು ಯಾವ
ಸಂಕೋಚವನ್ನೂ ಇಟ್ಟುಕೊಳ್ಳಬೇಕಿಲ್ಲ. ಆದ್ದರಿಂದ ರಂಗಾಯಣದ ಬಗ್ಗೆ ಮಾತನಾಡಲಿಕ್ಕೆ ಯಾವ ಹಿಂಜರಿಕೆ ಇಲ್ಲದೇ ನಿರ್ಧಾರಕ್ಕೆ ಬಂದು ಈಗ ಮಾತನಾಡುತ್ತಿದ್ದೇನೆ.
ಮೈಸೂರಲ್ಲಿ ಇವರದೇ ಹಾವಳಿ
ಇದೀಗ ರಂಗಾಯಣದ ಬಗ್ಗೆ ಗದ್ದಲ ಮಾಡಲಿಕ್ಕೆ ಶುರು ಮಾಡಿದ್ದಾರಲ್ಲ, ಇವರು ಮೈಸೂರಿನಲ್ಲಿ ಯಾವಾಗ, ಎಲ್ಲಿ, ಏನಾದರೂ ಗದ್ದಲ ಮಾಡುವಂತಹ ಜನಗಳೇ. ಅಡ್ಡಂಡ ಕಾರ್ಯಪ್ಪನವರ ವಿರುದ್ಧ ಪ್ರತಿಭಟನೆ ಮಾಡ್ತಾ ಇದ್ದಾರೆ ಅನ್ನೋದು ಮಾತ್ರವಲ್ಲ, ಮೊನ್ನೆ ಮೊನ್ನೆ ತಾನೇ ಇವರುಗಳೇ ಸ್ವಾಮಿ ವಿವೇಕಾನಂದರ ಸ್ಮಾರಕದ ವಿಚಾರವಾಗಿಯೂ ಗದ್ದಲ ಮಾಡಿದವರೂ ಇವರುಗಳೇ. ಇವರಿಗೆ ಇದೊಂದು ಅಭ್ಯಾಸ, ಚಟ ಆಗಿಬಿಟ್ಟಿದೆ.
ಕಾರ್ಯಪ್ಪ ನಿರ್ದೇಶಕರಾಗುತ್ತಿದ್ದಂತೆ ಅವರು ಟಿಪ್ಪು ಸುಲ್ತಾನನನ್ನು ಟೀಕಿಸಿದವರು ಎಂದು ಹೇಳಿ ಗದ್ದಲ ಎಬ್ಬಿಸಿದರು. ನಂತರ ಇವರು ಆರ್ಎಸ್ಎಸ್ನವರು ಎಂದು ಆಕ್ಷೇಪ ಎತ್ತಿದರು. ಯಾಕೆ ರಂಗಾಯಣಕ್ಕೆ ಆರೆಸ್ಸೆನವರು ಬರಬಾರದೆಂಬ ನಿಯಮಾವಳಿ ಇದೆಯೇ?ಟಿಪ್ಪು ಬಗ್ಗೆ
ಕಾರ್ಯಪ್ಪನವರು ಸೂಕ್ತ ಉತ್ತರ ಕೊಟ್ಟಿದ್ದಾರೆ.
‘ಟಿಪ್ಪು ಕೊಡಗಿನಲ್ಲಿ ಇಷ್ಟು ಜನರನ್ನು ಬಲವಂತವಾಗಿ ಮತಾಂತರಗೊಳಿಸಿದ. ನಾನು ಒಬ್ಬ ಕೊಡವ. ನನಗೆ ಅದರ ಕಷ್ಟ ಗೊತ್ತಿದೆ. ಆದ್ದರಿಂದ ನಾನು ಆ ಬಗ್ಗೆ ಮಾತನಾಡುತ್ತಿದ್ದೇನೆ’ ಎಂದು ಕಾರ್ಯಪ್ಪ ಹೇಳಿದ್ದರಲ್ಲಿ ತಪ್ಪೇನಿದೆ? ನಿಜವಾಗಿ ಟಿಪ್ಪು ದೌರ್ಜನ್ಯದ ಬಗೆಗೆ ಅವರು ಹೇಳಲು ಇನ್ನೂ ಬೇಕಾದಷ್ಟು ಇತ್ತು. ಪ್ರಾಯಶಃ ಅವರಿಗೆ ಆ ವಿಚಾರಗಳು ನೆನಪಿಗೆ ಬರಲಿಲ್ಲವೋ, ಅಥವಾ ಅದೆಲ್ಲವನ್ನೂ ಅವರು ಅಧ್ಯಯನ ಮಾಡಿರಲಿಲ್ಲವೋ. ಅಂತೂ ಅವರು ಹೇಳಿರುವುದು ಏನೇನೂ ಸಾಲದು ಎಂದು ನನಗನಿಸುತ್ತದೆ.
ಟಿಪ್ಪು ಹೆಸರಲ್ಲಿ ನಿರಂತರ ಗದ್ದಲ
೨೦೦೬ರಲ್ಲಿ ಸಚಿವರಾಗಿದ್ದ ಶಿವಮೊಗ್ಗದ ಡಿ.ಎಚ್. ಶಂಕರಮೂರ್ತಿ ‘ಟಿಪ್ಪು ಕನ್ನಡ ದ್ರೋಹಿ’ ಎಂದು ಹೇಳಿದ್ದರು. ಅವಾಗ ರಾಜ್ಯದಲ್ಲಿ ಬಿಜೆಪಿಯ ಮೊದಲ ಸರಕಾರ. ಯಡಿಯೂರಪ್ಪ ಸಿಎಂ ಆಗಿದ್ದರು. ಇದೇ ವಿಚಾರ ಇಟ್ಟುಕೊಂಡು ಶಂಕರಮೂರ್ತಿಯನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದರು. ಯಾವುದೇ ಕಟ್ಟಡದಲ್ಲಿ ಒಂದು ಇಟ್ಟಿಗೆ ಕಿತ್ತುಹಾಕಿದರೆ,ಇಡೀ ಕಟ್ಟಡ ಅಭದ್ರಗೊಳಿಸುವುದು ಸುಲಭ ಂಬುದು
ಇವರ ಹುತ್ತಾರ. ಇದೇ ತಂತ್ರವನ್ನು ರಂಗಾಯಣ ವಿಚಾರದಲ್ಲೂ ಬಳಸುತ್ತಿದ್ದಾರೆ. ಆಗ ಗಿರೀಶ್ ಕಾರ್ನಾಡ್ ಅವರು ಟಿಪ್ಪು ಬಗೆಗೆ ವಕಾಲತು ವಹಿಸಿ
‘ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರಗತಿಪರರ ಬಳಿ ಬಂದು ಚರ್ಚಿಸಲಿ’ ಎಂದು ಆಹ್ವಾನಿಸಿದ್ದರು.
ತಾನು ಟಿಪ್ಪು ನಾಟಕ ಬರೆದಿದ್ದು ಈ ಬಗ್ಗೆ ಅಧಿಕೃತವಾ ತಿಳಿಸಬಲ್ಲೆ ಎಂದು ಬಹಿರಂಗ ಸವಾಲನ್ನೂ ಹಾಕಿದ್ದರು. ಮಂತ್ರಿಯಾಗಿರುವ ಶಂಕರಮೂರ್ತಿ ಯವರು ಮುಕ್ತವಾಗಿ ಬಂದು ಕೂತು ಚರ್ಚಿಸುವುದು ಸರಿಯಲ್ಲ. ಜತೆಗೆ ಶಂಕರಮೂರ್ತಿಯವರು ಏನು ಓದಿ ತಿಳಿದುಕೊಂಡಿದ್ದಾರೋ ನನಗೆ ಗೊತ್ತಿಲ್ಲ ಎಂಬ ಕಾರಣಕ್ಕೆ ಆಗಿನ ವಿಶ್ವೇಶ್ವರ ಭಟ್ ವಿಜಯ ಕರ್ನಾಟಕದ ಸಂಪಾದಕರಾಗಿದ್ದಾಗ ಈ ಬಗ್ಗೆ ದೀರ್ಘ ಲೇಖನ ಬರೆದಿದ್ದೆ.
ಗಿರೀಶ್ ಕಾರ್ನಾಡ್ ಬರೆದ ಟಿಪ್ಪುವಿನ ಕನಸುಗಳು ಪುಸ್ತಕ ನಾನು ಓದಿರಲಿಲ್ಲ. ನಂತರ ಅದನ್ನು ತರಿಸಿಕೊಂಡು ಓದಿದೆ. ಆದರೆ, ಅದಕ್ಕೆ ಮೊದಲೇ ಟಿಪ್ಪುವಿನ ನಿಜಸ್ವರೂಪ ಓದಿದ್ದೆ. ಅದು ಇಂಗ್ಲಿಷಿನಲ್ಲಿ ‘ದಿ ರಿಯಲ್ ಟಿಪ್ಪು’ ಎಂಬ ಪುಸ್ತಕದ ಅನುವಾದ. ಬನಾರಸ್ನ ವಿದ್ವಾಂಸರೊಬ್ಬರು ಸಾಕಷ್ಟು
ಸಂಶೋಧನೆ ಮಾಡಿ ಬರೆದ ಪುಸ್ತಕವದು. ಅಲ್ಲದೇ ಟಿಪ್ಪು ಬಗೆಗಿನ ಬೇರೆ ಬೇರೆ ಪುಸ್ತಕಗಳನ್ನೂ ಓದಿದ್ದೆ. ಅದರ ಆಧಾರದ ಮೇಲೆ ಒಂದು ಲೇಖನ ಬರೆದೆ.
ಟಿಪ್ಪೂ ಅಸಲಿ ಮುಖ ಬೇರೆ
ಇವರು ಹೇಳುವ ಪ್ರಕಾರ, ಟಿಪ್ಪು ಪರ ಧರ್ಮವನ್ನು ತುಂಬಾ ಗೌರವಿಸುತ್ತಾನೆ. ಅದರಲ್ಲೂ ಹಿಂದೂ ಧರ್ಮವನ್ನು ಹೆಚ್ಚಾಗಿ ಗೌರವಿಸುತ್ತಿದ್ದ. ಉದಾಹರಣೆಗೆ ಶೃಂಗೇರಿ ಮಠಕ್ಕೆ ಒಂದಷ್ಟು ದಕ್ಷಿಣೆ ಕೊಟ್ಟ, ಕಿಲ್ಲತ್ ಅನ್ನು ಕೊಟ್ಟ ಎಂದೆಲ್ಲ ಇವರೇ ಹೇಳುತ್ತಾರೆ. ಆದರೆ ವಾಸ್ತವಾಂಶ ಏನಾಗಿತ್ತೆಂದರೆ,
ಮೂರನೇ ಮೈಸೂರು ಯುದ್ಧ ನಡೆದಾಗ ಟಿಪ್ಪು ಬ್ರಿಟಿಷರ ವಿರುದ್ಧ ಸೋತಿದ್ದ. ಅವರು ನಾವು ನಿನ್ನ ರಾಜ್ಯವನ್ನು ಆಕ್ರಮಿಸಿಕೊಳ್ಳಬಾರದೆಂದರೆ ಇಂತಿಷ್ಟು ಹಣ ಕೊಡಬೇಕು ಎಂದರು.
ಆದರೆ, ಟಿಪ್ಪು ಬಳಿ ಹಣ ಇರಲಿಲ್ಲ. ಇದಕ್ಕಾಗಿ ಇಬ್ಬರು ಗಂಡು ಮಕ್ಕಳನ್ನು ಅವರ ಬಳಿ ಒತ್ತೆ ಇಟ್ಟು, ಹಣ ಕೊಟ್ಟ ಬಳಿಕ ಅವರನ್ನು ಬಿಡಿಸಿಕೊಳ್ಳುತ್ತೇನೆ ಎಂದಿದ್ದ. ಬ್ರಿಟಿಷರು ಆ ಇಬ್ಬರು ಮಕ್ಕಳನ್ನು ಕೊಲ್ಕತಾಗೆ ಕರೆದುಕೊಂಡು ಹೋದರು. ಆವಾಗ ಇಲ್ಲಿ ಇವನಿಗೆ ಯಾವುದೇ ರೀತಿಯ ಬೆಂಬಲ ಇರಲಿಲ್ಲ. ಇವನು ಕೊಡಗಿನಲ್ಲಿ ಹೋಗಿ ಮಾಡಬಾರದ ಕೆಲಸ ಮಾಡಿದ್ದ. ಮಲಬಾರಿನಲ್ಲೂ ದೌರ್ಜನ್ಯ ಎಸಗಿದ್ದ. ಎಲ್ಲ ಕಡೆಯಲ್ಲೂ ಇದೇ ಕೆಲಸ
ಆಗಿತ್ತವನದ್ದು. ಕೊನೆಗೆ ಇಂಥ ಸನ್ನಿವೇಶದಲ್ಲಿ ಹಿಂದೂಗಳನ್ನು ತನ್ನ ಪರವಾಗಿ ಮಾಡಿಕೊಳ್ಳಬೇಕು. ಅವರ ವಿರೋಧ ಕಟ್ಟಿಕೊಂಡರೆ ಉಳಿಗಾಲವಿಲ್ಲ ಎಂಬ ಉದ್ದೇಶದಿಂದ ಶೃಂಗೇರಿ ಮಠಕ್ಕೆ ಒಂದಷ್ಟು ದಕ್ಷಿಣೆ, ಕಿಲ್ಲತ್ತು ಕೊಟದ್ದೇ ಹೊರತು ನಿಜವಾದ ಗೌರವದಿಂದ ಅಲ್ಲ.
ಇನ್ನೂ ವಿಶೇಷವೆಂದರೆ ಎಷ್ಟೋ ಊರುಗಳ ಹೆಸರನ್ನು ಅವನು ಪರ್ಶಿಯನ್ ಹೆಸರಿಗೆ ಬದಲಾಯಿಸಿದ್ದ. ಮಾತ್ರವಲ್ಲ, ತಮಿಳುನಾಡು ಮುಸಲ್ಮಾನರು ತಮಿಳು ಹಾಗೂ ಕೇರಳ ಮುಸಲ್ಮಾನರು ಮಲೆಯಾಳಂ ಮಾತನಾಡುತ್ತಾರೆ. ಆದರೆ, ಇಲ್ಲಿನ ಅಂದರೆ ಕರ್ನಾಟಕದ ಮುಸಲ್ಮಾನರು ಉರ್ದು ಮಾತನಾಡುತ್ತಾರೆ. ಅದು ಏಕೆ? ಅದು ಟಿಪ್ಪುವಿನಿಂದ ಬಂದದ್ದು. ಮಾತ್ರವಲ್ಲ, ಇಡೀ ಭಾರತವನ್ನು ಮುಸಲ್ಮಾನ ರಾಷ್ಟ್ರ ಮಾಡಲು ಅ-ನಿಸ್ತಾನ
ರಾಜ ಗಿಮಾಲ್ ಷಾನೊಂದಿಗೆ ಪತ್ರ ವ್ಯವಹಾರ ಮಾಡಿದ್ದ. ಇಂತಹ ಟಿಪ್ಪು ಬಗ್ಗೆ ಮಾತನಾಡಿದರೆ, ಇವರು ಜಾತಿವಾದಿಗಳು, ಆರ್ಎಸ್ಎಸ್ನವರು ಎನ್ನುತ್ತಾರೆ.
ತುಘಲಕ್ ಮಾಡಿದ್ದೂ ಇದೇ
ಗಿರೀಶ್ ಕಾರ್ನಾಡ್ ತಮ್ಮ ತುಘಲಕ್ ನಾಟಕದಲ್ಲೂ ಟಿಪ್ಪುವಿನಂತಹ ಸಹಿಷ್ಣುವೇ ಯಾರೂ ಇಲ್ಲ ಎಂದು ಬಿಂಬಿಸಿದ್ದಾರೆ. ನಾನು ಅದಕ್ಕೂ ಲೇಖನದ ಮೂಲಕವೇ ಉತ್ತರಿಸಿದ್ದೇನೆ. ತುಘಲಕ್ ಏನೇನು ಮಾಡಿದ? ಎಷ್ಟು ದೇವಸ್ಥಾನಗಳನ್ನು ಹಾಳುಗೆಡವಿದ? ಎಷ್ಟು ಕ್ಷತ್ರೀಯ ರಾಜ ಪುತ್ರರನ್ನು ಸೆರೆಹಿಡಿದು ಅವರನ್ನು ಮುಸಲ್ಮಾರನ್ನಾಗಿ ಮಾಡಿದ ಎಂಬ ಬಗ್ಗೆ ನನ್ನ ಲಿಸ್ಟ್ ಮೂಲಕ ಉತ್ತರಿಸಿದ್ದೇನೆ.
ನನ್ನ ಲೇಖನ ಯಾವಾಗ ಪ್ರಕಟ ಆಯಿತೋ, ಗಿರೀಶ ಕಾರ್ನಾಡರು ಸ್ಥಿಮಿತ ಕಳೆದುಕೊಂಡು, ‘ನಾನು ಬರೆದಿರುವುದು ನಾಟಕ. ಇವರು ಇತಿಹಾಸವನ್ನು
ಹುಡುಕಲು ಹೊರಟಿದ್ದಾರೆ. ಇವರಿಗೆ ಕಲೆ ಎಂದರೇನು ಎಂಬುದೇ ಗೊತ್ತಿಲ್ಲ. ಇವರ ವಂಶವೃಕ್ಷ ಹಾಗೂ ತಬ್ಬಲಿಯು ನೀನಾದೆ ಮಗನೆ ಎಂಬ ಕಾದಂಬರಿಗಳನ್ನು ನಾನು ಸಿನಿಮಾ ಮಾಡಿದೆ. ಆಗ ಮಾಡಿದ್ದು ತಪ್ಪು ಎಂದು ನನಗೆ ಈಗ ಅನ್ನಿಸುತ್ತಿದೆ. ಅದು ಕಳಪೆ ಕಾದಂಬರಿಗಳು’ ಎಂದು
ಕೋಪದಲ್ಲಿ ಪ್ರತಿಕ್ರಿಯೆ ನೀಡಿದ್ದರು. ನಂತರ ಕಾರ್ನಾಡರ ಹೇಳಿಕೆ ಕುರಿತು ವಿಜಯಕರ್ನಾಟಕದಲ್ಲಿ ಜನಾಭಿಪ್ರಾಯವನ್ನೂ ಸಂಗ್ರಹಿಸಲಾಯಿತು.
ಅದರನ್ವಯ ಪ್ರತಿಯೊಬ್ಬರೂ ಕಾರ್ನಾಡ್ ಹೇಳಿಕೆಯನ್ನು ಖಂಡಿಸಿದ್ದರು. ಭೈರಪ್ಪನವರ ಕಾದಂಬರಿಯನ್ನು ಏಣಿಯಾಗಿ ಬಳಸಿಕೊಂಡು ನಿರ್ದೇಶಕರಾದವರು ಗಿರೀಶ್ ಕಾರ್ನಾಡ್. ಈವಾಗ ಕಾದಂಬರಿ ಕಳಪೆ ಎನ್ನುವುದು ಎಷ್ಟು ಸರಿ ಎಂದು ಹಲವು ಪ್ರಮುಖ ಲೇಖಕರೇ ಪ್ರಶ್ನಿಸಿದ್ದರು.
ಈ ವಿಚಾರದಲ್ಲಿ ಕೆಲ ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದರೆ, ಕೆಲ ಮಾಧ್ಯಮಗಳು ತಮ್ಮಿಷ್ಟಕ್ಕೆ ತಕ್ಕಂತೆ ವರ್ತಿಸುತ್ತಿವೆ
ಗಲಾಟೆ ಎಬ್ಬಿಸುವುದು, ಪ್ರತಿಭಟನೆ ಹೆಸರಲ್ಲಿ ಬೇರೆಯ ವರನ್ನು ತುಳಿಯಲು ಯತ್ನಿಸುವುದು ಎಡಪಂಥೀಯರಿಗೆ ಮೊದಲಿಂದ ಅಂಟಿ ಕೊಂಡಿರುವ ಚಟ. ವಾಸ್ತವ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಇಂಥ ಧೋರಣೆ ಸರಿಯಲ್ಲ. ರಂಗಾಯಣದ ಬಗ್ಗೆ ಒಂದು ವರ್ಗದವರಷ್ಟೇ ನಡೆಸುತ್ತಿರುವ ಈ ಗಲಾಟೆಯನ್ನು ಸರಕಾರ ನಿಗ್ರಹಿಸಬೇಕು.
***
‘ಪರ್ವ’ ರಂಗಪ್ರಯೋಗ ಮಾಡಿದ್ದಕ್ಕೆ ನಾನು ಒಂದು ರೂಪಾಯಿ ಕೂಡ ಪಡೆದಿಲ್ಲ. ಮಾತ್ರವಲ್ಲ, ನಾಟಕ ಪ್ರದರ್ಶನ ಸಂದರ್ಭದಲ್ಲಿ ಕುಟುಂಬದವರು, ಸ್ನೇಹಿತರ ಜತೆಗೆ ಸ್ವತಃ ನಾನು ಸಹ ಹಣ ಕೊಟ್ಟೇ ನಾಟಕ ನೋಡಿದ್ದೇನೆ. ಒಂದೇ ಒಂದು ಟಿಕೆಟ್ ಅನ್ನು ಸಹ ಬಿಟ್ಟಿ ನಾಟಕ ತೆಗೆದುಕೊಂಡಿಲ್ಲ. ನಾಟಕ ಪ್ರಯೋಗಕ್ಕೆ ಅಗತ್ಯ ಹಣದ ಸಂಪನ್ಮೂಲ ರಂಗಾಯಣದ ಬಳಿ ಇರಲಿಲ್ಲ. ಬಹಳ ಕಷ್ಟಪಟ್ಟು ಹಣ ಒದಗಿಸಿ ನಾಟಕ ಮಾಡಿದ್ದಾರೆ. ನಾಟಕಕ್ಕಾಗಿ ಹೊರಗಡೆಯಿಂದ ಬಂದವರಿಗೆ ಇವರು ಏನಾದರೂ ಕೊಡಲೇ ಬೇಕಿತ್ತು. ಅದಕ್ಕಾಗಿ ಶ್ರಮವಹಿಸಿ ಹಣ ಹೊಂದಿಸುತ್ತಿದ್ದರು. ಆ ಕಷ್ಟ ನನಗೆ ಗೊತ್ತಿತ್ತು. ಅದಕ್ಕಾಗಿ ನಾನು ಸಹ ಟಿಕೆಟ್ ಕೊಂಡುಕೊಂಡೇ ನಾಟಕ ನೋಡಿದ್ದೇನೆ. ಬದಲಾಗಿ ಅವರಿಂದ ಏನನ್ನೂ ನಾನು ಪಡೆದಿಲ್ಲ.