ವೈದ್ಯವೈವಿಧ್ಯ
ಡಾ.ಎಚ್.ಎಸ್.ಮೋಹನ್
drhsmohan@gmail.com
ಮನುಷ್ಯರು ಕಾಯಿಲೆಗೆ ಒಳಗಾದ ಮೂತ್ರಪಿಂಡದ ಬದಲು ಬೇರೆ ಒಬ್ಬರ ಮೂತ್ರಪಿಂಡ, ಹಾಗೆಯೇ ರಿಪೇರಿ ಮಾಡಲು ಸಾಧ್ಯವಾಗದ ಹೃದಯಕ್ಕೆ ಮತ್ತೊಬ್ಬ ಆರೋಗ್ಯವಂತ ವ್ಯಕ್ತಿಯ ಹೃದಯ ಕಸಿ ಮಾಡುವುದರ ಬಗ್ಗೆ ಕೇಳಿದ್ದೀರಿ. ಆದರೆ ಮನುಷ್ಯನ ಹೃದಯದ ಬದಲು ಹಂದಿ ಹೃದಯವನ್ನು ಕಸಿ ಮಾಡುವುದು ಸಾಧ್ಯವೇ ? ಅಂತಹುದನ್ನು ಕೇಳಿದ್ದೀರಾ? ಹೌದು, ಅಂತಹ ಅಪರೂಪದ ಶಸಕ್ರಿಯೆ ಬಗ್ಗೆ ತಿಳಿಯೋಣ.
57 ವರ್ಷದ ಡೇವ್ ಬೆನೆಟ್ಗೆ ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಸಂಸ್ಥೆಯಲ್ಲಿ ಜಗತ್ತಿನ ಪ್ರಥಮವಾಗಿ ಹಂದಿ ಹೃದಯ ಕಸಿಯನ್ನು ಅಲ್ಲಿಯ ವೈದ್ಯರು ಮಾಡಿದ್ದಾರೆ. ಹೌದು, ನಿಮ್ಮ ಊಹೆ ಸರಿ. ಈಗ ಡೇವ್ ಬೆನೆಟ್ ನ ಎದೆಯಲ್ಲಿ ಹಂದಿಯ ಹೃದಯ ಹೊಡೆದುಕೊಳ್ಳುತ್ತಾ ಇದೆ. ಆತ ಸದ್ಯ ಜೀವಂತ ವಾಗಿದ್ದಾನೆ.
ಡೇವ್ ಬೆನೆಟ್ಗೆ ಈ ಪ್ರಾಯೋಗಿಕ ಹೊಸ ರೀತಿಯ ಶಸಕ್ರಿಯೆಗೆ ಒಪ್ಪುವುದು ಅನಿವಾರ್ಯವಾಗಿತ್ತು. ಏಕೆಂದರೆ ಅವನ ಹೃದಯ ವಿವಿಧ ತೊಂದರೆಗೊಳಗಾಗಿ ಬೇರೆ ಮನುಷ್ಯನ ಆರೋಗ್ಯವಂತ ಹೃದಯವನ್ನು ಕಸಿ ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಬಂದಿದ್ದರಿಂದ ಕಟ್ಟ ಕಡೆಯ ಆಯ್ಕೆಯಾಗಿ ವೈದ್ಯರು ಚರಿತ್ರೆ ಹುಟ್ಟು ಹಾಕುವ ಈ ಶಸ್ತ್ರಸಕ್ರಿಯೆ ಕೈಗೊಂಡರು. ಸುಮಾರು ೯ ಗಂಟೆ(ತಾಸು)ಗಳ ಕಾಲ ತೆಗೆದುಕೊಂಡ ಈ ಹೃದಯ ಕಸಿ ಶಸ್ತ್ರಕ್ರಿಯೆಯಲ್ಲಿ ಆತನ ರೋಗ ಪೀಡಿತ ಹೃದಯವನ್ನು ತೆಗೆದು ಒಂದು ವರ್ಷ ವಯಸ್ಸಿನ ಹಂದಿಯ ಜೀನ್ ಎಡಿಟ್ ಮಾಡಿದ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
ಈ ರೀತಿಯ ಕಸಿ ಶಸ್ತ್ರಕ್ರಿಯೆಗೆ ಬೇಕಾಗಿಯೇ ಆ ಹಂದಿಯನ್ನು ವಿಶೇಷವಾಗಿ ತಯಾರು ಮಾಡಲಾಗಿತ್ತು. 3 ದಿನಗಳ ನಂತರ ಆತನಿಗೆ ವೆಂಟಿಲೇಟರ್ ಸಹಾಯ ವಿಲ್ಲದೆ ಉಸಿರಾಡಲು ಸಾಧ್ಯವಾಗಿತ್ತು. ಆದರೆ ಆತ ECMO ಸಹಾಯದೊಂದಿಗೆ ಈಗ ಸದ್ಯ ಇದ್ದಾನೆ. ದೇಹಕ್ಕೆ ರಕ್ತ ಪೂರೈಸುವ ಕೆಲಸವನ್ನು ಈ ಮಷಿನ್ ಅರ್ಧ ಕ್ಕಿಂತಲೂ ಹೆಚ್ಚು ಭಾಗ ಮಾಡುತ್ತಿದೆ. ಅದರ ಸಹಾಯವನ್ನು ಕ್ರಮೇಣ ಕಡಿಮೆ ಮಾಡುತ್ತೇವೆ ಎಂದು ಈ ಅಪೂರ್ವ, ಕ್ಲಿಷ್ಟ, ಪ್ರಾಯೋಗಿಕ ಶಸ್ತ್ರಕ್ರಿಯೆ ಮಾಡಿದ ವೈದ್ಯ ತಂಡದ ಮುಖ್ಯಸ್ಥ ಡಾ. ಬಾರ್ಟಲಿ ಗ್ರಿಫಿತ್ ಅಭಿಪ್ರಾಯಪಟ್ಟಿದ್ದಾರೆ. ಹಲವು ದಶಕಗಳಿಂದ ವೈದ್ಯರು ಮತ್ತು ವಿಜ್ಞಾನಿಗಳು ಪ್ರಾಣಿಗಳ ಅಂಗಗಳಿಂದ ಮನುಷ್ಯರ ಜೀವ ಉಳಿಸಲು ಸಾಧ್ಯವೇ ಎಂಬ ಪ್ರಯತ್ನ ದಲ್ಲಿ ತೊಡಗಿದ್ದಾರೆ. ಮಾನವ ಅಂಗಗಳ ಕಸಿ ಚಿಕಿತ್ಸೆಗೆ ಜಗತ್ತಿನಾದ್ಯಂತ ಲಕ್ಷಾಂತರ ಜನರು ಕಾಯು ತ್ತಿದ್ದಾರೆ.
ಹಂದಿಗಳ ದೇಹದ ಅಂಗಗಳು ಮನುಷ್ಯರ ಅಂಗಗಳನ್ನು ಬಹಳವಾಗಿ ಹೋಲುತ್ತವೆ. ಹಾಗಾಗಿ ಇವುಗಳ ಅಂಗಗಳನ್ನು ಮನುಷ್ಯರ ಅಂಗಗಳ ಬದಲು ಕಸಿ ಮಾಡಲು ಸಾಧ್ಯವಾದರೆ ಮಾನವ ಅಂಗಗಳ ಶಸ್ತ್ರಕ್ರಿಯೆಗೆ ಕಾಯುವುದು ಬಹಳ ಮಟ್ಟಿಗೆ ಉಳಿಸಬಹುದು ಎಂದು ವೈದ್ಯ ವಿಜ್ಞಾನಿಗಳ ಅಭಿಮತ. ಅಲ್ಲದೆ, ಆಯಾ ಅಂಗಗಳ ವೈಫಲ್ಯ ಅನುಭವಿಸುತ್ತಿರುವ ಹಲವರಿಗೆ ಮನುಷ್ಯ ಅಂಗಗಳ ಕಸಿ ಚಿಕಿತ್ಸೆ ಮಾಡಲು ಬರದ ಸ್ಥಿತಿ ಇದ್ದಲ್ಲಿ ಅಂತಹವರಲ್ಲಿ ಹಂದಿಯ ಅಂಗಗಳ ಕಸಿ
ಉಪಯೋಗವಾಗುತ್ತದೆ ಎಂಬುದು ವಿಜ್ಞಾನಿಗಳ ಅಭಿಮತ. ಇಲ್ಲಿ ಮುಖ್ಯವಾದ ಅಂಶವೆಂದರೆ ಕಸಿ ಮಾಡಲ್ಪಟ್ಟ ಅಂಗವನ್ನು ತನ್ನದಲ್ಲ ಎಂದು ಮನುಷ್ಯರ ಪ್ರತಿರೋಧ ವ್ಯವಸ್ಥೆ (immune system) ಅದನ್ನು ಹೊರಹಾಕಬಾರದು.
ಹಾಗಾಗಿಯೇ ಹೀಗೆ ಉಪಯೋಗಿಸುವ ಹಂದಿಗಳಲ್ಲಿ ಜೀನ್ ಮಾರ್ಪಾಡು (Gene editing) ಮತ್ತು ಕ್ಲೋನಿಂಗ್ ತಾಂತ್ರಿಕತೆಯನ್ನು ಉಪಯೋಗಿಸಿ ಮಾನವ ದೇಹ ಕಸಿ ಮಾಡಲ್ಪಟ್ಟ ಅಂಗವನ್ನು ಹೊರದೂಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇದೇ ಕ್ರಮವನ್ನು ಉಪಯೋಗಿಸಿ ಸೆಪ್ಟೆಂಬರ್ ೨೦೨೧ರಲ್ಲಿ ಹಂದಿಯ ಮೂತ್ರಪಿಂಡವನ್ನು ಮಾನವನಲ್ಲಿ ಮೂತ್ರಪಿಂಡ ಕಸಿ (Kidney transplantation) ಶಸ್ತ್ರಕ್ರಿಯೆ ಮಾಡಿ ವೈದ್ಯವಿಜ್ಞಾನಿಗಳು ಒಂದು ಹೆಜ್ಜೆ ಮುಂದಿರಿಸಿ
ಸಫಲರಾಗಿದ್ದರು. ಆ ಶಸಕ್ರಿಯೆ ಮಾಡಿದ ವೈದ್ಯ ಡಾ. ಮೊಂಟ್ ಗೊಮೆರಿ ಅವರು ಹಂದಿಯ ಹೃದಯ ಮಾನವನಿಗೆ ಕಸಿ ಮಾಡಿದ ಮೇರಿಲ್ಯಾಂಡ್ ಆಸ್ಪತ್ರೆಯ ವೈದ್ಯರು ಈ ಅಂಗಾಂಗ ಕಸಿ ಚಿಕಿತ್ಸೆಯನ್ನು ಮತ್ತೊಂದು ಮೇಲಿನ ಸ್ತರಕ್ಕೆ ಕೊಂಡೊಯ್ದಿದಿದ್ದಾರೆ ಎಂದು ಅಭಿಪ್ರಾಯ ಪಡುತ್ತಾರೆ.
ಈಗಾಗಲೇ ವೈದ್ಯರು ಹಂದಿಗಳ ಹೃದಯದ ವಾಲ್ವಗಳನ್ನು ಮನುಷ್ಯರಲ್ಲಿ ಸಫಲವಾಗಿ ಉಪಯೋಗಿಸುತ್ತಾ ಬಂದು ಹಲವು ದಶಕಗಳೇ ಕಳೆದಿವೆ. ರಕ್ತವನ್ನು ದ್ರವ
ರೂಪದಲ್ಲಿಡುವ ಔಷಧ ಹೆಪಾರಿನ್ ಅನ್ನು ಹಂದಿಗಳ ಕರುಳಿನ ಅಂಶವನ್ನು ಉಪಯೋಗಿಸಿ ತಯಾರಿಸಲಾಗುತ್ತಿದೆ. ಬೆಂಕಿ ಅಪಘಾತಗಳಲ್ಲಿ ದೇಹದ ಬಹಳಷ್ಟು
ಚರ್ಮವು ಸುಟ್ಟು ಹೋದಾಗ ಹಂದಿಗಳ ಚರ್ಮವನ್ನು ಕಸಿ ಮಾಡುವ ಚಿಕಿತ್ಸೆ ಬಹಳ ವರ್ಷಗಳಿಂದ ಬಳಕೆಯಲ್ಲಿದೆ. ಚೀನಾದ ಕಣ್ಣಿನ ತಜ್ಞರು ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾವನ್ನು ಕಾರ್ನಿಯಾ ಕಸಿ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಹೀಗೆ ವೈದ್ಯರು ಮನುಷ್ಯನ ಅಂಗಗಳ ಬದಲು ಹಂದಿಯ ಹಲವು ಅಂಗಗಳನ್ನು ಬಹಳ ದಿನಗಳಿಂದಲೂ ಉಪಯೋಗಿಸುತ್ತಿದ್ದಾರೆ.
ಈಗ ಹೃದಯ ಕಸಿ ಮಾಡಿಸಿಕೊಂಡ ಡೇವ್ ಬೆನೆಟ್ ಬಗ್ಗೆ ಗಮನಿಸೋಣ. ಆತ 2021 ರ ಅಕ್ಟೋಬರ್ ವರೆಗೆ ಸುಮಾರಾಗಿ ಆರೋಗ್ಯವಾಗಿಯೇ ಇದ್ದ. ಅಕ್ಟೋಬರ್ನಲ್ಲಿ ಆತನಿಗೆ ವಿಪರೀತ ಎದೆಯ ನೋವು ಕಾಣಿಸಿಕೊಂಡಿತು. ತುಂಬಾ ಸುಸ್ತು, ಉಸಿರಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂಬ ಲಕ್ಷಣ ಗಳೊಂದಿಗೆ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಆಸ್ಪತ್ರೆಗೆ ಬಂದನು. ಆತನನ್ನು ಫಿಸಿಯೋಥೆರಪಿಸ್ಟ್ ಆದ ಆತನ ಮಗ ಡೇವಿಡ್ ಕರೆತರುವಾಗ ಬೆನೆಟ್ಗೆ ಮೂರು ಮೆಟ್ಟಿಲುಗಳನ್ನು ಹತ್ತಲೂ ಸಾಧ್ಯವಾಗಲಿಲ್ಲ.
ಅಲ್ಲಿನ ಹೃದಯ ತಜ್ಞರು 2 ತಿಂಗಳ ಕಾಲ ವಿವಿಧ ರೀತಿಯ ಚಿಕಿತ್ಸೆ ಮಾಡಿದಾಗಲೂ ಆತನ ಕಾಯಿಲೆ ಗುಣಪಡಿಸಲು ಸಾಧ್ಯವಾಗಲಿಲ್ಲ. ಅದೇ ಆಸ್ಪತ್ರೆಯಲ್ಲಿ ಲಭ್ಯವಿದ್ದ ಹೃದಯ ಕಸಿ ಚಿಕಿತ್ಸೆಗೂ (ಬೇರೆ ಮನುಷ್ಯನ ಆರೋಗ್ಯವಂತ ಹೃದಯವನ್ನು ಈತನಲ್ಲಿ ಕಸಿ ಮಾಡುವುದು.) ಈತನನ್ನು ಅಳವಡಿಸಲು ತಜ್ಞರಿಗೆ ಸಾಧ್ಯವಾಗಲಿಲ್ಲ. ಆ ಕಸಿ ಶಸ್ತ್ರಕ್ರಿಯೆಯನ್ನು ತಡೆದುಕೊಳ್ಳುವಷ್ಟು ಆತನ ದೇಹ ಆರೋಗ್ಯವಂತವಾಗಿರಲಿಲ್ಲ. ಏಕೆಂದರೆ ಆತ ವೈದ್ಯರ ಸೂಚನೆಯಂತೆ ನಿಯಮಿತ ವಾಗಿ ಔಷಧ ಸೇವನೆ ಮಾಡಲಿಲ್ಲ.
ವೈದ್ಯರ ಸಲಹೆಯಂತೆ ನಿಗದಿಪಡಿಸಿದ ದಿನಗಳಂದು ವೈದ್ಯರನ್ನು ಭೇಟಿ ಮಾಡುತ್ತಿರಲಿಲ್ಲ. ಹೀಗೆ ಅನಿಯಮಿತವಾಗಿ ಚಿಕಿತ್ಸೆ ತೆಗೆದುಕೊಳ್ಳುತ್ತಿರುವವರಲ್ಲಿ ಮಾನವನ ಹೃದಯ ಕಸಿ ಸಫಲವಾಗುವುದಿಲ್ಲವೆಂದು ಹೃದಯ ತಜ್ಞರ ಹಿಂದಿನ ಅನುಭವ. ಆತನಲ್ಲಿ ಇದ್ದ ಹೃದಯದ ಅರೀಥ್ಮಿಯಾ ಕಾಯಿಲೆಯಿಂದ ಆತನಿಗೆ ಕೃತಕ ಹೃದಯ ಪಂಪ್ ಅಳವಡಿಸಲೂ ಸಾಧ್ಯವಾಗಲಿಲ್ಲ. ಬೆನೆಟ್ ಆರಂಭದಲ್ಲಿ ಈ ರೀತಿಯ ಪ್ರಾಯೋಗಿಕ ಹೃದಯ ಶಸಕ್ರಿಯೆಯಲ್ಲಿ ತನ್ನನ್ನು ಒಡ್ಡಿಕೊಳ್ಳಲು ಒಪ್ಪಿರಲಿಲ್ಲ. ಆದರೆ 2 ತಿಂಗಳ ಆಸ್ಪತ್ರೆಯ ವಾಸದಲ್ಲಿ ಉಳಿದ ಯಾವ ಚಿಕಿತ್ಸೆಯೂ ತನ್ನ ಜೀವ ಉಳಿಸಲಾರದೆಂದು ಮನವರಿಕೆಯಾದಾಗ ಆತ ತನ್ನ ಮನಸ್ಸನ್ನು ಬದಲಿಸಿ ಅನಿವಾರ್ಯವಾಗಿ ಈ ಹಂದಿಯ ಹೃದಯ ಕಸಿ ಚಿಕಿತ್ಸೆಗೆ ಒಪ್ಪಿದ.
ಅಪಾಯದಿಂದ ಆತ ಸಂಪೂರ್ಣವಾಗಿ ಹೊರಬಂದ ಎಂಬ ಧೈರ್ಯವು ಆತನಿಗೆ ಮತ್ತು ಆತನ ಮಗನಿಗೆ ಈ ಹಂತದಲ್ಲಿ ಇಲ್ಲದಿದ್ದರೂ, ಪ್ರಾಯೋಗಿಕ ಶಸ್ತ್ರಕ್ರಿಯೆಗೆ ಒಪ್ಪಿಕೊಳ್ಳುವುದರಿಂದ ವೈದ್ಯಕೀಯ ಇತಿಹಾಸದಲ್ಲಿ ಆತನ ಹೆಸರು ಶಾಶ್ವತವಾಗಿ ದಾಖಲಾಗುತ್ತದೆ ಎಂಬ ಕಾರಣದಿಂದಲೂ ಆತ ಸಮ್ಮತಿಸಿದ ಎಂದು ಹೇಳಬಹುದು. ಅಲ್ಲದೆ ಒಂದು ದಶಕದ ಮೊದಲೇ ಈತನಿಗೆ ಹಂದಿಯ ಹೃದಯದ ವಾಲ್ಟ ಅಳವಡಿಸಲಾಗಿತ್ತು. ಜೊತೆಗೆ ಹಂದಿಯ ಮಾಂಸ ಈತನ ತುಂಬಾ ಇಷ್ಟದ ಖಾದ್ಯ. ಹಾಗಾಗಿ ಹಂದಿಯ ದೇಹದ ಮತ್ತೊಂದು ಅಂಶ – ಹೃದಯವನ್ನು ಕಸಿ ಮಾಡಿಸಿ ತನ್ನ ಹೃದಯದ ಸ್ಥಳದಲ್ಲಿ ಇರಿಸಿಕೊಳ್ಳುವುದು ಆತನಿಗೆ ಇರಿಸು
ಮುರಿಸು ಅಂತೇನೂ ಅನಿಸಿಲ್ಲ. 6-8 ತಿಂಗಳು ತಾನು ಜೀವ ಹಿಡಿದುಕೊಂಡು ವೈದ್ಯರ ಆದೇಶ ಪಾಲಿಸಿದರೆ ಆಗಲಾದರೂ ಸೂಕ್ತ ಮನುಷ್ಯನ ಹೃದಯ ತನಗೆ ಅಳವಡಿಸಬಹುದೇನೋ ಎಂಬ ಆಶಾಭಾವನೆ ಆತನಿಗಿದೆ.
ಮೇರಿಲ್ಯಾಂಡ್ ಮತ್ತು ಇತರೆಡೆಯ ಸಂಶೋಧಕರು ಜೀನ್ ಎಡಿಟ್ ಮಾಡಿದ ಹಂದಿಯ ಹೃದಯವನ್ನು ದೊಡ್ಡ ಗಾತ್ರದ ಕೋತಿಗಳಿಗೆ ಅಳವಡಿಸುವ ಪ್ರಯೋಗ ವನ್ನು ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿದ್ದಾರೆ. ಅದರ ಮುಂದಿನ ಹಂತವಾಗಿ ಮನುಷ್ಯರಲ್ಲಿ ಈ ಪ್ರಯೋಗ ಮಾಡಲು ಸನ್ನದ್ದರಾಗಿದ್ದರು. ಈ
ಪ್ರಯೋಗದಲ್ಲಿ ಉಪಯೋಗಿಸಿದ ಹಂದಿ ಹುಟ್ಟುವ ಮೊದಲೇ 10 ವಿವಿಧ ಸ್ಥಳಗಳಲ್ಲಿ ಜೆನೆಟಿಕ್ ಮಾರ್ಪಾಡು ಮಾಡಲಾಗಿತ್ತು. ಹಂದಿಯಲ್ಲಿ ಸುಮಾರು 1 ಲಕ್ಷ ಜೀನ್ ಗಳಿರುತ್ತವೆ. ಕಸಿ ಮಾಡಿದ ತಕ್ಷಣವೇ ಮನುಷ್ಯನ ಪ್ರತಿರೋಧ ವ್ಯವಸ್ಥೆಯಿಂದ ಹೊರದಬ್ಬಲ್ಪಡಬಾರದೆಂದು 3 ಜೀನ್ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಬೆನೆಟ್ನ ಹೃದಯದಲ್ಲಿ ರಕ್ತ ಹೆಪ್ಪುಗಟ್ಟಬಾರದು, ಮಾಲಿಕ್ಯುಲಾರ್ ಸ್ತರದಲ್ಲಿ ಸರಿ ಹೊಂದಲು ಹೃದಯ ಹೊರ ದೂಡಲ್ಪಡಬಾರದೆಂದು 6 ಮಾನವ ಜೀನ್
ಗಳನ್ನು ಹಂದಿಗೆ ಸೇರಿಸಲಾಯಿತು. ನಂತರದಲ್ಲಿ ಹಂದಿಯ ಹೃದಯ ಕಸಿಯ ನಂತರ ಬೆನೆಟ್ ನ ದೇಹದಲ್ಲಿ ಬೆಳೆದು ದೊಡ್ಡದಾಗಬಾರದೆಂದು ಮತ್ತೊಂದು ಜೀನ್ ಅನ್ನು ನಿಷ್ಕ್ರಿಯಗೊಳಿಸಲಾಯಿತು.
ಬೆನೆಟ್ಗೆ ಅಳವಡಿಸಿದ ಹೃದಯ ಹೊಂದಿದ್ದ ಹಂದಿಯು ಒಂದು ವರ್ಷದ ವಯಸ್ಸಿನದಾಗಿದ್ದು 240 ಪೌಂಡ್ ತೂಕವಿತ್ತು. ಸಾಮಾನ್ಯವಾಗಿ ಇದೇ ವಯಸ್ಸಿನ
ಹಂದಿಯ ತೂಕ 450 ಪೌಂಡ್ ಇರುತ್ತದೆ. ಈ ಶಸ್ತ್ರಕ್ರಿಯೆಯ ಮತ್ತೊಂದು ವಿಶೇಷ ಸಂಗತಿ ಎಂದರೆ ಶಸ್ತ್ರಕ್ರಿಯೆಯ ನಂತರ ಮನುಷ್ಯನ ದೇಹ ಬೇರೆ ಅನ್ಯ ಜೀವಿಯ ಹೃದಯವೆಂದು ಹೊರ ದೂಡಬಾರದೆಂದು ಪ್ರತಿರೋಧ ಪ್ರಕ್ರಿಯೆಯನ್ನು ಶಾಂತಗೊಳಿಸುವ ವಿಶೇಷವಾದ ಔಷಧಗಳನ್ನು ಇದಕ್ಕಾಗಿಯೇ ಹೊಸ ದಾಗಿ ರೂಪಿಸಲಾಯಿತು.
ಮೂರನೆಯ ವಿಶೇಷತೆ ಎಂದರೆ ಹಂದಿಯ ಹೃದಯವನ್ನು ತೆಗೆದು ಮನುಷ್ಯನ ದೇಹಕ್ಕೆ ಅಳವಡಿಸುವ ಮೊದಲು ಹಂದಿಯ ಹೃದಯ ಇರಿಸಲು ವಿಶೇಷವಾದ ಪೆಟ್ಟಿಗೆಯನ್ನು ರೂಪಿಸಲಾಯಿತು. ಮನುಷ್ಯರ ಹೃದಯ ತೆಗೆದು ಬೇರೊಬ್ಬ ಮನುಷ್ಯರಲ್ಲಿ ಉಪಯೋಗಿಸುವಾಗ ಐಸ್ನಲ್ಲಿ ಇರಿಸಿದರೆ ಸಾಕಾಗುತ್ತದೆ. ಆದರೆ ಬೇರೆ ಪ್ರಾಣಿಯ ಹೃದಯವಾದ್ದರಿಂದ ತೆಗೆಯಲ್ಪಟ್ಟ ಹೃದಯವನ್ನು ವಿವಿಧ ಹಾರ್ಮೋನುಗಳು ಮತ್ತು ಪೋಷಕಾಂಶಗಳು ಇರುವ ಪೆಟ್ಟಿಗೆ ರೂಪಿಸಿ ಅದರಲ್ಲಿ ಇಡಲಾಯಿತು. ಹೊರ ತೆಗೆದ ಹಂದಿಯ ಹೃದಯದ ಮೇಲೆ ಸತತವಾಗಿ ಶಕ್ತಿಯುತವಾದ ದ್ರವಗಳನ್ನು ಹರಿಯುವಂತೆ ನೋಡಿಕೊಳ್ಳಲಾಯಿತು.
ಡಿಸೆಂಬರ್ 31 ರಂದು FDA ಅನುಮೋದನೆ ಸಿಕ್ಕ ನಂತರ ಜನವರಿ 7 ರಂದು 9 ತಾಸುಗಳ ಸುದೀರ್ಘ ಶಸ್ತ್ರಕ್ರಿಯೆ ನಡೆಸಲಾಯಿತು. ಈ ಶಸ್ತ್ರಕ್ರಿಯೆಯಲ್ಲಿ ಸಹಕರಿಸಿದ ಸರ್ಜನರುಗಳ ಪ್ರಕಾರ ಬೆನೆಟ್ ಹಲವಾರು ವರ್ಷಗಳ ಕಾಲ ಈ ಹಂದಿಯ ಹೃದಯ ಇಟ್ಟುಕೊಂಡೇ ಬದುಕಬಹುದು. ಹಾಗಾಗಿ ಇದೊಂದು ಸಫಲ, ಒಂದು ರೀತಿಯ ಮೈಲುಗಗುವ ಶಸಕ್ರಿಯೆ ಎಂದು ಆ ಇಡೀ ತಂಡದ ನಿರೀಕ್ಷೆ. ಭವಿಷ್ಯದಲ್ಲಿ ಮುಂದಿನ ಆಗುಹೋಗುಗಳನ್ನು ನಿರೀಕ್ಷಿಸಬೇಕು.