ರೈತನನ್ನು ಅವಮಾನಿಸುವ ನಮ್ಮ ಹೀನಪರಂಪರೆಗೆ ತಕ್ಕ ಉತ್ತರವನ್ನು ತುಮಕೂರಿನ ರೈತನೊಬ್ಬ ನೀಡಿದ್ದಾನೆ. ಅನ್ನದಾತ ಮನಸು ಮಾಡಿದರೆ, ಇಡೀ ದೇಶದ ಹೊಟ್ಟೆಯನ್ನೂ ಹೊರೆಯಬಲ್ಲ, ಅಹಂಕಾರದ ಹೊಟ್ಟೆಯ ಮೇಲೂ ಹೊಡೆಯಬಲ್ಲ ಎಂಬುದನ್ನು ತೋರಿಸಿದ್ದಾನೆ ಈ ರೈತ.
ಇತ್ತೀಚೆಗೆ ತಯುಮಕೂರಿನ ರಾಮನಪಾಳ್ಯದಲ್ಲಿನ ಕಾರು ಶೋ ರೂಂ ಸೇಲ್ಸ್ ಏಜೆಂಟ್ ಒಬ್ಬ ಬೋಲೆರೋ ವಾಹನ ಖರೀದಿಗೆ ಹೋಗಿದ್ದ ಯುವ ರೈತ ಕೆಂಪೇಗೌಡನ ಬಟ್ಟೆಯನ್ನು ನೋಡಿ, ಅವಮಾನಿಸಿದ್ದ. ಬಳಿಕ ಕೆಂಪೇಗೌಡ ಒಂದೇ ಗಂಟೆಯಲ್ಲಿ ೧೦ ಲಕ್ಷ ರೂ.ಗಳನ್ನು ತಂದು ಸಿಬ್ಬಂದಿ ಮುಂದಿಟ್ಟು ವಾಹನ ನೀಡುವಂತೆ ಪಟ್ಟು ಹಿಡಿದಿದ್ದ. ಇದು ಭಾರೀ ಸುದ್ದಿಯಾಗಿತ್ತು. ಸಾಮಾಜಿಕ ಜಲತಾಣದಲ್ಲಿ ಸಕ್ರಿಯರಾಗಿರುವ ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಈ ಕುರಿತು ಪ್ರತಿಕ್ರಿಯಿಸಿ ರೈತನ ಕ್ಷಮೆ ಕೋರಿ ದೊಡ್ಡತನ ಮರೆದಿದ್ದಾರೆ.
ನಿಜವಾಗಿ ಈ ದೇಶದಲ್ಲಿ ಆಗಬೇಕಾದದ್ದು ಇದೇ. ರೈತರು, ಗ್ರಮೀಣರ ದುಡಿಮೆಯಿಂದಲೇ ಅನ್ನ ಕಾಣುತ್ತಿರುವ ಸೋ ಕಾಲ್ಡ್ ಶಿಕ್ಷಿತರು, ಮೂರು ಕಾಸಿಗೆ ನೌಕರಿ ಮಾಡುತಿರುವ ನಗರಿಗರು ತಾವೇ ಶ್ರೇಷ್ಠರೆಂಬ ಮದದಿಂದ ಮೆರೆಯುವುದು ನಡೆದುಕೊಂಡೇ ಬಂದಿದೆ. ಇಂಥದಕ್ಕೆ ಕೊನೆ ಹಾಡಬೇಕಿದೆ. ಅಧಿಕಾರಿ ವರ್ಗದವರು ಸಹ ರೈತರನ್ನು ನಿರ್ಲಕ್ಷಿಸುವುದು ಸರಕಾರಿ ಕಚೇರಿಗಳಲ್ಲಿ ನಿತ್ಯದ ಸಂಗತಿಯಾಗಿದೆ. ಮಾತೆತ್ತಿದರೆ ರೈತಪರ ಎನ್ನುವ ಆಡಳಿತಾರೂಢರೂ ರೈತರಿಗೆ ಸೂಕ್ತ ಸ್ಥಾನಮಾನ ಕೊಡಿಸುತ್ತಿಲ್ಲ. ನಿಜವಾದ ಸ್ವಾವಲಂಬಿ, ಶ್ರಮಿಕ ವರ್ಗವಾದ ರೈತಾಪಿಗಳನ್ನು ಗೌರವದಿಂದ ನಡೆಸಿಕೊಳ್ಳಬೇಕಿದೆ ಈ ಸಮಾಜ. ಈ ನಿಟ್ಟಿನಲ್ಲಿ ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಮತ್ತು ಸಿಇಒ ವಿಜಯ್ ನಕ್ರಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರು ವುದೂ ಸ್ವಾಗತಾರ್ಹ.
ಡೀಲರ್‌ಗಳ ವರ್ತನೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿರುವುದು ನಿರೀಕ್ಷಿತ ಕ್ರಮ. ಯಾವುದೇ ಗ್ರಾಹಕರನ್ನು ಗೌರವ ಮತ್ತು ಘನತೆಯಿಂದ ಕಾಣಬೇಕು ಎನ್ನುವುದು ಇಂಥ ಕಂಪನಿಗಳ ನಿಯಮವಾಗಬೇಕು. ಭೌತಿಕ ಸ್ವರೂಪದಿಂದ ಯಾರೂ ಯಾವುದೇ ವ್ಯಕ್ತಿಯನ್ನು ಅಳೆಯುವುದು ಸಲ್ಲ. ಸಮಾಜದ ಸಮುದಾಯಗಳು ಮತ್ತು ಎಲ್ಲ ವರ್ಗದ ಸಹಭಾಗಿಗಳಿಗೆ ಶಕ್ತಿ ತುಂಬುವ ಕೆಲಸ ಮಹೀದ್ರಾದಂಥ ಉದ್ಯಮಿಗಳಿಂದ ಆಗಬೇಕು. ಇನೋಸಿಸ್ ಫೌಂಡೇಶನ್‌ನ ಮೂಲಕ ಸುಧಾಮೂರ್ತೀ ಇದನ್ನು ಮಾಡಿದ್ದರು. ಮಹೀಂದ್ರಾ ಕೂಡ ಹೀಗೆ ವ್ಯಕ್ತಿಯ ಘನತೆ ಎತ್ತಿಹಿಡಿಯಲಿ ಎಂಬುದು ಆಶಯ.