ಸಾಂಪ್ರತ
ವಿಜಯ್ ದರ್ಡ
ಹಿರೋಶಿಮಾ ಮತ್ತು ನಾಗಾಸಾಕಿ ಮೇಲೆ ಅಣುಬಾಂಬ್ ದಾಳಿಯಾದ ನಂತರದಲ್ಲಿ ಅಸಂಖ್ಯ ಜೀವಗಳು ಬಲಿಯಾದವು. ಅದಷ್ಟೇ ಅಲ್ಲ, ಘಟನೆಯ ನಂತರದ ಪರಿಣಾಮಗಳ ಭೀಕರತೆ, ಎದುರಾದ ರೋಗರುಜಿನಗಳು ಇತಿಹಾಸದ ಕರಾಳ ದುರಂತದ ಉದಾಹರಣೆಯಾಗಿದೆ. ಅಲ್ಲಿದ್ದವರ ಬದುಕು ಶೋಚನೀಯ ವಾಯಿತು.
ಮಾನಸಿಕ-ದೈಹಿಕ ಆಘಾತಕ್ಕೆ ಒಳಗಾದರು, ಅಸಹನೀಯ ನೋವು ಅವರನ್ನು ಹತಾಶೆಗೆ ತಳ್ಳಿತು, ಈ ಬದುಕು ಬೇಡವೇ ಬೇಡ ಎಂಬಷ್ಟರ ಮಟ್ಟಿನ ಖಿನ್ನತೆ ಕಾಡಿತು. ಆ ಪ್ರಕರಣದ ಹಾನಿಕಾರಕ ಫಲಿತಾಂಶಗಳನ್ನು ನಾವು ನಂತರದ ಪೀಳಿಗೆಗಳಲ್ಲಿ ಇಂದೂ ಕಾಣು ತ್ತಿದ್ದೇವೆ. ನನ್ನ ಜಪಾನ್ ಪ್ರವಾಸದ ವೇಳೆ ಇಂತಹ ಅನೇಕ ಘಟನೆಗಳ ಕುರುಹುಗಳನ್ನು ಕಂಡು ಕಣ್ಣುಗಳು ತೇವಗೊಂಡಿದ್ದವು, ಮನಸ್ಸು ಆರ್ದ್ರವಾಗಿತ್ತು. ನಮ್ಮ ಮಕ್ಕಳು ತಮ್ಮ ಭವಿಷ್ಯದ ಬದುಕಿನಲ್ಲಿ ಕರೋನಾ ವೈರಸ್ ಕಾರಣದಿಂದ ಇಂತಹದೊಂದು ಪರಿಣಾಮವನ್ನು ಎದುರಿಸಬೇಕಾದೀತೇ ಎಂಬುದು ನನ್ನ ಆತಂಕ.
ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಪ್ರಾರಂಭದ ದಿನಗಳಿಂದಲೂ ನನ್ನೊಳಗೆ ಆತಂಕ, ವಿಶೇಷತಃ ಮಕ್ಕಳ ಬಗ್ಗೆ ಇದ್ದೇ ಇದೆ. ಮಕ್ಕಳ ಬೆಳವಣಿಗೆ, ವಿದ್ಯಾಭ್ಯಾಸ ಮತ್ತು ವ್ಯಕ್ತಿತ್ವದ ಮೇಲೆ ಇದೇನಾದರೂ ಪ್ರತಿಕೂಲ ಪರಿಣಾಮ ಬೀರಬಹುದೇ ಎಂದು ನಾನು ಮನೋವೈದ್ಯರು ಮತ್ತು ತಜ್ಞರ ಬಳಿ ಆಗಾಗ ಪ್ರಸ್ತಾಪ ಮಾಡುತ್ತಲೇ ಇರುತ್ತೇನೆ. ಇದೀಗ ವಿಶ್ವಬ್ಯಾಂಕಿನ ಜಗತಿಕ ನಿರ್ದೇಶಕ ಜೇಮ್ ಸವೇದ್ರಾರ ಹೇಳಿಕೆಯನ್ನು ಗಮನಿಸಿದ ನಂತರ ನನ್ನ ಆತಂಕ ಇನ್ನಷ್ಟು ಉಲ್ಬಣ ಗೊಂಡಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರಕ್ಕೆ ಬರುವು ದಾದರೆ ಈ ಸಾಂಕ್ರಾಮಿಕ ಕಾಯಿಲೆ ಅಂದುಕೊಂಡದ್ದಕ್ಕಿಂತ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರಲಿದೆಯಂತೆ. ಕಲಿಕೆ ಬಡವಾಗುತ್ತಿದೆ. ಅಂದರೆ ಒಂದು ಸಣ್ಣ, ಸರಳ ವಾಕ್ಯವನ್ನು ಕೂಡ ಹತ್ತು ವರ್ಷದ ವಿದ್ಯಾರ್ಥಿಯೊಬ್ಬ ಅರ್ಥಮಾಡಿಕೊಳ್ಳ ಲಾರದಷ್ಟು ಅಸಮರ್ಥತೆ ಎದುರಾಗುತ್ತದೆ. ಇದನ್ನು ನಾವು ಸಾಮಾನ್ಯ ಪರಿಭಾಷೆಯಲ್ಲಿ ಕಲಿಕೆಯಲ್ಲಿ ಎದುರಾಗುವ ಕೊರತೆ ಅಥವಾ ದೌರ್ಬಲ್ಯ ಎಂದೂ ಕರೆಯಬಹುದು.
ಮಕ್ಕಳ ಮಾನಸಿಕ ಸ್ಥಿಮಿತವನ್ನು ನಾನು ನಿರಂತರವಾಗಿ ಅಧ್ಯಯನ ಮಾಡುತ್ತಿರುತ್ತೇನೆ. ಮಕ್ಕಳು ಹೆಚ್ಚು ಬಾಧಿತರಾಗಿದ್ದಾರೆ ಎಂಬುದು ನನಗೆ ಗೊತ್ತಿದೆ, ಆದರೆ ಅವರು ಅದರ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? ವಯೋಮಾನಕ್ಕೆ ತಕ್ಕಂತೆ ಪರಿಣಾಮ ಭಿನ್ನತೆಯಿಂದ ಕೂಡಿದೆ. ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ ಮಕ್ಕಳ ಒತ್ತಡ ಬೇರೆ ತೆರನಾದದ್ದು. ಅದೇ ಮಾಧ್ಯಮಿಕ ಶಾಲಾ ಹಂತದ ಮಕ್ಕಳ ಅನುಭವಗಳೂ ಭಿನ್ನ. ಪ್ರಾಥಮಿಕ ಶಾಲಾ ಮಕ್ಕಳ ಮನದಲ್ಲಿ ಶಾಲೆ ಎಂಬುದು ಇಲ್ಲವೇ ಇಲ್ಲವೇನೋ ಎಂಬಂತಹ ಮನಃ ಸ್ಥಿತಿ ಏರ್ಪಟ್ಟಿದೆ. ಕಲಿಕೆ ಅಥವಾ ಶಾಲೆ ಎಂದರೆ ಅದು ಆನ್ ಲೈನ್ ಮೂಲಕ ನಡೆಯುವಂತಹ ಪ್ರಕ್ರಿಯೆ ಎಂಬಂತಾ ಗಿದೆ.
ಏನಾದರೂ ಕಲಿಯಬೇಕೆಂದಾಗ ಅವರು ಟ್ಯಾಬ್ ಮುಂದೆ ಕುಳಿತುಕೊಳ್ಳುತ್ತಾರೆ. ಅವರ ಈ ಮನಃಸ್ಥಿತಿಯನ್ನು ವಾಸ್ತವಕ್ಕೆ ಕರೆತರಲು ಕೊಂಚ ಕಾಲ ಖಂಡಿತವಾ ಗಿಯೂ ಬೇಕಾಗುತ್ತದೆ. ಶಾಲೆಗೆ ಹೋಗಿ ದೈನಂದಿನ ಚಟುವಟಿಕೆಗಳಲ್ಲಿ ಮತ್ತೆ ಸಕ್ರಿಯರಾಗುವುದಕ್ಕೆ ಅವರಿಗೆ ಕೊಂಚ ಕಾಲ ಖಂಡಿತ ಬೇಕು. ಸಾಕಷ್ಟು
ಬದಲಾವಣೆಗಳು ಆಗುತ್ತಿವೆ, ಆದರೆ ಅದಾವುದೂ ಶಾಶ್ವತವಲ್ಲ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಈ ಮಹಾಮಾರಿಯ ನಂತರದ ದುಷ್ಪರಿಣಾಮಗಳು ತೊಲಗಲು ಬಹುಕಾಲ ಬೇಕಾಗುತ್ತದೆ. ಕರೋನಾ ಮಹಾಮಾರಿ ಅಮರಿಕೊಂಡ ನಂತರದಲ್ಲಿ ಪ್ರಾಥಮಿಕ ಶಾಲೆಗಳು ಮುಚ್ಚಲ್ಪಟ್ಟು ಮಕ್ಕಳು ಶಾಲೆಗೆ ಹೋಗದೇ ವರುಷಗಳೇ ಕಳೆದಿವೆ. ಈಗ ಸರಿಸುಮಾರು ಎರಡು ವರ್ಷ ಕಳೆದ ನಂತರ ಮತ್ತೆ ಅವರು ಶಾಲೆಗೆ ಹೋಗುವಾಗ ಎಲ್ಲವೂ ಹೊಸತರಂತೆ ಗೋಚರವಾಗುತ್ತದೆ, ಖಂಡಿತವಾಗಿಯೂ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು ಮತ್ತಷ್ಟು ಸಮಯ ಬೇಕಾಗುತ್ತದೆ.
ಕಳೆದ ಎರಡು ವರ್ಷಗಳಿಂದ ಮಕ್ಕಳ ಆ ವಾತಾವರಣ ದಿಂದ ವಂಚಿತರಾಗಿದ್ದಾರೆ. ಎಲ್ಲರೂ ಮನೆಯ ಇದ್ದಾರೆ ಮತ್ತು ಮನೆಯ ವಾತಾವರಣದ ಕಳೆದು ಹೋಗಿದ್ದಾರೆ. ಮನೆಮಂದಿ ಮಕ್ಕಳ ಬಗ್ಗೆ ಎಷ್ಟು ಗಮನ ವಹಿಸುತ್ತಾರೆ ಎಂಬುದನ್ನೂ ನಿಖರವಾಗಿ ಹೇಳಲಾಗದು. ಎಲ್ಲಾ ಕೆಲವರು ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿರಬಹುದು. ಆದರೆ ಬಹುತೇಕ ಪೋಷಕರಿಗೆ ಮಕ್ಕಳ ವರ್ತನೆ ಕಿರಿಕಿರಿ ಎನಿಸಿದೆ, ಮಕ್ಕಳ ಮೇಲೆ ತಮ್ಮ ಸಿಟ್ಟನ್ನು ಪೋಷಕರು ಪ್ರದರ್ಶಿಸಲಾರಂಭಿಸಿರು ವುದು ಕೂಡ ಸುಳ್ಳಲ್ಲ.
ಇಂತಹ ಸನ್ನಿವೇಶಗಳು ಮಕ್ಕಳ ವ್ಯಕ್ತಿತ್ವ ನಿರ್ಮಾಣದ ವಿಚಾರದಲ್ಲಿ ಕೆಟ್ಟ ಪರಿಣಾಮಗಳನ್ನು ಬೀರುವ ಅಪಾಯವೂ ಇದೆ. ಹದಿಹರೆಯದ ಮಕ್ಕಳು ಬೇರೆಯೇ ತೆರನಾದ ಸಮಸ್ಯೆಗಳ ಬಲಿಪಶುಗಳಾಗಿರುತ್ತಾರೆ. ರೋಗದ ಕಾರಣದಿಂದ ಶಾಲೆಗಳು ಮುಚ್ಚಲ್ಪಟ್ಟಾಗ ಎಷ್ಟೋ ಪೋಷಕರು ತಮಗಾಗುವ ಕಿರಿಕಿರಿಯನ್ನು ನಿವಾರಿಸಿಕೊಳ್ಳಲು ಮಕ್ಕಳಿಗೆ ಮೊಬೈಲ್ ಮತ್ತು ಕಂಪ್ಯೂಟರ್ ಕೊಟ್ಟು, ಅದರಲ್ಲಿ ಆಟವಾಡುವಂತೆ ಮಾಡಿದ್ದಾರೆ. ಮಕ್ಕಳು ಏನು ಮಾಡುತ್ತಿದ್ದಾರೆಂಬುದನ್ನು ಎಷ್ಟೋ ಪೋಷಕರು ಗಮನಿಸಿಯೇ ಇಲ್ಲ. ಕೆಲವರು ಅಶ್ಲೀಲ ದೃಶ್ಯ ವೀಕ್ಷಣೆಗೆ ದಾಸರಾಗಿದ್ದಾರೆ ಎಂಬ ಮಾಹಿತಿಯೂ ಅಲ್ಲಲ್ಲಿ ಕೇಳಿಬರುತ್ತಿದೆ. ನಿರಂತರವಾ ಗಿ ಕಂಪ್ಯೂಟರ್ ಸ್ಕ್ರೀನ್ ನೋಡುವುದರಿಂದ ಕಣ್ಣುಗಳಿಗೆ ಹಾನಿ, ಕನ್ನಡಕ ಧರಿಸಬೇಕಾದ ದರ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.
ಖಂಡಿತವಾಗಿಯೂ ತಂತ್ರಜ್ಞಾನದ ಬಳಕೆ ತಪ್ಪಲ್ಲ, ಅದು ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅನಿವಾರ್ಯ ಮತ್ತು ಅಗ್ಯವೂ ಹೌದು. ಶಿಕ್ಷಕರ ಮತ್ತು ಮಕ್ಕಳ ಕಣ್ಣುಗಳು ಪರಸ್ಪರ ಸಂಧಿಸಿದಾಗ ಏರ್ಪಡುವ ಅನುಭೂತಿಗೆ ಇದಾವುದೂ ಸಾಟಿಯಾಗಲಾರದು. ಶಾಲೆಯಲ್ಲಿ ಮಕ್ಕಳು ಕೇಳುತ್ತಿದ್ದ ಪ್ರಶ್ನೆಗಳು, ಮಕ್ಕಳ ನಡುವೆಯೇ ಆಗುತ್ತಿದ್ದ ಪರಸ್ಪರ ಸಂವಹನಕ್ಕೆ ಈಗ ಅವಕಾಶವಿಲ್ಲದಂತಾಗಿದೆ. ಆನ್ ಲೈನ್ ಶಿಕ್ಷಣದಲ್ಲಿ ಭಾವನಾತ್ಮಕ ಕಲಿಕೆಯ ಶಕ್ತಿ ಖಂಡಿತವಾಗಿ ಇಲ್ಲ. ಶಿಕ್ಷಕ ಮತ್ತು ವಿದ್ಯಾರ್ಥಿ ನಡುವಣ ಭಾವನಾತ್ಮಕ ಬೆಸುಗೆ ವಿಶೇಷವಾದದ್ದು. ಈ ಹಂತದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ಸರಿ ಯಾದ ರೀತಿಯಲ್ಲಿ ರೂಪ ಪಡೆಯುತ್ತಿಲ್ಲ ಎಂಬುದು ನನ್ನ ಅಭಿಪ್ರಾಯ.
ಕೆಲಕಾಲದ ನಂತರ ವಾತಾವರಣ ತಿಳಿಯಾಗಿ ಎಲ್ಲವೂ ಸಹಜತೆಗೆ ಮರಳಿದಾಗ ನಾವು ಖಂಡಿತವಾಗಿ ಒಂದಲ್ಲ ಒಂದು ವಿಧದಲ್ಲಿ ಕೋರೋನಾ ಕಾಲದ ದುಷ್ಪರಿಣಾಮಗಳನ್ನು ಮಕ್ಕಳಲ್ಲಿ ಕಾಣುತ್ತೇವೆ. ಲಾಕ್ಡೌನ್ ಕಾಲದಲ್ಲಿ ಮಕ್ಕಳು ಆಟದ ಮೈದಾನಕ್ಕೆ ಹೋಗಲಾಗಿಲ್ಲ, ತಮ್ಮ ಸ್ನೇಹಿತರನ್ನು ಭೆಟ್ಟಿಯಾಗಲಾಗಿಲ್ಲ.
ಹೀಗಾಗಿ ಮಕ್ಕಳ ಭಾವನಾತ್ಮಕ ಬುದ್ಧಿಮತ್ತೆ ಖಂಡಿತವಾಗಿಯೂ ಮಸುಕಾಗಿದೆ. ಭಾವನಾತ್ಮಕ ಬುದ್ಧಿಮತ್ತೆ ಅಂದರೇನೆ ಅಬುದನ್ನು ಒಂದು ಪುಟ್ಟ ಉದಾಹರಣೆಯ ಮೂಲಕ ನಿಮ್ಮ ಮುಂದಿಡುತ್ತೇನೆ. ಒಂದು ರಸ್ತೆ ಅಪಘಾತವಾದಾಗ ಅಲ್ಲಿ ನೂರಾರು ಮಂದಿ ಜಮಾಯಿಸುತ್ತಾರೆ, ಆದರೆ ಆ ಪೈಕಿ ಆಂಬುಲೆನ್ಸ್ ಕರೆಮಾಡಲು ಮುಂದಾಗುವವರ ಸಂಖ್ಯೆ ಕಡಿಮೆ. ಕೆಲವರಿಗೆ ಏನಾಗಿದೆಯೆಂದು ನೋಡುವ ಕುತೂಹಲವಾದರೆ, ಇನ್ನು ಕೆಲವರಿಗೆ ಅದೊಂದು ತಮಾಷೆಯ ಸಂಗತಿ.
ಈ ವರ್ತನೆಗೂ ಭಾವನಾತ್ಮಕ ಬುದ್ಧಿಮತ್ತೆಗೂ ಸಂಬಂಧವಿದೆ. ಇದೆಲ್ಲವನ್ನೂ ಮನೆಯಲ್ಲಿ ಕುಳಿತು ಕಲಿಯಲಾಗದು. ಅನ್ಯರೊಂದಿಗೆ ಸಂವಹನವಿದ್ದಾಗ ಮಾತ್ರ ಇದೆಲ್ಲ ಸಾಧ್ಯ. ಮಕ್ಕಳು ಸ್ಪರ್ಶದಿಂದಲೇ ಸಾಕಷ್ಟು ಕಲಿಯುತ್ತವೆ. ಕಳೆದ ಎರಡು ವರ್ಷಗಳಲ್ಲಿ ಈ ವಿಚಾರದಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಇಲ್ಲಿ ಅತಿ ಹೆಚ್ಚು ಬಾಽತರಾದವರೆಂದರೆ ಗ್ರಾಮೀಣ ಭಾಗದ ಮಕ್ಕಳು. ಅವರಿಗೆ ಸರಿಯಾದ ಅಂತಜಲ ಸಂಪರ್ಕದ ಕೊರತೆಯೂ ಇದೆ. ಹಲವರಲ್ಲಿ ಸ್ಮಾರ್ಟ್ ಫೋನುಗಳಾಗಲೀ, ಟ್ಯಾಬ್ಗಳಾಗಲೀ ಇಲ್ಲ. ಈ ಕೊರತೆಗಳ ಕಾರಣ ದಿಂದಾಗಿ ಮಕ್ಕಳು ಓದಿನಿಂದ ದೂರವಾಗಿದ್ದಾರೆ.
ವೃಥಾ ಕಾಲಹರಣವಾಗುತ್ತಿದೆ, ಏನೂ ಮಾಡಲಾಗುತ್ತಿಲ್ಲ ಎಂಬ ಹತಾಶೆ ಅವರಲ್ಲಿ ಆವರಿಸಿಕೊಂಡಿದೆ. ಇದು ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಹೀಗಾಗಿ, ದೇಶಾದ್ಯಂತ ಶಾಲೆಗಳನ್ನು ತೆರೆಯುವುದು ತುರ್ತಾಗಿ ಆಗಬೇಕಿರುವ ಕೆಲಸ. ಕೆಲ ರಾಜ್ಯಗಳಲ್ಲಿ ಶಾಲೆಗಳು ತೆರೆದಿವೆ ಮತ್ತು ಇನ್ನು ಕೆಲವೆಡೆ ತೆರೆಯುವ
ದಿನಾಂಕ ಘೋಷಣೆಯಾಗಿದೆ ಎಂಬುದು ಸ್ವಾಗತಾರ್ಹ. ನಾನು ಮೊದಲೇ ಹೇಳಿದಂತೆ, ಈ ಸಾಂಕ್ರಾಮಿಕ ರೋಗದಿಂದಾಗಿ ದೀರ್ಘಕಾಲೀನ ಕಠಿಣ ಸಮಸ್ಯೆ ಗಳನ್ನು ಎದುರಿಸುವವರು ಶಾಲಾಮಕ್ಕಳು. ಈ ಕುರಿತಾಗಿ ಸಾಕಷ್ಟು ಸಂಶೋಧನೆ ಮತ್ತು ಅಧ್ಯಯನಗಳು ಆಗಬೇಕು ಮತ್ತು ಮಕ್ಕಳನ್ನು ಸಹಜವಾಗಿ ಮತ್ತೆ ಭಾವನಾತ್ಮಕವಾಗಿ ಹಳಿಗೆ ತರಲು ಏನು ಮಾಡಬೇಕೆಂಬುದರ ಬಗ್ಗೆ ರೂಪುರೇಷೆಗಳು ಹೊರಬರಬೇಕು. ಈ ನಿಟ್ಟಿನಲ್ಲಿ ಮನಃಶಾಸ್ತಜ್ಞರ, ಶಿಕ್ಷಣತಜ್ಞರ ಮತ್ತು ಇತರ ಕ್ಷೇತ್ರಗಳ ಪರಿಣಿತರ ಅಭಿಪ್ರಾಯ ಸಂಗ್ರಹವಾಗಬೇಕು ಮತ್ತು ಅದಕ್ಕನುಗುಣವಾಗಿ ಕ್ರಮಗಳು ರೂಪಿತವಾಗಬೇಕು.
ಸರಕಾರ ಈ ದಿಸೆಯಲ್ಲಿ ಹೆಚ್ಚುವರಿ ಗಮನ ಹರಿಸಬೇಕು. ವಿಶ್ವದಲ್ಲಿಯೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ ನಮ್ಮದು. ನಮ್ಮ ಮಕ್ಕಳು ನಮ್ಮ ದೇಶದ ಬಹುದೊಡ್ಡ ಆಸ್ತಿ, ಅವರನ್ನು ಗಟ್ಟಿಗೊಳಿಸಿ ದೇಶದ ಭವಿಷ್ಯವನ್ನು ಸುಭದ್ರಗೊಳಿಸಬೇಕಾಗಿರುವುದು ಇಂದಿನ ಅಗತ್ಯ. ಭವಿಷ್ಯ ಅಪಾಯಕ್ಕೆ ಸಿಲುಕದಿರಲಿ ಎಂಬುದಷ್ಟೇ ನನ್ನ ಆಶಯ.
(ಲೇಖಕರು ರಾಜ್ಯಸಭಾ ಮಾಜಿ ಸದಸ್ಯರು ಹಾಗೂ ಪತ್ರಕರ್ತರು)