ಮೂರ್ತಿ ಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಈಗ ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟಿರುವ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ, ಅರಸಿಕೆರೆಯ ಶಾಸಕ ಶಿವಲಿಂಗೇಗೌಡ, ಗುಬ್ಬಿ ಶಾಸಕ ಶ್ರೀನಿವಾಸ್ ಅವರೆಲ್ಲ ಸಿದ್ದರಾಮಯ್ಯ ಅವರನ್ನು ನೆಚ್ಚಿಕೊಂಡು ಬರುತ್ತಿದ್ದರೆ, ಡಿಕೆಶಿ ಕೂಡ ಕೆಲವರ ಜತೆ ಮಾತುಕತೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ಮರಳಿ ಅಽಕಾರ ಹಿಡಿಯಲು ಸಕಲ ಪ್ರಯತ್ನ ಮಾಡುತ್ತಿದ್ದರೂ ಪರಸ್ಪರರ ಕಾಲೆಳೆಯಲು ಸಿದ್ದರಾಮಯ್ಯ ಹಾಗೂ ಡಿಕೆಶಿ ನಡೆಸುತ್ತಿರುವ
ಸರ್ಕಸ್ಸು ರಾಜ್ಯ ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆನೋವಾಗಿ ಹೋಗಿದೆ.
ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಯಿಂದ ಬಿಎಸ್‌ವೈ ಕೆಳಗಿಳಿದ ನಂತರ ಕಾಂಗ್ರೆಸ್ಸಿಗರು ನಡೆಸುತ್ತಿರುವ ನಿರಂತರ ಸರ್ವೇಗಳು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳುತ್ತಿವೆ. ಅದೆಂದರೆ, ವಿಧಾನಸಭೆಗೆ ಚುನಾವಣೆ ನಡೆದರೆ ಕಾಂಗ್ರೆಸ್ ಅತ್ಯಂತ ದೊಡ್ಡ ಶಕ್ತಿಯಾಗಿ ತಲೆ ಎತ್ತಲಿದೆ ಎಂಬುದು. ಆದರೆ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ತಲೆ ಎತ್ತಿದ ಮಾತ್ರಕ್ಕೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂದಲ್ಲವಲ್ಲ? ಯಾಕೆಂದರೆ ಕಾಂಗ್ರೆಸ್ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮುತ್ತದೆ ಎಂದು ಸರ್ವೇ ವರದಿ ಹೇಳಿದರೂ ಗೆಲ್ಲಬಹುದಾದ ಸೀಟುಗಳ ಸಂಖ್ಯೆ ನೂರರ ಗಡಿಯನ್ನು ತಲುಪುತ್ತಿಲ್ಲ ಎಂದೂ ಹೇಳಿದೆ.
ಆದರೆ ಪಕ್ಷ ನೂರರ ಗಡಿ ತಲುಪದಿದ್ದರೆ ಅಧಿಕಾರಕ್ಕೆ ಬರುವುದು ಹೇಗೆ? ಹೀಗಾಗಿ ಹಿಗ್ಗಿರುವ ಪಕ್ಷದ ಬಲವನ್ನು ಮತ್ತಷ್ಟು ಹಿಗ್ಗಿಸಬೇಕು ಎಂದು ಏಕಕಾಲಕ್ಕೆ ಕಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಬ್ಬರೂ ಪ್ರಯತ್ನಿಸುತ್ತಿದ್ದಾರೆ. ಈಗ ಪಕ್ಷಕ್ಕೆ ದಕ್ಕಬಹುದಾದ ಸೀಟುಗಳ ಜತೆ ಇನ್ನೂ ಮೂವತ್ತು ಸೀಟುಗಳನ್ನು ಗಳಿಸಿದರೆ ಅಧಿಕಾರ ಹಿಡಿಯುವುದು ಸುಲಭ ಎಂಬುದು ಈ ಪ್ರಯತ್ನದ ಹಿಂದಿರುವ ಗುರಿ. ಅಂದ ಹಾಗೆ ಮುಂದಿನ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೆ ಸಾಲದು, ಬದಲಿಗೆ ನೂರಾ ಹದಿಮೂರು ಎಂಬ ಮ್ಯಾಜಿಕ್ ನಂಬರ್ ಹೊಡೆಯಲೇಬೇಕು ಎಂಬುದು ಸಿದ್ಧರಾಮ ಯ್ಯ ಮತ್ತು ಡಿಕೆಶಿ ಇಬ್ಬರಿಗೂ ಗೊತ್ತಿದೆ.
ಯಾಕೆಂದರೆ, ಮುಂದಿನ ಚುನಾವಣೆಯ ನಂತರ ಅತಂತ್ರ ವಿಧಾನಸಭೆ ರೂಪುಗೊಂಡರೆ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರಕಾರ ರಚಿಸುವುದು ಸುಲಭದ ಕೆಲಸವಲ್ಲ. ಕಳೆದ ವಿಧಾನಸಭೆ ಚುನಾವಣೆಯ ನಂತರ ಇಂತಹ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇನೋ ಹೌದು. ಆದರೆ ಸರಕಾರ ಪತನವಾದ ನಂತರ ಕಾಂಗ್ರೆಸ್ ಜತೆ ಕೈ ಜೋಡಿಸುವ ಉದ್ದೇಶವೇ ಜೆಡಿಎಸ್ ಗೆ ಇಲ್ಲದಂತಾಗಿದೆ. ಕಾಂಗ್ರೆಸ್ ಜತೆ ಸೇರಿ ಸಮ್ಮಿಶ್ರ ಸರಕಾರ ರಚಿಸುವುದು ಮತ್ತು ಅದನ್ನು ಉರುಳಿ ಸಲು ಕಾಂಗ್ರೆಸ್ ಪಕ್ಷದಲ್ಲೇ ಸ್ಕೆಚ್ ರೂಪುಗೊಳ್ಳುವುದು ಊಹಾತೀತವೇನಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅತಂತ್ರ ವಿಧಾನಸಭೆ ರೂಪುಗೊಂಡರೆ ಬಿಜೆಪಿ ಜತೆ ಕೈ ಜೋಡಿಸುವುದು ಜೆಡಿಎಸ್ ಲೆಕ್ಕಾಚಾರ.
ಸಿದ್ದರಾಮಯ್ಯ ಎಲ್ಲಿಯವರೆಗೆ ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿರುತ್ತಾರೋ? ಅಲ್ಲಿಯವರೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪರಸ್ಪರ ಕೈ ಜೋಡಿಸುವುದು ಅಸಾಧ್ಯದ ಕೆಲಸ ಎಂಬುದು ಎಲ್ಲರಿಗೂ ಗೊತ್ತಿದೆ. ಇದೇ ಕಾರಣಕ್ಕಾಗಿ ಇತ್ತೀಚಿಗೆ ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ, ವಿಧಾನ ಪರಿಷತ್ತಿನ ಇಪ್ಪತ್ತೈದು ಕ್ಷೇತ್ರಗಳಿಗೆ ನಡೆದ ಚುನಾವಣೆ ಮತ್ತು ಐವತ್ತೆಂಟು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ನಂತರ ಕಾಂಗ್ರೆಸ್ ನಾಯಕರು ಸರ್ವೇ ಮಾಡಿಸಿದರೆ ದೊರೆತಿರುವ ವರದಿ ನಿರಾಶೆ ಹುಟ್ಟಿಸುವಂತಿದೆ.
ಯಾಕೆಂದರೆ, ಯಡಿಯೂರಪ್ಪ ಅವರ ಪತನದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ವರ್ಚಸ್ಸು ಹೆಚ್ಚಿರುವುದೇನೋ ನಿಜ. ಆದರೆ ಅದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವಷ್ಟಿಲ್ಲ ಎಂಬುದು ಈ ವರದಿಯ ಮುಖ್ಯ ಅಂಶ. ಕರಾವಳಿ ಕರ್ನಾಟಕದಲ್ಲಿ ಪಕ್ಷದ ಬಲ ಹೆಚ್ಚಾಗಿದೆ ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದರಾದರೂ, ಪರಿಸ್ಥಿತಿ ತುಂಬ ಬದಲಾಗಿಲ್ಲ. ಯಾಕೆಂದರೆ ಹಿಂದೂ ವರ್ಸಸ್ ಮುಸ್ಲಿಮ್ ರಾಜಕಾರಣ ಜಿಲ್ಲೆಯಲ್ಲಿ ಬಲಿಷ್ಠವಾಗಿ ಮುಂದುವರಿದುಕೊಂಡೇ ಬಂದಿದೆ. ಹೀಗಾಗಿ ಕರಾವಳಿ ಕರ್ನಾಟಕದಲ್ಲಿ ಹೇಳಿಕೊಳ್ಳುವಂತಹ ಲಾಭ ಪಡೆಯುವುದು ಕಾಂಗ್ರೆಸ್‌ಗೆ ಕಷ್ಟ.
ಮುಂಬಯಿ-ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಸ್ವಲ್ಪ ಹಾನಿಯಾದರೂ ಕಾಂಗ್ರೆಸ್ ಗೆ ದಕ್ಕುವ ಲಾಭ ಕಡಿಮೆ. ರಾಜಧಾನಿ ಬೆಂಗಳೂರಿನಲ್ಲೂ ಮುಂಬಯಿ- ಕರ್ನಾಟಕ ಪರಿಸ್ಥಿತಿಯೇ ಇದೆ. ಹಾಗೆ ನೋಡಿದರೆ ಹೈದ್ರಾ ಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚು ಶ್ರಮ ಹಾಕಿದರೆ ಗಣನೀಯ ಪ್ರಮಾಣದ ಸೀಟುಗಳನ್ನು ಗೆಲ್ಲ ಬಹುದು. ಉಳಿದಂತೆ ಮಲೆನಾಡು-ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿನ ಲಾಭವಾಗಬಹುದು ಎಂಬುದು ಸರ್ವೆಯ ಸಾರಾಂಶ. ಪರಿಸ್ಥಿತಿ ಹೀಗಿರುವು ದರಿಂದ ಜೆಡಿಎಸ್ ಪ್ರಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಹೆಚ್ಚುವರಿಯಾಗಿ ಹದಿನೈದು ಸೀಟುಗಳನ್ನು ಗಳಿಸುವುದು. ಲಿಂಗಾಯತ ಪಾಳೇಪಟ್ಟಿನ ಪ್ರದೇಶಗಳಲ್ಲಿ ಈಗಿನ ನಿರೀಕ್ಷೆಗಿಂತ ಹದಿನೈದು ಸೀಟುಗಳನ್ನು ಹೆಚ್ಚಾಗಿ ಗಳಿಸುವುದು ಕಾಂಗ್ರೆಸ್ ಗುರಿ. ಈ ಗುರಿ ಸಾಧಿಸಬೇಕು ಎಂಬ ವಿಷಯದಲ್ಲಿ ಡಿಕೆಶಿ, ಸಿದ್ದರಾಮಯ್ಯ ಅವರಿಬ್ಬರಿಗೂ ಸಹಮತವಿದೆ.
ಆದರೆ ಇಂತಹ ಗಳಿಕೆ ತಮ್ಮಿಂದಾಗಬೇಕು ಎಂಬ ಲೆಕ್ಕಾಚಾರವಿದೆ. ಯಾಕೆಂದರೆ ಪಕ್ಷ ಬಹುಮತ ಗಳಿಸುವುದು ಒಂದು ಭಾಗವಾದರೆ, ನಂತರ ಶಾಸಕಾಂಗ ಸಭೆಯಲ್ಲಿ ಹೆಚ್ಚು ಶಾಸಕರ ಬೆಂಬಲ ತಮಗೇ ಇರಬೇಕು ಎಂಬುದು ಮತ್ತೊಂದು ಭಾಗ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಶಾಸಕಾಂಗದಲ್ಲಿ ಡಿಕೆಶಿಗಿಂತ ಸಿದ್ಧರ ಸಮಯ್ಯ ಅವರಿಗಿರುವ ಶಕ್ತಿ ಜಾಸ್ತಿ. ಈ ಶಕ್ತಿಯನ್ನು ಹೆಚ್ಚಳ ಮಾಡಿಕೊಳ್ಳುವುದು ಸಿದ್ದರಾಮಯ್ಯ ಅವರ ಆದ್ಯತೆಯಾದರೆ, ಮುಂದೆ ತಲೆ ಎತ್ತಲಿರುವ ಶಾಸಕಾಂಗ ಪಕ್ಷದಲ್ಲಿ ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಾಗಿರುವಂತೆ ನೋಡಿಕೊಳ್ಳುವುದು ಡಿಕೆಶಿ ಲೆಕ್ಕಾಚಾರ.
ಇದೇ ಕಾರಣಕ್ಕಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲಬಲ್ಲ ಸ್ವಪಕ್ಷೀಯರು ಮಾತ್ರವಲ್ಲದೆ, ಜೆಡಿಎಸ್‌ಗೆ ಗುನ್ನ ಹಾಕಿ ಕ್ಯಾಂಡಿಡೇಟುಗಳನ್ನು ಸೃಷ್ಟಿಸಿಕೊಳ್ಳಲು ಇಬ್ಬರೂ ಪೈಪೋಟಿಗೆ ಬಿದ್ದಿದ್ದಾರೆ. ಈಗ ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟಿರುವ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ, ಅರಸಿಕೆರೆಯ ಶಾಸಕ ಶಿವಲಿಂಗೇಗೌಡ, ಗುಬ್ಬಿ ಶಾಸಕ ಶ್ರೀನಿವಾಸ್ ಅವರೆಲ್ಲ ಸಿದ್ದರಾಮಯ್ಯ ಅವರನ್ನು ನೆಚ್ಚಿಕೊಂಡು ಬರುತ್ತಿದ್ದರೆ, ಡಿಕೆಶಿ ಕೂಡ ಕೆಲವರ ಜತೆ ಮಾತುಕತೆ ನಡೆಸಿ ದ್ದಾರೆ. ಬಿಜೆಪಿಯಲ್ಲಿರುವ ಅತೃಪ್ತ ಸಚಿವ ಆನಂದ್ ಸಿಂಗ್ ಸೇರಿದಂತೆ ಹಲವರು ಡಿಕೆಶಿ ಬೆಂಬಲದಿಂದ ಕೈ ಪಾಳೆಯ ನುಗ್ಗಲು ತಯಾರಿ ಮಾಡಿ ಕೊಳ್ಳುತ್ತಿದ್ದರೆ ಹಲ ವಲಸಿಗ ಸಚಿವರಿಗೆ ಸಿದ್ದರಾಮಯ್ಯ ಬೆಂಬಲ ಬೇಕಿದೆ.
ಹೊರಗಿನಿಂದ ಬರುವ ವರ ಸ್ಥಿತಿ ಈ ರೀತಿ ಇದ್ದರೆ, ಪಕ್ಷದಲ್ಲೇ ಇರುವ ಬಹುತೇಕರಿಗೆ ತಲೆನೋವು ಶುರುವಾಗಿದೆ. ಹೀಗಾಗಿ ತುಂಬ ಶಾಸಕರು ಒಬ್ಬ ವ್ಯಕ್ತಿಯ ಕ್ಯಾಂಪಿನಲ್ಲಿ ಗುರುತಿಸಿಕೊಳ್ಳುವ ಬದಲು ಎರಡೂ ಕ್ಯಾಂಪುಗಳಿಗೆ ವಿಸಿಟ್ ಹಾಕುತ್ತಿದ್ದಾರೆ. ಇಂತಹ ಕಸರತ್ತಿಗಳೇನೇ ಇದ್ದರೂ ತಾಲೂಕು ಮಟ್ಟದಲ್ಲಿ ಕಾಂಗ್ರೆಸ್
ಪಕ್ಷ ಇಬ್ಬಣಗಳಾಗಿ ಒಡೆದು ಹೋಗಿರುವುದು ಸ್ಪಷ್ಟ. ಎಲ್ಲಕ್ಕಿಂತ ಮುಖ್ಯವಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಆಯಾ ಕ್ಷೇತ್ರಗಳಲ್ಲಿರುವ ತಮ್ಮ ಬೆಂಬಲಿಗರನ್ನು ಕರೆಸಿ, ಮುಂದಿನ ಚುನಾವಣೆಗೆ ತಯಾರಿ ಆರಂಭಿಸಲು ಈಗಾಗಲೇ ಸುಪಾರಿ ಕೊಟ್ಟಿದ್ದಾರೆ.
ಪರಿಣಾಮ? ಮೇಲ್ನೋಟಕ್ಕೆ ಕಾಂಗ್ರೆಸ್ ಬಲಿಷ್ಠವಾಗಿರುವಂತೆ ಕಾಣುತ್ತಿದ್ದರೂ ತಳದಲ್ಲಿ ಪಾತ್ರೆ ಒಡೆದ ಕುರುಹುಗಳು ಕಾಣುತ್ತಿವೆ. ಅಂದ ಹಾಗೆ ಸದ್ಯಕ್ಕೆ ಶಾಸಕರ ಮಟ್ಟದಲ್ಲಿ ಸಿದ್ದರಾಮಯ್ಯ ಅವರ ಬಲ ಹೆಚ್ಚಿದ್ದರೂ, ಮೇಲು ಹಂತದಲ್ಲಿ ಅವರ ಜತೆಗಿದ್ದ ಹಲ ನಾಯಕರು ಡಿಕೆಶಿ ಕಡೆ ಧಾವಿಸುತ್ತಿದ್ದಾರೆ. ಮೊನ್ನೆ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕರಾದ ಬಿ.ಕೆ.ಹರಿಪ್ರಸಾದ್ ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ನಿಂತು ಡಿಕೆಶಿ ವಿರುದ್ಧ ಗುಡುಗುತ್ತಿದ್ದವರು. ಆದರೆ ಮುಖ್ಯಮಂತ್ರಿ ಯಾದ ಕೆಲವೇ ಕಾಲದ ನಂತರ ಸಿದ್ದರಾಮಯ್ಯ ವರಸೆ ಬದಲಾದಾಗ, ಆ ಮೂಲಕ ಅವರು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದರಿವಾದಾಗ ಹರಿಪ್ರಸಾದ್ ತಿರುಗಿಬಿದ್ದರು.
ಅಷ್ಟೇ ಅಲ್ಲ, ವೈಯಕ್ತಿಕ ಕಾರಣಗಳಿಗಾಗಿ ಡಿಕೆಶಿ ತಿಹಾರ್ ಜೈಲು ಸೇರಿದ ಸಂದರ್ಭದಲ್ಲಿ ಅವರ ಪರವಾಗಿ ನಿಂತರು. ಹೀಗೆ ಚಿಗುರಿದ ಡಿಕೆ-ಬಿಕೆ ಸ್ಮೇಹ ಈಗ ಹೆಮ್ಮರವಾಗಿದೆ. ದಶಕಗಳ ಕಾಲ ದಿಲ್ಲಿಯ ರಾಜಕೀಯ ಕಾರಿಡಾರುಗಳಲ್ಲಿ ಪವರ್ ಫುಲ್ ಆಗಿದ್ದ ಬಿಕೆ ಕರ್ನಾಟಕ ವಿಧಾನ ಪರಿಷತ್ತಿಗೆ ನುಗ್ಗಿ ಈಗ ಕಾಂಗ್ರೆಸ್ ನಾಯಕರಾಗಲು ಸಾಧ್ಯವಾಗಿದೆ. ವಸ್ತುಸ್ಥಿತಿಯೆಂದರೆ ಅವರು ಈ ಜಾಗಕ್ಕೆ ಬಂದು ಕೂರುವುದು ಸಿದ್ದರಾಮಯ್ಯ ಅವರಿಗೆ ಇಷ್ಟವಿರಲಿಲ್ಲ. ಆದರೆ ಬಿಕೆಗೆ ಸೋನಿಯಾ ಸರ್ಕಲ್ ನಲ್ಲಿರುವ ಆಪ್ತತೆಯ ಅರಿವಿರುವ ಡಿ.ಕೆ.: ಇವರೇ ಆ ಜಾಗಕ್ಕೆ ಬರಬೇಕು ಎಂದು ದಿಲ್ಲಿ ನಾಯಕರ ಬಳಿ ಪಟ್ಟು ಹಿಡಿದು ಯಶಸ್ವಿಯಾಗಿದ್ದಾರೆ.
ಸಿ.ಎಂ. ಇಬ್ರಾಹಿಂ ಅವರು ಸಿದ್ದರಾಮಯ್ಯ ಗ್ಯಾಂಗಿನಿಂದ ಸಿಡಿದು ಹೋಗಲು ಈ ಬೆಳವಣಿಗೆ ಕಾರಣ.
ಇನ್ನು ಹಿರಿಯ ನಾಯಕ ಎಸ್.ಆರ್.ಪಾಟೀಲ್ ಅವರು ಸಿದ್ದರಾಮಯ್ಯ ಕ್ಯಾಂಪಿನಲ್ಲೇ ಇದ್ದವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರ ಗೆಲುವಿಗಾಗಿ
ಬಾದಾಮಿ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಆದರೆ ಇತ್ತೀಚೆಗೆ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಎಸ್.ಆರ್.ಪಾಟೀಲ್ ಕಣ್ಣಿಟ್ಟಿದ್ದ ಕ್ಷೇತ್ರದ
ಟಿಕೆಟ್ಟು ಎಂ.ಬಿ. ಪಾಟೀಲರ ಸಹೋದರನ ಪಾಲಾಯಿತು. ಇದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂಬುದು ಎಸ್. ಆರ್.ಪಾಟೀಲರ ಸಿಟ್ಟು. ಈ ಕಾರಣಕ್ಕಾಗಿ ಅವರು ಡಿಕೆಶಿ ಕಡೆ ಸರಿದಿದ್ದಾರೆ. ಹೀಗೆ ಸಿದ್ದರಾಮಯ್ಯ ಕ್ಯಾಂಪಿನಿಂದ ಸರಿದು ಬಂದ ಅವರಿಗೆ ರಾಜ್ಯ ಕಾಂಗ್ರೆಸ್ ನ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ಕೊಡಿಸು ವುದು ಡಿಕೆಶಿ ಬಯಕೆಯಾಗಿತ್ತು. ಆದರೆ ಲಿಂಗಾಯತ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಸಿದ್ಧರಾಮಯ್ಯ ಈ ಜಾಗ ಎಂ.ಬಿ.ಪಾಟೀಲ್ ಅವರಿಗೆ ದಕ್ಕುವಂತೆ ಮಾಡಿದರು.
ಅಂದ ಹಾಗೆ ಬಿಜೆಪಿ ಜತೆಗಿದ್ದ ಲಿಂಗಾಯತ ಮತ ಬ್ಯಾಂಕ್ ಒಡೆದುಹೋಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಕೈ ಪಾಳೆಯಕ್ಕೆ ಒಂದಷ್ಟು ಅನುಕೂಲ ವಾಗುತ್ತದೆ. ಆದರೆ ಹೀಗೆ ಅನುಕೂಲ ಪಡೆಯಲೂ ಸಮುದಾಯದ ಬಲಿಷ್ಠ ನಾಯಕರಿರಬೇಕು ಎಂಬುದು ಸಿದ್ಧರಾಮಯ್ಯ ಲೆಕ್ಕಾಚಾರ. ಅವರ ಲೆಕಕ್ಕಾಚಾರ ಜಾರಿಯಾಗುತ್ತಿದ್ದಂತೆಯೇ ಎಸ್.ಆರ್.ಪಾಟೀಲ್ ಇನ್ನಷ್ಟು ಕನಲಿದ್ದಾರೆ. ಈ ಮಧ್ಯೆ ಯಾರ ಬಣದಲ್ಲಿ ಇಲ್ಲದಿದ್ದರೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಕೆ.ಎಚ್. ಮುನಿಯಪ್ಪ ಅವರಂತಹ ಹಿರಿಯರ ಪಡೆ ಸಿದ್ದರಾಮಯ್ಯ ಅವರ ವಿರುದ್ಧ ದಿಕ್ಕಿನಲ್ಲಿ ನಿಂತಿದೆ. ಇನ್ನು ವಿಧಾನ ಸಭೆ ಕ್ಷೇತ್ರಗಳ ಮಟ್ಟದಲ್ಲಿ ಡಿಕೆಶಿ-ಸಿದ್ದರಾಮಯ್ಯ ಅವರ ನಡುವಿನ ಫೈಟು ಸಖತ್ತಾಗಿಯೇ ಇದೆ.
ಉದಾಹರಣೆಗೆ ಬೆಂಗಳೂರಿನ ಪುಲಿಕೇಶಿ ನಗರ ಕ್ಷೇತ್ರದಲ್ಲಿ ಶಾಸಕರಾಗಿರುವ ಅಖಂಡ ಶ್ರೀನಿವಾಸ ಮೂರ್ತಿ ಅವರು ಸಿದ್ದರಾಮಯ್ಯ ಕ್ಯಾಂಪಿನಲ್ಲಿದ್ದರೆ, ಅವರನ್ನು ಸೈಡಿಗೆ ಸರಿಸಿ ತಮ್ಮ ಬೆಂಬಲಿಗ ಸಂಪತ್ ರಾಜು ಅವರಿಗೆ ಅಸೆಂಬ್ಲಿ ಟಿಕೆಟ್ ಕೊಡುವುದು ಡಿಕೆಶಿ ಯೋಚನೆ. ಇಂತಹ ಆಟ ಬಹುತೇಕ ಕ್ಷೇತ್ರಗಳಲ್ಲಿ ಜಾರಿಯಲ್ಲಿ ರುವುದರಿಂದ ಕೈ ಪಾಳೆಯದ ಅಂತರಂಗ ಥರಗುಡುತ್ತಿದೆ. ಇತ್ತೀಚೆಗೆ ವಿವಾದಕ್ಕೆ ಕಾರಣವಾದ ಸಿದ್ದರಾಮಯ್ಯ-ಅಶೋಕ್ ಪಟ್ಟಣ್ ನಡುವಣ ಚರ್ಚೆ ಇದಕ್ಕೊಂದು ಉದಾಹರಣೆ. ಪರಿಣಾಮ, ಕಾಂಗ್ರೆಸ್‌ನ ಯಾವ ಬಣದಲ್ಲಿದ್ದರೂ ಮುಂದೇನು ಎಂಬ ಚಿಂತೆ ಬಹುತೇಕರನ್ನು ಕಾಡುತ್ತಿದೆ.