Wednesday, 11th December 2024

ಕಾಲೇಜಲ್ಲಿ ಪಾಠ ಬಿಟ್ಟು ಬೇರೆಲ್ಲ ಆಗುತ್ತಿದೆ !

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ವಿವಾದ ‘ವೋಟ್ ಬ್ಯಾಂಕ್ ರಾಜಕೀಯ’ಕ್ಕೆ ಸಹಾಯ ಮಾಡುವುದಷ್ಟೇ ಅಲ್ಲದೇ, ಮುಂದಿನ ಚುನಾವಣೆಯಲ್ಲಿ ಮತ ಬೇಟೆಗೆ ಪ್ರಮುಖ ಅಸ್ತ್ರವಾಗುತ್ತದೆ. ಆದ್ದ ರಿಂದಲೇ ಬಿಜೆಪಿ ನಾಯಕರು ಹಿಜಾಬ್ ಬೇಡ ಎಂದರೆ, ಕಾಂಗ್ರೆಸ್ ನಾಯಕರು ಹಿಜಾಬ್ ಬೇಕು ಎನ್ನುತ್ತಿದ್ದಾರೆ.

ಈ ಮೊದಲು ಕಾಲೇಜಿನೊಳಗೆ ಹೋಗುವುದಕ್ಕೆ ಐಡಿ ಕಾರ್ಡ್ ತೋರಿಸಬೇಕಿತ್ತು. ಕಾಲೇಜಿನ ವಾಚ್‌ಮ್ಯಾನ್‌ಗೆ ಇದ್ದ ಏಕೈಕ ಕೆಲಸ ಅದಾಗಿತ್ತು. ಆದರೆ ಕಳೆ ದೊಂದು ವಾರದಿಂದ ಕರ್ನಾಟಕದಲ್ಲಿ ಪರಿಸ್ಥಿತಿ ಬದಲಾಗಿದೆ. ಗೇಟಿನಲ್ಲಿ ವಾಚ್ ಮ್ಯಾನ್ ಬದಲು ಪ್ರಾಂಶುಪಾಲರೇ ನಿಲ್ಲಬೇಕು, ವಿದ್ಯಾರ್ಥಿ ನಮ್ಮ ಕಾಲೇಜಿ ನವನೋ ಅಲ್ಲವೋ ಎನ್ನುವ ಮೊದಲು ಕೇಸರಿ ಶಾಲೋ, ಅಲ್ಲವೇ ಹಿಜಾಬ್ ಅಥವಾ ಬುರ್ಖಾವೋ ಎಂದು ನೋಡಿ, ಅವರಿಂದ ಅದನ್ನು ತಗೆಸಿ, ತಗೆಯದಿದ್ದರೆ ಗೇಟ್‌ಗೆ ಬೀಗ ಹಾಕಿ ಹೊರಗೆ ನಿಲ್ಲಿಸಬೇಕು.

ಸೋಮವಾರವಂತೂ ಕೇಸರಿ ಶಾಲೆಗೆ ಪ್ರತಿಯಾಗಿ ನೀಲು ಶಾಲುಗಳು ಕಾಣಿಸಿಕೊಂಡಿದೆ. ಈ ಬಣ್ಣ ಬಣ್ಣದ ಬಟ್ಟೆಗಳನ್ನು ನೋಡಿ, ಕೇಸರಿ ಶಾಲು ಹೊದ್ದಿದ್ದರೆ ಬಲ, ಹಿಜಾಬ್, ಬುರ್ಖಾ ತೊಟ್ಟಿದ್ದಿದ್ದರೆ ಎಡಕ್ಕೆ ಹಾಗೂ ಸಮವಸ್ತ್ರ ಧರಿಸಿದ್ದರೆ ಮಧ್ಯದಲ್ಲಿ ನೇರವಾಗಿ ಹೋಗು ಎನ್ನುವಂತಾಗಿದೆ. ನೋಡುವುದಕ್ಕೆ ಈ ವಿಷಯ ಹಾಸ್ಯಸ್ಪದ ಎನಿಸಬಹುದು. ಆದರೆ ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಹಿಜಾಬ್ ಹಾಕಿಕೊಂಡು ಕಾಲೇಜು ಪ್ರವೇಶಿಸುವ ವಿಷಯ ಭಾರಿ ವಿವಾದವನ್ನು ಸೃಷ್ಟಿಸುತ್ತಿದೆ.

ಆರಂಭದಲ್ಲಿ ಕೇವಲ ಉಡುಪಿಯ ಸರಕಾರಿ ಕಾಲೇಜಿಗೆ ಮಾತ್ರ ಹಾಗೂ ಆರೇಳು ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದ್ದ ಈ ವಿಷಯ, ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿವಾದ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ‘ವೈರಸ್’ ರೀತಿ ಹಬ್ಬುತ್ತಿದ್ದಂತೆ, ಕಾಲೇಜುಗಳಲ್ಲಿ ಪಾಠ-ಪ್ರವಚನಕ್ಕಿಂತ ಹಿಜಾಬ್ ಹಾಗೂ ಕೇಸರಿ ಶಾಲು ತಗೆಸಿ ತರಗತಿಯೊಳಗೆ ವಿದ್ಯಾರ್ಥಿಯನ್ನು ಕೂರಿಸುವುದೇ ಉಪನ್ಯಾಸಕ ಏಕಮಾತ್ರ ಕೆಲಸವಾಗಿದೆ. ಸದ್ಯಕ್ಕೆ 20ಕ್ಕೂ ಜಿಲ್ಲೆಗಳಲ್ಲಿರುವ ಕೆಲ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿ ಗಲಾಟೆಯಾ ಗುತ್ತಿದೆ. ಆದರೆ ಹಬ್ಬುತ್ತಿರುವ ವೇಗ ನೋಡಿದರೆ, ‘ಶಾಂತವಾಗಿರುವ ಕಾಲೇಜುಗಳಿಗೂ ಈ ಧರ್ಮದ ಗಲಾಟೆ’ ಹುಟ್ಟುವುದರಲ್ಲಿ ಅನುಮಾನವಿಲ್ಲ.

ಕಳೆದ ಎರಡು ವರ್ಷದಿಂದ ಕರೋನಾ ಕಾರಣದಿಂದ ಕಾಲೇಜುಗಳು ಸರಿಯಾಗಿ ನಡೆದಿಲ್ಲ, ಮಕ್ಕಳಿಗೆ ಸಿಲೆಬಸ್ ಅರ್ಥವಾಗಿಲ್ಲ ಎನ್ನುವ ಅಂಬೋಣ ಅನೇಕ ರಾಗಿದ್ದಾರೆ, ನಮ್ಮ ಧರ್ಮ ಸಂಕೇತದಂತಿರುವ ಬಟ್ಟೆಯನ್ನು ಹಾಕಿಕೊಂಡೇ ತರಗತಿಗೆ ಬರುತ್ತೇವೆ ಎನ್ನುವ ಹಠ ಕೆಲವರದ್ದು. ಹಾಗೇ ನೋಡಿದರೆ, ಶಾಲಾ-ಕಾಲೇಜುಗಳಿಗೆ ಹಿಜಾಬ್, ಬುರ್ಖಾ ಹಾಕಿಕೊಂಡು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಬರುತ್ತಿದ್ದದ್ದು, ಕಾಲೇಜು ಗೇಟಿನ ತನಕ ಮಾತ್ರ. ಬಳಿಕ ಅದನ್ನು ತಗೆದಿಟ್ಟೇ ತರಗತಿಗೆ ಹಾಜರಾಗುತ್ತಿದ್ದರು. ಈಗಲೂ ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರು ಇದನ್ನು ಪಾಲಿಸುತ್ತಿದ್ದಾರೆ.

ಈ ಮೂಲಕ ತಮ್ಮ ಧರ್ಮವನ್ನು ಪಾಲಿಸುವ ಜತೆಜತೆಗೆ ಕಾಲೇಜಿನಲ್ಲಿರುವ ’Dress code’ ಅನ್ನು ಪಾಲಿಸಿಕೊಂಡೇ ಬರುತ್ತಿದ್ದಾರೆ. ಇದಕ್ಕೆ ಯಾರದ್ದು
ಅಭ್ಯಂತರವಿಲ್ಲ. ಆದರೆ ತರಗತಿಯಲ್ಲಿಯೂ ನಾವು, ಹಿಜಾಬ್ ಧರಿಸಿಯೇ ಕೂರುತ್ತೇವೆ ಎನ್ನುವ ಮೊಂಡು ವಾದ ಇದೀಗ ವಿವಾದಕ್ಕೆ ಕಾರಣವಾಗಿದೆ. ಕ್ರಿಯೆಗೆ ಸಹಜವಾಗಿ ಬರುವ ಪ್ರತಿಕ್ರಿಯೆ ಎನ್ನುವಂತೆ ಉಡುಪಿಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುತ್ತಿದ್ದಂತೆ, ಅತ್ತ ಕುಂದಾಪುರದಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ‘ಜೈ ಶ್ರೀರಾಂ’ ಘೋಷಣೆಯೊಂದಿಗೆ ಕಾಲೇಜು ಪ್ರವೇಶಕ್ಕೆ ಮುಂದಾದರು.

ಈ ಬೆಳವಣಿಗೆ ಬೆನ್ನಲ್ಲೇ, ರಾಜ್ಯದ ಬಹುತೇಕ ಜಿಲ್ಲೆಯ ವಿದ್ಯಾರ್ಥಿಗಳು ‘ಆಳಿಗೊಂದು ಕಲ್ಲು’ ಎನ್ನುವಂತೆ, ನಮ್ಮದು ಒಂದು ಇರಲಿ ಎನ್ನುವ ರೀತಿಯಲ್ಲಿ ಕೇಸರಿ ಶಾಲು- ಹಿಜಾಬ್ ವಿವಾದ ಹರಡುತ್ತ ಹೋಗಿದೆ. ಕಾಲೇಜುಗಳೆಂಬ ವಿದ್ಯಾಮಂದಿರದಲ್ಲಿ ಈ ರೀತಿಯ ವಿವಾದಕ್ಕೆ ಅವಕಾಶ ನೀಡಬಾರದು. ಅಲ್ಲಿರುವ
ವಿದ್ಯಾರ್ಥಿಗಳಿಗೆ ಜ್ಞಾನ ಮುಖ್ಯವಾಗಬೇಕೇ ಹೊರತು, ಈ ರೀತಿಯ ಧರ್ಮದ ಐಡೆಂಟಿಟಿ ಅಲ್ಲವೇ ಅಲ್ಲ. ವಿವಾದ ಶುರುವಾದ ಉಡುಪಿಯ ಸರಕಾರ ಪದವಿ ಪೂರ್ವ ಕಾಲೇಜಿನಲ್ಲಿಯೂ, 2022ರ ಜನವರಿ ಒಂದರ ತನಕ ಈ ವಿವಾದವೇ ಇರಲಿಲ್ಲ.

ಒಂದುವರೆ ವರ್ಷ ಆ ಎಂಟು ವಿದ್ಯಾರ್ಥಿನಿಯರು (ಈಗ ನಾಲ್ಕು ವಿದ್ಯಾರ್ಥಿನಿಯರಾಗಿದ್ದಾರೆ) ಸಹ ತರಗತಿ ಪ್ರವೇಶಿಸುವ ಮೊದಲು ಜಿಹಾಬ್ ಅನ್ನು ತಗೆದಿಟ್ಟೇ ಬರುತ್ತಿದ್ದರು. ಆದರೆ ಜ.ರಂದು ಇದ್ದಕ್ಕಿದ್ದಂತೆ ಧರ್ಮದಲ್ಲಿರುವ ಆಚರಣೆಯನ್ನು ಪಾಲಿಸಿಯೇ ತೀರುತ್ತೇವೆ ಎನ್ನುವ ಹಠಕ್ಕೆ ವಿದ್ಯಾರ್ಥಿನಿಯರು ಬಿದಿದ್ದಾರೆ!
ಹಾಗಾದರೆ ಒಂದುವರೆ ವರ್ಷ ಹಿಜಾಬ್ ಬಗ್ಗೆ ಇಲ್ಲದ ಪ್ರೀತಿ, ಧುತ್ತೆಂದು ಬಂದಿದೆ ಎಂದರೆ, ಅದರರ್ಥ ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದೇ ಅರ್ಥ ವಲ್ಲವೇ? ಇನ್ನು ಒಂದು ಹೆಜ್ಜೆ ಮುಂದೆ ಹೋಗುವುದಾದರೆ, ಆ ವಿದ್ಯಾರ್ಥಿನಿಯರ ನಡೆಯನ್ನು ಆರಂಭದಲ್ಲಿಯೇ ಶಾಲಾ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು.

ಬಳಿಕ ಶಾಸಕರ ತನಕ ಹೋಗಿ, ಕೊನೆಗೆ ಮುಖ್ಯಮಂತ್ರಿ ಕಚೇರಿಯವರೆಗೆ ಈ ವಿವಾದ ಹೋದರೂ, ತಮ್ಮ ನಿಲುವಿನ ಅಂಟಿಕೊಂಡಿದ್ದನ್ನು ನೋಡಿದರೆ, ಆ ವಿದ್ಯಾರ್ಥಿನಿಯರು ಎಷ್ಟು ’ಪ್ರಭಾವ‘ ಹೊಂದಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದಿಷ್ಟೇ ಅಲ್ಲದೇ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವಷ್ಟು ಸಿದ್ಧರಾಗಿದ್ದಾರೆ ಎಂದರೆ, ಆ ವಿದ್ಯಾರ್ಥಿನಿಯರಿಗೆ ಕೆಲ ಪ್ರಭಾವಿ ನಾಯಕರ ಅಥವಾ ಸಂಘಟನೆಯ ಬೆಂಬಲ ಇಲ್ಲ ಎನ್ನಲು ಸಾಧ್ಯವೇ ಇಲ್ಲ.

ಈ ವಿಷಯದಲ್ಲಿ ಸರಕಾರವೂ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ವಿವಾದ ಶುರುವಾಗಿ ತಿಂಗಳು ಕಳೆದರೂ, ಉನ್ನತ ಮಟ್ಟದ ಸಮಿತಿ ಮಾಡುತ್ತೇವೆ, ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ, ಸಮವಸ್ತ್ರ ಅಥವಾ ವಸ್ತ್ರ ಸಂಹಿತೆ ಬಗ್ಗೆ ಯೋಚಿಸುತ್ತೇವೆ ಎಂದು ಹಿಜಾಬ್‌ನ ಕಿಚ್ಚು ರಾಜಕೀಯ ತಿರುವು ಪಡೆಯುವಂತೆ ಮಾಡಿದರು. ಆದರೆ ಇನ್ನೊಂದು ಬದಿಯಲ್ಲಿ ನೋಡಿದರೆ, ಈ ವಿವಾದ ಆಡಳಿತ ಹಾಗೂ ಪ್ರತಿಪಕ್ಷಗಳೆರಡಕ್ಕೂ ಜೀವಂತ ವಾಗಿರಬೇಕು.

ಏಕೆಂದರೆ, ಈ ವಿವಾದ ‘ವೋಟ್ ಬ್ಯಾಂಕ್ ರಾಜಕೀಯ’ಕ್ಕೆ ಸಹಾಯ ಮಾಡುವುದಷ್ಟೇ ಅಲ್ಲದೇ, ಮುಂದಿನ ಚುನಾವಣೆಯಲ್ಲಿ ಮತ ಬೇಟೆಗೆ ಪ್ರಮುಖ ಅಸವಾಗುತ್ತದೆ. ಆದ್ದರಿಂದಲೇ ಬಿಜೆಪಿ ನಾಯಕರು ಹಿಜಾಬ್ ಬೇಡ ಎಂದರೆ, ಇತ್ತ ಕಾಂಗ್ರೆಸ್ ನಾಯಕರು ಹಿಜಾಬ್ ಹಾಕಿಕೊಂಡು ತರಗತಿಯಲ್ಲಿ ಕೂರುವುದಕ್ಕೆ ಅವಕಾಶ ನೀಡಲೇಬೇಕು ಎನ್ನುವ ಆಗ್ರಹ ಮಂಡಿಸಿದರು. ಆದರೆ ಈ ರೀತಿ ಹಿಜಾಬ್ ಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ ಸಂಘಟನೆ, ಪಕ್ಷ ಹಾಗೂ ನಾಯಕರಿಗೆ, ‘ಕೇರಳದಲ್ಲಿರುವ ಕಮ್ಯೂನಿಸ್ಟ್ ಸರಕಾರವೂ, ಹಿಜಾಬ್ ಹಾಕಿಕೊಂಡು ತರಗತಿಯಲ್ಲಿ ಕೂರುವುದಕ್ಕೆ ನಿಷೇಧ ಹೇರಿದೆ’ ಎನ್ನುವುದನ್ನು ಅರಿಯಲು ಪ್ರಯತ್ನಿಸಲಿಲ್ಲ.

ರಾಜ್ಯ ಸರಕಾರ ತಡವಾಗಿಯಾದರೂ, ಸಮವಸ್ತ್ರ ಬಗ್ಗೆ ಸ್ಪಷ್ಟ ಆದೇಶವನ್ನು ನೀಡಿದೆ. ಆದರೀಗ ಆ ಆದೇಶವನ್ನು ಕೇಳಿಸಿಕೊಳ್ಳುವ ಅಥವಾ ಆಲಿಸುವ
ಮನಸ್ಥಿತಿಯಲ್ಲಿ ವಿದ್ಯಾರ್ಥಿಗಳಿಲ್ಲ (ವಿದ್ಯಾರ್ಥಿಗಳಿಗೆ ಕುಮ್ಮಕ್ಕು ಯಾರು ಕೊಡುತ್ತಾರೆ ಎನ್ನುವುದು ಬೇರೆ). ಇದೀಗ ರಾಜ್ಯಾದ್ಯಂತ್ಯ ನೀವು ಹಿಜಾಬ್ ಹಾಕಿದರೆ, ನಾವು ಕೇಸರಿ ಶಾಲು ಹಾಕುತ್ತೇವೆ ಎಂದು ಕೆಲ ಹಿಂದೂ ಪರ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜು ಪ್ರವೇಶಕ್ಕೆ ಮುಂದಾಗಿದ್ದಾರೆ. ಕೆಲವೆಡೆ ಯಂತೂ ಕಾಲೇಜು ರಜೆಯಿದ್ದರೂ, ಶಾಲು ಸುತ್ತಿಕೊಂಡು ಓಡಾಡುವ ದೃಶ್ಯ ಸಾಮಾನ್ಯವಾಗಿದೆ. ಸರಕಾರದ ಆದೇಶವನ್ನು ಮೀರಿ, ತಮ್ಮ ಧರ್ಮದ ಗುರುತು ತೋರಿಸುವುದೇ ದೊಡ್ಡ ಸಾಧನೆ ಎನ್ನುವ ಮಟ್ಟಕ್ಕೆ ವಿದ್ಯಾರ್ಥಿಗಳು ಅದೂ ಸಹ ಪಿಯು ಹಂತದ ವಿದ್ಯಾರ್ಥಿಗಳು ಬಂದರೆ, ಭವಿಷ್ಯದ ಸೋ ಕಾಲ್ಡ್ ಜಾತ್ಯತೀತ ಸಮುದಾಯ ಹೇಗಿರಲಿದೆ ಎನ್ನುವುದನ್ನು ನೋಡಬಹುದು.

ಶಾಲೆ, ಕಾಲೇಜುಗಳು ವಿದ್ಯಾಮಂದಿರವಾಗಬೇಕು. ಅಲ್ಲಿ ಯಾವುದೇ ಜಾತಿ, ಧರ್ಮ, ಪಂತದ ವಾಸನೆ ಬರಬಾರದು. ಶೈಕ್ಷಣಿಕ ಕೇಂದ್ರಗಳಲ್ಲಿ ಜ್ಞಾನಾರ್ಜನೆ
ಮುಖ್ಯವೇ ಹೊರತು, ಹಿಜಾಬ್ ಆಗಲಿ, ಕೇಸರಿ ಶಾಲಾಗಲಿ ಇಲ್ಲವೇ ನೀಲಿ ಶಾಲು ಆಗಲಿ ಪ್ರಮುಖವಲ್ಲ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೇ, ಯಾವುದೋ
ಪಕ್ಷದ, ಸಂಘಟನೆಯ ಆಟಕ್ಕೆ ವಿದ್ಯಾರ್ಥಿಗಳ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸರಕಾರ ಸಮವಸ್ತ್ರದ ವಿಷಯದಲ್ಲಿ ತಡವಾಗಿಯಾದರೂ, ಸ್ಪಷ್ಟ ತೀರ್ಮಾನವನ್ನು ಕೈಗೊಂಡಿದೆ. ಆದೇಶ ಹೊರಡಿಸಿದ ಬಳಿಕವೂ, ಹಿಜಾಬ್ ವಿವಾದ ಜೀವಂತವಾಗಿದೆ ಎನ್ನುವುದಾದರೆ, ಅದನ್ನು ನಿಯಂತ್ರಿಸಬೇಕಿರು ವುದು ಆಡಳಿತ ಯಂತ್ರದ ಕೆಲಸ. ಯಾರದ್ದೋ ಕೆಲವರ ಹಿತಾಸಕ್ತಿಗಾಗಿ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳುಮಾಡುವುದಕ್ಕೆ ಅವಕಾಶ ನೀಡಬಾರದು.