ವ್ಯಕ್ತಿತ್ವ ವಿಕಸನ
ಪುತ್ತೂರಾಯ
drputhuraya@yahoo.co.in
‘ಸತ್ಯಂ ವದ, ಧರ್ಮಂ ಚರ’ ಅಂದರೆ ‘ಸತ್ಯವನ್ನೇ ನುಡಿ, ಧರ್ಮದಲ್ಲೇ ನಡೆ’ ಎಂಬುದು ಹಿರಿಯರು ನಮಗೆ ನೀಡಿದ ಆದೇಶ. ಅಂತೆಯೇ ‘ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನ ಬ್ರೂಯಾತ್, ಸತ್ಯ ಮ ಪ್ರಿಯಾ, ಪ್ರಿಯಂಚ ನಾ ನೃತಂ ಬ್ರೂಯಾತ್, ಏಸಧರ್ಮ ಸನಾತನ’ ಅಂದರೆ ಸತ್ಯವನ್ನೇ
ನುಡಿಯ ಬೇಕು; ಪ್ರಿಯವಾದ ಸತ್ಯವನ್ನೇ ನುಡಿಯಬೇಕು.
ಪ್ರಿಯವಲ್ಲದ ಕಠೋರ ಸತ್ಯವನ್ನಾಗಲೀ, ಪ್ರಿಯವಾಗಿದ್ದರೂ ಸುಳ್ಳನ್ನಾಗಲೀ ನುಡಿಯಬಾರದು. ಜೀವನದಲ್ಲಿ ಒಂದೂ ಸುಳ್ಳು ಹೇಳದವರು ಬಹಳ ಅಪರೂಪ. ಮಹಾಭಾರತದ ಸೂತ್ರಧಾರಿ, ಶ್ರೀ ಕೃಷ್ಣ ಪರಮಾತ್ಮನೇ ಸುಳ್ಳನ್ನು ಹೇಳಿಲ್ಲವೇ? ಆದರೆ ಅದು ದುಷ್ಟರ ದಮನಕ್ಕೆ ಹಾಗೂ ಶಿಷ್ಟರ ಮತ್ತು ಧರ್ಮದ ರಕ್ಷಣೆಗೆ ನುಡಿದ ಸುಳ್ಳುಗಳಾದುದರಿಂದ ಮಹಾ ಅಪರಾಧಗಳೆನಿಸಲಿಲ್ಲ. ಅಂತೆಯೇ ಅಪಾಯಕರವಲ್ಲದ, ಯಾರಿಗೂ ನೋವಾ ಗದ, ಸದ್ಗುಣವನ್ನು ಎತ್ತಿ ಹಿಡಿಯುವ ಸುಳ್ಳು ಗಳನ್ನು ‘ಸುಂದರ ಸುಳ್ಳು’ಗಳೆಂದು ಕರೆಯ ಬಹುದು.
ದಿಢೀರ್ ಅತಿಥಿಗಳು ಮನೆಗೆ ಬಂದಾಗ, ತಯಾರಿಸಿದ ಆಹಾರದ ಕೊರತೆಯಾಗಬಾರದೆಂಬ ದೃಷ್ಟಿಯಿಂದ ‘ಅಮ್ಮ ನಂಗೆ ಯಾಕೋ ಇವತ್ತು ಹಸಿವೇನೇ ಇಲ್ಲ’ ಎಂಬ ಸುಳ್ಳು ಹೇಳಿದರೆ, ಅದೊಂದು ಸುಂದರ ಸುಳ್ಳು ಎಂದೆನಿಸಿ ಕೊಳ್ಳುತ್ತದೆ. ಕೆಲವೊಮ್ಮೆ ಪರಿಹರಿಸಲಾರದ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲೂ ಸುಳ್ಳುಗಳನ್ನು ಹೇಳಬೇಕಾ ಗುತ್ತದೆ. ಹುಣ್ಣಿಮೆಯ ದಿನ ಬಾನಲ್ಲಿ ಕಂಡ ಚಂದಿರನನ್ನು ಕಂಡು ಮಗು ‘ಅದನ್ನು ತಂದು ಕೊಡು’ ಎಂದು ಹಠ ಮಾಡಿದರೆ ಬೊಗಸೆ ನೀರಿನಲ್ಲಿ ಚಂದಿರನ ಬಿಂಬವನ್ನು ತೋರಿಸಿ, ಇಗೋ ನೋಡಿಲ್ಲಿ ಚಂದಿರ ಎಂದು ಮಗು ವನ್ನು ಸಮಾಧಾನಿಸುವ ಅಮ್ಮನ ಮಾತುಗಳೂ ಒಂದು ಸಣ್ಣ ಸುಳ್ಳೇ.
ಕೆಲವೊಮ್ಮೆ ಸತ್ಯದ ವೇಷವನ್ನು ಧರಿಸಿರುವ ಸುಳ್ಳು ಒಮ್ಮೆಗೆ ಕೇಳುವವರಿಗೆ ಸತ್ಯವೆಂದೆನಿಸಿದರೂ ಆ ಮಾತುಗಳ ಒಳಗೆ ಒಳಸುಳ್ಳೊಂದು ಆಡಗಿ ಕೂತಿರುತ್ತದೆ. ಇನ್ನುಕೆಲವರದು ಬರೇ ಸುಳ್ಳುಗಳೇ. ಇವನ್ನು ಜನರು ನಾನಾ ರೀತಿಯಲ್ಲಿ ಹೇಳುತ್ತಿರುತ್ತಾರೆ. ಉದಾಹರಣೆಗೆ
-ಸಮಾರಂಭಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸುತ್ತ ಹೇಳುವ ’ಬಿಡುವಿಲ್ಲದ ಕಾರ್ಯಕ್ರಮಗಳಿದ್ದರೂ ಶ್ರೀಯುತರು ನಮ್ಮ ಮೇಲಿನ ಪ್ರೀತಿ ಅಭಿ ಮಾನಗಳಿಂದ ದಯಮಾಡಿಸಿದ್ದಾರೆ’ ಎನ್ನುವ ಔಪಚಾರಿಕ ಮಾತು. (ವಾಸ್ತವದಲ್ಲಿ ಮನೆಯಲ್ಲೇ ನೊಣ ಹೊಡ್ಕೊಂಡು ಬಿದ್ದಿರಲೂಬಹುದು!)
-ಈಗ ಅತಿಥಿಗಳಿಂದ ಸಭಿಕರನ್ನು ಉದ್ದೇಶಿಸಿ ಎರಡು ಮಾತುಗಳು ಎಂಬ ನಿರೂಪಕರ ಮಾತು. (ಭಾಷಣ ಬಿಗಿಯಲು ಒಮ್ಮೆ ಎದ್ದು ನಿಂತ ಮೇಲೆ, ಸಿಕ್ಕಿದ್ದೇ ಚಾನ್ಸ್ ಎಂದು ಬಹಳ ಹೊತ್ತಿನವರೆಗೆ ಸಭಿಕರ ತಲೆ ಕೊರೆಯುತ್ತಾರೆ!).
– ಭ್ರಷ್ಟಾಚಾರದ ಹಗರಣದ ತನಿಖೆ ಪ್ರಗತಿಯಲ್ಲಿದೆ. ತಪ್ಪಿತಸ್ಥರಿಗೆ ತ್ವರಿತ ಕಠಿಣ ಶಿಕ್ಷೆಯಾಗಲಿದೆ ಎಂಬ ಸರಕಾರದ ಪ್ರಕಟಣೆ ಒಂದು ಸುಳ್ಳು. (ಇದುವರೆಗೆ ಸಿಕ್ಕಿ ಹಾಕಿಕೊಂಡ ವರು ಶಿಕ್ಷೆಗೆ ಒಳಪಟ್ಟವರು ಕೆಲವರಷ್ಟೇ).
– ಇವರ ಸಾವಿನಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂಬ ಮೃತ ಭ್ರಷ್ಟ ರಾಜಕಾರಣಿಯ ಬಣ್ಣನೆ.
– ನಿಮಗೇನೂ ಆಗೋದಿಲ್ಲ. ಸಾವಿನ ಚಿಂತೆ ಬಿಟ್ಟು ಬಿಡಿ ಎಂಬ ರೋಗಿಗೆ ವೈದ್ಯರ ಭರವಸೆ.
– ಕೈಯ್ಯನ್ನು ಕಂಡು ಜ್ಯೋತಿಷಿ ಹೇಳುವ ಮಾತು ನಿಮ್ಮ ಜೀವನದಲ್ಲಿ ತುಂಬಾ ಏರಿಳಿತಗಳಿವೆ. ನಿಮಗೆ ದೂರದ ಪ್ರಯಾಣದ ಯೋಗವಿದೆ ತುಂಬಾ ಖರ್ಚು (ಇದ್ದಿದ್ದೇ), ಮಡದಿ-ಮಕ್ಕಳಿಂದ ಕಿರಿ ಕಿರಿ (ಗೊತ್ತಿರುವ ವಿಷಯವೇ!)
-&Next ಗಾಡಿ ಖಾಲಿ ಇದೆ. ಅದರಲ್ಲಿ ಬನ್ನಿ ಎಂಬ Bus conductor ನ ಮಾತು.
-ಈ ಕೋರ್ಸಿಗೆ ಮುಂದೆ ತುಂಬಾ scope ಇದೆ- ಖಾಸಗೀ ಕಾಲೇಜಿನ ಪ್ರಾಂಶುಪಾಲರ ಆಸ್ವಾಸನೆ.
-ನಿನ್ನ performance ತೃಪ್ತಿದಾಯಕವಾಗಿಲ್ಲ; ಆದುದರಿಂದ ಬಡ್ತಿ ತಿರಸ್ಕರಿಸಲಾಗಿದೆ. ಕಂಪನಿಯ Boss.
-ಬರೇ ಸುಳ್ಳುಗಳಿಂದ ತುಂಬಿರುವ ಎರಡು ಪತ್ರಗಳೆಂದರೆ ಒಂದು Love letter ಇನ್ನೊಂದು Leave letter!.
-ಇದು ಕೇಶ ವೃದ್ಧಿನಿ ತೈಲ. ಕೂದಲು ಉದುರೋದನ್ನ ತಡೆ ಹಿಡಿದು ಹೊಸ ಕೂದಲು ಹುಟ್ಟುವಂತೆ ಮಾಡುತ್ತದೆ.
(ಜಾಹೀರಾತು) (ಹೊಟ್ಟೆ ಒಮ್ಮೆ ಬಂದರೆ, ಮತ್ತೇ ಹೋಗೋದಿಲ್ಲ.; ಕೂದಲು ಒಮ್ಮೆ ಹೋದರೆ ಮತ್ತೆ ಬರೋದಿಲ್ಲ!. ಇದು ಸತ್ಯ.)
-ನನ್ನ ಹಣೆಬರಹ ಚೆನ್ನಾಗಿಲ್ಲಾಂತ ಕಾಣುತ್ತೆ. ಕೈ ಹಾಕಿದ ಕೆಲಸಗಳ್ಯಾವುದೂ ಆಗ್ತಿಲ್ಲ ಎಂಬ ನಿರಾಶಾವಾದಿ. (ನಮ್ಮ ಭವಿಷ್ಯ ಅವಲಂಬಿತವಾಗಿರೋದು ನಮ್ಮ ಹಣೆಬರಹದಲ್ಲಿ ಅಲ್ಲ; ಹಣೆಯ ಬೆವರಿನಲ್ಲಿ!).
-ಹರಕೆ ಹೊತ್ತಿದ್ದೇನೆ. ಗಣಪತಿಗೆ ಕಾಯಿ ಒಡೆಸಿದ್ದೇನೆ; ತುಪ್ಪದ ದೀಪ ಹಚ್ಚಿದ್ದೇನೆ. ನೀನು ಈ ಬಾರಿ ಪಾಸು ಆಗೋದರಲ್ಲಿ ಸಂಶಯಲ್ಲ-ಮಗನಿಗೆ ಅಮ್ಮನ ಆಶ್ವಾಸನೆ (ನಮ್ಮ ಗಣಪತಿ ಲಂಚಕೋರನೇ?)
-ಇವರಿಗೆ ಈ ಕಲೆ ರಕ್ತಗತವಾಗಿ ಬಂದಿದೆ -ಕಲಾವಿದರ ಕುರಿತು ವಿಮರ್ಶಕನ ಮಾತು (ರಕ್ತಗತವಾಗಿ ಬರೋದು ಕಾಯಿಲೆ!).
-ಈ ಡಾಕ್ಟರ್ ಕೈಗುಣ ಚೆನ್ನಾಗಿದೆ. ಅವರು ನೀಡುವ ಔಷಧ ಚೆನ್ನಾಗಿ ಕೆಲಸ ಮಾಡುತ್ತೆ- ರೋಗಿಯ ಅನಿಸಿಕೆ.
(ವಾಸ್ತವದಲ್ಲಿ ಅವನಲ್ಲಿರುವ ಆತ್ಮಶ್ವಾಸವೂ ಕೆಲಸ ಮಾಡಿದೆ).
-ಈ ಬಣ್ಣದ ಸೀರೆ ನಿಮಗೆ ತುಂಬಾ O| ಅಗುತ್ತೆ ನೋಡಿ- ಸೀರೆ ವ್ಯಾಪಾರಿ ಹೆಂಗಸರಿಗೆ ಹೇಳುವ ಮಾತು.
(ಆದರೆ ಇದೇ ಮಾತನ್ನು ಈತ ಎಲ್ಲಾ ಮಹಿಳಾ ಗ್ರಾಹಕರಿಗೂ ಹೇಳುತ್ತಿರುತ್ತಾನೆ)
-ನನ್ನ ದೃಷ್ಟಿಯಲ್ಲಿ ಎಲ್ಲರೂ winners- ಕ್ರೀಡಾ ಸ್ಪರ್ಧೆಯ ವಿಜೇತರ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅಥಿತಿಯ ಸಾಂತ್ವನದ ಮಾತು.
-ಮುಂದಿನ ೨೪ ಗಂಟೆಗಳಲ್ಲಿ ಮಳೆಯಾಗಬಹುದು ಇಲ್ಲವೇ ಮಳೆಯಾಗದಿರಬಹುದು. ಮಳೆಯಾದರೆ ತುಂತುರು ಮಳೆ ಅಥವಾ ಗುಡುಗು ಸಹಿತ ಭಾರೀ
ಮಳೆಯಾಗುವ ಸಂಭವವಿದೆ. ಮಳೆಯಾಗದಿದ್ದರೆ ಮೋಡ ಕವಿದ ವಾತಾವರಣ ಇಲ್ಲವೇ ಒಣ ಹವೇ ಇರುತ್ತದೆ.
(ಇದನ್ನು ಹೇಳಲು ಒಂದು ಇಲಾಖೆ ಬೇಕೆ?)
ಹುಡುಗಿ ನಿನ್ನನ್ನೇ ನೋಡುತ್ತಿದ್ದಾಳೆ ಕಣೋ-ಮಿತ್ರನ ಮಾತು.
-ಹುಡುಗಿ ಅಡುಗೆ ಚೆನ್ನಾಗಿ ಮಾಡ್ತಾಳೆ. Actually ಈ ಉಪ್ಪಿಟ್ಟು ಆಕೇನೇ ಮಾಡಿದ್ದು! ಹುಡುಗಿ ಕಡೆಯವರ ಹೊಗಳಿಕೆಯ ಮಾತು. (ಅದು ready made MTR ಉಪ್ಪಿಟ್ಟು ಮಿಕ್ಸ್ ನಿಂದ ಆಗಿದ್ದರೂ)
-ನಾನು occasionally drinks ತಗೋತೀನಿ ಮದುವೆಯ ಮೊದಲು, ಹುಡುಗ ಹುಡುಗಿಗೆ ಹೇಳಿದ ಮಾತು.(ಕುಡಿಯೋರೆಲ್ಲ ಹೀಗೇ ಹೇಳೋದು)
-ಇವಳ ಕಾಲ್ಗುಣ ಚೆನ್ನಾಗಿದೆ. ಇವಳು ಅವನ ಮನೆಯೊಳಗೆ ಕಾಲು ಇರಿಸಿದಂದಿನಿಂದ, ಅವನಿಗೆ ಎಲ್ಲವೂ ಒಳ್ಳೆಯದಾಗಿದೆ-ಬುರುಡೆ ಮಾತು(ಹುಡುಗರೇ
ಏನಾದರೂ ಸಾಧಸಬೇಕಿದ್ದರೆ, ಮದುವೆಯ ಮೊದಲೇ ಸಾಧಿಸಿ ಬಿಡಿ. ಇಲ್ಲವಾದರೆ ಎಲ್ಲ ಕೈಡಿದವಳ ಕಾಲ್ಗುಣಾಂತ ಬುರುಡೆ ಬಿಡ್ತಾರೆ!)
-ನಾನು ಇದುವರೆಗೆ ಇತರೇ ಹೆಂಗಸರನ್ನು ಕಣ್ಣೆತ್ತಿ ಸಹ ನೋಡಿಲ್ಲ ಕಣೆ -ಗಂಡ ಮುದ್ದಿನ ಮಡದಿಗೆ (ಹೌದು ಇವ ಕಣ್ಣೆತ್ತಿ ನೋಡಿಲ್ಲ; ಆದರೆ ಕಣ್ಣು ಕಣ್ಣು ಬಿಟ್ಟು ಕಣ್ ತುಂಬಾ ನೋಡಿದ್ದಾನೆ).
-ಏಳೇಳು ಜನ್ಮಗಳಲ್ಲೂ ನೀವೇ ನನ್ನ ಪತಿ ದೇವರಾಗ ಬೇಕು-ಗಂಡನಿಗೆ ಹೆಂಡತಿಯ ಮಾತು. (ಆದರೆ ಇದೇ ನನ್ನ ಏಳನೆಯ ಜನ್ಮವಾಗಿರಲಿ ಎಂಬ ಪ್ರಾರ್ಥನೆ)
-ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ- ಕವಿ ಕಲ್ಪನೆ. (ಎರಡು ಹೆಂಡತಿಯರಿದ್ದರೆ ಎರಡು ಕೋಟಿ ರೂಪಾಯಿಗಳೇ?)
-ಅಹಿಂಸಾ ಪರಮೋಧರ್ಮ; ದಯೆ ಬೇಕು ಸಕಲ ಪ್ರಾಣಿಗಳಲಿ, ದಯೇಯೇ ಧರ್ಮದ ಮೂಲವಯ್ಯಾ- ಎಂಬ ಉಪದೇಶದ ಮಾತು. (ಮನೆಗೆ ಬಂದು ಕೋಳಿ-ಕುರಿ ಗಳನ್ನು ಕಡಿದು ತಿನ್ನೋದು. ಹಾಗೆಯೇ ಭ್ರೂಣ ಹತ್ಯೆ ಮಹಾಪರಾಧವೆಂದು ಭಾಷಣ ಬಿಗಿದು ಮನೆಗೆ ಬಂದು ಎರಡು ಕೋಳಿಮೊಟ್ಟೆ ಗಳನ್ನು ಬೇಯಿಸಿ ತಿಂದರೆ ಬೇರೆ ಸುಳ್ಳು ಬೇಕಾ?)
-ಸೂರ್ಯನು ಪ್ರತಿದಿನ ಬೆಳಗ್ಗೆ ಉದಯವಾಗಿ, ಸಂಜೆ ವೇಳೆ ಮುಳುಗುತ್ತಾನೆ ಎಂಬುದು ಕಣ್ಣಿಗೆ ಕಾಣುವ ಒಂದು ಭೌತಿಕ ಸತ್ಯ. ಆದರೆ, ಭೂಮಿಯೇ ಸೂರ್ಯನ ಸುತ್ತ ತಿರುಗೋದರಿಂದ ಹೀಗಾಗುತ್ತಿದೆ ಎಂಬುದು ಒಂದು ವೈಜ್ಞಾನಿಕ ಸತ್ಯ.
ಹೀಗೆ ನಾವು ನಂಬಿದ್ದು ತಿಳಿದುಕೊಂಡಿದ್ದು ಒಂದು ಸುಳ್ಳು ಎಂದು ಗೊತ್ತಾದಾಗ, ಸತ್ಯ ತನ್ನನ್ನು ತಾನೇ ಪರಿಚಯ ಮಾಡಿಕೊಳ್ಳುತ್ತದೆ. ಒಂದೇ ಒಂದು ಸತ್ಯ ಸುಳ್ಳಿನ ಎಂತಹ ಸುದೀರ್ಘ ವಾದವನ್ನೂ ಸೋಲಿಸಬಹುದು. ಹೀಗೆ ನೀರು ಎಷ್ಟೇ ಬಿಸಿಯಾಗಿದ್ದರೂ, ಬೆಂಕಿಯನ್ನು ಆರಿಸಬಲ್ಲುದೋ, ಸತ್ಯವೂ ಎಷ್ಟೇ ಕಠೋರವಾಗಿದ್ದರೂ ಸುಳ್ಳನ್ನು ನಾಶ ಮಾಡಬಲ್ಲದು.
ಸುಳ್ಳು ನಗುತ್ತಿರುವಾಗ ಸತ್ಯ ಅಳುತ್ತಿರಬಹುದು. ಆದರೆ ಸತ್ಯ ನಕ್ಕಾಗ ಸುಳ್ಳು ಸತ್ತೇ ಹೋಗಿರುತ್ತದೆ. ಸತ್ಯ ನಗ್ನವಾಗಿ ಓಡಾಡಬಲ್ಲದು. ಆದರೆ ಸುಳ್ಳಿಗೆ ಇನ್ನಿಲ್ಲದ ಅಲಂಕಾರಗಳು ಬೇಕು. ಸುಳ್ಳು ಹೇಳೋದು ಮೊದಲ ಬಾರಿಗೆ ಸುಲಭ. ಆದರೆ ಮುಂದಕ್ಕೆ ಕಷ್ಟಕರವಾಗುತ್ತದೆ. ಕಾರಣ ಒಂದು ಸುಳ್ಳನ್ನು ಸಾಬೀತು ಪಡಿಸಲು ನೂರಾರು ಸುಳ್ಳುಗಳನ್ನು ಹೇಳಬೇಕಾಗುತ್ತದೆ. ಆದರೆ ಸತ್ಯ ಹೇಳೋದು ಮೊದಲ ಬಾರಿಗೆ ಕಷ್ಟಕರವೆನಿಸಬಹುದು. ಆದರೆ, ಕ್ರಮೇಣ ಸುಲಭ ಸಾಧ್ಯವಾಗುತ್ತದೆ. ಕಾರಣ ಸತ್ಯವನ್ನೇ ನುಡಿಯುವವನಿಗೆ ಹಿಂದೆ ಹೇಳಿದ್ದನ್ನು ನೆನಪಿಟ್ಟುಕೊಳ್ಳುವ, ಕತೆ ಕಟ್ಟುವ ಅವಶ್ಯಕತೆ ಇರೋದಿಲ್ಲ.
ಅಂತೆಯೇ ಸತ್ಯವನ್ನು ಸಾಬೀತುಪಡಿಸಲು ಹೇಳುವ ಸುಳ್ಳು ಸುಳ್ಳೇ ಅಲ್ಲ. ಇದೇ ರೀತಿ ಸುಳ್ಳಿನ ಆಧಾರದ ಮೇಲೆ ಹೇಳಿದ ಸತ್ಯ ಸತ್ಯವೇ ಅಲ್ಲ ಸುಳ್ಳು ಹೇಳುವವರು ಇತರರು ಇದು ಸತ್ಯವೆಂದೇ ನಂಬುವಂತಹ ರಂಗು ರಂಗಿನ ಸುಳ್ಳುಗಳನ್ನು ಹೇಳುತ್ತ ಜನರಿಗೆ ಮೋಸ ಮಾಡುತ್ತಿರುತ್ತಾರೆ. ವಿಚಿತ್ರವೆಂದರೆ ಲೋಕದಲ್ಲಿ ಎಲ್ಲರೂ ಕೇಳಲು ಪ್ರಿಯವಾದ ಸುಳ್ಳನ್ನೇ ನಂಬುತ್ತಾರೆ. ಆದರೆ ಅಪ್ರಿಯವಾದ ಕಠೋರ ಸತ್ಯವನ್ನು ನಂಬೋದಿಲ್ಲ. ಇದನ್ನೇ ‘ಸುಲಭಾ ರಾಜನ್ ಸತತಂ ಪ್ರಿಯವಾದಿನ, ಅಪ್ರಿಯತ್ಯಚ ವಕ್ತಾಚ ಶ್ರೋತಾಚ ದುರ್ಲಭ’ ಎಂಬು ದಾಗಿ, ಮಾರೀಚನು ರಾವಣನಿಗೆ ತಿಳಿಯ ಪಡಿಸುತ್ತಾನೆ. ಸುಳ್ಳು ಹೇಳುವ ಅಭ್ಯಾಸ ಆರಂಭವಾತೆಂದರೆ, ಮುಂದೆ ಚಟವಾಗಿ ಬೆಳೆದು ಬಿಡುತ್ತದೆ. ಮಾತ್ರವೇ ಅಲ್ಲ; ಅಗತ್ಯವಿರಲಿ ಇಲ್ಲದಿರಲಿ ಸುಳ್ಳನ್ನೇ ಹೇಳುವ ಒಂದು ಗುಣ ಸ್ವಭಾವವಾಗಿ ಉಳಿದು ಬಿಡುತ್ತದೆ.
ಸತ್ಯವಾದರೋ ಎಂದೂ ಕೇಳಲು ಕಷ್ಟ. ಯಾವಾಗಲೂ ನಿಷ್ಠುರವನ್ನೇ ತಂದೊಡ್ಡುತ್ತದೆ. ಸತ್ಯ ಹೇಳುವವರು ಜನಪ್ರಿಯರೂ ಅಲ್ಲ. ಸತ್ಯವನ್ನೇ ಹೇಳಿದರೆ ಕೇಳುವವರಿಗೆ ಕೆಲವೊಮ್ಮೆ ಕೆಂಡದಂತಹ ಸಿಟ್ಟಲ್ಲವೇ? ಈ ಕಾರಣಕ್ಕೇ ಕೆಲವರು ಯಾಕೆ ಸತ್ಯ ಹೇಳಿ ನಾವು ಕೆಟ್ಟವರಾಗಬೇಕೆಂದು ತಿಳಿದು ಸುಮ್ಮನಾ ಗುತ್ತಾರೆ. ಪರಿಣಾಮವಾಗಿ, ಸತ್ಯ ಮೂಲೆ ಗುಂಪಾಗುತ್ತದೆ. ಹೀಗೆ ಸತ್ಯ ಒಂಟಿ ಬುಡುಕ ಸನ್ಯಾಸಿ.
ಆದರೆ ಸುಳ್ಳು ಮಾತ್ರ ದೊಡ್ಡ ಸಂಸಾರಿ. ರಾಜಾ ಹರಿಶ್ಚಂದ್ರ, ಮಹಾತ್ಮ ಗಾಂಧಿ ಸತ್ಯವನ್ನು ತನ್ನ ಜೀವನ ತತ್ವವನ್ನಾಗಿ ಮಾಡಿಕೊಂಡರು. ಸತ್ಯಂ ಶಿವಂ, ಶಿವಂ ಸುಂದರಂ ಎಂಬ ಶಿವನ ವರ್ಣನೆಯಲ್ಲೂ, ಸತ್ಯವನ್ನೇ ವೈಭಕರಿಸಲಾಗಿದೆ. ಪುಣ್ಯಕೋಟಿ ಹಸು ಕೂಡ ತನ್ನ ಕರುವಿಗೆ ಸತ್ಯದ ನೀತಿಯನ್ನು ಉಪದೇಶಿಸಿತು.
ತಾವೇ ಹೆಣೆದ ಸುಳ್ಳಿನ ಸರಮಾಲೆ ಸುಳ್ಳು ಹೇಳಿದವರ ಕೊರಳಿಗೆ, ಕೊನೆಗೊಂದು ದಿನ ಉರುಳಾಗೋದು ಖಚಿತ. ಕಾರಣ ಸತ್ಯ ಮೇವ ಜಯತೆ ಎಂಬಂತೆ ಸತ್ಯಕ್ಕೆ ಜಯ; ಸುಳ್ಳಿಗಲ್ಲ. ನಮ್ಮ ವ್ಯಕ್ತಿತ್ವವನ್ನು ಹರಣ ಮಾಡಲು, ಒಂದೇ ಒಂದು ಸುಳ್ಳು ಸಾಕು. ಆದುದರಿಂದ ಸುಳ್ಳಿನ ಸಹವಾಸವೇ ಬೇಡ. ಅಂತೆಯೇ ನಂಬಿದವರಿಗೆ ಸುಳ್ಳು ಹೇಳಬಾರದು. ಹಾಗೂ ಸುಳ್ಳು ಹೇಳುವವರನ್ನು ನಂಬಬಾರದು. ಸತ್ಯವನ್ನೇ ತಿಳಿಯುವುದು ಜ್ಞಾನಮಾರ್ಗ; ಸತ್ಯವನ್ನೇ ನಂಬುವುದು ಭಕ್ತಿ ಮಾರ್ಗ ಸತ್ಯಪಥದಲ್ಲಿ ನಡೆಯುವುದು ಮುಕ್ತಿ ಮಾರ್ಗ.