ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohahnbn@gmail.com
ಕಮ್ಯುನಿಸ್ಟರು ‘ಮೌಖಿಕ ಭಯೋತ್ಪಾದಕತೆ’ಗೆ ಹೆಸರುವಾಸಿಯಾದವರು. ‘ಅಸಹಿಷ್ಣುತೆ’ ಪದವನ್ನು ಸತತವಾಗಿ ಕಳೆದ ಎಂಟು ವರ್ಷಗಳಿಂದ ಬಳಸುತ್ತ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವವರಲ್ಲಿ ಕಮ್ಯುನಿಸ್ಟರು ಮೊದಲಿಗರು.
ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತ ದೇಶಕ್ಕೆ ವ್ಯಾಪಾರದ ಸಲುವಾಗಿ ಬಂದ ಬ್ರಿಟಿಷರ ಆಕ್ರಮ ಆಡಳಿತದ ವಿರುದ್ಧ ಸಿಡಿದೆದ್ದಿದ್ದ ಬಹುತೇಕ ಯುವಕರಲ್ಲಿ ‘ರಾಷ್ಟ್ರೀಯತೆ’ಯ ಕಿಚ್ಚು ತುಂಬಿ ತುಳುಕುತ್ತಿತ್ತು. ಆಂತರಿಕ ಶತ್ರುಗಳ ಅಪಪ್ರಚಾರಗಳಿಂದ ಹಲವು ಕ್ರಾಂತಿಕಾರಿ ಹೋರಾಟಗಾರರನ್ನು
ಇತಿಹಾಸದ ಪುಟದೊಳಗೆ ತರಲಿಲ್ಲ. ಏಕೆಂದರೆ ಜೈಲಿನ ವಿಶೇಷ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಬ್ರಿಟಿಷರ ಜತೆ ಒಪ್ಪಂದ ಮಾಡಿಕೊಂಡಿದ್ದಂತಹ ಡೋಂಗಿ ಹೋರಾಟಗಾರರಿಗೆ ಅಧಿಕಾರವೇ ಹೆಚ್ಚಾಗಿ ಹೋಗಿತ್ತು. ರಾಷ್ಟ್ರೀಯತೆ ಪ್ರತಿಪಾದಿಸುವವರನ್ನು ನಿಗ್ರಹಿಸುವ ಸಲುವಾಗಿ ‘ಅಸಹಿಷ್ಣುತೆ’ಯೆಂಬ ಪದಬಳಕೆಯ ಮೂಲಕ ಅವರ ಹೋರಾಟಗಳಿಗೆ ನಿಯಂತ್ರಣ ಹಾಕಲಾಗುತ್ತಿತ್ತು. ಭಾರತ ಸ್ವತಂತ್ರಗೊಂಡ ನಂತರದ ಏಳು ದಶಕಗಳ ನಂತರವೂ ಅದೇ ಅಸ್ತ್ರ
ಪ್ರಯೋಗಿಸುವ ಮೂಲಕ ‘ರಾಷ್ಟ್ರೀಯತೆ’ಯನ್ನು ’ಅಸಹಿಷ್ಣುತೆ’ಯೆಂದೇ ಬಿಂಬಿಸಲಾಗುತ್ತಿದೆ.
ಕಳೆದ ಎಂಟು ವರ್ಷಗಳಿಂದ ಕಮ್ಯುನಿಸ್ಟರು ಬರೆದ ಸುಳ್ಳು ಇತಿಹಾಸ ಅನಾವರಣಗೊಳ್ಳುತ್ತಿದ್ದಂತೆ, ಯುವಕರಲ್ಲಿ ರಾಷ್ಟ್ರೀಯತೆಯ ಕಿಚ್ಚೂ ಹೆಚ್ಚಿದೆ. ಕಳೆದ ವಾರ ದಕ್ಷಿಣ ಕೊರಿಯಾದ ‘ಹುಂಡೈ’ ಕಾರು ಕಂಪನಿಯು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಪರ ನಿಂತಿತ್ತು. ಅದಕ್ಕೆ ಪ್ರತಿಯಾಗಿ ದೇಶದಾದ್ಯಂತ ದೊಡ್ಡ ಮಟ್ಟದ ಟೀಕೆಗಳು ಕೇಳಿ ಬಂದವು. ಆದರೂ ಎಚ್ಚೆತ್ತುಕೊಳ್ಳದ ಹುಂಡೈ, ಕ್ಷಮೆ ಕೇಳದೆ ತಿಪ್ಪೆ ಸಾರಿಸುವ ಕೆಲಸ ಮಾಡಿತು. ನೋಡನೋಡುತ್ತಲೇ ಸುಮಾರು ೩ ಸಾವಿರ ಕಾರುಗಳ ಬುಕಿಂಗ್ ರದ್ದಾಗುವ ಮೂಲಕ, ರಾಷ್ಟ್ರೀಯತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಬಹುತೇಕ ಭಾರತೀಯರು ರವಾನಿಸಿದ್ದರು. ಆದರೆ ಎಡಚರ ಮನಃಸ್ಥಿತಿಯವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯವನ್ನೂ ಅಸಹಿಷ್ಣುತೆಯೆಂದೇ ಬಿಂಬಿಸಿದರು.
೨೦೦೪ ಹಾಗೂ ೨೦೧೪ರ ನಡುವೆ ಭಾರತದಲ್ಲಿ ನೂರಾರು ಭಯೋತ್ಪಾದಕ ಕೃತ್ಯಗಳು ನಡೆದವು. ತಿಂಗಳಿಗೊಮ್ಮೆ ಎಲ್ಲಾದರೊಂದು ಕಡೆ ಬಾಂಬ್ ಸದ್ದುಗಳು ಕೇಳಿ ಬರುತ್ತಲೇ ಇದ್ದವು. ಮುಂಬಯಿಯ ಬೀದಿ ಬೀದಿಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿತ್ತು. ಆಗ ಕಾಡದ ಅಸಹಿಷ್ಣುತೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು ಮಾಡುವಾಗ ಕಾಡಿತ್ತು. ಪಾಕಿಸ್ತಾನಿ ಪ್ರಚೋದಿತ ಪ್ರತ್ಯೇಕತಾವಾದಿಗಳ ಮುಷ್ಟಿಯಲ್ಲಿ ಸಿಲುಕಿ
ನಲುಗಿ ಹೋಗಿದ್ದ ಕಾಶ್ಮೀರದ ಮೇಲೆ ಭಾರತ ಸರಕಾರ ಸಂಪೂರ್ಣ ಹಿಡಿತ ಸಾಧಿಸಿದ್ದು ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರೀಯ ಭಾವೈಕ್ಯವನ್ನು ಮೂಡಿಸಿತ್ತು. ಆದರೆ, ಒಂದು ಅಡಿ ಜಾಗಕ್ಕಾಗಿ ನ್ಯಾಯಾಲದಲ್ಲಿ ದಾವೆ ಹೂಡುವ ಮಟ್ಟಕ್ಕೆ ಹೋಗುವ ಒಂದಷ್ಟು ಜನ ಕಾಶ್ಮೀರದ ವಿಚಾರದಲ್ಲಿ ಅಸಹಿಷ್ಣುತೆಯ ಪಾಠ ಮಾಡಿದ್ದರು. ಭಾರತದಲ್ಲಿ ಮುಸಲ್ಮಾನ್ ಸಮುದಾಯದ ಓಲೈಕೆ ರಾಜಕಾರಣ ಯಾವ ಮಟ್ಟಕ್ಕೆ ತಲುಪಿದೆಯೆಂದರೆ, ಕರ್ನಾಟಕದಲ್ಲಿ ‘ಸಂಸ್ಕೃತ ವಿಶ್ವವಿದ್ಯಾ ಲಯ’ ಸ್ಥಾಪನೆಯ ವಿಚಾರದಲ್ಲೂ ಅಸಹಿಷ್ಣುತೆ ತಾಂಡವವಾಡಿತು.
ಬ್ರಾಹ್ಮಣ್ಯದ ಹೇರಿಕೆ ನಡೆಯುತ್ತಿದೆ ಎಂದೆಲ್ಲ ಅಪಪ್ರಚಾರವಾಯಿತು. ಆದರೆ ಹಲವು ದಶಕಗಳಿಂದ ಉರ್ದು ಶಾಯರಿಗಳಲ್ಲಿ ಇವರಿಗೆ ಅಸಹಿಷ್ಣುತೆ ಕಾಣಿಸಲೇ ಇಲ್ಲ. ಉರ್ದು ಹಾಡುಗಾರರನ್ನು, ಕವಿಗಳನ್ನು ಹೊಗಳಿ ಅವರ ಶಾಯರಿಗಳನ್ನು ಹೇಳುವಾಗ ‘ವ್ಹಾವ್ ವ್ಹಾವ್’ ಎಂದು ಹೇಳಿ ಖುಷಿ ಪಡುತ್ತಾರಲ್ಲಾ? ಉರ್ದು
ಶಾಲೆಗಳಿಂದ ಕನ್ನಡ ಕಲಿಕೆಯಿಂದ ವಂಚಿತರಾದ ಮುಸಲ್ಮಾನರ ವಿರುದ್ಧ ಅಸಹಿಷ್ಣುತೆಯ ಕೂಗು ಕೇಳಲೇ ಇಲ್ಲ. ಕೇಸರಿ ಬಣ್ಣವನ್ನು ಕಂಡೊಡನೆ ಉರಿದು ಬಿದ್ದು ತಮ್ಮ ಅಸಹಿಷ್ಣುತೆ ವ್ಯಕ್ತಪಡಿಸುವ ನಾಯಕರಿಗೆ ಟಿಪ್ಪು ಸುಲ್ತಾನನ ಜಯಂತಿಯಂದು ಕಾಣಿಸುವ ಹಸಿರು ಬಣ್ಣದ ವಿರುದ್ಧ ಅಸಹಿಷ್ಣುತೆ ಕಾಣಿಸಲೇ ಇಲ್ಲ.
ದೇವಸ್ಥಾನದಲ್ಲಿನ ಘಂಟೆಯ ಸದ್ದಿನಲ್ಲಿ ಕಂಡಂತಹ ಅಸಹಿಷ್ಣುತೆ, ದಿನಕ್ಕೆ ಐದು ಬಾರಿ ಕೂಗುವ ಅಜಾನ್‌ನಲ್ಲಿ ಕಾಣಲೇ ಇಲ್ಲ. ಗಣರಾಜ್ಯೋತ್ಸವದ ದಿವಸ ದೆಹಲಿಯ ಇಂಡಿಯಾ ಗೇಟ್ ಬಳಿಯಿರುವ ‘ಅಮರ್ ಜವಾನ್ ಜ್ಯೋತಿ’ಯನ್ನು ಸೈನಿಕರ ಸ್ಮಾರಕರ ಜ್ಯೋತಿಯೊಡನೆ ವಿಲೀನಗೊಳಿಸಲಾಯಿತು. ಇಂಡಿಯಾ ಗೇಟ್ ಸುತ್ತಲ ಗೋಡೆಗಳಲ್ಲಿ ಯುದ್ಧ ದಲ್ಲಿ ಹುತಾತ್ಮರಾದಂತಹ ಸಂಪೂರ್ಣ ಯೋಧರ ಹೆಸರುಗಳಿಲ್ಲವಾಗಿತ್ತು. ಅದನ್ನು ಸೈನಿಕ ಸ್ಮಾರಕದಲ್ಲಿನ ಜ್ಯೋತಿಯೊಡನೆ ವಿಲೀನಗೊಳಿಸಿ ಅದರ ಘನತೆಯನ್ನು ಮತ್ತಷ್ಟು ಹೆಚ್ಚಿಸಲಾಯಿತು. ಒಬ್ಬ ನಿಜವಾದ ಭಾರತೀಯ ಈ ಕಾರ್ಯದಲ್ಲಿ ರಾಷ್ಟ್ರೀಯತೆಯನ್ನು ಎದ್ದು ಕಾಣುತ್ತಾನೆ.
ಆದರೆ ಇದಕ್ಕೂ ವಿರೋಧ ವ್ಯಕ್ತಪಡಿಸುವ ಮೂಲಕ ಮತ್ತೊಮ್ಮೆ ಅಸಹಿಷ್ಣುತೆಯ ವ್ಯಾಖ್ಯಾನ ಮುಂದಿಟ್ಟರು. ‘ಪೌರತ್ವ ತಿದ್ದುಪಡಿ ಕಾಯಿದೆ’ಯಲ್ಲಿ ದೆಹಲಿಯಲ್ಲಿ ಮುಸಲ್ಮಾನರ ತಲೆಕೆಡಿಸಿ ಸುಳ್ಳು ಪ್ರತಿಭಟನೆ ಮಾಡಿಸುವ ಮೂಲಕ ಭಾರತದಲ್ಲಿ ಅಸಹಿಷ್ಣುತೆ ಕಾಡುತ್ತಿದೆಯೆಂದು ಬಿಂಬಿಸಿದರು. ವೀರ ಸಾವರ್ಕರ್‌ರನ್ನು ಇತಿಹಾಸದ ಪುಟಗಳಲ್ಲಿ ಮೂಲೆಗುಂಪು ಮಾಡುವ ಮೂಲಕ ಕಮ್ಯುನಿಸ್ಟರು ತಮ್ಮ ಬೆಳೆ ಬೇಯಿಸಿಕೊಂಡಿದ್ದರು. ಕಳೆದ ಎಂಟು ವರ್ಷಗಳಲ್ಲಿ ಸಾವರ್ಕರ್ ಜೀವನದ ಪ್ರತಿಯೊಂದೂ ಹೋರಾಟಗಳ ಅನಾವರಣವಾದ ತರುವಾಯ ದೇಶದಲ್ಲಿ ಇದ್ದಕ್ಕಿದ್ದ ಹಾಗೆ ಇವರಿಗೆ ಅಸಹಿಷ್ಣುತೆ ಎದ್ದು ಕಾಡಿತ್ತು.
ಇಂದಿರಾ ಗಾಂಧಿಯ ಹೆಸರಿನಲ್ಲಿ ಆಸ್ಪತ್ರೆ ನಿರ್ಮಿಸಿದಾಗ, ಇಂದಿರೆಯ ಮಗನೆಂಬ ಕಾರಣಕ್ಕೆ ಸಂಜಯ್ ಗಾಂಧಿಯ ಹೆಸರಿನಲ್ಲಿ ಸರಕಾರಿ ಆಸ್ಪತ್ರೆ ನಿರ್ಮಾಣ ವಾದಾಗ ಕಾಣದ ಅಸಹಿಷ್ಣುತೆ, ಹೆಬ್ಬಾಳ ಬಳಿಯ ಮೇಲುರಸ್ತೆಗೆ ಸಾವರ್ಕರ್ ಹೆಸರಿಡುವಾಗ ಕಾಡಿತ್ತು. ಆದರೆ ದೇಶದ ಯುವಕರಲ್ಲಿ ಕಮ್ಯುನಿಸ್ಟರು ಮುಚ್ಚಿಟ್ಟಿದ್ದಂತಹ ಸಾವರ್ಕರ್ ಜೀವನ ಪುಟಗಳಲ್ಲಿನ ಹೋರಾಟಗಳು ರಾಷ್ಟ್ರೀಯತೆಯನ್ನು ಹತ್ತು ಪಟ್ಟು ಹೆಚ್ಚಿಸಿದ್ದವು. ಭಯೋತ್ಪಾದಕ ಅಫ್ಜಲ್ ಗುರುವಿನ ನೇಣು ಕುಣಿಕೆಯನ್ನು ತಡೆಯಲು ಸರ್ವೋಚ್ಚ ನ್ಯಾಯಾಲಕ್ಕೆ ಅರ್ಜಿ ಹಾಕಿದ ಎಡಬಿಡಂಗಿಗಳಿಗೆ ಸಾವರ್ಕರ್ ಬಗೆಗಿನ ಮುಚ್ಚಿಟ್ಟ ಇತಿಹಾಸದ ವಿಚಾರಧಾರೆಗಳು ಅಸಹಿಷ್ಣುತೆಯಾಗಿ ಕಾಣುತ್ತಿವೆ.
ಕಮ್ಯುನಿಸ್ಟರು ‘ಮೌಖಿಕ ಭಯೋತ್ಪಾದಕತೆ’ಗೆ ಹೆಸರು ವಾಸಿಯಾದವರು. ಆಗಾಗ ನೂತನ ಪದಪುಂಜಗಳನ್ನು ಹುಟ್ಟುಹಾಕಿ ಭಾರತದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿರುತ್ತಾರೆ. ‘ಅಸಹಿಷ್ಣುತೆ’ ಪದವನ್ನು ಸತತವಾಗಿ ಕಳೆದ ಎಂಟು ವರ್ಷಗಳಿಂದ ಬಳಸುತ್ತ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವವರಲ್ಲಿ ಕಮ್ಯುನಿಸ್ಟರು ಮೊದಲಿಗರು. ಗೌರಿ ಲಂಕೇಶ್ ಹತ್ಯೆಯ ವಿಚಾರದಲ್ಲಿ ಕಂಡುಬಂದಂತಹ ಅಸಹಿಷ್ಣುತೆ, ಮಹಾರಾಷ್ಟ್ರದಲ್ಲಿ ನಡೆದ ಸಾಧುಗಳ ಹತ್ಯೆಯಲ್ಲಿ ಕಂಡುಬರಲಿಲ್ಲ. ಕರ್ನಾಟಕದಲ್ಲಿ ‘ಮತಾಂತರ ನಿಷೇದ ಕಾಯಿದೆ’ ಯನ್ನು ಜಾರಿಗೆ ತಂದಾಗ ಕ್ರಿಶ್ಚಿಯನ್ ಮಿಷನರಿಗಳು ಹುಳುಬಿಟ್ಟುಕೊಂಡವರಂತೆ ವಿಲ ವಿಲನೆ ಒದ್ದಾಡಿದರು. ಬೆಳಗಾವಿಯ ಚರ್ಚ್ ಒಂದರಲ್ಲಿ ನಡೆದ ಗಲಾಟೆಯನ್ನು ಮುಂದಿಟ್ಟುಕೊಂಡು ಕ್ರಿಶ್ಚಿಯನ್ ಮಿಷನರಿಗಳನ್ನು ಬೆಂಬಲಿಸಿ ಬೆಂಗಳೂರಿನ ಒಂದಷ್ಟು ಬುದ್ದಿ ಜೀವಿಗಳು ಕರ್ನಾಟಕದಲ್ಲಿ ಅಸಹಿಷ್ಣುತೆ ಎದ್ದು ಕಾಡುತ್ತಿದೆ, ಸರಕಾರ ಈ ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕೆಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.
ಕೆಲವು ವರ್ಷಗಳ ಹಿಂದೆ ಕರಾವಳಿ ಬಾಗದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಡೆದಾಗ ಈ ಬುದ್ಧಿ ಜೀವಿಗಳಿಗೆ ಅಸಹಿಷ್ಣುತೆ ಕಾಣಿಸಲೇ ಇಲ್ಲ. ಮತಾಂತರಗೊಂಡಂತಹ ದಲಿತರನ್ನು ಚರ್ಚುಗಳಿಗೆ ಸೇರಿಸಲು ಹಿಂದೇಟು ಹಾಕುವ ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಅಸಹಿಷ್ಣುತೆ ಕಾಣಿಸಲೇ ಇಲ್ಲ.
ಬಲವಂತದ ಮತಾಂತರ ತಡೆಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯಿದೆ ಅಂಬೇಡ್ಕರ್ ಯೋಚನೆಗಳ ಪರವಾಗಿದೆ. ಅಂಬೇಡ್ಕರ್ ಎಂದೂ ಸಹ ಬಲವಂತದ ಮತಾಂತರ ಬೆಂಬಲಿಸಿದವರಲ್ಲ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರೆ ಇಡೀ ದೇಶವೇ ಮತ್ತೊಂದು ‘ಈಸ್ಟ್ ಇಂಡಿಯಾ ಕಂಪನಿ’ಯಾಗುತ್ತದೆಯೆಂಬ ದೂರದೃಷ್ಟಿ ಅವರಿಗಿತ್ತು. ಮುಸಲ್ಮಾನರ ರಾಷ್ಟ್ರೀಯತೆಯ ಬಗ್ಗೆ ಅನುಮಾನ ಇದ್ದೇ ಇತ್ತು. ‘ಮತಾಂತರ ನಿಷೇದ ಕಾಯಿದೆ’ ಅಂಬೇಡ್ಕರರ ರಾಷ್ಟ್ರೀಯತೆ ಪರಿಕಲ್ಪನೆಯ ಪ್ರಮುಖ
ಬೆಳವಣಿಗೆಗಳಂದು. ಆದರೆ ಮೌಖಿಕ ಭಯೋತ್ಪಾದಕರು ಮಾತ್ರ ಈ ಕಾಯಿದೆಯಿಂದ ಅಸಹಿಷ್ಣುತೆ ಹೆಚ್ಚಾಗುತ್ತಿದೆಯೆಂದು ಹೇಳಿಕೊಂಡು ತಿರುಗುತ್ತಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ೧೯೮೦ರ ದಶಕದಲ್ಲಿ ಹಾಜಿ ಮಸ್ತಾನ್, ಸಿನಿಮಾ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿ ಭೂಗತ ಜಗತ್ತಿನ ಹಣವು ಚಲನಚಿತ್ರಗಳಲ್ಲಿ ಹೂಡಿಕೆಯಾಗಲು ಶುರವಾಯಿತು.
ಬಹುತೇಕ ಬಾಲಿವುಡ್ ಸಿನೆಮಾಗಳು ಹಿಂದೂ ಧರ್ಮ ನಿಂದನೆಯಲ್ಲಿ ತೊಡಗಿದ್ದವು. ಭೂಗತ ಪಾತಕನೆಂದರೆ ಹಣೆಯಲ್ಲಿ ಕುಂಕುಮ, ಬಲಗೈನಲ್ಲಿ ಕೇಸರಿ
ಬಣ್ಣದ ದಾರ, ಗಣೇಶೋತ್ಸವದ ಮುಂದೆ ಮಚ್ಚುಗಳಿಂದ ಕೊಲೆ ಮಾಡುವ ಸನ್ನಿವೇಶಗಳು ಸರ್ವೇ ಸಾಮಾನ್ಯವಾಗಿದ್ದವು. ವೈಶ್ಯರನ್ನು ಜಿಪುಣರು, ವ್ಯವಹಾರ ದಲ್ಲಿ ಮೋಸ ಮಾಡುವವರಂತೆ ತೋರಿಸಿದ್ದು ಬಾಲಿವುಡ್ ಸಿನಿಮಾಗಳು. ಹಿಂದೂಗಳ ಆಚರಣೆಗಳನ್ನು ಮೂಢನಂಬಿಕೆಗಳಂತೆ ಬಿಂಬಿಸಲಾಗುತ್ತಿತ್ತು. ಇವೆಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದ ಹಿಂದುವಿಗೆ ಭಾರತದಲ್ಲಿ ಎಂದಿಗೂ ಅಸಹಿಷ್ಣುತೆ ಕಾಡಲಿಲ್ಲ.
ಕಮ್ಯುನಿಸ್ಟರಿಗಾಗಲೀ ಮುಸಲ್ಮಾನರಿಗಾಗಲೀ ಕಾಡಲಿಲ್ಲ. ಆಗ ಪ್ರಶ್ನೆ ಮಾಡದಿದ್ದ ಕಾರಣಕ್ಕೆ ಈಗ ಪ್ರಶ್ನೆ ಮಾಡಿದರೆ ಅಸಹಿಷ್ಣುತೆ ಭಾರತದಲ್ಲಿ ತಾಂಡವ ವಾಡುತ್ತಿದೆಯೆಂದು ಅಮಿರ್ ಖಾನ್ ಹೇಳುತ್ತಾನೆ. ಗಣರಾಜ್ಯೋತ್ಸವದ ‘ಬೀಟಿಂಗ್ ರಿಟ್ರೀಟ್’ನಲ್ಲಿ ಬ್ರಿಟಿಷರ ಕಾಲದ ‘ಅಬೈಡ್ ವಿಥ್ ಮಿ’ಹಾಡನ್ನು ಬಾರಿಸಲಾಗು ತ್ತಿತ್ತು. ಬ್ರಿಟಿಷರು ಭಾರತವನ್ನು ಬಿಟ್ಟು ೭೫ ವರ್ಷ ಕಳೆದರೂ ಅವರ ಹಾಡನ್ನು ನಮ್ಮ ಗಣರಾಜ್ಯೋತ್ಸವದಲ್ಲಿ ಬಳಸಿಕೊಂಡು ಹೋಗುವುದು ರಾಷ್ಟ್ರೀಯತೆಗೆ ಮಾಡಿದ ಅವಮಾನ.
ಅದರ ಜಾಗದಲ್ಲಿ ‘ಏ ಮೇರೆ ವತನ್ ಕೆ ಲೋಗೊ’ ಹಾಡನ್ನು ಜೋಡಿಸಿದರೆ ಇವರಿಗೆ ಅಸಹಿಷ್ಣುತೆ ಎದ್ದು ಕಾಣುತ್ತದೆ. ಕಾಂಗ್ರೆಸಿನ ಮಾಜಿ ವಿತ್ತ ಸಚಿವ ಚಿದಂಬರಂ ಇದರ ವಿರುದ್ಧ ಟ್ವೀಟ್ ಮಾಡುತ್ತಾರೆ. ಅತ್ತ ಉತ್ತರ ಪ್ರದೇಶದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ ಮೊಗಲರು ಇಡೀ ರಾಜ್ಯದಲ್ಲಿದ್ದಂತಹ ಭಾರತೀಯ ಸಂಸ್ಕೃತಿಯನ್ನು ಮೊಗಲ್ ಸಂಸ್ಕೃತಿಯನ್ನಾಗಿಸಿದರು. ಸಾವಿರಾರು ವರ್ಷಗಳ ಹಳೆಯ ಭಾರತೀಯ ಪರಂಪರೆಯ ಹೆಸರುಗಳನ್ನು ಅಳಸಿ ಹಾಕಿ, ಉರ್ದು ಹೆಸರುಗಳನ್ನಾಗಿ ಬದಲಾಯಿಸಿದರು. ಯೋಗಿ ಆದಿತ್ಯನಾಥ್ ಅಽಕಾರಕ್ಕೆ ಬಂದ ಮೇಲೆ ಮೊಗಲರು ಮಾಡಿದ ತಪ್ಪುಗಳನ್ನು ಸರಿಪಡಿಸಿದರು.
‘ಪ್ರಯಾಗ್ ರಾಜ’ನಗರವನ್ನು ಮೊಗಲರು ‘ಅಲಹಾಬಾದ್’ ಮಾಡಿದ್ದರು. ಯೋಗಿ ಅಧಿಕಾರಕ್ಕೆ ಬಂದ ಮೇಲೆ ಪುನಃ ನಗರಕ್ಕೆ ಪ್ರಯಾಗ್ ರಾಜ ಹೆಸರಿಟ್ಟರು. ಸಾವಿರಾರು ವರ್ಷಗಳ ಇತಿಹಾಸವಿರುವ ರಾಷ್ಟ್ರೀಯತೆಯನ್ನು ಪ್ರತಿ ಪಾದಿಸುವ ಮರು ನಾಮಕರಣ ಇವರಿಗೆ ಅಸಹಿಷ್ಣುತೆಯಾಗಿ ಕಾಣುತ್ತದೆ. ಗೂಂಡಾಗಳ ರಾಜ್ಯವಾಗಿದ್ದಂತಹ ಉತ್ತರ ಪ್ರದೇಶದಲ್ಲಿ ಗೂಂಡಾಗಳ ಎನ್‌ಕೌಂಟರ್‌ಗಳಾದರೆ ಇವರಿಗೆ ಅಸಹಿಷ್ಣುತೆ ಕಾಡುತ್ತದೆ. ರಣಹದ್ದುಗಳಂತೆ ಮಾನವ ಹಕ್ಕುಗಳ ಆಯೋಗ ದವರು ಸ್ವತಃ ತಾವೇ ಕೇಸುಗಳನ್ನು ದಾಖಲಿಸಿಕೊಂಡು ನ್ಯಾಯಾಲದಲ್ಲಿ ಹೋರಾಡುತ್ತಾರೆ. ಬಲವಂತದ ಮತಾಂತರದ ತೊಂದರೆಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಂತಹ ತಮಿಳುನಾಡಿನ ಹೆಣ್ಣುಮಗಳ ಪರವಾಗಿ ನಿಲ್ಲದ ಆಯೋಗದವರು ಉಡುಪಿಯ ಹಿಜಾಬ ಪ್ರಕರಣದಲ್ಲಿನ ಹೆಣ್ಣುಮಕ್ಕಳ ಪರವಾಗಿ ನಿಲ್ಲುತ್ತಾರೆ.
ಒಟ್ಟಿನಲ್ಲಿ ಸುಳ್ಳುಗಳನ್ನೇ ಹೇಳಿಕೊಂಡು ‘ನನ್ನದೇ ಕುದುರೆ, ನನ್ನದೇ ಮೈದಾನ’ವೆಂದು ಮೆರೆಯುತ್ತಿದ್ದಂತಹವರಿಗೆ, ಕಳೆದ ಎಂಟು ವರ್ಷಗಳಿಂದ ಮಾಡಿದ ಇತಿಹಾಸದ ತಪ್ಪುಗಳ ತಿದ್ದುಪಡಿಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ, ರಾಷ್ಟ್ರೀಯತೆನ್ನು ಮರೆಮಾಚಿ ಇವರು ಮಾಡಿದ್ದಂತಹ ತಪ್ಪುಗಳ ತಿದ್ದುಪಡಿಯನ್ನು ಅಸಹಿಷ್ಣುತೆಯೆಂದು ಬಿಂಬಿಸುವ ಷಡ್ಯಂತ್ರಗಳು ಈಗಲೂ ನಡೆಯುತ್ತಲೇ ಇವೆ.