Wednesday, 11th December 2024

ಮಕ್ಕಳು ವೃಕ್ಷಗಳಾಗಬೇಕೆ ಹೊರತು ಬಳ್ಳಿಗಳಲ್ಲ

ಯಶೋ ಬೆಳಗು

ಯಶೋಮತಿ ಬೆಳಗೆರೆ 

yashomathy@gmail.com

ಮಗುವಿನ ಬೇಡಿಕೆಗಳು ವಾಮನನಂತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತವೆ. ಅವರು ಕೇಳಿದ್ದನ್ನೆಲ್ಲ ಪೂರೈಸುತ್ತ ಹೋದರೆ ಅದೇ ಅಭ್ಯಾಸವಾಗಿ ತಂದೆ-ತಾಯಿಯರಿರುವುದೇ ಅವರ ಬೇಡಿಕೆಗಳನ್ನು ಪೂರೈಸಲು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತದೆ ಮಗು. ಹೀಗಾಗಿ ಮಗುವಿನ ಕುರಿತ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು.

ನಾವು ಏನೇ ಮಾಡಿದ್ರೂ ಅದು ಮಕ್ಕಳಿಗೋಸ್ಕರಾನೇ ಅಲ್ವಾ? ಮುಂದೆ ಅವರು ಚೆನ್ನಾಗಿರಲಿ ಅಂತಲೇ ಅಲ್ವಾ? ನಾವು ಪಟ್ಟ ಕಷ್ಟ ಅವರು ಪಡುವುದು ಬೇಡ ಅನ್ನುವುದು ಎಲ್ಲ ತಂದೆ-ತಾಯಿಗಳೂ ಹೇಳುವ ಮಾತು. ಅದಕ್ಕಾಗಿ ಹಗಲೂ ರಾತ್ರಿಯೆನ್ನದೆ ದುಡಿಯುತ್ತಾರೆ. ತಾವು ಅರೆಹೊಟ್ಟೆ ತಿಂದು ಮಕ್ಕಳಿಗಿರಲಿ ಎಂದು ಎತ್ತಿಡುತ್ತಾರೆ.

ಆದರೆ ಆ ಮಕ್ಕಳ ಉತ್ತಮ ಬೆಳವಣಿಗೆಗೆ ಬೇಕಾದ ಪೂರಕ ಪರಿಸರ ನಿರ್ಮಾಣ ಮಾಡಬೇಕು ಅನ್ನುವುದನ್ನು ಮಾತ್ರ ಮರೆತು ಬಿಡುತ್ತಾರೆ. ಇನ್ನು ಕೆಲವರಿಗೆ ಉತ್ತಮ ಪರಿಸರ ಕೊಡುವ ಇಚ್ಛೆಯಿದ್ದರೂ ಪರಿಸ್ಥಿತಿಯ ಕೈಗೊಂಬೆಯಾಗಿ ಏನೂ ಮಾಡಲಾಗದೆ ಅಸಹಾಯಕರಾಗಿರುತ್ತಾರೆ. ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಎಷ್ಟು ದಿನ ಜೊತೆಗಿರಲು ಸಾಧ್ಯ? ಸ್ವಯಂಪ್ರe ಜಾಗೃತವಾಗದ ಹೊರತು ವ್ಯಕ್ತಿಗತ ಅಭಿವೃದ್ಧಿ ಅಸಾಧ್ಯ.

ಹಣ, ಅಧಿಕಾರ, ಜಾತಿ, ವಿದ್ಯೆ, ಮನೆತನದಂಥ ಯಾವುದೇ ದೊಡ್ಡ ಬೆಂಬಲದ ಹಿನ್ನೆಲೆಯಿಲ್ಲದೆ, ಸಾಮಾನ್ಯರಲ್ಲಿ ಅತಿಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನನ್ನನ್ನು ಬದುಕು ಇಲ್ಲಿಯವರೆಗೂ ನಡೆಸಿಕೊಂಡು ಬಂದಿದೆ. ಮುಂದೆಯೂ ಹೆಚ್ಚಿನ ಎತ್ತರಕ್ಕೆ ಬೆಳಸುತ್ತದೆಂಬ ಅದಮ್ಯವಾದ ನಂಬಿಕೆಯಿದೆ. ಈ ಮೇಲು-ಕೀಳೆಂಬ ಭಾವವೆಲ್ಲ ಕೇವಲ ಕೆಳಸ್ತರದಲ್ಲೇ ಹೆಚ್ಚು. ಹೀಗಾಗಿ ಹೆಚ್ಚು ಹೆಚ್ಚು ಕಲಿತು ಎತ್ತರಕ್ಕೆ ಬೆಳೆದಂತೆಲ್ಲ ಈ ವಿಷಯಗಳು ಗೌಣವಾಗುತ್ತವೆ ಎಂಬ ಬಾಲ್ಯದ ಕಲ್ಪನೆಗೆ ತದ್ವಿರುದ್ಧವಾಗಿ ಕಲಿತ ಮನಸುಗಳಲ್ಲೇ ಹೆಚ್ಚಿನ ಭೇದ-ಭಾವಗಳನ್ನು ಕಂಡಾಗ ನಿರಾಸೆಯ ಕಾರ್ಮೋಡ ಮುಖಕ್ಕೆ ರಾಚಿದಂತಾಗಿತ್ತು. ವಿದ್ಯೆಯೊಂದಿಗಿರಬೇಕಾದ ವಿನಯದ ಬದಲಿಗೆ ಧಾರ್ಷ್ಟ್ಯ, ಬಲಪ್ರದರ್ಶನ ಗಳಿಂದಲೇ ತುಂಬಿಹೋಗಿರುವ ಕುತ್ಸಿತ ಮನಸ್ಸುಗಳನ್ನು ಕಂಡಾಗ ಹತಶೆಯಿಂದ ಕುಗ್ಗಿ ಹೋಗಿದ್ದೇನೆ.

ಯಾರದೋ ಒಬ್ಬರ ತಪ್ಪಿಗೆ ಇಡೀ ಕುಟುಂಬವನ್ನು, ಜಾತಿಯನ್ನು, ಜನಾಂಗವನ್ನು, ದೇಶವನ್ನು ಹೀಯಾಳಿಸಿ ಮಾತನಾಡುವ ಜನರೆದುರಿಗೆ ವಾದಕ್ಕೆ ಬೀಳದೆ ಮೌನವಾಗಿದ್ದೇನೆ. ಸುದ್ದಿಮನೆಯಲ್ಲಿ ರಾಶಿಗಟ್ಟಲೆ ಬಂದುಬೀಳುತ್ತಿದ್ದ ಅಪರಾಧದ ಸುದ್ದಿಗಳನ್ನು ಕಂಡಾಗ ಅದನ್ನು ಸುದ್ದಿಯಾಗಷ್ಟೆ ನೋಡಲಿಕ್ಕಾಗದೆ ಮನಸ್ಸಿಗೂ ಹಚ್ಚಿಕೊಂಡು ವಿಲಗುಟ್ಟಿದ್ದೇನೆ. ಇದೆಲ್ಲದರ ನಡುವೆಯೇ ಮಗ ಹುಟ್ಟಿದಾಗ ಜಗತ್ತಿನ ಪರಿವೆಯನ್ನೇ ಮರೆತು ಮಡಿಲಲ್ಲಿ ಮಲಗಿದ್ದ ಹಸುಗೂಸನ್ನು ಕಂಡು ಇಂಥಾ ಸಮಾಜದಲ್ಲಿ ಈ ಪುಟ್ಟ ಮಗುವನ್ನು ಹೇಗಪ್ಪಾ ಬೆಳಸುವುದು ಎಂದು ಕಂಗಾಲಾಗಿದ್ದೇನೆ.

ಅಷ್ಟೆಲ್ಲ ಹೆದರಬೇಡ. ಎಡವುತ್ತೇನೆಂಬ ಭಯದಲ್ಲಿ ನಡೆಯುವುದನ್ನೇ ಬಿಡಲಿಕ್ಕಾಗುತ್ತದಾ? ಕಾಲಕ್ಕೆ ತಕ್ಕಂತೆ ಮಗು ಎಲ್ಲವನ್ನೂ ಕಲಿಯುತ್ತಾ ಅರಗಿಸಿಕೊಳ್ಳುತ್ತಾ ಬೆಳೆಯುತ್ತದೆ. ಅದಕ್ಕಾಗಿ ಈಗಿಂದಲೇ ಹೀಗೆ ಹೆದರುತ್ತಾ ಕೂತರೆ ಹೇಗೆ? ಎಂದು ರವಿ ಸಾಕಷ್ಟು ಬಾರಿ ಧೈರ್ಯ ತುಂಬಿದ್ದಾರೆ. ಹಾಗೆಯೇ ಮಗುವಿನ ಬೇಡಿಕೆಗಳು ವಾಮನನಂತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತವೆ. ಅವರು ಕೇಳಿದ್ದನ್ನೆಲ್ಲ ಪೂರೈಸುತ್ತ ಹೋದರೆ ಅದೇ ಅಭ್ಯಾಸವಾಗಿ ತಂದೆ-ತಾಯಿಯರಿರುವುದೇ ಅವರ ಬೇಡಿಕೆಗಳನ್ನು ಪೂರೈಸಲು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತದೆ ಮಗು.

ಮುಂದೆ ಅವರು ಬಯಸಿದ್ದು ಸಿಗದೇ ಹೋದಾಗ ಸಿಟ್ಟಿನಿಂದ ತಂದೆ-ತಾಯಿಯರ ವಿರುದ್ಧವೇ ತಿರುಗಿ ಬೀಳುತ್ತದೆ. ಅವರಿಗೆ ಸರಿ ಯಾವುದು? ತಪ್ಪು ಯಾವುದು? ಎಂದು ಅರಿಯುವ ವಿವೇಚನೆಯಿರುವುದಿಲ್ಲ. ಅವರನ್ನು ಅತಿಯಾಗಿ ಮುದ್ದಿಸದೆ, ಅತಿಯಾಗಿ ಶಿಕ್ಷಿಸದೆ, ಮಾತುಮಾತಿಗೂ ಹೀಯಾಳಿಸದೆ ಸರಿಯಾದ ಮಾರ್ಗದರ್ಶನ ನೀಡುವುದು ತಂದೆ-ತಾಯಿಯರ ಮುಖ್ಯ ಕರ್ತವ್ಯ. ಹೀಗಾಗಿ ಮಗು ವನ್ನು ಸರಿಯಾದ ರೀತಿಯಲ್ಲಿ ಸದೃಢವಾಗಿ ಬೆಳೆಸಲು ಮೊದಲು ನೀನು ಮಾನಸಿಕವಾಗಿ ಗಟ್ಟಿಗೊಳ್ಳಬೇಕು ಎಂದು ಸಲಹೆ ನೀಡಿದ್ದರು ಶಾಲೆಯ ಪ್ರಾಂಶುಪಾಲರಾಗಿದ್ದ ರಮಾರಂಗನಾಥನ್.

ಭೂಮಿಯ ಒಡಲೊಳಗೆ ಬಿದ್ದ ಬೀಜ ಮೊಳಕೆಯಾಗಿ ಕುಡಿಯೊಡೆಯುತ್ತಾ ತಲೆಯೆತ್ತುವಾಗ ಯಾರದೋ ಕಾಲ್ತುಳಿತಕ್ಕೆ ಸಿಕ್ಕು ಮುರುಟಿ ಹೋಗಬಹುದು. ಯಾವುದೋ ಪ್ರಾಣಿಯ ಆಹಾರದ ತುತ್ತಾಗಿ ನಾಶವಾಗಬಹುದು. ಬಿಸಿಲು, ಮಳೆ, ಗಾಳಿಗಳ ಹೊಡೆತಕ್ಕೆ ಸಿಕ್ಕು ನಲುಗಿಹೋಗಬಹುದು. ಕಣ್ಣಿಗೆ ಕಾಣದ ಕೀಟಬಾಧೆಯಿಂದ ಚಿಗುರಲಾಗದೇ ಒಳಗೊಳಗೇ ಬೆಂದುಹೋಗಬಹುದು. ಆದರೂ ಅವೆಲ್ಲ ವನ್ನೂ ಮೀರಿ ತನ್ನ ಉಳಿವಿಗಾಗಿ ಹೋರಾಡುತ್ತ ಗಟ್ಟಿಯಾಗಿ ನೆಲದೊಳಗೆ ಬೇರೂರುತ್ತ ದಿನದಿಂದ ದಿನಕ್ಕೆ ಎತ್ತರೆತ್ತರಕ್ಕೆ ಬೆಳೆಯುವ ವೃಕ್ಷಗಳಂತಾಗಿ ಮಕ್ಕಳು ಬೆಳೆಯ ಬೇಕೇ ಹೊರತು, ಸದಾ ಪರಾವಲಂಬಿಗಳಾದ ಬಳ್ಳಿಗಳಂತಲ್ಲ.

ಯಾರ ಬದುಕೂ ಇಲ್ಲಿ ಶಾಶ್ವತವಲ್ಲ. ಯಾರು, ಯಾವಾಗ, ಹೇಗೆ ಕಾಲನ ಕರೆಗೆ ಓಗೊಟ್ಟು ಎದ್ದುಹೋಗುತ್ತೇವೋ ಯಾರೂ ಬಲ್ಲವರಿಲ್ಲ. ಇದರ ನಡುವೆ ತಂದೆಯಿಲ್ಲದೆ, ತಾಯಿಯಿಲ್ಲದೆ ಒಮ್ಮೊಮ್ಮೆ ಇಬ್ಬರೂ ಇಲ್ಲದೆ ಯಾರದೋ ಆಸರೆಯಲ್ಲಿ ಬೆಳೆಯುವ ಮಕ್ಕಳು ಅನೇಕ ಕಹಿ ಘಟನೆಗಳನ್ನು ಎದುರಿಸುತ್ತಾ ಬೆಳೆಯಬೇಕಾದ ಅನಿವಾರ್ಯ ಎದುರಾಗುತ್ತದೆ. ಕುಟುಂಬದ ಚೌಕಟ್ಟಿನಲ್ಲಿ ಅಪ್ಪ-ಅಮ್ಮ ಇಬ್ಬರ ಆರೈಕೆಯೊಳಗೆ ಸುರಕ್ಷಿತವಾಗಿ ಬೆಳೆದ ನಿನಗೆ ಅಪ್ಪ ಇಲ್ಲ ಅನ್ನುವುದರ ನೋವೇನು ಎಂಬುದು ಅರ್ಥವಾಗಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು ರವಿ.

ಎಲ್ಲ ಮಕ್ಕಳಂತೆ ಸಂಜೆಯಾದ ಕೂಡಲೆ ಅಪ್ಪನ ಬರುವಿಕೆಗಾಗಿ ಅರಳುಗಣ್ಣಿನಲ್ಲಿ ಕಾದುಕೂಡುವ ಸಂತೋಷ, ಸಂಭ್ರಮವೇನೆಂಬುದು ನನ್ನ ಅರಿವಿಗೇ ಬರಲಿಲ್ಲ.  I missed so much. ಆ ನೋವು ನನ್ನ ಯಾವ ಮಕ್ಕಳಿಗೂ ಬರಬಾರದು. I am a good father to all my children ಎಂದು ಹೇಳುತ್ತಿದ್ದರು. ಹೀಗಾಗಿ ಎಂದಿಗೂ ಒಂದು ಮಾತು ಮಗುವಿಗೆ ಗದರಲಿಲ್ಲ. ಬೈಯಲಿಲ್ಲ. ಇನ್ನು ಹೊಡೆದಿ ದ್ದಂತೂ ದೂರದ ಮಾತು. ನಿನ್ನ ಅಪ್ಪ ಯಾರು? ಎಂದು ಕೇಳುತ್ತ ಸಹಪಾಠಿಗಳು ಸುತ್ತುವರಿದು ಕೇಕೆ ಹಾಕುವಾಗ ಸಿಟ್ಟಿನಿಂದ ಉರಿದು ಹೋಗುತ್ತಿದ್ದೆ. ಕೆಲವೊಮ್ಮೆ ಹತಾಶನಾಗುತ್ತಿದ್ದೆ. ಆಗಲೇ ನಾನು ರೆಬೆಲ್ ಆಗಿದ್ದು. ಹಾಗೆ ಕೇಕೆ ಹಾಕುವ ಒಬ್ಬೊಬ್ಬರನ್ನೂ ಹಿಡಿದು ಬಡಿಯ ತೊಡಗಿದೆ. ಆಗ ಇವನ ಸಹವಾಸವೇ ಬೇಡಪ್ಪ ಎಂದು ಎಲ್ಲರೂ ಹೆದರಿ ಬಾಯಿಮುಚ್ಚಿಕೊಂಡಿರುತ್ತಿದ್ದರು. ಇದೆಲ್ಲ ಸಂಕಟಗಳು ಯಾವ ಕಾರಣಕ್ಕೂ ನನ್ನ ಮಗನಿಗೆ ಬರಬಾರದು. ಅವನು ರಾಜಕುಮಾರನಂತೆ ಬೆಳೆಯಬೇಕು ಎಂದು ಸದಾ ಹೇಳುತ್ತಿದ್ದರು.

ಎಲ್ಲರಿಗೂ ಒಂದೇ ತೆರನಾದ ಬದುಕು ಸಿಗುವುದಿಲ್ಲ. ಈ ಭೂಮಿಯ ಮೇಲೆ ಸೃಷ್ಟಿಯಾಗುವ ಪ್ರತಿಯೊಂದು ಜೀವಿಗೂ ಅದರದೇ ಆದ ಜೀವನ ಪದ್ಧತಿ ಇರುತ್ತದೆ. ನಂಬಿಕೆ, ಚರಣೆಗಳಿರುತ್ತದೆ. ಶ್ರಮದ ಫಲವಿರುತ್ತದೆ. ಹಕ್ಕಿಗಳು ತಮ್ಮ ಗೂಡನ್ನು ತಾವೇ ಕಟ್ಟಿಕೊಳ್ಳುತ್ತವೆ. ಮೊಟ್ಟೆಯಿಟ್ಟು, ಮರಿಮಾಡಿ ಅದರ ರೆಕ್ಕೆಯಲ್ಲಿ ಬಲ ಬರುವವರೆಗೂ ಆರೈಕೆ ಮಾಡುತ್ತದೆ. ಅಷ್ಟೆ. ಮುಂದಿನದ್ದೆಲ್ಲ ತನ್ನದೇ ಶ್ರಮದ
ಮೇಲೆ ಬೆಳೆದು ಜೀವನ ಸಾಗಿಸುತ್ತವೆ ಹಕ್ಕಿಗಳು. ಆದರೆ ನಾವು ಹಾಗಲ್ಲ. ಮಕ್ಕಳನ್ನು ಬೆಳೆಸುವುದಲ್ಲದೇ ಅವರ ಮಕ್ಕಳನ್ನೂ ಆರೈಕೆ ಮಾಡುವವರೆಗೂ ಅವರನ್ನು ಕಾಯುತ್ತಲೇ ಇರುತ್ತೇವೆ. ಅವರ ಜವಾಬ್ದಾರಿಯನ್ನು ಅವರಿಗೆ ಕಲಿಸಿಕೊಡುವುದೇ ಇಲ್ಲ. ನಮಗೆ ನಮ್ಮ ಮನೆಯನ್ನು ಕಟ್ಟಲು ಮತ್ಯಾರದ್ದೋ ಸಹಾಯ ಬೇಕು. ಚೆಂದಗೊಳಿಸಲು, ಸ್ವಚ್ಛಗೊಳಿಸಲು ಮತ್ತೊಬ್ಬರ ಸಹಾಯ ಬೇಕು.

ಕಾಲಿಗೆ ಹಾಕುವ ಚಪ್ಪಲಿಯಿಂದ ಹಿಡಿದು ನಾವು ತೊಡುವ ಬಟ್ಟೆ, ತಿನ್ನುವ ಆಹಾರ, ನೆಲೆಸುವ ಮನೆ ಪ್ರತಿಯೊಂದರ ಹಿಂದೆಯೂ ಅನೇಕ ಜೀವಿಗಳ ಶ್ರಮವಿರುತ್ತದೆ. ಅದನ್ನು ಆದರಿಸಿ, ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಕಾಲಾಯ ತಸ್ಮೈಯಿ ನಮಃ ಪ್ರತಿಯೊಬ್ಬ ರಿಗೂ ತನ್ನದೇ ಆದ ರೀತಿಯಲ್ಲಿ ಪಾಠವನ್ನು ಕಲಿಸುತ್ತದೆ ಬದುಕು. ಕಷ್ಟಗಳನ್ನು ಕೊಟ್ಟು ಎದ್ದು ನಿಲ್ಲುವಂತೆ ಮಾಡುತ್ತದೆ. ಬಸವಳಿದು
ಕುಳಿತಾಗ ಆಸರೆಯಾಗಿ ಒದಗುತ್ತದೆ. ವಿಲಾಸಕ್ಕೆ ಬಿದ್ದಾಗ ಸದ್ದಿಲ್ಲದೆ ಸರಿದು ಹೋಗುತ್ತದೆ.

ಎಂತಹ ಕಷ್ಟದ ಪರಿಸ್ಥಿತಿಗಳು ಎದುರಾದಾಗಲೂ ಎದೆಗುಂದದಂತೆ ಅದನ್ನು ಎದುರಿಸುವ ಧೈರ್ಯ ಮಕ್ಕಳಲ್ಲಿ ತುಂಬಬೇಕು. ಸಣ್ಣಪುಟ್ಟ ಅವಮಾನಗಳಿಗೆ ಹೆದರಿ ಆತ್ಮಹತ್ಯೆ ಯಂತಹ ಆಲೋಚನೆಗಳು ಅವರಿಗೆ ಬಾರದಂತೆ ಭರವಸೆ ಯ ಮಾತುಗಳನ್ನಾಡಬೇಕು. ಮನೆಯ ಸಣ್ಣಪುಟ್ಟ ಕೆಲಸಗಳಲ್ಲಿ ಅವರು ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು. ಮನೆಯ ಆಗು-ಹೋಗುಗಳ ವಿಷಯಗಳ ಬಗ್ಗೆ ಮುಕ್ತ
ವಾಗಿ ಚರ್ಚಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಹಣ ವನ್ನು ನಿಭಾಯಿಸುವ ರೀತಿಯನ್ನು ಕಲಿಸಿಕೊಡಬೇಕು.

ಅವರಿಗಿರುವ ಆಸಕ್ತಿಗಳನ್ನು ಗುರುತಿಸಿ, ಅದರೆಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಮತ್ತೊಬ್ಬರೊಡನೆ ಹೋಲಿಕೆ ಮಾಡಿ ಅವಮಾನಿಸ ಬಾರದು. ಅವರ ಮಾತುಗಳಿಗೆ ಕಿವಿಯಾಗಿ, ಭಾವನೆಗಳಿಗೆ ಸ್ಪಂದಿಸಬೇಕು. ಮಕ್ಕಳೆಂದರೆ ಹಾಗೇ… ಮುನಿಸಿಕೊಳ್ಳುತ್ತವೆ, ಜಗಳ ವಾಡುತ್ತವೆ, ಹಟ ಮಾಡುತ್ತವೆ. ಮತ್ತೆ ಎಲ್ಲ ಮರೆತು ಅಟಪಾಠಗಳಲ್ಲಿ ತೊಡಗಿಕೊಳ್ಳುತ್ತವೆ. ಆದರೆ ಸಂಕೀರ್ಣತೆಯಿರುವುದು ಬೆಳೆದ ಮನಸುಗಳಲ್ಲೇ.

ಇತ್ತೀಚಿನ ಬೆಳವಣಿಗೆಗಳನ್ನು ನೋಡಿದ ಮೇಲೆ ನಮ್ಮ ಮನೆಯೊಳಗೆ ಕಾಲಿಡುವ ಮುನ್ನ ನಿಮ್ಮ ಜಾತಿ, ಧರ್ಮಗಳನ್ನು ಹೊರಗಿಟ್ಟು ನಿಮ್ಮ ಸುಂದರ ನಗೆಯೊಂದಿಗೆ ಒಳಗೆ ಬನ್ನಿ ಅನ್ನುವ ಸಾಲುಗಳು ಬಾಗಿಲಲ್ಲೇ ಸ್ವಾಗತಿಸುವಂತೆ ಮಾಡಿದೆ. ಎಲ್ಲ ಜಾತಿಗಳಿಗೂ, ಧರ್ಮಗಳಿಗೂ ಅದರದೇ ಆದ ಪರಂಪರೆ ಇರುತ್ತದೆ. ಅದನ್ನು ಪರಸ್ಪರ ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ನೀವು ಹಾಗೆ ಮಾಡಬೇಡಿ ಎಂದು ಹೇಳಿದ ಕೂಡಲೇ ಹಾಗಾದರೆ ನೀವು ಯಾಕೆ ಹಾಗೆ ಮಾಡುತ್ತೀರಿ? ಎನ್ನುವ ವಾದ ವಾಗ್ವಾದಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆಯೇ ಹೊರತು ಯಾವುದೇ ಪರಿಹಾರ ಸಿಕ್ಕಂತಾಗುವುದಿಲ್ಲ. ಹಾಗೆಯೇ ನಾನು ಹುಟ್ಟಿದ ನೆಲ, ನನ್ನ ಭಾಷೆ, ನನ್ನ ಆಚರಣೆ, ನನ್ನ ನಾಡಿಗೆ ಮೊದಲ ಆದ್ಯತೆ. ನಂತರ ಉಳಿದದ್ದು.

ಅದು ಯಾವುದೇ ಕೆಲಸವಿರಲಿ. ಶ್ರಮದಿಂದ ತನ್ನ ದುಡಿಮೆ ಯನ್ನು ಕಾಣುವ ಪ್ರತಿಯೊಬ್ಬನಿಗೂ ಗೌರವ ಕೊಡುವುದನ್ನು ರೂಢಿಸಿ ಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿನ್ನನ್ನು ನೀನು ಈ ಜಾತಿ-ಧರ್ಮಗಳ ಸೀಮಿತ ಪರಿಧಿಯೊಳಗೆ ಬಂಧಿಸಿಕೊಳ್ಳಬೇಡ ಯಾವತ್ತಿಗೂ ಅದು ನಿನ್ನನ್ನು ಬೆಳೆಯಗೊಡುವುದಿಲ್ಲ. ಹಸಿದು ಬಂದವನಿಗೆ ಅನ್ನವಿಡು. ಬಳಲಿದವನಿಗೆ ಆರೈಕೆ ಮಾಡು. ಆದರೆ ಅದನ್ನು ಬಳಸಿಕೊಂಡು ಸೋಮಾರಿಯಾಗಲು ಅವಕಾಶ ಮಾಡಿಕೊಡದೆ, ದುಡಿಯುವುದನ್ನು ಕಲಿಸು. ಪ್ರೌಢಾವಸ್ಥೆಗೆ ಬಂದ ಪ್ರತಿಯೊಬ್ಬರೂ ತನ್ನ ಅನ್ನವನ್ನು ತಾನೇ ದುಡಿದು ತಿನ್ನುವಂತಾದ ದಿನ ಈ ದೇಶ ಸಮೃದ್ಧಿಯಿಂದ ತುಂಬಿರುತ್ತದೆ….ಎಂದು ಮಗನಿಗೆ ಹೇಳಬೇಕೆಂದುಕೊಂಡೆ. ಆದರೆ ಇದೆಲ್ಲ ಹೇಳಿದಷ್ಟು ಸುಲಭವೇ? ಎಲ್ಲರೂ ಒಂದಲ್ಲ ಒಂದು ಒಳಸುಳಿಗೆ ಕಟ್ಟುಬಿದ್ದವರೇ… ಅದರಿಂದ ಬೇಕೆಂದರೂ ಬಿಡಿಸಿಕೊಳ್ಳುವುದು ಕಷ್ಟ.

ಹೀಗಾಗಿ ತನಗೆ ಬೇಕಾದ ದಾರಿಯನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವನಿಗೆ ಕೊಟ್ಟು ನನ್ನ ಹಾದಿಯಲ್ಲಿ ನಾನು ನಡೆದರೆ ಸಾಕೆನ್ನಿಸಿತು. ಮತ್ತೊಬ್ಬರನ್ನು ಬದಲಿಸುವ ಮೊದಲು ನಾವು ಬದಲಾಗುವುದೇ ಎಲ್ಲ ಸಮಸ್ಯೆಗಳಿಗೂ ಪರಿಹಾರ.