Wednesday, 11th December 2024

ಮಗು ಮೃತಪಟ್ಟಿದೆ ಎಂದು ಸುಳ್ಳು ಹೇಳಿಕೆ: ಪ್ರಕರಣ ದಾಖಲು

ಹರಪನಹಳ್ಳಿ: ಮಗು ಮೃತಪಟ್ಟಿದೆ ಎಂದು ತಾಯಿಗೆ ಸುಳ್ಳು ಹೇಳಿ ಶಿಶುವನ್ನು ಅಪಹರಣ ಮಾಡಿದ ತಾಲೂಕಿನ ಒಬ್ಬ ಸ್ವಾಮೀಜಿ ಸೇರಿದಂತೆ ಮೂವರ ವಿರುದ್ದ ಹರಪನಹಳ್ಳಿ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಮೂಲದ ವಸಂತ ಎಂಬ ಮಹಿಳೆ ಬೆಂಗಳೂರಿನ ಪಿಜೆಯಲ್ಲಿ ಕೆಲಸ ನಿರ್ವಹಿಸುತ್ತಲಿದ್ದು, ಆಕೆ ಗರ್ಭಿಣಿ ಯಾಗಿ, ಕೌಟಂಭಿಕ ಸಮಸ್ಯೆ ಎದುರಿಸು ತ್ತಿರುವಾಗ ಪರಿಚಯಸ್ತರ ಮೂಲಕ ಮೋಸದಿಂದ ಮಗುವನ್ನು ಪಡೆ ಯುವ ಉದ್ದೇಶದಿಂದ ಆಶ್ರಯ ನೀಡುವ ಭರವಸೆ ಇತ್ತು ಕರೆಸಿದ ಹರಪನಹಳ್ಳಿ ತಾಲೂಕಿನ ಹಾಲಸ್ವಾಮಿ ಮಠದ ಹಾಲಸ್ವಾಮಿಯವರು ಮಠದಲ್ಲಿ ಕೆಲವು ತಿಂಗಳು ಗರ್ಭಿಣಿಯನ್ನು ಆರೈಕೆ ಮಾಡಿದ್ದಾರೆ.

ಹರಪನಹಳ್ಳಿ ಪಟ್ಟಣದ ಖಾಸಗಿ ಹೆರಿಗೆ ಆಸ್ಪತ್ರೆಗೆ ಗರ್ಭಿಣಿ ವಸಂತಳನ್ನು ದಾಖಲಿಸಿದ್ದಾರೆ. ಡಿ.೩೧ರಂದು ಮಗು ಜನನವಾಗಿದೆ.೦೩.೦೧.೨೦೨೨ ರಂದು ಮಗು ಮೃತಪಟ್ಟಿದೆ ಎಂದು ಮಗುವಿನ ತಾಯಿಗೆ ಸುಳ್ಳು ಹೇಳಿ ಬೆಂಗಳೂರಿಗೆ ಕಳುಹಿಸಿದ್ದಾರೆ. ನಂತರ ಆ ಮಗುವನ್ನು ತಾಲೂಕಿನ ಕಂಚಿಕೇರಿ ಗ್ರಾಮದ ಮಕ್ಕಳಿಲ್ಲದ ಗುರುರಾಜ ಹಾಗೂ ಪ್ರಿಯಾಂಕ ದಂಪತಿಗೆ ಹಸ್ತಾಂತರ ಮಾಡಲಾಗಿದೆ.

ಈಚೆಗೆ ಮಗುವಿಗೆ ಆನಾರೋಗ್ಯ ವೆಂದು ದಾವಣಗೆರೆ ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮಗು ಹೆರಿಗೆ ಆದಾಗ ಚಿಕಿತ್ಸೆ ನೀಡಿದ ವೈದ್ಯರ ವರದಿ ಕೋರಿದಾಗ ಮಗುವನ್ನು ಪಡೆದವರು ತಬ್ಬಿಬ್ಬಾಗಿ ಅಸ್ಪಷ್ಟ ಉತ್ತರ ನೀಡಿದ್ದಾರೆ. ಆಗ ಅಲ್ಲಿಯ ವೈದ್ಯರಿಗೆ ಅನುಮಾನ ಬಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರಿಗೆ ಮಾಹಿತಿ ನೀಡಿದಾಗ ಹಿಂದಿನ ವಿಚಾರ ಬಹಿರಂಗಗೊಂಡಿದೆ. ಆಗ ಆರೋಪಿತರು ಬೆಂಗಳೂರಿನಿಂದ ನಿಜವಾದ ಮಗುವಿನ ತಾಯಿ ವಸಂತಳನ್ನು ಕರೆಯಿಸಿ ನೀನು ಒಪ್ಪಿಕೊಂಡರೆ ನೀನೆ ಜೈಲಿಗೆ ಹೋಗುತ್ತೀಯ ಎಂದು ಬೆದರಿಸಿರುತ್ತಾರೆ.

ದಾವಣಗೆರೆ ಜಿಲ್ಲಾ ರಕ್ಷಣಾ ಘಟಕದ ಅಸಾಂಸ್ಥಿಕ ಮಕ್ಕಳ ರಕ್ಷಣಾಧಿಕಾರಿ ಎನ್ .ಕೆ.ಚಂದ್ರಶೇಖರ ಅವರ ದೂರಿನ ಮೇರೇಗೆ ಹರಪನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಿಚ್ಚವನಹಳ್ಳಿ ಹಾಲಸ್ವಾಮಿ ಮಠದ ಹಾಲಸ್ವಾಮಿ, ಕಂಚಿಕೇರಿ ಗ್ರಾಮದ ಗುರುರಾಜ ಹಾಗೂ ಪ್ರಿಯಾಂಕ ದಂಪತಿ ಈ ಮೂವರ ಮೇಲೆ ಅಪಹರಣ ಸೇರಿದಂತೆ ಇತರೆ ಪ್ರಕರಣಗಳನ್ನು ಪಿಎಸ್ ಐ ಸಿ.ಪ್ರಕಾಶ ಅವರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.