ಶಾರದಾ ಕೌದಿ
ಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡಿ ಆ ದೇವನ ಕೃಪೆಗೆಪಾತ್ರರಾಗಲು ಸಾಧ್ಯ ಎಂಬ ಪರಿಕಲ್ಪನೆಯು ನಿಜಕ್ಕೂ ಅನನ್ಯ!
ನಮ್ಮ ನಾಡಿನ ಹಬ್ಬಗಳಲ್ಲಿ ಶಿವರಾತ್ರಿಗೆ ವಿಶೇಷ ಸ್ಥಾನ. ನಮ್ಮ ಹೆಚ್ಚಿನ ಹಬ್ಬಗಳನ್ನು ಹಗಲಿನಲ್ಲಿ ಆಚರಿಸಿದರೆ, ಈ ಹಬ್ಬವನ್ನು ‘ಜಾಗರಣೆ’ಯ
ಮೂಲಕ ರಾತ್ರಿ ಇಡೀ ಆಚರಿಸು ತ್ತೇವೆ. ರಾತ್ರಿ ನಿದ್ರೆ ಬಿಟ್ಟು, ಭಗವಂತನ ಧ್ಯಾನ ಮಾಡುವುದರಲ್ಲೇ ಶಿವರಾತ್ರಿಯ ಶ್ರೇಷ್ಠತೆ. ಮಾಘಮಾಸ ಕೃಷ್ಣಪಕ್ಷದ
ಚೌತಿಯಂದು ಬರುವ ಶಿವರಾತ್ರಿ ಮಹತ್ತರ ಹಬ್ಬ. ಭೂಲೋಕದಲ್ಲಿ ತುಂಬಿರುವ ಅಜ್ಞಾನವನ್ನು ಓಡಿಸಿ ಸುಜ್ಞಾನದ ಬೆಳಕನ್ನು ನೀಡಲು ಮನುಷ್ಯನ ಪಾಪ ಕರ್ಮಗಳನ್ನು ತೊಳೆಯಲು ಪರಮಾತ್ಮನು ಭೂಲೋಕಕ್ಕೆ ಬರುವ ದಿನವೆ ಶಿವರಾತ್ರಿ.
ಶಿವನನ್ನು ಶಂಕರ, ಜಗದೀಶ, ಈಶ್ವರ, ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಶಿವತತ್ವವೆ ಕಾರಣ. ಬ್ರಹ್ಮ ಸೃಷ್ಟಿಕರ್ತ, ವಿಷ್ಣು ಸ್ಥಿತಿಕರ್ತನಾದರೆ ಶಿವ ಲಯಕರ್ತ. ಪುರಾಣದ ಪ್ರಕಾರ ದೇವ-ದಾನವರಿಗೆ ನಡೆದ ಯುದ್ಧದಲ್ಲಿ ಸಮುದ್ರ ಮಥನದ ಸಮಯದಲ್ಲಿ ಬಂದ ಹಾಲಾಹಲವನ್ನು ಸೇವಿಸಿ ಶಿವನು ವಿಷಕಂಠನಾದ ದಿನವನ್ನುಶಿವರಾತ್ರಿ ಎಂದು ಆಚರಿಸಲಾಗುವದು. ಬೇಡರ ಕಣ್ಣಪ್ಪನಿಗೆ ಶಿವ ಪ್ರತ್ಯಕ್ಷನಾದ ದಿನವೂ ಶಿವರಾತ್ರಿ ಎಂದೇ ತಿಳಿಯಲಗಿದೆ.
ನಿರಾಕಾರ
ಸತ್ ಚಿತ್ ಆನಂದ ಸ್ವರೂಪನು ನಿತ್ಯಪರಿಪೂರ್ಣನು ಆಗಿರುವ ಪರಮಾತ್ಮನಿಗೆ ಯಾವುದೇ ಅಹಂಕಾರವಿಲ್ಲದ್ದ ರಿಂದ ಅವನು ನಿರಾಕಾರ. ಯಾವುದೇ ಗುಣಗಳು ಇಲ್ಲದುದರಿಂದ ಅವನು ನಿರ್ಗುಣ, ಕಣ್ಣಿಗೆ ಕಾಣಲಾರ ಮನಸ್ಸಿಗೆ ನಿಲುಕಲಾರ. ಅಂತೆಯೇ ಅವನು ಅಗೋಚರ ಅವ್ಯಕ್ತ. ಹೀಗೆ ಅವ್ಯಕ್ತ ವಾಗಿರುವ ಪರಮಾತ್ಮ ವಿಶ್ವವನ್ನು ವ್ಯಾಪಿಸಿಕೊಂಡಿದ್ದರು ವಿಶ್ವಾತೀತನಾಗಿದ್ದಾನೆ ವಿಶ್ವವನ್ನು ಸೃಷ್ಟಿಸುವ ರಕ್ಷಿಸುವ ಹಾಗು ಸಂಹರಿಸುವ ಶಕ್ತಿ ಪರಮಾತ್ಮನಿಗಿದೆ. ಅಂತೆಯೆ ಪರಮಾತ್ಮ ಜಗವಾಗಬಲ್ಲ, ಜಗವಾಗದಿರಲು ಬಲ್ಲ.
ಶಿವನನ್ನು ಜಲದಿಂದ, ಕ್ಷೀರದಿಂದ, ಅಮೃತದಿಂದ, ಎಳನೀರು ಕಬ್ಬಿನ ಹಾಲಿನಿಂದ ಅಭಿಷೇಕ ಮಾಡುವರು. ಶಿವನಿಗೆ ಬಿಲ್ವಪತ್ರೆ ತುಂಬಾ ಇಷ್ಟ.
ಈಶ್ವರ ನಿಗೆ ತ್ರಿದಳ ಸಮರ್ಪಿಸುವ ಮಾತ್ರದಿಂದಲೇ, ಸಕಲ ಪಾಪ ಪರಿಹಾರವೆಂದು ಹೇಳುವರು.
ತ್ರಿದಳಂ ತ್ರಿಗುಣಾಕಾರಂ
ತ್ರಿನೇತ್ರಂಚ ತ್ರಿಯಾಯುಧಂ
ತ್ರಿಜನ್ಮಪಾಪ ಸಂಹಾರಂ
ಏಕಬಿಲ್ವ ಶಿವಾರ್ಪಣಂ!
ಎಕ್ಕೆ ಹೂ, ತುಂಬಿ ಹೂ ಶಿವನಿಗೆ ವಿಶೇಷ. ಹೂ ಉತ್ತರಾಣಿ ಕಡ್ಡಿಯ ತುಪ್ಪದ ದೀಪ ಬೆಳಗುವರು. ವಿವಿಧ ಹಣ್ಣುಗಳ ನೈವೇದ್ಯ ಮಾಡುವರು. ಭಕ್ತಿಯಿಂದ ಪೂಜೆ ಸಲ್ಲಿಸಿ, ಓಂಕಾರ ಜಪಿಸಿದರೆ ಶಿವನು ಸಂಪ್ರೀತನಾಗಿ ಒಲಿವನು. ಗಂಟೆ, ಡಮರು, ಜಾಗಟೆ, ಶಂಖಾನಾದಗಳ ಶಬ್ಧಕ್ಕೆ ರೋಗ ರುಜಿನ, ಬಡತನ ದೂರಾಗುವವು ಎಂಬುದು ಭಕ್ತರ ನಂಬಿಕೆ. ಆ ದಿವ್ಯಾನುಭವದ ಸ್ಪಷ್ಟ ಅನುಭೂತಿಗೆ ದೃಢ ಭಕ್ತಿ ಶ್ರದ್ಧೆ ಏಕಾಗ್ರತೆ ಬೇಕೆಬೇಕು.
ಓಂ ನಮಃ ಶಿವಾಯ ಎಂಬ ಷಡಕ್ಷರ ಮಂತ್ರ ಶಿವರಾತ್ರಿಯಂದು ಸಾವಿರಪಟ್ಟು ಶಕ್ತಿಯುತವಾಗಿರುತ್ತದೆ ಎಂಬುದು ಮತ್ತೊಂದು ನಂಬಿಕೆ. ಶಿವನು ಅವ್ಯಕ್ತ ಜ್ಯೋತಿ ಸ್ವರೂಪನು. ಜ್ಯೋತಿ+ಲಿಂಗವು ಜ್ಯೋತಿ ರ್ಲಿಂಗಗಳ ಸಮುಚ್ಛಯ ಅಂದರೆ ಬೆಳಕು. ಲಿಂಗರೂಪದಲ್ಲಿರುವ ಜ್ಯೋತಿರ್ಮಯ ಶಿವನೇ ಜ್ಯೋತಿರ್ಲಿಂಗ.
ರಾತ್ರಿ ಜಾಗರಣೆ, ಶಿವ ನಾಮ ಸ್ಮರಣೆ, ಭಜನೆ, ಉಪವಾಸ ನಡೆಸಿದ ನಂತರ, ಮಾರನೆಯ ದಿನ ಶಿವರಾತ್ರಿ ಅಮವಾಸ್ಯೆ. ಅಂದು ಶಿವನಿಗೆ ಗೋಧಿಹುಗ್ಗಿಯ ವಿಶೇಷ ನೈವೇದ್ಯ ಹೀಗೆ ಅನೇಕ ರೀತಿಯಲ್ಲಿ ಭಕ್ತಿ ಅರ್ಪಿಸುವರು. ಹಾಲಾಹಲವನ್ನು ಕುಡಿದು ಸಮಚಿತ್ತ ಕಾಪಾಡಿಕೊಂಡ ಶಿವನು ಒಂದು ಸಂದೇಶ ನೀಡುತ್ತಾನೆ. ಜೀವನದಲ್ಲಿ ಬರುವ ಕಷ್ಟಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂಬ ಆ ಸಂದೇಶವು ಎಲ್ಲರೂ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ.
ಶಿವನ ಹಲವು ಸ್ವರೂಪಗಳಲ್ಲಿ ನಟರಾಜನ ತಾಂಡವ ನೃತ್ಯ ವಿಶ್ವ ಪ್ರಸಿದ್ಧಿ ಪಡೆದಿದೆ. ಅಜ್ಞಾನವನ್ನು ಪ್ರತಿನಿಧಿಸುವ ಅಪಸ್ಮಾರ ಎಂಬ ಕುಬ್ಜನನ್ನು ನೃತ್ಯದ ಸಮಯದಲ್ಲಿ ಶಿವನು ತುಳಿಯುವ ರೂಪಕ ನಾನಾ ಅರ್ಥ ಪಡೆದಿದೆ.
ಹನ್ನೆರಡು ಜ್ಯೋತಿರ್ಲಿಂಗಗಳು
೧. ಸೋಮನಾಥ, ಗುಜರಾತ್
೨. ಮಲ್ಲಿಕಾರ್ಜುನ, ಶ್ರೀಶೈಲ, ಆಂಧ್ರಪ್ರದೇಶ
೩. ಮಹಾಕಾಲೇಶ್ವರ, ಉಜ್ಜಯಿನಿ, ಮಧ್ಯಪ್ರದೇಶ
೪. ಓಂಕಾರೇಶ್ವರ, ನರ್ಮದಾ ನದಿ ದ್ವೀಪ, ಮಪ್ರ
೫. ಕೇದಾರನಾಥ, ಹಿಮಾಲಯ
೬. ಭೀಮಶಂಕರ, ಪೂನಾ
೭. ಕಾಶಿ ವಿಶ್ವನಾಥ, ಉತ್ತರ ಪ್ರದೇಶ
೮. ತ್ರಯಂಬಕೇಶ್ವರ, ನಾಸಿಕ್, ಮಹಾರಾಷ್ಟ್ರ
೯. ನಾಗೇಶ್ವರ, ದ್ವಾರಕಾ, ಗುಜರಾತ್
೧೦. ವೈದ್ಯನಾಥ, ಮಹಾರಾಷ್ಟ್ರ
೧೧.ರಾಮೇಶ್ವರ, ತಮಿಳುನಾಡು
೧೨. ಗೃಷ್ಣೇಶ್ವರ, ಔರಂಗಾಬಾದ್, ಮಹಾರಾಷ್ಟ್ರ
ಶಿವರಾತ್ರಿಯಂದು ಈ ಪ್ರದೇಶಗಳಲ್ಲಿ ಹಲವು ಶಿವ ದೇವಾಲಯಗಳಲ್ಲಿ ಬಹಳಷ್ಟು ಜನ ಸೇರುತ್ತಾರೆ.