ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ರಷ್ಯಾ ಜಗತ್ತಿನ ಅತೀ ದೊಡ್ಡ ದೇಶ. ಉಕ್ರೇನ್ ಮೇಲಿನ ಸಮರಕ್ಕೆ ಪುಟಿನ್ ಹಲವು ಕಾರಣಗಳನ್ನು ನೀಡಿದ್ದಾರೆ. ಮುಖ್ಯವಾದುದು ಉಕ್ರೇನ್ ನ್ಯಾಟೋ ಸದಸ್ಯತ್ವಕ್ಕೆ ಮುಂದಾಗಿರುವುದು, ರಷ್ಯನ್ ಭಾಷೆಯನ್ನು ಉಕ್ರೇನ್‌ನಲ್ಲಿ ಅಧಿಕೃತ ಭಾಷೆಯ ಸ್ಥಾನಮಾನದಿಂದ ತೆಗೆದುಹಾಕಿರುವುದು ಮತ್ತು ವಾರ್ಸಾ ಒಪ್ಪಂದದಂತೆ ಉಕ್ರೇನ್ ನಡೆದುಕೊಳ್ಳದೆ ಇರುವುದು- ಇವು ಕಾರಣಗಳಾಗಿರಬಹುದು.
ಇನ್ನೂ ಹಲವಾರು ಕಾರಣಗಳನ್ನು ಕೊಡಬಹುದು. ಆದರೆ ಪ್ರಮುಖ ಕಾರಣ ಪುಟಿನ್‌ಗೆ ಜಗತ್ತಿನಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯಬೇಕು, ಸಂಪದ್ಭರಿತ ಉಕ್ರೇನನ್ನು ತನ್ನ ದೇಶದ ಭಾಗವಾಗಿರಿಸಿಕೊಳ್ಳಬೇಕೆಂಬುದು ಮತ್ತು ಆತನ ಸ್ವಾರ್ಥ ಮತ್ತು ಅಹಂಕಾರಗಳೇ ನಿಜವಾದ ಕಾರಣ. ಯುದ್ಧ ಪರಿಹಾರವಲ್ಲವೆಂಬ ಪಾಠವನ್ನು ಇತಿಹಾಸ ಕಲಿಸಿದೆ. ಆದರೆ ಅಮಾಯಕರು ಪ್ರಾಣ ತೆತ್ತಿರುತ್ತಾರೆ. ಸಾವಿರಾರು ರಾಜ ಮಹಾರಾಜರುಗಳ ಸ್ವಾರ್ಥದ, ದುರಾಸೆಯ, ದುರಂತವು ಕಣ್ಣ ಮುಂದಿದೆ. ಅವರ‍್ಯಾರೂ ಉಳಿದಿಲ್ಲ.
ಅವರೆಲ್ಲರೂ ಇತಿಹಾಸದ ಪುಟಗಳಲ್ಲಿ ಖಳನಾಯಕರಾಗಿ ಉಳಿದಿದ್ದಾರೆ. ಅಹಂಕಾರ, ದುರಾಸೆ ಯಾರಿಗೂ ಯಾವತ್ತೂ ಒಳ್ಳೇಯದಲ್ಲ. ಅಮೆರಿಕದ ಅಧ್ಯಕ್ಷರಾಗಿದ್ದ ಹ್ಯಾರಿ ಎಸ್ ಟ್ರೂಮನ್ ಇದರ ಬಗ್ಗೆ “Selfish-ness and greed, individual or national, is a cause for most of our troubles”. ಎಲ್ಲವೂ ತನಗಾಗಬೇಕು, ತನ್ನ ಮಕ್ಕಳಿ ಗಾಗಬೇಕು ಎಂಬ ಸ್ವಾರ್ಥದ ಗೊಂಚಲಾಗಿದ್ದ ಧೃತ ರಾಷ್ಟ್ರ ತನ್ನೆಲ್ಲ ಮಕ್ಕಳ ಅಂತ್ಯಕ್ಕೆ ಕಾರಣ ನಾದ. ಅಲೆಕ್ಸಾಂಡರ್ ಜಗತ್ತನ್ನೇ ಗೆಲ್ಲಬೇಕೆಂದು ನೂರಾರು ಯುದ್ಧಮಾಡಿ ಲಕ್ಷಾಂತರ ಜನರ ಸಾವಿಗೆ ಕಾರಣನಾಗಿ ತನ್ನ ೩೨ನೆಯ ವಯಸ್ಸಿಗೇ ಸಾವನ್ನಪ್ಪಬೇಕಾ ಯಿತು. ರಷ್ಯಾ-ಉಕ್ರೇನ್ ಯುದ್ಧ ನಾಲ್ಕನೆಯ ವಾರಕ್ಕೆ ಕಾಲಿಟ್ಟಿದೆ. ಕೇವಲ ಮೂರೇ ದಿನಗಳಲ್ಲಿ ಉಕ್ರೇನ್ ಮಂಡಿ ಯೂರಿ ತನ್ನೆದುರು ಪ್ರಾಣ ಭಿಕ್ಷೆ ಬೇಡಲಿದೆ ಎಂದು ಊಹಿಸಿದ್ದ ಪುಟಿನ್‌ಗೆ ಕೀವ್ ಸೇರಿ ಪ್ರಮುಖ ಪಟ್ಟಣಗಳನ್ನೇ ವಶಕ್ಕೆ ಪಡೆ ಯಲು ಆಗುತ್ತಿಲ್ಲ.
ಉಕ್ರೇನ್ ಯುರೋಪ್ ಖಂಡದಲ್ಲಿ ರಷ್ಯಾದ ನಂತರ ಎರಡನೆಯ ಅತಿದೊಡ್ಡ ದೇಶ. ಇದು ಕೇವಲ 6 ಲಕ್ಷ ಚ.ಕಿ. ಮೀ. ಭೂಪ್ರದೇಶವನ್ನು ಹೊಂದಿದೆ. ಕಲ್ಲಿದ್ದಲು, ಕಬ್ಣಿಣದ ಅದಿರು ಮುಂತಾದ ಖನಿಜಗಳಿಂದ ಸಮೃದ್ಧವಾದ ದೇಶ. ಜಗತ್ತಿನ ಶೇ. 20 ರಷ್ಟು ಕಬ್ಬಿಣದ ಅದಿರು ದೊರಕುತ್ತದೆ. ಸೂರ್ಯಕಾಂತಿ ಉತ್ಪಾದನೆಯಲ್ಲಿ ಜಗತ್ತಿಗೆ ಮೊದಲನೆಯ ಸ್ಥಾನ. ಜೋಳ, ಗೋಧಿ, ಸಾಸಿವೆ, ಬಾರ್ಲಿ, ಸೋಯಾಬಿನ್ ಉತ್ಪಾದನೆಯಲ್ಲಿ ಜಗತ್ತಿನ 10 ಪ್ರಮುಖ ರಾಷ್ಟ್ರಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.
1991ರ ವರೆಗೆ ಉಕ್ರೇನ್ ಯುಎಸ್‌ಎಸ್‌ಆರ್‌ನ ಭಾಗವೇ ಆಗಿತ್ತು. ಒಂದು ಕಾಲದಲ್ಲಿ ಅಮೆರಿಕಕ್ಕೆ ಎಲ್ಲ ಸ್ಥರಗಳಲ್ಲಿ ಪೈಪೋಟಿ ನೀಡುತ್ತಿದ್ದ ಸೋವಿಯತ್ ರಷ್ಯಾ ತನ್ನ ತಪ್ಪು ಆರ್ಥಿಕ ನೀತಿಗಳಿಂದಾಗಿ ದಿವಾಳಿಯಾಗಿ, ಹೋಳಾಗಿ 15 ಸ್ವತಂತ್ರ ದೇಶಗಳಾದವು. ತನ್ನ ಸಂಪತ್ತನ್ನು ದೋಚಲು ರಷ್ಯಾ ತನ್ನ ಮೇಲೆ ಒಂದಲ್ಲ ಒಂದು ದಿನ ಎರಗಬಹುದೆಂಬ ಆತಂಕ ಉಕ್ರೇನ್‌ಗೆ ತಿಳಿದಿತ್ತು. ಇದೇ ಕಾರಣಕ್ಕಾಗಿ ಉಕ್ರೇನ್ ನ್ಯಾಟೋ ಸದಸ್ಯತ್ವಕ್ಕೆ ಮುಂದಾಗಿದ್ದು. ಉಕ್ರೇನ್ ನ್ಯಾಟೋ ಸೇರಿದರೆ ತನಗೆ ಅಮೆರಿಕ ನೇತೃತ್ವದ ನ್ಯಾಟೋವೇ ಎದುರಾಳಿಯಾದಂತೆ ಎಂಬುದೇ ಯುದ್ಧ ಘೋಷಣೆಯ ಪ್ರಮುಖ ಕಾರಣ.
ಉಕ್ರೇನ್ ಉಳಿಯದಿದ್ದರೆ ವಿಶ್ವಶಾಂತಿ ಉಳಿಯುವುದೇ? ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಯ ಕುರಿತು ಇದುವರೆಗೆ ನಡೆದ ನಾಲ್ಕು ಸುತ್ತಿನ ಮಾತುಕತೆಗಳು ಫಲ ನೀಡಿಲ್ಲ. ಇದೀಗ ಉಕ್ರೇನ್ ಅನ್ನು ಸುಲಭವಾಗಿ ಮಣಿಸಲಾಗದು ಎಂಬ ಸತ್ಯವೂ ರಷ್ಯಾಕ್ಕೆ ಅರ್ಥವಾಗಿದೆ. ಉಕ್ರೇನ್ ನೇರವಾಗಿ ರಷ್ಯಾ ಜತೆ ಯುದ್ಧಕ್ಕೆ ನಿಂತಿದೆ. ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರದ ಮೇಲೆ ಅತಿಕ್ರಮಣ ಮತ್ತು ಅಪ್ರಚೋದಿತ ದಾಳಿಯನ್ನು ಜಗತ್ತು ಕಣ್ಣಾರೆ ಕಾಣುತ್ತಿದೆ. ರಷ್ಯಾದ ಆಕ್ರೋಶಭರಿತ ನಡೆಯನ್ನು ಖಂಡಿಸುತ್ತಿವೆಯಾದರೂ ಕಟ್ಟುನಿಟ್ಟಿನ ನಿರ್ಣಯವನ್ನು
ಕೈಗೊಂಡು ಅಂಕುಶ ಹಾಕುವಲ್ಲಿ ಎಲ್ಲರೂ -ಲರಾಗಿದ್ದಾರೆ. ಬರೇ ಬಾಯಿ ಮಾತಿನ ಖಂಡನೆಯಾಗಿ ಉಳಿದಿವೆ.
ಐರೋಪ್ಯ ರಾಷ್ಟ್ರಗಳು ಕೈಬಿಟ್ಟರೆ ಉಕ್ರೇನ್ ಏಕಾಂಗಿಯಾಗಲಿದೆ ಎಂಬ ವೊಲೋಡಿಮಿರ್ ಝೆಲೆನ್‌ಸ್ಕಿಯವರು ಸಹಾಯ ಹಸ್ತಕ್ಕಾಗಿ
ಮಾಡುತ್ತಿರುವ ಮನವಿ ಈಡೇರುತ್ತಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ನ್ಯಾಟೋ ಒಕ್ಕೂಟಕ್ಕೆ ಸೇರುವುದಿಲ್ಲವೆಂದು ಝೆಲೆನ್‌ಸ್ಕಿ ಪುನರುಚ್ಚರಿಸಿ ದರೂ ರಷ್ಯಾ, ಯುದ್ಧ ಮುಂದುವರಿಸುತ್ತಿರುವುದು ಖೇದದ ಸಂಗತಿ. ಯಾವ ಮಾತುಕತೆಗಳೇ ಇರಲಿ ಫಲಿತಾಂಶ ಸ್ವತಂತ್ರ ಉಕ್ರೇನ್ ಮಾದರಿಯಾಗಿರಬೇಕು, ನಮಗೆ ಅಂತಾರಾಷ್ಟ್ರೀಯ ಸಮುದಾಯಗಳಿಂದ ಭದ್ರತೆಯ ಭರವಸೆ ಬೇಕು, ಕಾನೂನಾತ್ಮಕ ಶಾಂತಿ ಸ್ಥಾಪನೆಯ ಒಪ್ಪಂದಗಳು ನಮ್ಮ ಆದ್ಯತೆ ಎಂಬ ಉಕ್ರೇನ್ ಅಧ್ಯಕ್ಷರ ಮಾತು ಸರ್ವಸಮ್ಮತವೇ ಆಗಿದೆ.
ತೀವ್ರ ಸಂಕಷ್ಟದಲ್ಲಿಯೂ ಸ್ವಾಭಿಮಾನ ಮೆರೆದಿದ್ದಾರೆ. ಅಂತಾರಾಷ್ಟ್ರೀಯ, ನ್ಯಾಯಾಲಯವೂ ರಷ್ಯಾ ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸಬೇಕು ಎಂಬ ತೀರ್ಪು ನೀಡಿದೆ. ಈ ತೀರ್ಪಿನ ಮುಂದೆ ತೀರ್ಪಿಲ್ಲ ಆದರೂ ರಷ್ಯಾ ಕಡೆಗಣಿಸಿದೆ. ಜರ್ಮನಿಯ ಸರ್ವಾಧಿಕಾರಿ ಅಡಾಲ್ ಹಿಟ್ಲರ್ ಬಳಿಕ ಇದೇ ಮೊದಲ ಬಾರಿಗೆ ಕೀವ್ ಹಾಗೂ ಕಾರ್ಕಿವ್ ನಗರಗಳ ಮೇಲೆ ರಷ್ಯಾ ಇಷ್ಟೊಂದು ಪ್ರಮಾಣದಲ್ಲಿ ಬಾಂಬ್ ದಾಳಿ ಮಾಡಿದೆ.
1941ರಲ್ಲಿ ಕೀವ್ ಹಾಗೂ ಕಾರ್ಕಿವ್ ಮೇಲೆ ಹಿಟ್ಲರ್ ಪಡೆಗಳು ನುಗ್ಗಿ ಸುಮಾರು ಮೂವತ್ತು ಸಾವಿರ ಯಹೂದಿಗಳನ್ನು ಹತ್ಯೆ ಮಾಡಿ ದ್ದವು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಉಕ್ರೇನ್ ವಿದೇಶಾಂಗ ಕಾರ್ಯಾಲಯ ‘ಆಗಲೂ ದುಷ್ಟಶಕ್ತಿಗಳ ವಿರುದ್ಧ ಗೆಲುವು ಸಾಧಿಸಿದ್ದೆವು ಈಗಲೂ ನಮ್ಮದೇ ಜಯ’ ಎಂದು ಆತ್ಮಶ್ವಾಸ ವ್ಯಕ್ತ ಪಡಿಸಿದೆ. ಅಮೆರಿಕ ಸೆನೆಟ್ ಪುಟಿನ್‌ರನ್ನು ಯುದ್ಧಾಪರಾಧಿಯೆಂದು ಪರಿಗಣಿಸಿ ತನಿಖೆಗೆ ಒಳಪಡಿಸಬೇಕೆಂದು ಒಮ್ಮತದಿಂದ ಅನುಮೋದಿಸಿದೆ. ಆದರೆ ಎಲ್ಲ ಸ್ಥರಗಳಲ್ಲಿ ಎರಡು ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆ ಬಹುತೇಕ ಮುರಿದು ಬಿದ್ದಿರುವುದರಿಂದ ಸಂಘರ್ಷ ತೀವ್ರವಾಗುವ ಸನ್ನಿವೇಶ ನಿರ್ಮಾಣವಾಗಿದೆ.
ವಿಶ್ವದಾದ್ಯಂತ ಯಾವುದೇ ರಾಷ್ಟ್ರದ ಎಷ್ಟೇ ಪ್ರಭಾ ನಾಯಕಾರದರೂ ತಿಳಿದುಕೊಳ್ಳಬೇಕಾದ ವಿಚಾರವೆಂದರೆ The world can produce hundreds and thousands of Hitlers but not one Gandhi ಸತ್ಯ-ಅಹಿಂಸೆಯನ್ನು ಪ್ರತಿಪಾದಿಸಿದ ಪಾಲಿಸಿದ ಗಾಂಧೀಜಿಯವರ ಅಂತ್ಯ ಸಂಸ್ಕಾರದಂದು ವಿಶ್ವಸಂಸ್ಥೆಯ ೫೫ ರಾಷ್ಟ್ರಗಳ ಧ್ವಜಗಳು ಅರ್ಧಮಟ್ಟದಲ್ಲಿ ಹಾರಿದವು. ಸತ್ಯ, ಅಹಿಂಸೆಗೆ ಇರುವ ಶಕ್ತಿ ಯಾವ ಯುದ್ಧಾಸಕ್ಕೂ ಇಲ್ಲ. Power flows from the barrel of gun ಎಂದಿದ್ದ ಹಿಟ್ಲರ್ ತನ್ನ ನಾಶಕ್ಕೆ ತಾನೇ ಕಾರಣನಾದ. ಅಲ್ಲವೇನು? ಇದು ಇತಿಹಾಸ.