ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ಈ ಮಾತಿನ ಧ್ವನಿಯನ್ನು ಮತ್ತಷ್ಟು ಸೂಕ್ಷ್ಮವಾಗಿಸಿಕೊಳ್ಳಬೇಕು. ಜಾತಿ-ಧರ್ಮ-ಮತ-ಪಂಥ ಇವುಗಳೆಲ್ಲವನ್ನೂ ಮೀರಿ ನಿಂತದ್ದು ಮನುಷ್ಯತ್ವ ಮತ್ತು ಮನುಷ್ಯನ ಬದುಕು. ಇವಾವುವೂ ಹುಟ್ಟಿನೊಂದಿಗೆ ಬರುವುದಿಲ್ಲ. ಇಂಥ ಜಾತಿ-ಧರ್ಮಕ್ಕೆ ನಾವು ಸೇರಿದ್ದು ಅಂತ ಹುಟ್ಟಿದಾಗಲೇ ನಿರ್ಧಾರವಾಗುತ್ತದಾದರೂ ಅವು ಕೂಡ ವಂಶವಾಹಿನಿಯನ್ನು ಅವಲಂಬಿಸಿಯೇ ಇರುತ್ತದೆ.
ಆದ್ದರಿಂದ ವಾಸ್ತವದಲ್ಲಿ ಇವು ಯಾವುದೂ ನಾವಾಗಿರುವುದಿಲ್ಲ. ಆದರೆ, ಇದರಿಂದಾಗಿ ನಮ್ಮ ಬದುಕಿಗೊಂದು ಗುರುತು ಮತ್ತು ನಿರ್ದಿಷ್ಟತೆ ಹುಟ್ಟಿಕೊಳ್ಳುತ್ತದೆ. ದುರಂತ ವೆಂದರೆ, ವರ್ತಮಾನದಲ್ಲಿ ಇವೇ ನಮ್ಮ ಅಸ್ಮಿತೆಯಾಗಿ ಬದುಕಾಗಿಬಿಟ್ಟಿದೆ. ಯಾರು ಯಾವ ಜಾತಿಯೇ ಆದರೂ ಮೂಲತಃ ಮನುಷ್ಯರೇ. ಆಹಾರ-ವಿಹಾರ, ನೋವು- ನಲಿವು, ಸುಖ-ದುಃಖ , ಕಷ್ಟ-ಕಾರ್ಪಣ್ಯ , ಲಾಭ-ನಷ್ಟ ಇವುಗಳಿಗೆ ಜಾತಿ-ಮತ-ಧರ್ಮಗಳ ಹಂಗಿರುವುದಿಲ್ಲ. ನಿತ್ಯಜೀವನದಲ್ಲಿ ಬೇಕಾದದ್ದು ತುಸು ನೆಮ್ಮದಿ, ತ್ರಾಸಿಲ್ಲದ ಬದುಕು.
ಕಷ್ಟಗಳೇ ಬೇಡ ಅನ್ನಲು, ಸುಖವೇ ಬೇಕೆನ್ನಲು ನಾವ್ಯಾರು? ನಾವೆಲ್ಲ ಅವುಗಳ ಅಧೀನ. ಆಹಾರ, ವಸತಿ, ಶಿಕ್ಷಣ, ನೈರ್ಮಲ್ಯ, ಆರೋಗ್ಯ, ಉದ್ಯೋಗಗಳಿಗೆ ಜಾತಿಮತ ಧರ್ಮಗಳ ಬಂಧವಿಲ್ಲ. ಹೀಗಿದ್ದೂ ಇವೆಲ್ಲವನ್ನೂ ಮೀರಿ ಜಾತಿಮತಧರ್ಮ ಗಳು ಬೆಳೆದು ನಿಂತಿವೆ. ಹಾಗಾದರೆ ಜಾತಿ-ಮತ-ಧರ್ಮಗಳು ನಮಗೆ ಬೇಡವೆ? ಮನುಷ್ಯನಾಗಿ ಹುಟ್ಟಿ ಮನುಷ್ಯನಾಗೇ ಸಾಯಲು ಇವ್ಯಾವುದೂ ಖಂಡಿತಾ ಅಗತ್ಯವಿಲ್ಲ. ಇವುಗಳೇ ಮುಖ್ಯವೆಂದು ಬದುಕಿದರೆ ಅನ್ನ ಕಾಣುವುದು ಕಷ್ಟವಾದೀತು! ದುರಂತವೆಂದರೆ, ನಾನು ಆ ಜಾತಿಯವ, ಈ ಧರ್ಮದವ, ಈ ಪಂಥದವ ಅಂದರೆ ಕೆಟ್ಟರಾಜಕೀಯದ ಹೊಲಸೇ ತುಂಬಿರುವ ಈ ದೇಶದಲ್ಲಿ ಚೆನ್ನಾಗಿ ಬದುಕುವುದಕ್ಕೆ ಬೇಕಾದಷ್ಟು ಸಿಗುತ್ತದೆ. ನಾನು ಮನುಷ್ಯ ಅಂದರೆ ಈ ಹೊಲಸು ರಾಜಕೀಯಕ್ಕೆ ಅರ್ಥವಾಗುವುದಿಲ್ಲ.
ಬದಲಿಗೆ ನನ್ನ ಜಾತಿ ಧರ್ಮದ ಮೂಲಕವೇ ನನ್ನನ್ನು ನಾನು ಇಂಥ ಜಾತಿಯ ಅಥವಾ ಧರ್ಮದ ಮನುಷ್ಯನೆಂದೇ ಗುರುತಿಸಿಕೊಂಡು ಬೇಕಾದುದ್ದನ್ನು ಪಡೆಯಬೇಕು. ಅದರಲ್ಲೂ ನಾನು ಹೆಚ್ಚು ಜನಸಂಖ್ಯೆಯ ವ್ಯಾಪ್ತಿಯನ್ನು ಹೊಂದಿರುವ ಜಾತಿ ಅಥವಾ ಧರ್ಮಕ್ಕೆ ಸೇರಿದವ ನಾದರೆ ನನಗೆ ಅಗ್ರಮನ್ನಣೆ ಸಿಗುತ್ತದೆ. ತೀರಾ ಬೆರಳೆಣಿಕೆಯಷ್ಟು ಜನರಿರುವ ಜಾತಿಗೆ ಸೇರಿದವನಾದರೆ ನನಗೆ ಸರಕಾರ ದಿಂದ ಸಿಗಬಹುದಾದದ್ದು ತೀರಾ ಕಷ್ಟದಾಯಕವಾಗಿಬಿಡುತ್ತದೆ. ನನಗೆ ಒಂದು ವ್ಯಾಲ್ಯೂ ಬರುವುದು ನನ್ನ ಜಾತಿಯಿಂದ, ಧರ್ಮದಿಂದ. ನನ್ನ ವಿದ್ಯಾರ್ಹತೆ, ಪ್ರತಿಭೆಯಿಂದಲ್ಲ. ಇದು ನಮ್ಮ ಇಂದಿನ ದುರಂತ ಸ್ಥಿತಿ.
ಪ್ರತಿಯೊಂದಕ್ಕೂ ಸಂವಿಧಾನ, ಕಾಯ್ದೆ-ಕಾನೂನು ಅಂತ ಹೋರಾಡುತ್ತೇವೆ. ಅವುಗಳನ್ನು ನಮಗೆ ಬೇಕಾದಂತೆ ಬಳಸುತ್ತೇವೆ.
ಆಗದಿದ್ದಾಗ ಅವುಗಳನ್ನಿಟ್ಟುಕೊಂಡೇ ಪ್ರತಿರೋಽಸುತ್ತೇವೆ. ಸ್ವಾತಂತ್ರ್ಯಾಪೂರ್ವದ ಭಾರತೀಯ ಪರಂಪರೆಯಲ್ಲಿ ಬದುಕುತ್ತಿದ್ದ ಮುಸ್ಲಿಮ ರಿಗೆ ಸೆಕ್ಯುಲರಿಸಂ ಎಂಬುದು ನಿತ್ಯಬದುಕಿನ ರೂಢಿಗತವಾಗಿತ್ತು. ಹಿಂದೂ ಧಾರ್ಮಿಕ ಉತ್ಸವಗಳಿಗೆ ಮುಸ್ಲಿಮರು ಪಾಲ್ಗೊಳ್ಳುವುದು, ಮುಸ್ಲಿಂ ಧಾರ್ಮಿಕ ಹಬ್ಬಗಳಿಗೆ ಹಿಂದೂಗಳು ಭಾಗಿಯಾಗುವುದು ಪರಸ್ಪರ ಬಹುಪ್ರೀತಿಯಿಂದಲೇ ನಡೆಯುತ್ತಿದೆ. ಯಾವ ಮತೀಯ ಅಥವಾ ಧಾರ್ಮಿಕ ನಿರ್ವಚನೆಯಿಲ್ಲದ ಕಾಲದಲ್ಲಿ ಹಿಂದೂ ಮುಸ್ಲಿಂ ಪೂರ್ವಜರು ಬಾಳಿಬದುಕಿದ ಈ ದೇಶದಲ್ಲಿ ಇಂದು ದೇಶವನ್ನೇ ಬಹುದೊಡ್ಡ ಗಂಡಾಂತರವಾಗಿ ಹಿಂದೂ- ಮುಸ್ಲಿಂ ಸಂಘರ್ಷ ಕಾಡುತ್ತಿದೆ.
ಇಲ್ಲಿರುವ ಮುಸ್ಲಿಮರು ಅರಬ್ಬ ದೇಶಗಳಿಂದ ಬಂದವರಲ್ಲ. ರಕ್ತ, ಮಾಂಸ, ಬುದ್ಧಿ-ಭಾವ, ಸಂಸ್ಕೃತಿಗಳಲ್ಲಿ ನಮ್ಮವರೇ ಆಗಿ ಹಿಂದೂ ಪರಂಪರೆಯ ಬಂದ ಮತಾಂತರಿತ ದುರ್ದೈವಿಗಳು. ಹಿಂದೂ ಪರಂಪರೆಯಲ್ಲಿ ಹಿಂದುಗಳಂತೆಯೇ ಹಿಂದೂಗಳೊಂದಿಗೆ ಬದುಕುತ್ತಿದ್ದ ಇಲ್ಲಿನ ಮುಸ್ಲಿಮರನ್ನು ಪ್ರತ್ಯೇಕಿಸುವ ಶಕ್ತಿ, ವಿಚಾರ, ಪ್ರಣಾಲಿಗಳು ಯಾವ ಮೂಲದಿಂದ ಬಂದವು, ಇದಕ್ಕೆ ಉತ್ತೇಜನ ಎಲ್ಲಿಂದ,
ಸ್ವಶ್ರೇಷ್ಠತೆಯ ಹುಚ್ಚನ್ನು ಹುಟ್ಟಿಸಿ ನಿರುಂಬಳದ ಬದುಕಿನ ಗತಿಯನ್ನು ತಪ್ಪಿಸಿದವರ್ಯಾರು- ಇವೆಲ್ಲಕ್ಕೂ ಕಾರಣವೇನೆಂಬುದನ್ನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅರ್ಥವಾಗುತ್ತದೆ. ನಮ್ಮೊಂದಿಗೆ ನಮ್ಮವರಾಗಿ ಬದುಕುತ್ತಿದ್ದ ಮುಸ್ಲಿಮರಿಗೆ ನಮ್ಮೊಂದಿಗೆ ದ್ವೇಷ, ಸೇಡು, ಮಾತ್ಸರ್ಯಗಳು ಹೇಗೆ ಹುಟ್ಟಿಕೊಂಡವು? ನಮಗಾದರೂ ಹೇಗೆ ಹುಟ್ಟಿಕೊಂಡವು? ಸಾತ್ವಿಕ ಸ್ವಭಾವದ ಹಿಂದೂಗಳು, ಮುಸ್ಲಿಮರು ಇವುಗಳನ್ನೆಲ್ಲ ವಿರೋಧಿಸಿ ನಿಲ್ಲಬಹುದಿತ್ತಲ್ಲವೆ? ಚಳವಳಿ ಮಾಡಬಹುದಿತ್ತಲ್ಲವೆ? ಆತ್ಮಶೋಧನೆ ಮಾಡಿಕೊಳ್ಳ ಬಹುದಿತ್ತಲ್ಲವೆ? ಧರ್ಮದ ಆಫೀಮು ಸರ್ವನಾಶದತ್ತ ಕೊಂಡೊಯ್ಯುತ್ತದೆಂಬುದು ನಮಗೇಕೆ ಅರ್ಥವಾಗುವುದಿಲ್ಲ? ಪರಂಪರೆ ಯಂತೆಯೇ ಕೂಡಿ ಬದುಕುವುದಕ್ಕೆ, ಶ್ರಮಿಸೋದಕ್ಕೆ, ಭ್ರಾತೃತ್ವವನ್ನು ಮೆರೆಯುವುದಕ್ಕೆ ಏನು ಅಡ್ಡಿ? ಯಾವುದು ಅಡ್ಡಿ? ಯಾರು ಅಡ್ಡಿ? ಪರಸ್ಪರರ ಹಿತದಲ್ಲಿ ರಾಷ್ಟ್ರದ ಹಿತವನ್ನು ಕಾಣಬಹುದಲ್ಲವೆ? ಸುಖದುಃಖಗಳನ್ನು ಹಂಚಿಕೊಳ್ಳಬಹುದಲ್ಲವೆ? ಸಾಂಸ್ಕೃತಿಕ ಸಂಪತ್ತನ್ನು ಹಂಚಿಕೊಂಡು ಬದುಕಬಹುದಲ್ಲವೆ? ಈಗಲೂ ಐಕ್ಯತೆಗೆ ಭಂಗ ತರುವವರ ವಿರುದ್ಧ ಸೆಟೆದು ನಿಲ್ಲಬಹುದಲ್ಲವೆ? ಬಹುಸಂಖ್ಯಾತರೊಂದಿಗೆ ಹೊಂದಾಣಿಕೆ ಅಲ್ಪಸಂಖ್ಯಾತರಿಗೆ ಅತೀ ಅಗತ್ಯವೂ ಆವಶ್ಯವೂ ಅಗಿಯೇ ಇರುತ್ತದೆ.
ನೂರುಕಾಲ ನಾವ್ಯಾರು ಗೂಟ ಹೊಡೆದುಕೊಂಡು ಇಲ್ಲಿ ಬದುಕುವುದಿಲ್ಲ, ಹೋಗುವಾಗ ಯಾವುದನ್ನೂ ಕೊಂಡು ಹೋಗುವುದಿಲ್ಲ. ಈ ವೈಮನಸ್ಸು, ವೈರತ್ತ್ವದಿಂದ ಆಗುವ ಪ್ರಯೋಜನವಾದರೂ ಏನು? ಮುಸ್ಲಿಂ ಸಂತರು, ಗುರುಗಳು ಹಿಂದೂ ಪರಂಪರೆಯಲ್ಲಿ ಸಾಮ ರಸ್ಯದ ಬದುಕನ್ನು ಬಯಸುತ್ತಾರೆ. ಆದರೆ, ಇವರು ಇಲ್ಲಿನ ಮುಸ್ಲಿಮರಿಗೆ ಗುರುವಾಗಿ ಸ್ವೀಕಾರವಾಗುವುದಿಲ್ಲ? ಮುಸ್ಲಿಮರಿಗೆ ತಮ್ಮ ಒಳಿತನ್ನು ಬಯಸುವವರು ಯಾರೆಂದು ಮೊದಲಾಗಿ ಅರ್ಥವಾಗಬೇಕು. ತಮ್ಮನ್ನು ತುಷ್ಟೀಕರಣಗೊಳಿಸುತ್ತಾ ತಮ್ಮ ಅರಿವಿನ ವಿಸ್ತಾರ ವನ್ನೇ ಮೊಟಕುಗೊಳಿಸುವವರ ಬಗ್ಗೆ ಮುಸ್ಲಿಮರಲ್ಲಿ ಎಚ್ಚರವಿರಬೇಕು.
ಓಟಿಗಾಗಿ ತಮ್ಮನ್ನು ಓಲೈಸುವವರ ಬಗ್ಗೆ ಜಾಗ್ರತರಾಗಿರಬೇಕು. ಮೋದಿಯವರನ್ನು, ಮೋದಿಯ ಆಡಳಿತವನ್ನು ಸುಖಾಸುಮ್ಮನೆ ವಿನಾಕಾರಣ ವಿರೋಧಿಸುವ ಬುದ್ಧಿ ಮುಸ್ಲಿಮರಿಗೆ ಹಿತವಲ್ಲ. ಮಾತ್ರವಲ್ಲ ಯಾರಿಗೂ ಉಚಿತವಲ್ಲ. ಹಿಂದೂಗಳಾಗಲೀ ಮುಸ್ಲಿಮರಾಗಲೀ ಮತಧರ್ಮದ ವಿಚಾರಗಳನ್ನೇ ಬದುಕಿನ ಆತ್ಯಂತಿಕವೆಂದು ಸ್ವೀಕರಿಸಿದರೆ ಬದುಕಿನ ಮಹತ್ತ್ವದ ಪ್ರಶ್ನೆಗಳು ಅಸ್ತಿತ್ವವನ್ನೇ ಕಳೆದು ಕೊಳ್ಳುತ್ತದೆ. ಜೀವಗಳು ಶವವಾಗುವ ಈ ಮತೀಯ ಸಂಘರ್ಷಗಳು ಮನುಷ್ಯ ಸಂಬಂಧದ ಯಾವ ಎಳೆಯನ್ನೂ ಗಟ್ಟಿಗೊಳಿಸ ಲಾರದು. ಮನುಷ್ಯನೆಂಬ ಅಸ್ತಿತ್ವವೇ ನಮಗೆ ಮುಖ್ಯವಾಗಬೇಕು.
ಮತೀಯ ಅಸ್ತಿತ್ವ ನಮ್ಮನಮ್ಮೊಳಗೆ ಮಾತ್ರ ಇರುವಂಥ ವ್ಯವಸ್ಥೆಯಾಗಬೇಕು. ನಮ್ಮ ನಂಬಿಕೆ, ಆಚಾರ, ಆಹಾರ, ಸಂಸ್ಕೃತಿ ಯಾವುದೂ ಇನ್ನೊಬ್ಬರಿಗೆ ತೊಂದರೆಯನ್ನಾಗಲೀ, ಕ್ಲೀಷೆಯನ್ನಾಗಲೀ ಹುಟ್ಟಿಸದಂತೆ ನಾವು ಪಾಲಿಸಬೇಕು. ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ಮುಸ್ಲಿಂ ದಂಪತಿಗಳು ನನ್ನ ಆಸನದ ಮುಂದೆ ಕುಳಿತ್ತಿದ್ದರು. ಆರಂಭದಲ್ಲಿ ಮುಖ ಮುಖ ನೋಡಿಕೊಳ್ಳುತ್ತಿದ್ದ ನಾವು ಅರ್ಧಗಂಟೆಯಲ್ಲಿ ಅದೆಷ್ಟು ಆತ್ಮೀಯರಾದೆವೆಂದರೆ ಕೆಲವರ್ಷಗಳಿಂದ ಪರಿಚಿತರೆಂಬಷ್ಟು. ಅವರಿಗೊಬ್ಬಳು ನಾಕು ವರ್ಷದ ಸುಂದರ ಮಗಳಿದ್ದಳು. ನಾನವಳನ್ನು ಆಗ ಸುಂದರಿಯೆಂದೇ ಕರೆದಿದ್ದೆ.
ಸದ್ಗೃಹಸ್ಥ ಕುಟುಂಬದ ಹೆಣ್ಣುಮಗಳಾದ ಆ ಮಗುವಿನ ತಾಯಿ ತುಂಬಾ ಸಂಕೋಚ ಸ್ವಭಾವದವರು. ಅವಳ ಗಂಡ ಈ ಕಾಲದವ. ವಯಸ್ಸಿನಲ್ಲಿ ನನಗಿಂತಲೂ ಸಣ್ಣವ. ತನ್ನ ಮತೀಯ ಅಸ್ತಿತ್ವವನ್ನು ಒಪ್ಪಿದರೂ ತಾನು ಭಾರತೀಯ ಎಂಬುದೇ ಅವನ ಬಲವಾದ ಅಭಿಪ್ರಾಯವಾಗಿತ್ತು. ನಮಾಜ್ ಮಾಡು ವಂಥ ಸಮಯ ಬಂತು. ನಾನಿರುವ ಕಂಪಾರ್ಟ್ ಮೆಂಟಿನ ಪ್ರವೇಶದ್ವಾರದಲ್ಲಿದ್ದ ಸ್ವಚ್ಛಸ್ಥಳದಲ್ಲಿ ಉದ್ದ ಚಾದರವನ್ನು ಹಾಸಿಕೊಂಡು ಪ್ರಾರ್ಥನೆ ಮುಗಿಸಿ ಬಂದು ತನ್ನ ಕುಟುಂಬ ವನ್ನು ಅವ ಸೇರಿಕೊಂಡ. ನೋಡುವುದಕ್ಕೆ ಮುಸ್ಲಿಂ ಚರ್ಯೆಯ ಯಾವ ಲಕ್ಷಣವೂ ಅವನಲ್ಲಿರಲ್ಲಿಲ್ಲ.
ಅಪ್ಪಟ ಹಿಂದೂ ಹೆಣ್ಣುಮಗಳಂತೆ ಕಾಣುವ ಅವನ ಹೆಂಡತಿ ಕಲಿತವಳು. ಮಗುವಿಗೆ ತಮ್ಮ ಭಾಷೆಯ ಕಥೆ ಹೇಳುತ್ತಿದ್ದಳು. ಮಧ್ಯೆಮಧ್ಯೆ ಕನ್ನಡವೂ ಇತ್ತು. ದಾಂಪತ್ಯದಲ್ಲಿ ಶ್ರದ್ಧೆಯಿರುವ ಆ ಹೆಣ್ಣು ವೈದಿಕ ಮನೆತನದ ಸಂಪ್ರದಾಯಸ್ಥ ಹೆಣ್ಣಿನಂತೆ ತಲೆಯ ಮೇಲೆ ಸೆರಗನ್ನು ಹೊದ್ದುಕೊಂಡಿದ್ದಳು. ತನ್ನ ಗಂಡ ಮತ್ತು ಮಗುವಷ್ಟೇ ತನ್ನ ಪ್ರಪಂಚವೆಂದು ಭಾವಿಸಿದಂತೆ ಕಂಡ ಅವಳು ಮತೀಯ ನಿರ್ಬಂಧಗಳಿಗಿಂತ ಬದುಕು ಮುಖ್ಯವೆಂದು ಭಾವಿಸಿದಂತೆ ನನಗೆ ಕಂಡಳು. ಅರೆಗಳಿಗೆಯಲ್ಲಿ ಬೆಳೆದು ನಿಂತ ಅವರೊಂದಿಗಿನ ಆತ್ಮೀಯತೆಯ ಮಾತುಕತೆ
ಜಾತಿಮತಧರ್ಮಗಳನ್ನು ಮೀರಿ ಮನುಷ್ಯ ಸಂಬಂಧಗಳ ಅಸ್ಮಿತೆಯನ್ನು ಬಲಗೊಳಿಸಿದ್ದಂತೂ ಸತ್ಯ. ನಿಜ ಭಾರತೀಯ ಹೆಣ್ಣೊಬ್ಬಳ ಅಸ್ಮಿತೆಯಿದು. ಯಾವ ಜಾತಿ-ಮತ-ಧರ್ಮದ ಹೆಣ್ಣೇ ಆಗಿರಲಿ ಭಾರತೀಯತೆಯು ಅವಳ ರಕ್ತದ ಮಿಳಿತಗೊಂಡಿರುತ್ತದೆ.
ಯಾರಿಗೂ ಕೇಡನ್ನು ಬಯಸದ ಈ ನೆಲದ ಗುಣವಿರುತ್ತದೆ. ಮೋದಿಯವರು ಪ್ರಧಾನಿಯಾದ ಮೇಲೆ ಜಾತಿ-ಮತ-ಧರ್ಮಗಳನ್ನು ಗಣಿಸದೆ ಆಡಳಿತ ಮಾಡುತ್ತಿದ್ದಾರೆಂಬುದನ್ನು ಸಾಬೀತು ಮಾಡುವ ಅಗತ್ಯವೇ ಇಲ್ಲ. ದೇಶವನ್ನು ಮುನ್ನಡೆಸುವವನಿಗೆ ಇರಬೇಕಾದ ಸಮಷ್ಟಿಪ್ರe
ಯಲ್ಲಿ ಪ್ರಧಾನಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶವನ್ನೇ ತುಂಡರಿಸುತ್ತೇನೆಂದವರಿಗೂ, ತನ್ನನ್ನೂ ಮುಗಿಸಲು ಪ್ರಯತ್ನಿಸಿ ದವರಿಗೂ ಮೋದಿ ಏನೂ ಪ್ರತಿಕ್ರಿಯಿಸಲ್ಲಿಲ್ಲ. ಇದು ನಿಜವಾದ ಔದಾರ್ಯ!
ಓವೈಸಿಯಂಥವರಿಂದ ಬದುಕನ್ನು ಕಟ್ಟಿಕೊಳ್ಳುವ ಮಾತು ಬರಬೇಕು. ಬದಲಿಗೆ, ಹಿಂಸೆಯನ್ನು ಪ್ರಚೋದಿಸುವ ಮಾತುಗಳಿಂದ ಹಳ್ಳಿ ಯಲ್ಲಿರುವ ಪಾಪದ ಮುಸ್ಲಿಮರ ಬದುಕು ಹೈರಾಣಾಗಿ ಬಿಡುವ ಸಂಭವಗಳೇ ಹೆಚ್ಚಿರುತ್ತದೆ. ತಮ್ಮ ಧರ್ಮದಲ್ಲಿರುವ ವೈಚಾರಿಕತೆಯ ಕಾಠಿಣ್ಯದಿಂದ ಮುಸ್ಲಿಮರನ್ನು ಮುಸ್ಲಿಮರೇ ಕಾಪಾಡಿಕೊಳ್ಳಬೇಕಿದೆ. ತ್ರಿವಳಿ ತಲಾಖ್ ನಿಷೇಧದಲ್ಲಿ ಮುಸ್ಲಿಂ ಮಹಿಳೆಯರೇ ಸಂಭ್ರಮಿಸಿ ದರಲ್ಲ, ಹಾಗೆ! ಮುಸ್ಲಿಂ ಗುರುಗಳು, ಸಂತರು, ಮುಖಂಡರ ಚಿಂತನೆಯಲ್ಲಿ ಬದುಕು ಕಟ್ಟಿಕೊಳ್ಳುವ ಮಾತು ಹುಟ್ಟಬೇಕಿದೆ. ಈ ದೇಶ ಎಂಥೆಂಥವರಿಗೋ ಅಶ್ರಯ ನೀಡಿ ಸಾಕಿ ಸಲಹಿದೆ. ಭಾರತವಿದ್ದರೆ ಮಾತ್ರ ನಾವಿರಬಹುದು ಎಂಬುದನ್ನು ಮರೆಯಬಾರದು!