ಹ್ಯಾಮಿಲ್ಟನ್: ಭಾರತ ತಂಡವು ವನಿತಾ ಏಕದಿನ ವಿಶ್ವಕಪ್ ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ 110 ರನ್ ಅಂತರದಿಂದ ಜಯ ಸಾಧಿಸಿದೆ.
ಭಾರತ ತಂಡ ಏಳು ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದರೆ, ಬಂಗ್ಲಾ ವನಿತೆಯರ ತಂಡ ಕೇವಲ 119 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಈ ಗೆಲುವಿನೊಂದಿಗೆ ಸೆಮಿ ಫೈನಲ್ ಕನಸು ಜೀವಂತವಾಗಿದೆ.
ಭಾರತಕ್ಕೆ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದರು. ಮಂಧನಾ 32 ರನ್ ಗಳಿಸಿದರೆ, ಶಫಾಲಿ 42 ರನ್ ಬಾರಿಸಿದರು. ಉತ್ತಮ ಫಾರ್ಮ್ ಮುಂದುವರಿಸಿದ ಯಾಸ್ತಿಕಾ ಭಾಟಿಯಾ ಪಂದ್ಯದ ಏಕೈಕ ಅರ್ಧಶತಕ ಬಾರಿಸಿದರು. ಕೊನೆ ಯಲ್ಲಿ ಪೂಜಾ ವಸ್ತ್ರಾಕರ್ 30, ಸ್ನೇಹ್ ರಾಣ 27 ಮತ್ತು ರಿಚಾ ಘೋಷ್ 26 ರನ್ ಗಳಿಸಿದರು.
ಬಾಂಗ್ಲಾಕ್ಕೆ ಸ್ನೇಹ್ ರಾಣ ಬೌಲಿಂಗ್ ನಲ್ಲಿ ಕಾಡಿದರು. ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾ ರನ್ ಗಳಿಸಲು ಪರದಾಡಿತು. 32 ರನ್ ಗಳಿಸಿದ ಸಲ್ಮಾ ಖತುನ್ ರದ್ದೇ ಹೆಚ್ಚಿನ ಗಳಿಕೆ. ಸ್ನೇಹ್ ರಾಣ ನಾಲ್ಕು ವಿಕೆಟ್ ಕಿತ್ತರೆ, ಜೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ತಲಾ ಎರಡು ವಿಕೆಟ್ ಪಡೆದರು.
ಈ ಜಯದೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ.