Friday, 13th December 2024

ಕಾಶ್ಮೀರದ ಮುಚ್ಚಿಟ್ಟ ಇತಿಹಾಸವನ್ನು ತೆರೆದಾಗ…

ಪ್ರಕಾಶ್ ಶೇಷರಾಘವಾಚಾರ್‌

ರಾಹುಲ್ ಗಾಂಧಿ ಟ್ವೀಟ್‌ಗಳನ್ನು ಮುಂದಿಟ್ಟುಕೊಂಡು ‘ಮುಂಜಾಗೃತ ಕ್ರಮ ಜರುಗಿಸಲು ಮೋದಿಯೇ ವಿಫಲರಾದರು’ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಜಗಮೋಹನ್ ಅವರು ಅಪಾಯದ ಮುನ್ಸೂಚನೆ ನೀಡಿದ್ದರು ಸಹ ಆಗಿನ ಪ್ರಧಾನಿ ರಾಜೀವ್ ಗಾಂಧಿ ನಿರ್ಲಕ್ಷಿಸಿ ಕಾಶ್ಮೀರದ ಹಿಂದುಗಳ ನರಮೇಧಕ್ಕೆ ಮುನ್ನುಡಿ ಬರೆದದ್ದಲ್ಲವೇ?

ನಡೆಯುವಾಗ ಒಂದು ಕಾಲು ಮುಂದಿಟ್ಟರೆ ಇನ್ನೊಂದು ಕಾಲು ಹಿಂದೆ ಇರುತ್ತದೆ. ಆಗಲೇ ಬೀಳದೆ ಮುಂದೆ ನಡೆಯಲು ಸಾಧ್ಯ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು 32 ವರ್ಷಗಳ ಕಾಲ ಮುಚ್ಚಿಟ್ಟಿದ್ದ ಕಾಶ್ಮೀರ ಕಣಿವೆಯ ಸತ್ಯವನ್ನು ಬಯಲು ಮಾಡಿ ಅನೇಕರನ್ನು ವಿಪರೀತ ವಿಚಲಿತರನ್ನಾಗಿ ಮಾಡಿದೆ.

ಯಥಾಪ್ರಕಾರ ಡೋಂಗಿ ಉದಾರವಾದಿಗಳು ಇದು ಕೇವಲ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತಲು ಬಳಕೆ ಮಾಡಲು ತೆಗೆದ ಚಿತ್ರ ಎಂದು ಇನ್ನೂ ಹಳೆಯ ರಾಗ ದಲ್ಲೇ ರೋದಿಸುತ್ತಿದ್ದಾರೆ. ಹಾಗಾದರೆ ಸತ್ಯವೇನು? ಕಾಶ್ಮೀರ್ ಫೈಲ್ಸ್ ಟೀಕಿಸುವವರು ಹೇಳುವ ಹಾಗೆ ಇದೊಂದು ಕಾಲ್ಪನಿಕ ಚಿತ್ರವಾ? ಅಥವಾ ಸತ್ಯದ ಆಧಾರದ ಮೇಲೆ ಚಿತ್ರ ನಿರ್ಮಾಣವಾಗಿರುವುದಾ? ವಾಸ್ತವವಾಗಿ ಕಾಶ್ಮೀರದ ಕಣಿವೆ ಯಿಂದ ಮತಾಂಧರ ಕಿರುಕುಳ ಹಾಗೂ ಭಯದ ವಾತಾವರಣದಿಂದ 1989ರಿಂದಲೇ ಹಿಂದೂ ಮತ್ತು ಸಿಖ್ಖರು ಕಣಿವೆ ತೊರೆದು ಹೊರಬರಲು ತೊಡಗಿದ್ದರು. ಕೇವಲ ಪಂಡಿತರು ಮಾತ್ರ ಹೊರ ಬರಲಿಲ್ಲ.

ಅವರೊಂದಿಗೆ ಹಿಂದುಳಿದವರು ಹಾಗೂ ದಲಿತರು ಕೂಡ ಅಲ್ಲಿ ಉಳಿಗಾಲವಿಲ್ಲವೆಂದು ತಮ್ಮ ಮನೆ ಮತ್ತಿತರ ಆಸ್ತಿಯನ್ನು ಬಿಟ್ಟು ಹೊರ ಬಂದರು. 1989 ಡಿಸೆಂಬರ್‌ವರೆಗೆ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಸೋತ ತರುವಾಯ ಡಿಸೆಂಬರ್ 2 ರಂದು ಜನತಾದಳ ನಾಯಕ ವಿ.ಪಿ.ಸಿಂಗ್ ಅವರು ಬಿಜೆಪಿ ಮತ್ತು ಕಮ್ಯುನಿಷ್ಟ್ ಪಕ್ಷಗಳ ಬಾಹ್ಯ ಬೆಂಬಲದಿಂದ ಪ್ರಧಾನಿಯಾಗುತ್ತಾರೆ. ಜಗಮೋಹನ್ ಅವರು 1990 ಜನವರಿ 18 ರವರೆಗೆ ಚಿತ್ರದಲ್ಲಿಯೇ ಇರಲಿಲ್ಲ.

ಮೊಟ್ಟ ಮೊದಲು ಜಗಮೋಹನ್ ಅವರನ್ನು 1984ರಲ್ಲಿ ಇಂದಿರಾ ಗಾಂಧಿಯವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರನ್ನಾಗಿ ನಿಯುಕ್ತಿ ಮಾಡುತ್ತಾರೆ. ಅವರು 1989 ಜುಲೈನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. 1986ರಲ್ಲಿ ರಾಜೀವ್ ಮತ್ತು ಫಾರೂಕ್ ಅಬ್ದು ಒಪ್ಪಂದದನ್ವಯ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನರೆನ್ಸ್ ಮೈತ್ರಿ ಕೂಟ ಅಸ್ತಿತ್ವಕ್ಕೆ ಬರುತ್ತದೆ. 1987ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಅತ್ಯಧಿಕ ಬಹುಮತದಿಂದ ಚುನಾವಣೆ ಗೆಲ್ಲುತ್ತದೆ. ಆದರೆ 1990, ಜನವರಿ 18ರಂದು ಫಾರುಕ್ ಅಬ್ದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.

ಇವರು ರಾಜೀನಾಮೆ ಕೊಡುತ್ತಿದ್ದಂತೆ ಮರು ದಿನದಿಂದಲೇ ಕಾಶ್ಮೀರ ಕಣಿವೆಯಲ್ಲಿ ಹಿಂದುಗಳ ಮೇಲೆ ಹಿಂಸಾಚಾರ ಆರಂಭವಾಗುತ್ತದೆ.
ಜಗಮೋಹನ್ ಮತ್ತೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಕಣಿವೆಗೆ ಆಗಮಿಸಿದ್ದು 1990, ಜನವರಿ 22 ರಂದು. ಆ ವೇಳೆಗಾ ಗಲೇ ಕಾಶ್ಮೀರದ ಕಣಿವೆಯಲ್ಲಿ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಜಗಮೋಹನ್ ಅವರು ಕಾಶ್ಮೀರಿ ಹಿಂದುಗಳನ್ನು ಪ್ರಚೋದಿಸಿ ಗುಳೆ ಹೋಗು ವಂತೆ ಮಾಡಿದರು ಎಂಬ ಆಪಾದನೆಯು ಸುಳ್ಳೆಂದು ಇದರಿಂದ ಸಾಬೀತಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2014ರಿಂದ 18ರವರೆಗೆ ಡಿಜಿಪಿಯಾಗಿದ್ದ ಎಸ್ ಪಿ ವೈದ್ ಅವರು, 1989ರಲ್ಲಿ ಫಾರೂಕ್ ಅಬ್ದುಲ್ಲ ಸರಕಾ ರವು ಐಖಐ ತರಬೇತಿ ಪಡೆದಿದ್ದ 70 ನಾನಾ ಸಂಘಟನೆಗಳಿಗೆ ಸೇರಿದ್ದ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಇವರ ಬಿಡುಗಡೆಯನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ತಡೆಯಲೇ ಇಲ್ಲ. ಕಾಶ್ಮೀರ ಹಿಂದೂಗಳ ಮೇಲೆ ನಡೆದ ದೌರ್ಜನ್ಯದಲ್ಲಿ ಈ ಉಗ್ರಗಾಮಿಗಳು ಪ್ರಧಾನ ಭೂಮಿಕೆ ವಹಿಸಿದ್ದರು ಎಂಬುದು ಎಸ್ ಪಿ ವೈದ್ ಅಭಿಮತ.

ಜಗಮೋಹನ್ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಕಾಶ್ಮೀರದ ಸೋಟಕ ಪರಿಸ್ಥಿತಿಯ ಕುರಿತು ಏಪ್ರಿಲ್ 19 ಮತ್ತು ಮೇ 1ರಂದು ಮೂರು ಪತ್ರ ಬರೆದು ಎಚ್ಚರಿಕೆಯ ಗಂಟೆ ಮೊಳಗಿಸಿದ್ದರು. ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಕೇಂದ್ರ ಸರಕಾರ ಮಧ್ಯ ಪ್ರವೇಶಿಸ ಬೇಕು ಎಂದು ಆಗ್ರಹಿಸಿದ್ದರು. ಆದರೆ ರಾಜೀವ್ ಗಾಂಧಿ ಯಾವುದೋ ನಿಗೂಢ ಕಾರಣಗಳಿಗೆ ರಾಜ್ಯಪಾಲರ ಎಚ್ಚರಿಕೆಯನ್ನು ಗಂಭೀರ ವಾಗಿ ತೆಗೆದುಕೊಂಡೇ ಇಲ್ಲ.

ಜಗಮೋಹನ್ ಅವರು ತಮ್ಮ ‘ಪ್ರಕ್ಷುಬ್ಧ ಕಾಶ್ಮೀರ’ ಪುಸ್ತಕ ದಲ್ಲಿ ಬರೆಯುತ್ತಾರೆ- ನಾನು 1988ರಿಂದ ಕಾಶ್ಮೀರ ಕಣಿವೆಯ ಅತಿ ಸೂಕ್ಷ್ಮ ಪರಿಸ್ಥಿತಿಯ ಬಗ್ಗೆ ಎಚ್ಚರಿಸಿದ್ದೆ, ಆದರೆ, ಉನ್ನತ ಸ್ಥಾನದಲ್ಲಿದ್ದವರಿಗೆ ಇದರ ಬಗ್ಗೆ ಗಮನ ಹರಿಸಲು ಸಮಯ ಅಥವಾ ಆಸಕ್ತಿ ಇರಲಿಲ್ಲ ಮತ್ತು ಪರಿಸ್ಥಿತಿಯನ್ನು ಅಂದಾಜಿಸುವ ಕಲ್ಪನೆಯೂ ಕಾಣಲಿಲ್ಲ’ ಎನ್ನುತ್ತಾರೆ. ಅತಿ ಕಿರಿಯ ವಯಸ್ಸಿಗೆ ಪ್ರಧಾನಿ ಪಟ್ಟವೇರಿದ್ದ ರಾಜೀವ್ ಗಾಂಧಿಯವರ ಅಪ್ರಬುದ್ಧತೆ ಹಾಗೂ ದೂರದೃಷ್ಚಿ ಕೊರತೆಯಿಂದ ಕಾಶ್ಮೀರದಲ್ಲಿ ಪರಿಸ್ಥಿತಿ ಸರಿಪಡಿಸಲಾಗದಷ್ಟು ಬಿಗಡಾಯಿಸಿ ಹೋಗುತ್ತದೆ.

ತದನಂತರ ಬಂದ ವಿ.ಪಿ.ಸಿಂಗ್ ಅವರ ಆದ್ಯತೆಯು ಅಂದಿನ ಕೇಂದ್ರ ಗೃಹ ಸಚಿವ ಮುಫ್ತಿ ಮಹಮದ್ ಸಯೀದ್ ಅವರ ಪುತ್ರಿ ರುಬೈಯ್ಯಾಳನ್ನು ಅಪಹರಣಕಾರರಿಂದ ದುಬಾರಿಯಾದ ಬೆಲೆತೆತ್ತು ಕರತರುವುದಾಗಿತ್ತು. 1990 ಡಿಸೆಂಬರ್ 8 ರಂದು ರುಬೈಯ್ಯಾ ಸಯೀದ್‌ಳನ್ನು ಅಪಹರಿಸಿದ್ದ ಜೆಕೆಎಲ್‌ಎಫ್ ಉಗ್ರಗಾಮಿಗಳು, ಬಂಧನದಲ್ಲಿ ಇದ್ದ ತಮ್ಮ 5 ಸಹಚರ ಉಗ್ರಗಾಮಿಗಳನ್ನು ಬಿಡಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ. ಈ ಪ್ರಕರಣವು ಕಾಶ್ಮೀರ ಕಣಿವೆಯ ಭಯೋತ್ಪಾದಕ ಚಟುವಟಿಕೆಗೆ ಬಹು ದೊಡ್ಡ ತಿರುವು ನೀಡುವುದಲ್ಲದೆ ಕಾಶ್ಮೀರ ಹಿಂದುಗಳ ಹತ್ಯೆ, ಅತ್ಯಾಚಾರ ವ್ಯಾಪಕ ಹಿಂಸಾಚಾರದ ಮೂಲಕ ಅವರನ್ನು ಕಣಿವೆಯಿಂದ ಹೊರದಬ್ಬುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ.

ಓಮರ್ ಅಬ್ದುಲ್ಲ ತನ್ನ ತಂದೆ ಮಾಡಿದ್ದ ಅನಾಹುತ ಮತ್ತು ಕಾಶ್ಮೀರಿ ಹಿಂದುಗಳ ನರಮೇಧಕ್ಕೆ ನೈತಿಕ ಹೊಣೆ ಹೊತ್ತು ಕ್ಷಮೆ ಕೇಳುವ ಬದಲು ‘ಇವೆಲ್ಲ ಕಟ್ಟಕತೆ’ ಎಂದು ಉರಿಯುವ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಾರ್ಟಿಯ ಕರ್ನಾಟಕ ಘಟಕವು ಕಾಶ್ಮೀರದ ನರಮೇಧವನ್ನು ‘ಕಾಲ್ಪನಿಕ’ ಎಂದು ವರ್ಣಿಸಿ ಟ್ವೀಟ್ ಮಾಡಿ ಕಾಶ್ಮೀರದ ಹಿಂದೂಗಳಿಗೆ ಘೋರ ಅಪಚಾರವೆಸಗಿದೆ.
27ನವೆಂಬರ್ 2021ರಂದು ಶ್ರೀನಗರದ ಜಿಲ್ಲೆ ಉಪಪೊಲೀಸ್ ವರಿಷ್ಠಾಧಿಕಾರಿಯು ಮಾಹಿತಿ ಹಕ್ಕು ಕಾಯಿದೆ ಯಡಿಯಲ್ಲಿ ಕಾಶ್ಮೀರದ ಹತ್ಯೆಗಳ ಬಗ್ಗೆ ಕೋರಿದ್ದ ಅರ್ಜಿಗೆ ಉತ್ತರಿಸುತ್ತ 89 ಕಾಶ್ಮೀರಿ ಪಂಡಿತರು ಹತ್ಯೆಯಾಗಿದ್ದರು ಮತ್ತು ಹಿಂದೂಯೇತರರು ಬಲಿಯಾದವರು 1635 ಎಂದು ಉತ್ತರ ನೀಡಿದ್ದನ್ನು ಮುಂದಿಟ್ಟು ಕೊಂಡು ಕಾಶ್ಮೀರದಲ್ಲಿ ಪಂಡಿತರ ಸಾವಿಗಿಂತ ಇತರರ ಸಾವೇ ಹೆಚ್ಚು ಎಂಬ ಅವಿವೇಕ ಯುತ ಪ್ರಚಾರದಲ್ಲಿ ತೊಡಗಿದ್ದಾರೆ.

1990ರಲ್ಲಿ ಈ ದುರ್ಘಟನೆಯು ಸಂಭವಿಸಿದಾಗ ಕಾಶ್ಮೀರವು ಪ್ರತ್ಯೇಕವಾದಿಗಳ ಹಿಡಿತಕ್ಕೆ ಸಿಲುಕಿತ್ತು. ದೇಶವಿರೋಧಿ ಶಕ್ತಿಗಳು ರಾಜಾ ರೋಷವಾಗಿ ತಮ್ಮ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವು. ಸರಕಾರಿ ನೌಕರರ ಮತ್ತು ರಕ್ಷಣೆ ನೀಡಬೇಕಿದ್ದ ಪೊಲೀಸ್ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದು ಹೋಗಿತ್ತು. ನಡೆದ ಹಿಂಸಾಚಾರದಲ್ಲಿ ಅನೇಕ ಹಿಂದೂ ಕುಟುಂಬಗಳನ್ನು ಸಂಪೂರ್ಣ ಅಳಸಿ ಹಾಕಿದ್ದರು. ಹತ್ಯೆಯಾಗದೆ ಉಳಿದವರು ತಮ್ಮ ಪ್ರಾಣ ಕಾಪಾಡಿಕೊಳ್ಳಲು ಅಲ್ಲಿಂದ ತಪ್ಪಿಸಿಕೊಳ್ಳುವ ಮಾರ್ಗವೊಂದೇ ಇದಿದ್ದು.

ಇನ್ನೂ ಅದೇ ವ್ಯವಸ್ಥೆಯ ಬಳಿ ದೂರು ದಾಖಲಿಸುವ ಧೈರ್ಯ ಯಾರಿಗೆ ಇರಲು ಸಾಧ್ಯ? ಹತ್ಯೆಯಾದವರ ಬಗ್ಗೆ ಕಾಟಾಚಾರಕ್ಕೆ ದಾಖಲಿಸಿರುವ ಅಂಕಿ-ಅಂಶವು ಜನರ ದಾರಿ ತಪ್ಪಿಸಲು ಬಳಕೆ ಮಾಡುತ್ತಿದ್ದಾರೆ. ಕೊರೋನಾ ಕಾಲದಲ್ಲಿ ರಾಹುಲ್ ಗಾಂಧಿಯವರು
ಮಾಡಿದ ಕೆಲವು ಟ್ವೀಟ್‌ಗಳನ್ನು ಮುಂದಿಟ್ಟುಕೊಂಡು ‘ಮುಂಚಿತವಾಗಿ ಸರಕಾರವನ್ನು ರತಾಹುಲ್ ಎಚ್ಚರಿಸಿದ್ದರೂ ಮುಂಜಾಗೃತ ಕ್ರಮ ಜರುಗಿಸಲು ಮೋದಿಯವರು ವಿಫಲರಾದರು’ ಎಂದು ಇನ್ನೂ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಜಗಮೋಹನ್ ಅವರು 3 ಪತ್ರಗಳನ್ನು ಬರೆದು ಕಣಿವೆಯ ಸೂಕ್ಷ್ಮ ಪರಿಸ್ಥಿತಿಯ ಕುರಿತು ಹಾಗೂ ಮುಂದಿನ ಅಪಾಯದ ಮುನ್ಸೂಚನೆ ಯನ್ನು ನೀಡಿದ್ದರು ಸಹ ಪ್ರಧಾನಿ ರಾಜೀವ್ ಗಾಂಧಿಯವರು ಅದನ್ನು ನಿರ್ಲಕ್ಷಿಸಿ ಕಾಶ್ಮೀರದ ಹಿಂದುಗಳ ನರಮೇಧಕ್ಕೆ ಮುನ್ನುಡಿ ಬರೆದ ದ್ದಲ್ಲವೇ? 1990 ಜನವರಿಯಲ್ಲಿ ಬಿಜೆಪಿಯ ಬೆಂಬಲದಿಂದ ವಿ.ಪಿ. ಸಿಂಗ್ ಪ್ರಧಾನಿಯಾದವರು ಎಂದು ಹೇಳುತ್ತಿರುವವರು ವಾಸ್ತವ ಸಂಗತಿಯನ್ನು ಮರೆಮಾಚಿ ವಿತಂಡ ವಾದದ ಮೂಲಕ ವಿಷಯಾಂತರ ಮಾಡುವ ತಂತ್ರಗಾರಿಕೆ ಬಳಸುತ್ತಿದ್ದಾರೆ.

ಇತಿಹಾಸವನ್ನು ಮರೆಯಬೇಕು, ಹಳೆಯದನ್ನು ನೆನಪಿಸಿ ಒಂದು ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ ಎಂಬುದು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ನಕಲಿ ಉದಾರವಾದಿಗಳ ಅಂಬೋಣ. ಇದೇ ಜನ ಗುಜರಾತ್ ದಂಗೆಯ ಕುರಿತು ಬಂದ
-ರ್ಜಾನೀಯ’ ಚಿತ್ರ ಬಿಡುಗಡೆಯಾದಾಗ ನಡೆದ ಇತಿಹಾಸವನ್ನು ಮರೆಯಬಾರದು ಎನ್ನವುದಾ!?. ವಿವಾದಿತ ಬಾಬರಿ ಕಟ್ಟಡ ಬಿದ್ದ ತರುವಾಯ ನಡೆದ ಘಟನೆಗಳ ಕುರಿತು ಅಚ್ಯುತ್ ಪಟರ್ವಧನ್ ಅವರು ‘ರಾಮ್ ಕೇ ನಾಮ್’ ಸಾಕ್ಷ್ಯ ಚಿತ್ರ ನಿರ್ಮಿಸಿದ್ದರು. ಇದಕ್ಕೆ
ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ. ಹಳೆಯದನ್ನು ಕೆದಕಬಾರದು ಎಂದು ಪಾಠ ಮಾಡುತ್ತಿರುವವರು ಈ ಚಿತ್ರಕ್ಕೆ ಮುಕ್ತಕಂಠದಿಂದ ಪ್ರಶಂಸೆಯ ಸುರಿಮಳೆಗರೆದಿದ್ದರಲ್ಲ?! ೨೦೦೮ರಲ್ಲಿ ನಂದಿತಾ ದಾಸ್ ನಿರ್ದೇಶನದಲ್ಲಿ ಗುಜರಾತ್ ದಂಗೆಯ ಕುರಿತು ‘ಫಿರಾಕ್’ ಚಿತ್ರ ಬಿಡುಗಡೆ
ಯಾಗಿತ್ತು.

ಇವರ ಗೋಸುಂಬೆತನವನ್ನು ಖ್ಯಾತ ಪತ್ರಕರ್ತ ರಾಹುಲ್ ಶಿವಶಂಕರ್ ಇವರು ಚಿತ್ರವನ್ನು ತೆಗೆದಾಗ ಸತ್ಯದ ಶೋಧ ಕಾಶ್ಮೀರ ಫೈಲ್ಸ್ ಮಾತ್ರ ತಿರುಚಿದ ಚಿತ್ರ? ಇದು ಇವರ ಇಬ್ಬಂಗಿತನಕ್ಕೆ ಸಾಕ್ಷಿ ಎನ್ನುತ್ತಾರೆ. 1947ರಲ್ಲಿ ಸ್ವಾತಂತ್ರ್ಯ ಬಂದು ದೇಶ ವಿಭಜನೆಯಾಗಿ
ಸಾವಿರಾರು ಜನರ ನರಮೇಧವು ನಡೆದಿತ್ತು. ಲಕ್ಷಾಂತರ ಹಿಂದೂಗಳು ಮನೆ ಮಠ ಕಳೆದುಕೊಂಡು ನಿರಾಶ್ರತರಾಗಿ ಭಾರತಕ್ಕೆ ಬರ ಬೇಕಾಯಿತು. ಈ ಇತಿಹಾಸವನ್ನು ಮರೆತಿದ್ದರಿಂದ ಮತ್ತೆ 1971ರಲ್ಲಿ ಬಂಗ್ಲಾದೇಶ ನಿರ್ಮಾಣವಾದಾಗ ಸಾವಿರಾರು ಹಿಂದೂಗಳ ನರಮೇಧವಾಗುತ್ತದೆ.

ಲಕ್ಷಾಂತರ ಜನ ಆಸ್ತಿ ಪಾಸ್ತಿ ಕಳೆದುಕೊಂಡು ಭಾರತಕ್ಕೆ ನಿರಾಶ್ರಿತರಾಗಿ ಬರುವಂತಾಯಿತು. 1990 ರಲ್ಲಿ ನಡೆದ ಕಾಶ್ಮೀರದ ನರಮೇಧವು ಸುದ್ದಿಯೇ ಆಗದಂತೆ ಮುಚ್ಚಿ ಹಾಕಲಾಗಿತ್ತು. ಈ ಹಿಂದೆ ನಡೆದಿದ್ದ ಮಾರಣ ಹೋಮದಿಂದ ಪಾಠ ಕಲಿತಿದ್ದರೆ ಮತ್ತೊಮ್ಮೆ ಹಿಂದುಗಳು ನಿರಾಶ್ರಿತರಾಗುವ ಸ್ಥಿತಿ ಬರುತ್ತಿರಲಿಲ್ಲ. ತಡವಾಗಿಯಾದರೂ ಕಾಶ್ಮೀರದ ನರಮೇಧವನ್ನು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಮೂಲಕ ವಿವೇಕ್ ರಂಜನ್ ಅಗ್ನಿಹೋತ್ರಿ ನಮ್ಮೆಲ್ಲರ ಅಂತ:ಕರಣವನ್ನು ಕಲಕಿಸಿ ನೆನೆಪಿಸಿದ್ದಾರೆ. ಚಿತ್ರವೀಗ ಕೇವಲ ಸಿನಿಮಾವಾಗಿಲ್ಲ ಬದಲಿಗೆ ಮಲಗಿದ್ದ ಸಮಾಜವನ್ನು ಬಡಿದೆಬ್ಬಿಸುತ್ತಿರುವ ಎಚ್ಚರಿಕೆಯ ಗಂಟೆಯಾಗಿದೆ.