ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಬಹಿರಂಗಗೊಂಡ ಸಂಗತಿ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಸದ್ಯದ ರಾಜಕೀಯ ಸ್ಥಿತಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಅತಂತ್ರ -ಲಿತಾಂಶ ಕಾಣುವುದು ನಿಶ್ಚಿತ.
ಹೌದು, ಪಂಚರಾಜ್ಯ ಚುನಾವಣೆಯ ಗೆಲವಿನ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ನಾಯಕರಿಗೆ ಇದನ್ನು ಅರಗಿಸಿಕೊಳ್ಳುವುದು ತುಸು ಕಷ್ಟವೆನಿಸಿದೆ. ಆದರೆ ಪಕ್ಷದ ಆಂತರಿಕ ಸಮೀಕ್ಷೆಯೇ ಇಂಥದ್ದೊಂದು ಅಂಕಿ-ಅಂಶವನ್ನು ಮುಂದಿಟ್ಟಿದೆ. ಅದರ ಪ್ರಕಾರ,
ಸದ್ಯಕ್ಕೆ ಚುನಾವಣೆ ನಡೆಸಿದರೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ ಎನ್ನುವುದು ತಿಳಿದುಬಂದಿದೆ.
ಬಿಜೆಪಿ ರಾಷ್ಟ್ರೀಯ ನಾಯಕರ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಈ ಅಂಶ ಸ್ಪಷ್ಟ ವಾಗಿದ್ದು, ಬಿಜೆಪಿಗೆ ೭೫ರಿಂದ ೮೫ ಸೀಟುಗಳು ಬರುವ ಸಾಧ್ಯತೆಯಿದೆ. ಜೆಡಿಎಸ್ ಸ್ಥಾನ ಗಳು ೩೫ರಿಂದ ೪೩ ಸ್ಥಾನಕ್ಕೆ ಸೀಮಿತಗೊಳ್ಳಲಿದೆ. ಕಾಂಗ್ರೆಸ್ ಸಹ ೮೦ರ ಆಸುಪಾಸಿ ನಲ್ಲಿಯೇ ಉಳಿಯುವುದರಿಂದ, ಸ್ವಂತ ಬಲದ ಮೇಲೆ ಯಾರಿಗೂ ಅಧಿಕಾರಕ್ಕೆ ಬರುವ ಸಾಧ್ಯತೆಯಿಲ್ಲ.
ಆದರೆ, ಕಾಂಗ್ರೆಸ್ ಜತೆ ಜೆಡಿಎಸ್ ಹೋಗುವುದಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ ಎನ್ನುವುದು ಜೆಡಿಎಸ್ನ ನಡವಳಿಕೆಯಲ್ಲಿ ಸ್ಪಷ್ಟವಾಗುತ್ತಿದೆ. ಆದ್ದರಿಂದ ಒಂದು ವೇಳೆ ಅತಂತ್ರ ಸ್ಥಿತಿಯೇ ನಿರ್ಮಾಣವಾದರೆ, ಪುನಃ ಜೆಡಿಎಸ್ಗೆ ಆಡಳಿತ ಪಕ್ಷದಲ್ಲಿ ಕೂರುವ ಅದೃಷ್ಟ ಲಭಿಸಲಿದೆ ಎನ್ನಲಾಗುತ್ತಿದೆ.
ಚುರುಕಾಗಲು ಸೂಚನೆ: ವಿಧಾನಸಭೆಗೆ ಒಂದು ವರ್ಷ ಇರುವಾಗಲೇ ಈ ರೀತಿಯ ಅತಂತ್ರ ಫಲಿತಾಂಶದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರು, ರಾಜ್ಯದ ನಾಯಕರಿಗೆ ಚುರುಕಾಗಲು ಸೂಚನೆ ನೀಡಿದ್ದಾರೆ. ಬಾಕಿ ೧ ವರ್ಷ ದಲ್ಲಿ ಸಂಖ್ಯಾಬಲವನ್ನು ಹೆಚ್ಚಿಸುವುದಕ್ಕೆ ಅಗತ್ಯ ಸಂಘಟನೆ ಮಾಡಿಕೊಳ್ಳುವಂತೆ ಹಾಗೂ ಪಕ್ಷದ ಭದ್ರಕೋಟೆಯನ್ನು ಇನ್ನಷ್ಟು ಭದ್ರಗೊಳಿಸಿ ಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಆಡಳಿತ ವಿರೋಧಿ ಅಲೆ: ಸಮೀಕ್ಷೆಯನ್ವಯ ಕರ್ನಾಟಕದಲ್ಲಿ ಬಿಜೆಪಿಗೆ ಇರುವ ಬಹುದೊಡ್ಡ ಸವಾಲು ಎಂದರೆ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಬಹುಮತ ಪಡೆಯುವುದು. ಉತ್ತರ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿದ್ದರೂ,
ಗೆದ್ದು ಬರಲು ಯೋಗಿ ಆದಿತ್ಯನಾಥ್ ಕಾರ್ಡ್ ಅನ್ನು ಬಿಜೆಪಿ ಬಳಸಿತ್ತು.
ಆದರೆ ರಾಜ್ಯದಲ್ಲಿ ಈ ರೀತಿ ಟ್ರಂಪ್ ಕಾರ್ಡ್ ಸದ್ಯಕ್ಕೆ ಕಾಣಿಸುತ್ತಿಲ್ಲ. ಎಲ್ಲ ಸಮುದಾಯದ ಮತದಾರರನ್ನು ಒಲೈಸುವ ನಾಯ ಕತ್ವ, ಬಿಎಸ್ವೈ ಅವರಿಗಿದೆ. ಆದರೆ, ಅವರನ್ನು ಸಿಎಂ ಅಭ್ಯರ್ಥಿಯಾಗಿಸಲು ಸಾಧ್ಯವಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋದರೂ, ಸಿಎಂಯಾರಾಗಲಿದ್ದಾರೆ ಎನ್ನುವ ಗೊಂದಲ ಮತದಾರರಿಗೂ ಇರುವುದರಿಂದ, ಇದನ್ನು ಮೆಟ್ಟಿ ನಿಲ್ಲುವುದು ಸವಾಲಾಗಿದೆ. ಹಿಂದುತ್ವ ವಿಚಾರ ದಲ್ಲಿ ಮತಗಳ ಕ್ರೋಡೀಕರಣಕ್ಕೆ ಕೇಂದ್ರ ನಾಯಕರು ಚಿಂತನೆ ನಡೆಸಿದ್ದಾರೆ.
ಆದರೆ ಉತ್ತರ ಭಾರತದಲ್ಲಿ ಧರ್ಮದ ಮೇಲೆ ಮತಗಳ ಕ್ರೋಡೀಕರಣವಾದಷ್ಟು ಸುಲಭದಲ್ಲಿ ದಕ್ಷಿಣ ಭಾರತದಲ್ಲಿ ಈ ವಿಚಾರ ಪ್ರಭಾವ ಬೀರುವುದು ಕಷ್ಟ. ಹೀಗಾಗಿ ಬಲವಾದ ವಿಷಯವಿಲ್ಲದೇ ಉತ್ತರದ ರೀತಿಯಲ್ಲಿ ಚುನಾವಣೆ ನಡೆಸುವುದು ಕಷ್ಟ ಎನ್ನು ವುದು ಬಿಜೆಪಿ ನಾಯಕರಿಗೆ ಈ ಹಿಂದಿನ ಚುನಾ ವಣೆಯಲ್ಲಿಯೇ ಸ್ಪಷ್ಟವಾಗಿದೆ. ಆದ್ದರಿಂದ ಯಾವ ವಿಷಯದ ಮೇಲೆ ಚುನಾವಣೆ ಎದುರಿಸಬೇಕು ಎನ್ನುವ ಗೊಂದಲದಲ್ಲಿ ನಾಯಕರಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಮತ್ತೆ ಕಿಂಗ್ ಮೇಕರ್?
ಕಳೆದ ಎರಡು ಮೂರು ಚುನಾವಣೆಯಂತೆ ಜೆಡಿಎಸ್ ಈ ಬಾರಿಯೂ ಕಿಂಗ್ ಮೇಕರ್ ಆಗಿಯೇ ಮುಂದುವರಿಯುವುದು ಬಹುತೇಕ ನಿಶ್ಚಿತ. ಸದ್ಯದ ಪರಿಸ್ಥಿತಿಯಲ್ಲಿ ೩೫ರಿಂದ ೪೩ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಅದರಲ್ಲಿಯೂ ಹಳೇ ಮೈಸೂರು ಭಾಗದಲ್ಲಿರುವ ಕಾಂಗ್ರೆಸ್ನ ಕೆಲ ಸ್ಥಾನಗಳನ್ನು ಜೆಡಿಎಸ್ ಪಡೆಯುವ ಉತ್ಸಾಹದಲ್ಲಿದೆ. ಒಂದು ವೇಳೆ ಈ ರೀತಿಯ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಮತ್ತೊಮ್ಮೆ ಸಾಂದರ್ಭಿಕ ಶಿಶುವಿನ ರೀತಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.
ರಾಜ್ಯದ ಸವಾಲೇನು?
ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಅನುಮಾನ
ಮತ್ತೊಮ್ಮೆ ಜೆಡಿಎಸ್ ಆಗಲಿದೆ ಕಿಂಗ್ ಮೇಕರ್
ಸರಕಾರಿ ವಿರೋಧಿ ಅಲೆ ಸವಾಲು
ಪಕ್ಷದಲ್ಲಿನ ಸಾಮೂಹಿಕ ನಾಯಕತ್ವದ ಪ್ರಶ್ನೆ
ಚುನಾವಣೆ ಎದುರಿಸಲು ವಿಷಯದ ಕೊರತೆ
ದಕ್ಷಿಣದಲ್ಲಿ ಬೆಲೆ ಪಡೆಯದ ಹಿಂದುತ್ವ
ರಾಜ್ಯದಲ್ಲಿ ಸದ್ಯಕ್ಕೆ ಕಾಣದ ಟ್ರಂಪ್ ಕಾರ್ಡ್
ಪಕ್ಷದ ಕ್ಷೇತ್ರ ಭದ್ರಪಡಿಸಿಕೊಳ್ಳಲು ಸೂಚನೆ
ವರ್ಷದಲ್ಲಿ ಇನ್ನಷ್ಟು ಪಕ್ಷ ಬಲಗೊಳಿಸುವ ತಂತ್ರ