Wednesday, 11th December 2024

ಧರ್ಮಕ್ಕೆ ಬದುಕು ಬಲಿಯಾಗದಿರಲಿ

ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಮಾಜದ ಎಲ್ಲ ಧರ್ಮ-ಜಾತಿ- ಜನಾಂಗದವರೂ ಮನೆಯಿಂದ ಹೊರಗೆ ಬರಲಾರದೇ ಬೇರೆ ದಾರಿಯೂ ಕಾಣದೇ ಯಾವಾಗ ಲಾಕ್ ಡೌನ್ ಮುಗಿಯುತ್ತದೋ, ಯಾವಾಗ ನಾವು ದುಡಿದು ತಿನ್ನುತ್ತೇವೆಯೋ ಎಂಬ ಚಿಂತೆಯಲ್ಲಿದ್ದರು. ತರಗತಿಗಳೂ ಆನ್ ಲೈನ್ ಆಗಿ ಪರಿಣಾಮಕಾರಿ ಕಲಿಕೆಯಿಲ್ಲದೇ ವಿದ್ಯಾರ್ಥಿಗಳು, ಪೋಷಕರು ಕೂಡ ಕಂಗೆಟ್ಟಿದ್ದರು.

ಎಲ್ಲರೂ ಒಂದು ಬಾರಿ ಲಾಕ್‌ಡೌನ್ ತೆರವಾಗಿ ಎಲ್ಲವೂ ಸಹಜ ಸ್ಥಿತಿಗೆ ಬಂದರೆ ಸಾಕಪ್ಪಾ ಎಂದು ಪ್ರಾರ್ಥಿಸಿದವರೇ. ಈಗ ಎಲ್ಲವೂ ತಿಳಿಯಾಗಿ ಬದುಕು ಪುನಃ ಕಟ್ಟಿಕೊಳ್ಳುವ ಸಮಯ. ಸಾಂಕ್ರಾಮಿಕ ತಂದಿಟ್ಟ ಆರ್ಥಿಕ-ಸಾಮಾಜಿಕ. ಶೈಕ್ಷಣಿಕ ಸಂಕಷ್ಟದಿಂದ  ತೊಳಲಾ ಡಿದವರೆಲ್ಲ, ಇಂದಿಗೂ ಸುಧಾರಿಸಿಕೊಂಡ್ಲಿ. ಹೀಗಿರುವಾಗ ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಧರ್ಮದ ಹೆಸರಲ್ಲಿ ವ್ಯಾಪಾರಿಗಳಲ್ಲಿ ಕಲಹ ಆರಂಭವಾಗಿರುವುದು ಅಪಾಯಕಾರಿ ಸಂಗತಿ.

ಇತ್ತ ಶಾಲೆಗಳೂ ಸರಿಯಾಗಿ ಆರಂಭವಾಗದೇ ಹಿಜಾಬ್ ಗಲಾಟೆಗೆ ಸಿಲುಕಿದೆ. ಅನಗತ್ಯ ಗೊಂದಲ ಮಾಡಿಕೊಂಡು ವಿದ್ಯಾರ್ಥಿಗಳು ಶಾಲೆ-ಪರೀಕ್ಷೆಗಳಿಂದ ಹೊರ ನಡೆಯುತ್ತಿದ್ದಾರೆ. ಅಂಥ ಭೀಕರ ಕರೋನಾ ಸಂಕಷ್ಟದಿಂದ ಯಾರೂ ಪಾಠ ಕಲಿತಂತಿಲ್ಲ. ಹಿಜಾಬ್‌ಗಾಗಿ ಬಂದ್ ಮಾಡುವುದು, ಜಾತ್ರೆಯ ನೆಪದಲ್ಲಿ ಅಂಗಡಿ ತೆರೆಯದಂತೆ ಮಾಡುವುದು, ಇಂಥವನ್ನೇ ದೊಡ್ಡದು ಮಾಡಿ ಮತ್ತೆ ಬದುಕನ್ನು ಸಂಕಷ್ಟಕ್ಕೆ ದೂಡಿಕೊಳ್ಳುವುದು ಇವೆಲ್ಲಾ ಬೇಕೇ? ಯಾರೋ ತಮ್ಮ ರಾಜಕೀಯ ಲಾಭಕ್ಕಾಗಿ ಹುಟ್ಟು ಹಾಕುವ ಇಂಥ ವಿವಾದಗಳಿಗೆ ಸಮಾನ್ಯರು ಬಲಿಯಾಗುತ್ತಿರುವುದು ವಿಪರ್ಯಾಸ.

ನಮ್ಮಲ್ಲಿ ಜಾತ್ರೆ, ಹಬ್ಬ ಮತ್ತು ಆಚರಣೆಗಳು ಎಂದಿಗೂ ಸರ್ವ ಧರ್ಮ ಮತ್ತು ಜಾತಿಯ ಭಾವೈಕ್ಯದ ಸಂಕೇತ. ದೇಗುಲಗಳಿಗೆ ಬರುವ
ಮುಸ್ಲೀಮರನ್ನು, ದರ್ಗಾಗಳಿಗೆ ಹೋಗುವ ಹಿಂದೂಗಳ ಎಷ್ಟೋ ಉದಾಹರಣೆಗಳಿವೆ ರಾಜ್ಯದಲ್ಲಿ. ಸೂಫಿಗಳು, ಸಾಧು ಸಂತರು, ಶರಣರು ಹುಟ್ಟಿದ ಈ ನಾಡಿನಲ್ಲಿ ಧಾರ್ಮಿಕ ಏಕತೆ ಮತ್ತು ಸಾಮಾಜಿಕ ಸಾಮರಸ್ಯದ ವಾತಾವರಣವಿದ್ದು, ಕೆಲ ರಾಜಕಾರಣಿಗಳು, ಕುತ್ಸಿತ ಮನೋಭಾವದವರು ಇದನ್ನು ವಿಘಟಿಸುತ್ತಿದ್ದಾರೆ.

ಧರ್ಮಾಧಾರಿತ ದ್ವೇಷ ಮೂಡಿಸುವ ದುಷ್ಟ ಶಕ್ತಿಗಳನ್ನು ದೂರವಿಟ್ಟು ಸಾಮಾನ್ಯರು ಬದುಕು ಕಟ್ಟಿಕೊಳ್ಳುವುದು ಜಾಣತನ. ಇಲ್ಲದೇ
ಹೋದರೆ ತುತ್ತು ಅನ್ನಕ್ಕೂ ಪರದಾಡುವ ದಿನಗಳು ಎದುರಾಗಲಿವೆ. ಚುನಾವಣೆ ಮತಾಧಾರಿತ ಇಂಥ ಕುತಂತ್ರಕ್ಕೆ ಬಲಿಯಾಗದೇ ಜನ ಬುದ್ಧಿ ಕಲಿಸಬೇಕು.