Wednesday, 11th December 2024

ತೈಲ ಬೆಲೆ ಏರಿಕೆ ನಿಯಂತ್ರಿಸಿ

#Petrol #Diesel

ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ ತಲಾ 80 ಪೈಸೆಯಷ್ಟು ಹೆಚ್ಚಿಸಿದ್ದು, ಇದರೊಂದಿಗೆ ಕಳೆದ ೧೩ ದಿನಗಳಲ್ಲಿ ಎರಡೂ ಇಂಧನಗಳ ದರ ಪ್ರತಿ ಲೀಟರ್‌ಗೆ 8 ರು. ಹೆಚ್ಚಾದಂತಾಗಿದೆ. ಇನ್ನೊಂದೆಡೆ ವಾಣಿಜ್ಯ ಬಳಕೆಯ ಅಡುಗೆ ಅನಿಲದ ದರವನ್ನು ಪ್ರತಿ ಸಿಲಿಂಡರ್‌ಗೆ 250 ರು. ಹೆಚ್ಚಳ ಮಾಡಲಾಗಿದೆ.

ಇದರಿಂದಾಗಿ ವಾಣಿಜ್ಯ ಬಳಕೆಯ 19ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ 2325 ರು. ಗೆ ಏರಿಕೆ ಆಗಿದೆ. ಮತ್ತೊಂದೆಡೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮವಾಗಿ ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆಯು ಗಗನಮುಖಿಯಾಗಿ ನಿಂತಿದೆ. ಸಿಮೆಂಟ್, ಕಬ್ಬಿಣ, ಆಹಾರ ಪದಾರ್ಥ ಸೇರಿ ಸಾಮಾನ್ಯ ವ್ಯಕ್ತಿ ಬಳಸುವ ಪ್ರತಿ ವಸ್ತುವಿನ ಬೆಲೆ ನಿತ್ಯವೂ ಜಿಗಿಯುತ್ತಿದೆ. ಕೋವಿಡ್ ಮತ್ತು ಲಾಕ್‌ಡೌನ್
ಗಳಿಂದಾಗಿ ಬಸವಳಿದಿದ್ದ ಜನಸಮುದಾಯಕ್ಕೆ ಈ ಬೆಲೆ ಏರಿಕೆಯಿಂದಾಗಿ ಬರಸಿಡಿಲು ಬಡಿದಂತಾಗಿದೆ. ಈ ಬೆಲೆ ಏರಿಕೆಯಿಂದಾಗಿ ಅನೇಕರ ಜೇಬು ಖಾಲಿಯಾಗುತ್ತಿದ್ದರೆ, ಕೆಲವೇ ಕೆಲವು ಜನರ ಜೇಬು ತುಂಬುತ್ತಿದೆ.

ಇದು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತಿದೆ. ಯುಪಿಎ ಸರಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 108 ಡಾಲರ್ ಇತ್ತು. ಆಗ ಪ್ರತಿ ಲೀಟರ್ ಪೆಟ್ರೋಲ್ 71.41 ಹಾಗೂ ಡೀಸೆಲ್ 55.49 ರು. ಇತ್ತು. ಇಂದು ಕೂಡ ಕಚ್ಚಾ ತೈಲ ಬೆಲೆ ಅಷ್ಟೇ ಪ್ರಮಾಣದಲ್ಲಿ ಇದೆಯಾದರೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 108 ಹಾಗೂ ಡೀಸೆಲ್ 92 ರು. ಆಗಿವೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 37 ಹಾಗೂ ಡೀಸೆಲ್ 36.45 ರು. ನಷ್ಟು ಹೆಚ್ಚುವರಿ ದರ ವಸೂಲಿ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

ಹಾಗಾದರೆ ಕೇಂದ್ರ ಸರಕಾರಕ್ಕೆ ತೈಲ ಬೆಲೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲವಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯ ದಲ್ಲಿ ಮೂಡಿದೆ. ಚುನಾವಣೆ ಹೊಸ್ತಿಲಲ್ಲಿ ಮಾತ್ರ ತೈಲ ಬೆಲೆಗಳನ್ನು ನಿಯಂತ್ರಣಕ್ಕೆ ತಂದು, ನಂತರದ ದಿನಗಳಲ್ಲಿ ಹೆಚ್ಚಿಸಿದರೆ ಸರಕಾರದ ಮೇಲೆ ಸಾರ್ವಜನಿಕರಲ್ಲಿ ಅನುಮಾನ ಮೂಡುತ್ತದೆ. ಹೀಗಾಗಿ ಕೂಡಲೇ ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲಿನ ಎಕ್ಸೈಸ್ ಸುಂಕ ಹಾಗೂ ಮೌಲ್ಯವರ್ಧಿತ ತೆರಿಗೆ ಪ್ರಮಾಣವನ್ನು ತಗ್ಗಿಸಿ ಅವುಗಳ ದೇಶಿ ಮಾರುಕಟ್ಟೆ ಬೆಲೆಯು ವಿಪರೀತದ ಮಟ್ಟ ತಲುಪದಂತೆ ನೋಡಿಕೊಳ್ಳಬೇಕಿದೆ.