Saturday, 23rd November 2024

ಬಳಸಿದರಲ್ಲವೆ ಕನ್ನಡದ ಉಳಿಯೋದು

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಮಾತನಾಡುವಾಗ ಕನ್ನಡಿಗರಲ್ಲೆ ಒಂದು ರೀತಿಯ ಅಳುಕು, ಭಯದ ಭಾವನೆಯ ವಾತಾ ವರಣ ಕಂಡು ಬರುತ್ತಿರುವುದು ಕೇವಲ ಎರಡು ದಶಕಗಳ ಇತ್ತೀಚಿನದ್ದು.

ಇದಕ್ಕೆ ಕಾರಣ ಹೆಚ್ಚುತ್ತಿರುವ ಇಂಗ್ಲಿಷ್ ಶಿಕ್ಷಣದ ವಿನ್ಯಾಸಗಳು. ಹೆಚ್ಚು ಸಂಬಳ ಪಡೆಯುವ, ಅಥವಾ ಗೀಟುವ ಉದ್ಯೋಗ ಸಿಗಬೇಕಾದರೆ ಇಂಗ್ಲಿಷಿನ ಮೊರೆಹೋಗಲೇಬೇಕೆಂಬ ಅನಿವಾರ್ಯದಿಂದ ಹೊರ ಬರಲಾರದೆ, ಕನ್ನಡದ ಉಳಿವಿನ ಬಗ್ಗೆ ಅಣಕು ಸಹಾನುಭೂತಿಯನ್ನು ಪ್ರದರ್ಶಿಸುತ್ತೇವೆ. ಬೀದಿಯಲ್ಲಿ, ವೇದಿಕೆಯಲ್ಲಿ ನಿಂತು ಕನ್ನಡ ಉಳಿವಿನ ಬಗ್ಗೆ ಮಾತಾಡುವವರಲ್ಲಿ ಹೆಚ್ಚಿನವರು ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಓದಿಸುತ್ತಿರು ವವರು.

ಇಂಗ್ಲಿಷನ್ನು ಹೆಚ್ಚು ಸಂಬಳ ಕೊಡುವ ಉದ್ಯೋಗಕ್ಕಾಗಿ, ಒಣಪ್ರತಿಷ್ಠೆಗಾಗಿ ಅಪ್ಪಿ ಕೊಂಡವರೇ ಇರುವಾಗ ಕನ್ನಡ ಉಳಿವಿನ ಕೂಗು ಮೂಕರೋಧನೆಯಾಗುತ್ತಿದೆ. ಪ್ರತಿಷ್ಠೆಗಾಗಿ ಕನ್ನಡ ಮರೆತವರು ಅಧುನಿಕ ಆಂಗರಾಗಲಿಲ್ಲ. ಯಾಕೆಂದರೆ ಇವರ ಸಂಸ್ಕೃತಿಯ ಬೇರಿರುವುದು ಕನ್ನಡದ ನೆಲದಲ್ಲಿ. ಆದರೆ ಇವರು ಭಾವನಾತ್ಮಕವಾಗಿ ಕನ್ನಡಿಗರಾಗಿ ಉಳಿಯಲಿಲ್ಲ. ಆದರೂ ಕನ್ನಡದ ನೆಲದಲ್ಲಿ ಕನ್ನಡಿಗರಾಗಿಯೇ ಇವರಿ ರುತ್ತಾರೆ. ಪ್ರಾದೇಶಿಕವಾದ ನೆಲೆಯಲ್ಲಿ ಕನ್ನಡಿಗರಾಗುವುದು ಬೇರೆ, ಭಾವನಾತ್ಮಕ ವಾಗಿ ನಿತ್ಯದ ಜೀವನದಲ್ಲಿ ಕನ್ನಡತನವನ್ನು ಹೊಂದಿ ಕನ್ನಡಿಗರಾಗುವುದು ಬೇರೆ.

ನಮ್ಮ ಭಾಷೆ, ಸಂಸ್ಕೃತಿಯ ವಾಹಕರಾಗಿದ್ದುಕೊಂಡೇ ವಿಭಿನ್ನ ಭಾಷೆಗಳಲ್ಲಿರುವುದನ್ನು ತಾರ್ಕಿಕವಾದ ನೆಲೆಯಲ್ಲಿ ದಕ್ಕಿಸಿ ಕೊಂಡಾಗ ಮಾತ್ರ ನಮ್ಮ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯ. ಭಾಷೆ ಉಳಿದು ಸಾಹಿತ್ಯವೂ ಬೆಳೆಯುತ್ತದೆ. ಸದ್ಯದ ಮಟ್ಟಿಗೆ ಈ ಕಾರ್ಯ ಕನ್ನಡದಲ್ಲಿ ಚೆನ್ನಾಗಿಯೇ ಆಗುತ್ತಿದೆ. ಹಳ್ಳಿಗರ ಕನ್ನಡ ಇನ್ನೂ ಸ್ಥಾವರರೂಪಿಯಾಗೇ ಇರಲು ಕಾರಣ ಈ ಬಗೆಯ ತಾರ್ಕಿಕ ಪ್ರಕ್ರಿಯೆಗೆ ಒಳಗಾಗದೇ ಇರುವುದರಿಂದ. ಹಳ್ಳಿಗರ ಕನ್ನಡದಿಂದಾಗಿಯೇ ಇಂದಿಗೂ ಅನೇಕ ಕನ್ನಡ ಪದಗಳು ಜೀವಂತ ವಾಗುಳಿದಿದೆ. ಅಧುನಿಕತೆಗೊಗ್ಗಿಕೊಂಡ ಕನ್ನಡದಲ್ಲಿ ಅಂಥ ಪದಗಳ ಸ್ಥಾನವನ್ನು ಆಂಗ್ಲಪದಗಳು ಆಕ್ರಮಿಸಿವೆ. ಕನ್ನಡದ ಜಾಯಮಾನಕ್ಕೆ ಹೊಂದಿಕೊಂಡೇ ಅನ್ಯ ಭಾಷೆಯ ಸ್ವೀಕರಣವಾಗಬೇಕು.

ಕನ್ನಡ ಕೇವಲ ಭಾಷೆಯಲ್ಲ. ಅದೊಂದು ಸಂಸ್ಕೃತಿ. ಅದೊಂದು ಆಂತರಿಕ ಜಗತ್ತು. ಬಹಿರಂಗದಲ್ಲಿ ನಾವೇನು ನೋಡುತ್ತೇ ವೆಯೋ ಅವೆಲ್ಲವೂ ಭಾಷಾರೂಪಕ್ಕೆ ರೂಪಾಂತರವಾಗಿ ನಮ್ಮೊಳ ಜಗತ್ತಿನ ನಿರ್ಮಾಣವಾಗುತ್ತಿರುತ್ತದೆ. ಹೊರಜಗತ್ತನ್ನು ಗ್ರಹಿಸುವ ಕ್ರಮ ಎನ್ನುತ್ತಾರೆ ಎಚ್‌ಎಸ್‌ವಿ. ಕನ್ನಡದ ಮನಸ್ಸಿಗೆ ಈ ಸಂವೇದನೆವುಂಟಾದರೆ ಕನ್ನಡ ಶ್ರೀಮಂತ ವಾಗುತ್ತದೆ. ಕವಿರಾಜ ಮಾರ್ಗಕಾರನ ಕನ್ನಡ ಆವಿರ್ಭವಿಸುತ್ತದೆ. ಜಾಗತೀಕರಣದ ಈ ಪರ್ವದಲ್ಲಿ ನಮ್ಮ ಪೂರ್ವಜರಿಗಿಲ್ಲದ ಮುಖಾಮುಖಿ ನಮಗಿದೆ. ಅದನ್ನು ಸಮರ್ಥವಾಗಿ ಎದುರಿಸುತ್ತಲೇ ಕನ್ನಡ ಬೆಳೆಯಬೇಕು.

ಕನ್ನಡ ನಮ್ಮ ಪಾಲಿಗೆ ಸಿರಿಗನ್ನಡವಾಗಿ ನಮ್ಮೊಳಗಿನ ಕನ್ನಡ ಪ್ರಪಂಚಕ್ಕೆ ಘಾಸಿ ಮಾಡಿಕೊಳ್ಳದೆ ನಮ್ಮ ಭಾವ ಪ್ರಪಂಚದ ವಿಸ್ತಾರ ಬೆಳೆ ಸುವ ಭಾಷೆಯಾಗಿ ಬೆಳೆದು ಬಾಳಬೇಕಾದ ಸಂಕ್ರಮಣದಲ್ಲಿದೆ. ಇಂಗ್ಲಿಷಿನ ಪ್ರಭಾವದಿಂದಾಗಿ ಕನ್ನಡವನ್ನು ಸಂಪೂರ್ಣವಾಗಿ ಉಳಿಸಿಕೊಳ್ಳಲು ಸಾಧ್ಯವಾಗದೇ ಹೋಗುತ್ತದೆಯೇನೋ!

ಅತೀಯಾದ ಇಂಗ್ಲಿಷಿನ ಹುಚ್ಚಿನಲ್ಲಿ ಕನ್ನಡ ಭಾಷೆ, ಅದು ಪ್ರತಿನಿಧಿಸುವ ಸಂಸ್ಕೃತಿಯನ್ನು ಎರಡನ್ನೂ ಸಾಯಿಸುತ್ತಿರುವು
ದು ನಮ್ಮ ಬುದ್ಧಿಭಾವಗಳಿಗೆ ಹಿಡಿದ ದಾರಿದ್ರ . ತುಳು, ಮರಾಠಿ, ತಮಿಳಿಗರಿಗೆ ಇರುವಷ್ಟು ಭಾಷಾಭಿಮಾನ ಕನ್ನಡಿಗರಲ್ಲಿಲ್ಲ. ಕನ್ನಡವನ್ನು ಶಿಕ್ಷಣದ ಎಲ್ಲಾ ಹಂತಗಳಲ್ಲೂ ಸಶಕ್ತವಾಗಿ ಬಳಸಬೇಕು. ಆಡಳಿತ ಭಾಷೆಯಾಗಿ, ಬೋಧನೆ- ಕಲಿಕೆಯ, ಸಾಹಿತ್ಯ ನಿರ್ಮಾಣದ ಸಾಧನವಾಗಿ ಕನ್ನಡ ಬಳಕೆಯಾಗಬೇಕು. ಭಾಷೆಯ ವಿಷಯವಲ್ಲದೆ, ವಿಜ್ಞಾನ ಶಿಕ್ಷಣ ವೃತ್ತಿಪರ ಶಿಕ್ಷಣ ಸಂದರ್ಭ ದಲ್ಲೂ ಕನ್ನಡ ನುಡಿ ಬಳಕೆಯಾಗಬೇಕು ಎನ್ನುತ್ತಾರೆ ಶಿಕ್ಷಣತಜ್ಞ ಡಾ.ಮಹಾಬಲೇಶ್ವರ ರಾವ್.

“ಜಗತ್ತಿನ ವಿಷಯಜ್ಞಾನಗಳ ಗಳಿಕೆ ಆಂಗ್ಲಭಾಷೆಯಲ್ಲಾಗಬೇಕು. ಅಭಿವ್ಯಕ್ತಿ ಕನ್ನಡದಲ್ಲಾಗಬೇಕು. ಇದು ಎಲ್ಲಾ ಭಾಷೆಗಳಿಗೆ ಅನ್ವಯಿಸಬಹುದಾದ ಮಾತು ಎನ್ನುತ್ತಾ ಕನ್ನಡ ಬ್ರಾಹ್ಮಣವಾಗಬೇಕೆಂಬ ಆಶಯ ಅನಂತಮೂರ್ತಿ ಯವರದ್ದಾಗಿತ್ತು. ಸದ್ಯದ ಸ್ಥಿತಿಯಲ್ಲಂತೂ ಕನ್ನಡ ನಿರಂತರ ಸವಾಲುಗಳ ನಡುವೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಯೆನ್ನುತ್ತಾರೆ ಡಾ.ಅಜಕ್ಕಳ ಗಿರೀಶ ಭಟ್ಟ. ಇಂಗ್ಲಿಷಿನ ನಿರಂತರವಾದ ಸವಾಲುಗಳ ಮಧ್ಯೆಯೇ ಕನ್ನಡ ಸಶಕ್ತವಾಗೇ ಇದೆ. ಇದು ಅಚ್ಚರಿಯಾದರೂ ಸತ್ಯ. ಒಂದು ಮಟ್ಟಿಗೆ ಕನ್ನಡದಲ್ಲಿ ಓದುಗರು ಹೆಚ್ಚುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ.

ಕನ್ನಡ ಉಳಿವಿನ ಹೋರಾಟದ ಪ್ರತಿಫಲವಾಗಿ ಶೈಕ್ಷಣಿಕ ಕೇಂದ್ರಗಳಲ್ಲಿ, ಸರಕಾರ-ಸರಕಾರೇತರ ಸಂಘಟನೆಗಳಲ್ಲಿ, ಸಭೆಗಳಲ್ಲಿ ಕನ್ನಡದ ಉಲಿ ಮೊಳಗುತ್ತಿದೆ. ಕನ್ನಡ ವನ್ನು ನಿತ್ಯಬದುಕಿನಲ್ಲೂ ಬಳಸಬೇಕೆಂಬ ಒಲವು ಹೆಚ್ಚುತ್ತಿದೆ. ಕನ್ನಡದಲ್ಲೇ ಮಾತನಾ ಡುವವರು ಹೆಚ್ಚುತ್ತಿದ್ದಾರೆ. ಕನ್ನಡ ಪುಸ್ತಕಗಳನ್ನು ಕೊಂಡು ಓದುವವರು ವಿರಳವಾಗುತ್ತಿದ್ದಾರೆ. ಹಾಗಂತ ದಿನ ಪತ್ರಿಕೆಯನ್ನು ಓದುವವರಿದ್ದಾರೆ. ಕನ್ನಡ ಕೃತಿ ಗಳನ್ನು ಓದುವವರು ಕಡಿಮೆ. ಪ್ರಕಾಶ ಕಂಬತ್ತಳ್ಳಿಯವರ ಪ್ರಕಾರ, ಸದ್ಯದ ಮಟ್ಟಿಗೆ ಪುಸ್ತಕೋ ದ್ಯಮಕ್ಕೆ ತೊಂದರೆಯಿಲ್ಲ. ಆದರೆ ಮುಂದೆ ಕಷ್ಟವಿದೆ. ಈಗಾಗಲೇ ಕೆಲವು ಪುಸ್ತಕದಂಗಡಿಗಳು ಮುಚ್ಚಿದೆಯೆಂದು ಹೇಳುವ ಅವರು ಕನ್ನಡ ಕಲಿವವರ ಸಂಖ್ಯೆ ಹೆಚ್ಚಬೇಕಿದೆಯೆನ್ನುತ್ತಾರೆ.

೩ ಸಾವಿರಕ್ಕಿಂತ ಹೆಚ್ಚು ಬೆಲೆಯ ಪುಸ್ತಕಗಳನ್ನು ಖರೀದಿಸಿದರೆ ಇಎಂಐ ಸೌಲಭ್ಯವನ್ನು ಸಪ್ನದವರು ನೀಡುತ್ತಿದ್ದಾರೆ. ಓದುವ,
ಓದಿಸುವ ಶಿಕ್ಷಕ ವರ್ಗ ಕಡಿಮೆಯಾಗಿದೆಯೆಂದು ಅಭಿನವದ ರವಿಕುಮಾರ್ ಹೇಳುತ್ತಾರೆ. ಫ್ರೀ ಡೆಲಿವರಿ, ಫ್ರೀ ಆರ್ಡರ್ ಅಂಥ ಕಾರ್ಯಕ್ರಮಗಳ ಮೂಲಕ ತಾನು ಯಶಸ್ವಿಯಾಗಿ ದ್ದೇನೆಂದು ಸಾವಣ್ಣ ಪ್ರಕಾಶನದ ಜಮೀಲ್ ಹೇಳುತ್ತಾರೆ.

ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಯಬೇಕೆಂದರೆ ಹಿರಿಯರು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಮನೆಯಲ್ಲಿ ಬೆಳೆಸಬೇಕು. ಮದುವೆ, ಬ್ರಹ್ಮೋಪದೇಶ, ಹುಟ್ಟುಹಬ್ಬ, ಗೃಹಪ್ರವೇಶ ಇತ್ಯಾದಿ ಸಂದರ್ಭಗಳಲ್ಲಿ ಪುಸ್ತಕಗಳನ್ನೇ ಉಡುಗೊರೆ
ಯಾಗಿ ಕೊಡುವ ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕು. ಪ್ರತಿ ಮನೆಯೂ ಒಂದು ಲೈಬ್ರರಿಯನ್ನು ಇಟ್ಟುಕೊಂಡರೆ ತುಂಬಾ
ಉಪಯುಕ್ತ. ದಿನಗಳೆದಂತೆ ಅದು ವಿಸ್ತಾರವನ್ನು ಪಡೆಯುತ್ತಾ ಹೋಗುತ್ತದೆ. ಸಾಕ್ಷರತೆಯ ಪ್ರಮಾಣವೂ ಇದರಿಂದಾಗಿ
ಹೆಚ್ಚುತ್ತದೆ. ಮಕ್ಕಳಲ್ಲಿ ಪುಸ್ತಕ ಪ್ರೀತಿಯೊಂದಿಗೆ ಪುಸ್ತಕ ಸಂಸ್ಕೃತಿಯೂ ಬೆಳೆಯುತ್ತದೆ.

ಕನ್ನಡ ಉಳಿಸುವುದು, ಬೆಳೆಸುವುದೆಂದರೆ ಅದನ್ನು ನಿತ್ಯದ ಬದುಕಿನಲ್ಲಿ ಬಳಸುವುದು, ಬಳಸುವಲ್ಲಿ ಕ್ರಿಯಾಶೀಲರಾಗುವುದು. ಮಾತನಾಡುವಾಗ ಇಂಗ್ಲಿಷ್ ಪದಗಳು ಬಂದೇ ಬರುತ್ತವೆ. ಬರಲಿ, ಕನ್ನಡದ ಲಯತಪ್ಪದಂತೆ ಮಾತಿನ ಸಾರ ಕನ್ನಡದಲ್ಲೇ ಅಭಿವ್ಯಕ್ತಿಯಾಗಿಸಬೇಕು. ನನ್ನ ಭಾಷೆಯೆಂಬ ಅಭಿಮಾನವಷ್ಟೇ ಸಾಲದೆ ನನ್ನ ಭಾಷೆಗೆ ಅವಮಾನವಾದರೆ ಸಹಿಸುವುದಿಲ್ಲವೆಂಬ ಅರಿವೂ ಹುಟ್ಟ ಬೇಕಿದೆ. ಕನ್ನಡದ ಭಿನ್ನತೆಗಳನ್ನು ಸ್ವೀಕರಿಸಬೇಕು. ಒಟ್ಟಂದದಲ್ಲಿ ಕಲೆತಾಗ ಕನ್ನಡವನ್ನೇ ಸಂವಹನ ಮಾಧ್ಯಮ ವನ್ನಾಗಿ ಬಳಸಿದರೆ ಭಾಷೆ ಬೆಳೆಯುತ್ತದೆ.

ಮಕ್ಕಳನ್ನು ಪುಸ್ತಕಲೋಕಕ್ಕೆ ಕರೆದೊಯ್ಯುವ ಜವಾಬ್ದಾರಿ ಪೋಷಕರದ್ದು. ಮುಖ್ಯವಾಗಿ ಯುವಜನತೆಯಲ್ಲಿ ಪುಸ್ತಕಗಳ ಅಭಿರುಚಿಯನ್ನು ಬೆಳೆಸಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ಹೊಸ ಪುಸ್ತಕ ಪರಿಚಯದಂಥ ಸ್ಪರ್ಧೆ, ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಸರಕಾರ ಗ್ರಂಥಾಲಯಗಳಿಗೆ ಉತ್ತಮ ಪುಸ್ತಕಗಳನ್ನು ಕೊಳ್ಳಬೇಕು. ಶಾಲಾಕಾಲೇಜುಗಳಲ್ಲೂ ಸಭೆ ಸಮಾರಂಭ ಗಳಲ್ಲೂ ಇದೇ  ಕ್ರಮವನ್ನನುಸರಿಸಬೇಕು.

ಸರಕಾರ-ಸರಕಾರೇತರ ವಿದ್ಯಾಲಯಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, ಯೂನಿಯನ್ ಗಳಲ್ಲಿ ಅವುಗಳ ವೆಬ್‌ಸೈಟ್‌ಗಳನ್ನು ಕಡ್ಡಾಯ ವಾಗಿ ಕನ್ನಡದಲ್ಲೇ ವಿನ್ಯಾಸಗೊಳಿಸುವಂತೆ ಸರಕಾರ ಆದೇಶ ಹೊರಡಿಸಬೇಕು. ಕನ್ನಡ ಪ್ರಾಧಿಕಾರ ಈ ಕಾರ್ಯವನ್ನು ಬಹು ಕಟ್ಟುನಿಟ್ಟಾಗಿ ಮಾಡುತ್ತಿದೆಯೆಂಬುದು ಬಹು ಸಂತಸದ ವಿಷಯ. ಬ್ಯಾಂಕು, ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ, ಸಾರ್ವ ಜನಿಕ ಸ್ಥಳಗಳಲ್ಲಿ ಕನ್ನಡವನ್ನು ಬಳಸಬೇಕು. ನಿರಂತರ ಇಂಗ್ಲಿಷಿನ ಸವಾಲುಗಳ ನಡುವೆಯೂ ಕನ್ನಡ ಅಸ್ಮಿತೆಯು ಕಳೆದು ಹೋಗದಂತೆ ನಾವು ಕಾಯಬೇಕಿದೆ. ಕನ್ನಡವನ್ನು ಬಳಸದೆ ಸಾಯುತ್ತಿದೆಯೆಂದು ನಾವೇ ಊಳಿಟ್ಟರೆ ಕನ್ನಡ ಉಳಿಯುವು ದಾದರೂ ಹೇಗೆ?