Wednesday, 11th December 2024

ಹೇಳಿ ಹೋಗು ಕಾರಣ…

ವಿನುತಾ ಹೆಗಡೆ ಶಿರಸಿ

ನಿನ್ನ ಅಪ್ಪುಗೆಯೊಂದೇ ಸಾಕು ಅದೇ ಸೂರ್ತಿ ಬದುಕಿನ ಎಲ್ಲ ಕಷ್ಟಗಳ ಮರೆಯಲು. ನಿನ್ನ ಮಾತಲ್ಲಿ ಅದೇನೋ ಶಕ್ತಿ ಇದೆ ಅದು ನನಗಷ್ಟೇ
ಅರಿತಿದ್ದು.

ಮನಸ್ಸಿನ ಮಂದ್ರತೆಯ ನೋವಲ್ಲಿದ್ದೆ. ಅದಾವುದೋನದಿ ತೀರ. ನೀ ಬೊಗಸೆ ನೀರಲ್ಲಿ ಮುಖ ತೊಳೆವಾಗ ಗಮನಿಸಿದೆ. ತಟ್ಟನೆ ನೀ ನನ್ನೆಡೆ ತಿರುಗಿದಾಗ ಒಮ್ಮೆ ಕಣ್ಣಮುಚ್ಚಿ ನನ್ನ ನಾ ಸಮಾಧಾನಿಸಿಕೊಂಡೆ.

೧ ನಿನ್ನ ಕಂಗಳು ಅದೆಷ್ಟು ಸುಂದರ.  ಮನಸ್ಸೊಮ್ಮೆ ಹತ್ತು ವರ್ಷ ಹಿಂದಕ್ಕೆ ಜಾರಿತು. ಅದೇ ಕಣ್ಣು ಇಂದಿಗೂ ನನ್ನೆದೆಯ ಬಗೆದಿದೆ. ಮತ್ತೊಮ್ಮೆ ನೋಡಿದೆ ಅದೇ ಕಣ್ಣು. ಮನಸ್ಸು ಎಲ್ಲಾ ನೋವಿನ ಪರದೆ ಎಳೆದಂತಾಯಿತು. ಕಷ್ಟಗಳೇ ಕಂಡಿದ್ದ ತೂತಾದ ದೋಣಿ ಸರಿಪಡಿಸುವ ನಾವಿಕ ಕಂಡಂತೆ ನೀ ಭಾಸವಾದೆ. ಆ ಪರದೆಯ ಸರಿಸಿ ನೀ ಒಳ ಬರುವಂತೆ ಭಾಸವಾಯ್ತು. ನಾ ಹೋದಲ್ಲ ನನ್ನ ಹಿಂದೆಯೇ ಬಂದು ಮಾತನಾಡಿಸುತ್ತಿದ್ದ ನಿನ್ನ ಕಂಡು ನಂಬಲಾಗುತ್ತಿಲ್ಲ.

ಕತ್ತಲ ರಾತ್ರಿಯೂ ಬೆಳದಿಂಗಳಾಯ್ತು. ನಂತರದ ಹಲವು ತಿಂಗಳು ಪ್ರೀತಿಯಲ್ಲಿ ಕೊರತೆಯೇ ಇರಲಿಲ್ಲ. ಅದಾರ ಕಣ್ಣು ಬಿತ್ತೋ ನೀ ಪ್ರೀತಿ ಇದೆ ಎನ್ನುತ್ತಲೇ ದೂರಸರಿಯುತ್ತ ಹೋದೆ. ಅಂದಿಗೂ ಇಂದಿಗೂ ಮೈ ಮನಸ್ಸೆಲ್ಲ ನೀನೇ. ವ್ಯತ್ಯಾಸವೆಂದರೆ ನೀ ದೂರ ಸರಿಯುತ್ತಿರುವುದು. ಬದುಕಿನಲ್ಲಿ ನಿತ್ರಾಣವಾಗಿದ್ದ ನನಗೊಂದು ನಿಲ್ದಾಣ ಬೇಕಿತ್ತು. ಬಾವನೆಗಳ ಹಂಚಿಕೊಳ್ಳಲು ಮನಸ್ಸು ಬೇಕಿತ್ತು. ಹತ್ತುವರ್ಷದ ಹಿಂದೆ ತೀರಿ ಹೋಗಿದ್ದ ಗೆಳೆಯನ ಸ್ಥಾನ ತುಂಬಬೇಕಿತ್ತು. ಅದಕ್ಕೆಲ್ಲ ಒಪ್ಪಿದ್ದ ನಿನಗೆ ಇಂದೇಕೋ ಮೌನ.

ನನ್ನ ಪ್ರೀತಿಯಲ್ಲಿ ಎಲ್ಲಿಯೂ ಕಪಟ, ಮೋಸ ಇರಲಿಲ್ಲ. ಕೆಲಸದ ಒತ್ತಡದ ನಡುವೆಯೂ ನಾ ನಿನಗೆ ಸಮಯ ನೀಡುತ್ತಿದ್ದೆ. ನೀ ಇಂದೇಕೆ ಹೀಗಾದೆ? ನಿನ್ನ ಮಾತಿನ ವಿರುದ್ಧ ಎಂದಿಗೂ ನಿಂತವಳಲ್ಲ. ನೀ ಮದುವೆಯಾಗುತ್ತೇ ನೆಂದಾಗಲೂ ಹೃದಯ ಛಿದ್ರವಾದಾಗಲೂ ಗಟ್ಟಿ ಮನಸ್ಸಿನಿಂದ ಒಪ್ಪಿಗೆ ಸೂಚಿಸಿz. ನನ್ನ ಗದ್ಗದಿತ ಸ್ವರ ಕೇಳಿಸಲೇ ಇಲ್ಲವೆಂದಾಗ ನೀ ಬಯಸಿದ್ದೇನು ನನ್ನಿಂದ? ಇಂದಿಗೂ ನನಗೆ ಅರ್ಥವಾಗಿಲ್ಲ!

ಪ್ರೀತಿಯ ಬಿರಿದು ಅರಳಿ ಹೆಚ್ಚಾಗಿ ಬಾಡಿದ ಹೂವಿನಂತಾಗಿದೆ. ನಿನಗೆ ಮದುವೆ ಸಂಭ್ರಮವಿರಬಹುದು. ಆದರೆ ನನಗೆ ಕ್ಷಣ ಕ್ಷಣಕೂ ನಿನ್ನ ಬದುಕಿನದೇ ಚಿಂತೆ. ಆದರೆ ಬದುಕಿನ ಪುಟದಲ್ಲಿ ಕೊನೆಯ ಪುಟದ ಕೊನೆಯ ಸಾಲಿನ ಕೊನೆಯ ಅಕ್ಷರ ನಾನು ಇನ್ನೇನು ಪುಸ್ತಕ ಮಡಚುತ್ತಿದೆ ಅನಿಸುತ್ತಿದೆ.

ಈ ಮುಂಚೆ ಮೆಸೇಜ್ ಕಾಲ್ ಮಾಡಲು ಆಸಕ್ತಿ ಸಮಯ ಎರಡೂ ಇತ್ತು ನಿನಗೆ. ನನ್ನನ್ನು ನಿನ್ನ ಮನೆಗೇ ಕರೆವಷ್ಟು. ಆದರೀಗ ಅದಾವುದೂ ಇಲ್ಲ. ಪೊಲೀಸ್ ಕೆಲಸ ನಾ ಕಾಣದ್ದೇನಲ್ಲ. ಸಮಾಜ ಸೇವೆಯಲ್ಲಿ ತೊಡಗಿದ ನನಗೆ ಇದರ ಅರಿವಿದೆ. ಎಲ್ಲರೂ ಯಾವ ರೀತಿಯಲ್ಲಿ ಕೆಲಸ ನಿರ್ವಹಿಸು ತ್ತಾರೆಂದ್ನು ಮಾತನಾಡಲು ಇಷ್ಟವಿಲ್ಲದ ನಿನಗೆ ಸಬೂಬು ಬೇಕಿತ್ತಷ್ಟೆ. ಆದರೆ ನೀ ಮಾವನ ಮಗಳ ಮದುವೆಯಾಗುವುದ ಬಗ್ಗೆ ನನ್ನದೇನು ತಕರಾರಿಲ್ಲ. ಆದರೆ ದಿನದಲ್ಲಿ ಒಂದೈದು ನಿಮಿಷ ನನಗೂ ಕೊಡು. ನನ್ನ ಬಾವನೆಗಳ ಹೊರಹಾಕಿ ಮನದ ಬೇಗುದಿಯ ಕಡಿಮೆ ಮಾಡಿಕೊಳ್ಳುವ ಅವಕಾಶಕ್ಕಾಗಿ. ನನಗೆ ಅದೇನೋ ಗೊತ್ತಿಲ್ಲ ಹಲವಾರು ಗೆಳೆಯರಿದ್ದರೂ ನೀನೆಂದರೆ ವಿಶೇಷ ಪ್ರೀತಿ. ಅದೇ ಕಣ್ಣು ಮನಸ್ಸಿನ ಆಳಕ್ಕಿದು ಮನೆಮಾಡಿದೆ.

ನಿನ್ನ ಅಪ್ಪುಗೆಯೊಂದೇ ಸಾಕು ಅದೇ ಸ್ಫೂರ್ತಿ ಬದುಕಿನ ಎಲ್ಲ ಕಷ್ಟಗಳ ಮರೆಯಲು. ನಿನ್ನ ಮಾತಲ್ಲಿ ಅದೇನೋ ಶಕ್ತಿ ಇದೆ ಅದು ನನಗಷ್ಟೇ
ಅರಿತಿದ್ದು. ಎಲ್ಲ ಪ್ರೀತಿಯ ನೀಡಿ ಮದುವೆಯ ನೆಪಮಾಡಿ ನೀ ಹೀಗೆ ದೂರ ನಿಂತರೆ. ನಾ ಹೇಗೆ ಬದುಕಲಿ, ಒಮ್ಮೆಯೂ ಯೋಚಿಸಲಿಲ್ಲವೇ ನೀ ?
ನೀ ಕೊಟ್ಟ ಮಾತು ಇಂದೇಕೆ ತಪ್ಪುತ್ತಿದ್ದೀಯ.. ನನ್ನ ಮೇಲಿನ ಪ್ರೀತಿ ಕಡಿಮೆ ಆಯಿತೆ…? .ನಿನಗಂತ ಮನಸ್ಥಿತಿ ಬಾರದಿರಲಿ.

ನಾ ಮದುವೆಯಾಗುತ್ತೇನೆಂದರೆ ಬೇಡ ನಾನು ನಿನ್ನನ್ನ ಪ್ರೀತಿಸುತ್ತೇನೆಂದವ ನೀ. ನಿನ್ನ ಮದುವೆಗೆ ನಾ ಎಂದೂ ಅಡ್ಡಿಯ ಮಾತೇ ಆಡಿದವಳಲ್ಲ.
ವಯಸ್ಸಿಗೆ ಮದುವೆಯಾಗಬೇಕು. ಆಗು. ಎಂದಿದ್ದೆ. ಇಬ್ಬರೂ ಸಮಾಜದ ಮುಖ್ಯವಾಹಿನಿ ಯಲ್ಲಿದ್ದು ಇನ್ನೊಬ್ಬರಿಗೆ ಉಪದೇಶ ಮಾಡುವ ನಾವೇ ತಪ್ಪುದಾರಿ ಹೋಗಿ ಮಾತಿಗೆ ಗುರಿಯಾಗಬಾರದೆಂದುಕೊಂಡವರು ಆದರೆ ಪ್ರೀತಿಯನ್ನೇಕೆ ಕಳಚಬೇಕು? ಗೆಳೆತನಕ್ಕೆ ಅಪಚಾರವೇಕೆ? ಅದೇನೆ ಇರಲಿ, ನಾನೂ ಮಾತ್ರ ಮದುವೆಯಾಗಬಾರದು ನೀ ಮಾತ್ರ ಮದುವೆಯಾಗಬಹುದು – ಇದೇನು ನ್ಯಾಯ. ಆದರೂ ನಾ ನಿನ್ನ ಮೇಲಿಟ್ಟಿರುವ ನಂಬಿಕೆ ಪ್ರೀತಿ ಇಂದ ಅದನ್ನು ಸ್ವೀಕರಿಸಿದ್ದೇನೆ. ಮದುವೆಯಾದಮೇಲೂ ನಿನ್ನ ಜತೆ ಇಷ್ಟೇ ಪ್ರೀತಿಯಿಂದಿರುತ್ತೇನೆ ಎಂದಿದ್ದ ಆ ಒಂದೇ ಒಂದು ಮಾತು ನನ್ನ ಸುಮ್ಮನಾಗಿಸಿತ್ತು.

ಅದೆಷ್ಟೊ ಮಾತುಗಳನ್ನು ನೀ ತಪ್ಪಿದ್ದೀಯಂತ ಗೊತ್ತು. ಗೋವಾ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಇಂದಿಗೂ ಕರೆದೊಯ್ದಿಲ್ಲ.. ಊರಿಗೆ
ಬರುತ್ತೇನೆಂದರೂ ಇಂದಿಗೂ ಪತ್ತೆ ಇಲ್ಲ. ಇದೀಗ ಮಾತನಾಡಲೂ ನಿನ್ನಲ್ಲಿ ಸಮಯವಿಲ್ಲ. ನನ್ನ ಬಾವನೆಗಳಿಗೂ ಬೆಲೆ ಇಲ್ಲ. ಅದೆಷ್ಟು ನೊಂದಿರಬೇಡ ನಾ. ನನ್ನ ಮಾತು ಒರಟಾಗಿರಬಹುದು. ಆದರೆ ಮನಸ್ಸು ಎಷ್ಟೊಂದು ಸೂಕ್ಷ್ಮ ಎನ್ನುವ ವಿಚಾರ ನಿನಗೆ ತಿಳಿದೇ ಇದೆ.

ನೀ ಜತೆ ಇಲ್ಲದೇ ಮುಪ್ಪು ಆವರಿಸಿದಂತಿದೆ. ಮಾತಿಗೂ ನೀನುಲಕದೇ ಬರೆದ ಹಾಳೆಗಳೆಲ್ಲ ಖಾಲಿಯಾದಂತಿದೆ. ಏನು ಮಾಡಲಿ. ನನ್ನ ತೊರೆಯಲು ನಿನಗೆ ಅದೇನು ಕಾರಣ ಅದನ್ನೂ ಹೇಳಲು ನಿನಗೆ ಸಮಯವಿಲ್ಲ. ನೀ ಕಾಣದೇ ಇರುವಾರ ಎಲ್ಲವೂ ಶೂನ್ಯವಾದಂತೆ ಭಾಸವಾಗುತ್ತಿದೆ. ನನ್ನ ಅಸ್ತಿತ್ವವೇ ಇಲ್ಲದೇ ಎಲ್ಲವೂ ನೀ ಕಸಿದುಕೊಂಡಂತಿದೆ. ಅದೆಷ್ಟು ಬೇಡಿಕೊಂಡರೂ ನಿನಗೇಕೆ ಕರುಣೆ ಬರುತ್ತಿಲ್ಲ. ಜಾತ್ರೆಯಲ್ಲಿ ಕಳೆದ ನಿನ್ನ ಇನ್ನಾವ ಸಂತೆಯಲ್ಲಿ ಹುಡುಕಲಿ. ನೀ ಸಿಗುತ್ತಿಲ್ಲ ಮನ ಬರಿದೇ ಪರಿತಪಿಸುತ್ತಿದೆ.

ದಿನವೂ ನಿನ್ನ ನೆನಪಲ್ಲಿ ಗಂಟಲುಬ್ಬಿ ಕಣ್ಣು ತೇವ ವಾಗುತ್ತಿದೆ. ಅದಾವ ನೇಪತ್ಯಕ್ಕೆ ಸರಿದೆ ನೀ. ನನ್ನ ಮನಸ್ಸನ್ನು ಘೋರಿಯಾಗಿಸಲು ಆ ನದಿ ದಂಡೆಯ ಲ್ಲಿಯೇ ನೀ ಸಿಗಬೇಕಿತ್ತೇ… ನನ್ನ ಕಣ್ಣೀರ ಮೇಲೆ ಅದಾವ ಸೌಧ ಕಟ್ಟುತ್ತೀಯ… ಪ್ರೀತಿಗೂ ಮುನ್ನ ಮಾತು ಕೊಡುವಾಗ ಇರದ ಮೌನ ಇಂದೇಕೆ… ಹೆಣ್ಣೆಂದರೆ ನಿನಗೆ ಅಷ್ಟೊಂದು ಜಡವೇ…ನಿನ್ನೊಳಗೇನಿದೆ ಒಮ್ಮೆ ಹೇಳು ನಾನೂ ಹಗುರಾಗಿ ಬಿಡುತ್ತೇನೆ. ಈ ಕೊಲ್ಲುವ ಮೌನ ನನ್ನ ದಿನವೂ ಸಾಯಿ ಸುತ್ತಿದೆ. ಆಗೊಮ್ಮೆ ಈಗೊಮ್ಮೆ ಆಗಷ್ಟ ತಿಂಗಳ ಮಳೆಯಂತೆ ಬಂದು ಮನಸ್ಸನ್ನು ಘಾಸಿಯಾಗಿಸಬೇಡ. ಇಲ್ಲವಾದರೆ ಬಿಟ್ಟು ಬಿಡು ನನ್ನ ಸಾಧ್ಯವಾದರೆ ಹೇಗೋ ಬದುಕಿಕೊಳ್ಳುವೆ ನಿನ್ನ ನೆನಪೊಂದೇ ಸಾಕು ಕೊನೆಯುಸಿರಿರುವವರೆಗು.