ಮುಂಬೈ ನೀಡಿದ 152 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆರ್‌ಸಿಬಿ ಪರ ಆರಂಭಿಕ ಆಟಗಾರ ಅನುಜ್ ರಾವತ್ (66 ರನ್, 47 ಎಸೆತ) ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಗೆಲುವನ್ನು ಸುಲಭವಾಗಿಸಿದರು. ವಿರಾಟ್ ಕೊಹ್ಲಿ (48 ರನ್, 36 ಎಸೆತ) 2 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ತಂಡಕ್ಕೆ ಆರಂಭಿಕ ಇಶಾನ್ ಕಿಶನ್ ಮತ್ತು ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಈ ಜೋಡಿ 6.1 ಓವರ್‌ಗಳಲ್ಲೇ ಅರ್ಧಶತಕದ ಜೊತೆಯಾಟವಾಡಿತ್ತು.
ರೋಹಿತ್ 26 ರನ್ ಗಳಿಸಿದ್ದಾಗ, ಹರ್ಷಲ್ ಅವರಿಗೇ ಕ್ಯಾಚ್ ನೀಡಿ ನಿರ್ಗಮಿಸಿದರು. ಇದಾದ ನಂತರ ಮುಂಬೈ ಕುಸಿತದತ್ತ ಸಾಗಿತು. ಡೆವಾಲ್ಡ್ ಬ್ರೆವಿಸ್ 8 ರನ್‌ಗೆ ಔಟಾದರೆ, ತಿಲಕ್ ವರ್ಮಾ ಮತ್ತು ಕೀರನ್ ಪೊಲಾರ್ಡ್ ಸೊನ್ನೆ ಸುತ್ತಿದರು. ಬಳಿಕ ಬಂದ ರಮಣ್‌ದೀಪ್ ಸಿಂಗ್ (6) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಮುಂಬೈ ತಂಡ 79 ರನ್ ಆಗುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಕೆಳ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ರಕ್ಷಣಾತ್ಮಕವಾಗಿ ಆಡಿದ ಸೂರ್ಯಕುಮಾರ್ ಯಾದವ್, ಮುಂಬೈ ಇನಿಂಗ್ಸ್‌ಗೆ ಆಸರೆಯಾದರು.
ಜಯದೇವ್ ಉನದ್ಕತ್ (13) ಜೊತೆ ಸೇರಿ ಮುರಿಯದ 7ನೇ ವಿಕೆಟ್ ಪಾಲುದಾರಿಕೆ ಯಲ್ಲಿ 72 ರನ್ ಸೇರಿಸಿದರು. ಕೇವಲ 37 ಎಸೆತ ಗಳನ್ನು ಎದುರಿಸಿದ ಯಾದವ್ 5 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 68 ರನ್ ಕಲೆಹಾಕಿದರು. ಇದರಿಂದಾಗಿ ಮುಂಬೈ ತಂಡದ ಮೊತ್ತ 150ರ ಗಡಿ ದಾಟಲು ಸಾಧ್ಯವಾಯಿತು.
ಆರ್‌ಸಿಬಿ ಪರ ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ ತಲಾ ಎರಡು ವಿಕೆಟ್ ಪಡೆದರು. ಆಕಾಶ್ ದೀಪ್ ಸಿಂಗ್ ಒಂದು ವಿಕೆಟ್ ಪಡೆದರು.