ಹಿಜಾಬ್ ಪ್ರಕರಣದಿಂದ ಧಾರವಾಡದ ನುಗ್ಗಿಕೇರಿ ಆಂಜನೇಯನ ದೇವಸ್ಥಾನದ ಆವರಣದಲ್ಲಿದ್ದ ಮುಸ್ಲಿಮರ ಅಂಗಡಿಗಳ ಮೇಲೆ ಹಿಂದೂ ಕಾರ್ಯಕರ್ತರು ದಾಳಿ ಮಾಡಿದ ಪ್ರಕರಣದವರೆಗೂ ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬೇರೆ ಬೇರೆ ವಿಚಾರ ಗಳಿಗಾಗಿ ಸಂಘರ್ಷ ನಡೆಯುತ್ತಲೇ ಇವೆ.
ಕಲೆ, ಬುದ್ಧಿಮತ್ತೆ, ಸಾಮಾಜಿಕ ಸೌಹಾರ್ದದಂಥ ಮೌಲ್ಯಗಳ ಮೂಲಕ ದೇಶ ಮತ್ತು ವಿಶ್ವದ ಗಮನ ಸೆಳೆಯುತ್ತಿದ್ದ ಕರ್ನಾಟಕ, ಇತ್ತೀಚೆಗೆ ಅನಪೇಕ್ಷಿತ ಘಟನೆಗಳ ಕಾರಣ ದಿಂದಾಗಿ ಹೆಚ್ಚು ಸುದ್ದಿಯಾಗುತ್ತಿದೆ. ಮನಸ್ಸುಗಳನ್ನು ಗಾಸಿಗೊಳಿಸುವ ಹಾಗೂ ಸಮಾಜವನ್ನು ವಿಭಜಿಸುವ ಕೋಮುಶಕ್ತಿಗಳಿಗೆ ಪ್ರಯೋಗ ಶಾಲೆಯಾಗುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ನಾಡಗೀತೆಯ ಆಶಯವನ್ನು ಸದ್ಯದ ವಿದ್ಯ ಮಾನಗಳು ಅಣಕಿಸುವಂತಿವೆ.
ಹಿಜಾಬ, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಹಲಾಲ್ ಕಟ್ ವಿವಾದಗಳು ಸಮಾಜ ವನ್ನು ಕೋಮು ಆಧಾರಿತವಾಗಿ ವಿಭಜಿಸುವ ಪ್ರಯತ್ನಗಳಾಗಿವೆ. ಇಂಥ ಘಟನೆಗಳನ್ನು ತಡೆಗಟ್ಟ ಬೇಕಾದ ರಾಜಕಾರಣಿಗಳೇ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ತಮ್ಮ ಸಾಂವಿಧಾನಿಕ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ.
ಸಮಾಜವನ್ನು ವಿಭಜಿಸುವ ಕೊಳಕು ರಾಜಕಾರಣ ಮಾಡುವ ಮೂಲಕ ಕರ್ನಾಟಕದ ವರ್ಚಸ್ಸಿಗೆ ಮಸಿ ಬಳಿಯುತ್ತಿದ್ದಾರೆ. ಸರಕಾರದ ಭಾಗವಾಗಿರುವ ಕೆಲವು ಸಚಿವರು ಧರ್ಮ ರಾಜಕಾರಣ ದೊಂದಿಗೆ ಗುರುತಿಸಿಕೊಂಡು ತಮ್ಮ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಮರೆತವರಂತೆ ಮಾತನಾಡುತ್ತಿದ್ದಾರೆ.
ಹೀಗಾಗಿ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಜಾತ್ಯತೀತ ಸ್ವರೂಪವನ್ನು ಅವಿಶ್ವಾಸದಿಂದ ನೋಡುವಂತಾಗಿದೆ. ರಾಜಕಾರಣಿಗಳಿಗೆ ಮುಖ್ಯವಾಗಿರುವುದು ಚುನಾವಣೆಯಲ್ಲಿನ ಯಶಸ್ಸೇ ಹೊರತು, ಜನರ ಹಿತಾಸಕ್ತಿಯಲ್ಲ ಎಂಬುದು ಸಾಬೀತು ಮಾಡಿದಂತಾಗಿದೆ. ಮತ ಗಳಿಗಾಗಿ ಕೋಮುಪ್ರಚೋದನೆಗೆ ಕುಮ್ಮಕ್ಕು ನೀಡುವ ರಾಜಕಾರಣಿಗಳಿಂದ ಈ ಸಮಾಜಕ್ಕೆ ಏನೂ ಉಪಯೋಗವಿಲ್ಲ. ಹೀಗಾಗಿ ಕೋಮು ವಿಷ ತುಂಬಿಕೊಂಡ ರಾಜಕಾರಣಿಗಳ ಮಾತುಗಳನ್ನು ಜನರು ನಿರ್ಲಕ್ಷಿಸಬೇಕಿದೆ.
ಕೂಗುಮಾರಿಗಳ ಮಾತಿಗೆ ಮರುಳಾಗದೆ ಸಂಯಮವನ್ನು ಉಳಿಸಿಕೊಳ್ಳುವ ಸವಾಲನ್ನು ನಾಡಿನ ಜನಸಮೂಹ ಎದುರಿಸಬೇಕಾಗಿದೆ ಹಾಗೂ ಧಾರ್ಮಿಕ ಸಾಮರಸ್ಯವನ್ನು ಎತ್ತಿಹಿಡಿಯುವ ವಿವೇಕವನ್ನು ಪ್ರದರ್ಶಿಸಬೇಕಾಗಿದೆ. ಮಾನವೀಯತೆ, ಸಹಬಾಳ್ವೆಯತ್ತ ಎಲ್ಲ
ಧರ್ಮ ದವರೂ ಹೆಜ್ಜೆ ಇಡಬೇಕಿದೆ.