ಗುತ್ತಿಗೆದಾರ ಸಂತೋಷ ಪಾಟೀಲ್ ಸಾವಿನ ನಂತರ ಸರಕಾರದ ಕಾಮಗಾರಿಗಳ ಗುತ್ತಿಗೆ ನೀಡುವ ಪ್ರಕ್ರಿಯೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆಯಲ್ಲೂ 5 ಲಕ್ಷ ರು. ಗಿಂತ ಹೆಚ್ಚಿನ ಕಾಮಗಾರಿಯನ್ನು ಟೆಂಡರ್ ಕರೆದೇ ಗುತ್ತಿಗೆ ನೀಡಬೇಕು ಎಂದು ಕಾಯಿದೆ ರೂಪಿಸಲಾಗಿದೆ.
ಸರಕಾರದ ಕಾಮಗಾರಿಗಳ ಗುತ್ತಿಗೆ ನೀಡುವ ಪ್ರಕ್ರಿಯೆ ಪೈಪೋಟಿದಾಯಕವಾಗಿರಬೇಕು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂಬ ಉದ್ದೇಶ ದಿಂದ ರಾಜ್ಯದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆ-1999 (ಕೆಟಿಪಿಪಿ ಕಾಯಿದೆ) ಜಾರಿಗೆ ತರಲಾಗಿದೆ. ಈ ಕಾಯಿದೆ ಜಾರಿಗೆ ಬಂದ ದಿನದಿಂದ ಟೆಂಡರ್ ಕರೆಯದೆ ಯಾವುದೇ ಕಾಮಗಾರಿ ನಡೆಸು ವಂತಿಲ್ಲ. ಆದರೆ, ತುರ್ತು ಹಾಗೂ ವಿಪತ್ತಿನ ಸಂದರ್ಭಕ್ಕೆ ಮಾತ್ರ ಅನ್ವಯವಾಗುವಂತೆ ಈ ಕಾಯಿದೆಯ ಸೆಕ್ಷನ್ 4ರ ಅಡಿ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿದೆ.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಥವಾ ಸರಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿ ದಾಗ ಟೆಂಡರ್ ಕರೆಯದೇ ಕಾಮಗಾರಿ ನಡೆಸಲು ಈ ಕಾಯಿದೆಯ ಸೆಕ್ಷನ್ 4 (ಎ) ಅವಕಾಶ ಕಲ್ಪಿಸುತ್ತದೆ. ಈ ವಿನಾಯಿತಿಯನ್ನೇ ದುರ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಟೆಂಡರ್ ಕರೆಯದೇ ಕಾಮಗಾರಿ ನಡೆಸಲಾಗುತ್ತಿದೆ. ಈ ರೀತಿ ಕಾಮಗಾರಿ ನಡೆಸಿದಾಗಿ ಜನಪ್ರತಿನಿಧಿಗಳು -ಅಧಿಕಾರಿಗಳು-ಗುತ್ತಿಗೆದಾ ರರ ನಡುವೆ ಹೊಂದಾಣಿಕೆ ಇದ್ದರೆ ನಡೆದೇ ಹೋಗುತ್ತದೆ.
ಒಂದು ವೇಳೆ ಈ ಮೂವರ ಸರಪಳಿಯಲ್ಲಿ ಒಂದು ಸರಪಳಿ ತುಂಡಾದರೂ ಗುತ್ತಿಗೆದಾರನು ರಸ್ತೆ, ಚರಂಡಿಗಳಲ್ಲಿ ಹಾಕಿದ ದುಡ್ಡು ವಾಪಸ್
ಜೇಬು ಸೇರುವುದು ತ್ರಾಸದಾಯಕವಾಗುತ್ತದೆ. ರಾಜ್ಯದಲ್ಲಿ 2 ಲಕ್ಷ ನೋಂದಾಯಿತ ಗುತ್ತಿಗೆದಾರರು, ಹಳ್ಳಿಗಳಲ್ಲಿ ನೋಂದಣಿ ಆಗದ ಸಾಕಷ್ಟು ಗುತ್ತಿಗೆದಾರರು ಇಂತಹ ಸಂಕಷ್ಟದಲ್ಲಿ ಪರಿಸ್ಥಿತಿಗೆ ಸಿಲುಕಿದ್ದಾರೆ ಎನ್ನಲಾಗಿದೆ. ಇವರ ಬಳಿ ಕಾಮಗಾರಿಗೆ ಹಾಕಿದ ದುಡ್ಡು ವಾಪಸ್ ಕೇಳುವುದಕ್ಕೆ ಯಾವುದೇ ಪುರಾವೆ ಇಲ್ಲ. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ಅನಿವಾರ್ಯ ಇದ್ದರೆ ಅಲ್ಪಾವಧಿ ಟೆಂಡರ್ (ಅರ್ಜಿ ಸಲ್ಲಿಸಲು ಬರೀ ಏಳು ದಿನ ಗಳ ಕಾಲಾವಕಾಶ) ಕರೆಯುವುದಕ್ಕೂ ಕೆಟಿಪಿಪಿ ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಹೀಗಾಗಿ ಗುತ್ತಿಗೆದಾರರು ಯಾರದ್ದೋ ಮಾತಿನ ಮೇಲೆ ಭರವಸೆ ಇಟ್ಟು ಬಂಡವಾಳ ಹೂಡುವ ಬದಲು ಕಾಯಿದೆ ಪ್ರಕಾರ ಅವಕಾಶ ಕೊಟ್ಟಿರುವ ಅಲ್ಪಾವಧಿ ಟೆಂಡರ್ ಮೂಲಕವಾದರೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು.