Friday, 13th December 2024

ರಕ್ತ ಪರಿಚಲನೆಯನ್ನು ಅರ್ಧ ಕಂಡು ಹಿಡಿದವ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ನಮ್ಮ ಶರೀರದಲ್ಲಿರುವ ಹೃದಯದ ರಚನೆ ಮತ್ತು ಕಾರ್ಯವು ನಮಗೆ ತಿಳಿಯಬೇಕಾದರೆ ಅದರ ಹಿಂದೆ ಸಾವಿರಾರು ವರ್ಷಗಳ ಅವಧಿ ಯಲ್ಲಿ ಸಾವಿರಾರು ವೈದ್ಯರ ನಿರಂತರ ಅಧ್ಯಯನ ಹಾಗೂ ಶ್ರಮಗಳಿವೆ.

ಹೃದಯದ ಬಗ್ಗೆ ನಮ್ಮ ತಿಳಿವು ಬೆಳೆದ ಬಂದ ದಾರಿಯು ಸುದೀರ್ಘವಾದದ್ದು. ಮೆಸ ಪೊಟೋಮಿಯದ ಮಹಾಕಾವ್ಯ ಗಿಲ್ಗಮಿಶ್ (ಕ್ರಿ.ಪೂ.2600)ನಲ್ಲಿ, ಕಥಾನಾಯಕನಾದ ಗಿಲ್ಗಮಿಶ್ ತನ್ನ ಗೆಳೆಯ ಎಂಕಿಡು ಸತ್ತಾಗ, ನಾನು ಅವನ ಹೃದಯವನ್ನು ಸ್ಪರ್ಶಿಸಿದೆ; ಆದರೆ ಅದು ಮಿಡಿಯುತ್ತಿರಲಿಲ್ಲ ಎಂದು ಉದ್ಗರಿಸುತ್ತಾನೆ. ಬಹುಶಃ ಹೃದಯದ ಬಗ್ಗೆ ನಮಗೆ ದೊರೆತ ಮೊದಲ ದಾಖಲೆಯಿದು. ಈಜಿಪ್ತಿಯನ್ನರು ಹೃದಯವು ಮಿಡಿಯುವ ಬಗ್ಗೆ ಹಾಗೂ ನಾಡಿಯ ಬಗ್ಗೆ ತಿಳಿದಿದ್ದರು (ಕ್ರಿ.ಪೂ.1500). ಹಿಪ್ರೋಕ್ರೇಟ್ಸ್ (ಕ್ರಿ.ಪೂ.460-ಕ್ರಿ.ಪೂ. 370) ಹೃದಯದಲ್ಲಿ ಗೂಡುಗಳಿವೆ ಎನ್ನುವುದನ್ನು ತಿಳಿದಿದ್ದ.

ಅವನಿಗೆ ಧಮನಿ ಮತ್ತು ಸಿರೆಗಳ ಬಗ್ಗೆ ಮಾಹಿತಿಯಿತ್ತು. ಆದರೆ ಧಮನಿಗಳಲ್ಲಿ ರಕ್ತದ ಬದಲು ಗಾಳಿಯು ಹರಿಯುತ್ತದೆ ಎಂದು ತಿಳಿದಿದ್ದ. ಅರಿಸ್ಟಾಟಲ್ (ಕ್ರಿ.ಪೂ.384-ಕ್ರಿ.ಪೂ. 322) ಹೃದಯವು ದೇಹದ ಮಧ್ಯದಲ್ಲಿದೆ, ಅದು ಮಿಡಿಯುತ್ತದೆ ಹಾಗೂ ದೇಹದ ಎಲ್ಲ ಅಂಗ ಗಳೊಡನೆ ಸಂಪರ್ಕವನ್ನು ಪಡೆದಿದೆ ಎನ್ನುವುದನ್ನು ಅರಿತಿದ್ದ. ಕ್ಲಾಡಿಯಸ್ ಗ್ಯಾಲನಸ್ ಅಥವಾ ಗ್ಯಾಲನ್ (ಕ್ರಿ.ಶ.129-ಕ್ರಿ.ಶ.217) ಮನುಷ್ಯನ ಶರೀರದ ರಚನೆ ಮತ್ತು ಕಾರ್ಯದ ವಿಸ್ತೃತ ಅಧ್ಯಯನವನ್ನು ನಡೆಸಿದ.

ಈತನ ಬರಹಗಳು ಸುಮಾರು 1000 ವರ್ಷಗಳವರೆಗೆ ಯೂರೋಪಿಯನ್ ಹಾಗೂ ಅರಬ್ ವೈದ್ಯಕೀಯದ ಮೇಲೆ ಮಹತ್ಪರಿಣಾಮ ವನ್ನು ಬೀರಿದವು. ಗ್ಯಾಲನ್ನನ ಕಾಲದಲ್ಲಿ ಮನುಷ್ಯರ ಶರೀರ ವಿಚ್ಛೇದನಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ಅವನು ಪ್ರಾಣಿಗಳ ಒಡಲನ್ನು ಛೇದಿಸಿ, ಅವನ್ನು ಅಧ್ಯಯನ ಮಾಡಿ, ಅಲ್ಲಿ ತಾನು ಕಂಡದ್ದನ್ನು ಮನುಷ್ಯರಿಗೆ ಅನ್ವಯಿಸಿದ. ಹಾಗಾಗಿ ಗ್ಯಾಲನ್ನನ ಬರಹದಲ್ಲಿ ಅನೇಕ ತಪ್ಪುಗಳು ನುಸುಳಿದವು. ಗ್ಯಾಲನ್ ದಿಟ್ಟ ಪ್ರಯೋಗಗಳನ್ನು ಮಾಡುತ್ತಿದ್ದ. ಗ್ಯಾಲನ್ ಒಂದು ಜೀವಂತ ಪ್ರಾಣಿಯ ರಕ್ತನಾಳದ ಮೇಲ್ಭಾಗ ಹಾಗೂ ಕೆಳಭಾಗವನ್ನು ದಾರದಿಂದ ಬಿಗಿದ.

ಮಧ್ಯದ ಭಾಗವನ್ನು ಛೇದಿಸಿದ. ರಕ್ತವು ಚಿಮ್ಮಿತು. ಈ ಪ್ರಯೋಗದ ಮೂಲಕ ಗ್ರೀಕರು ತಿಳಿದಿದ್ದ ಹಾಗೆ ಧಮನಿಗಳಲ್ಲಿ ಗಾಳಿಯಲ್ಲ, ರಕ್ತವು
ಹರಿಯುತ್ತಿದೆ ಎನ್ನುವುದನ್ನು ತೋರಿಸಿದ. ಗ್ಯಾಲನ್ ಮಾಡಿದ ದೊಡ್ಡ ತಪ್ಪೆಂದರೆ ಧಮನಿಗಳ ಜಾಲ (ಆರ್ಟೀರಿಯಲ್ ಸಿಸ್ಟಮ್) ಹಾಗೂ ಸಿರೆಗಳ ಜಾಲವನ್ನು (ವೀನಸ್ ಸಿಸ್ಟಮ್) ಪ್ರತ್ಯೇಕವೆಂದು ತಿಳಿದದ್ದು. ಈ ಎರಡೂ ವ್ಯವಸ್ಥೆಗಳು ಹೃದಯದಲ್ಲಿ ಸಂಧಿಸುತ್ತವೆ ಎಂದು ಭಾವಿಸಿದ್ದ. ಹೃದಯದ ಬಲ ಭಾಗದಲ್ಲಿರುವ ರಕ್ತವು, ಹೃದಯದ ನಡುತಡಿಕೆಯಲ್ಲಿರುವ ಅತ್ಯಂತ ಸೂಕ್ಷ್ಮ ಹಾಗೂ ಕಣ್ಣಿಗೆ ಕಾಣದ ರಂಧ್ರ ಗಳ ಮೂಲಕ, ಹೃದಯದ ಎಡ ಭಾಗವನ್ನು ಸೇರುತ್ತದೆ ಎಂದ.

ಇದಕ್ಕೆ ಅವನು ಯಾವುದೇ ಪ್ರಾಯೋಗಿಕ ಪುರಾವೆಯನ್ನು ನೀಡಲಿಲ್ಲ. ಆದರೆ ವೈದ್ಯರು ಈ ತಪ್ಪನ್ನು ಪರಮಸತ್ಯವೆಂದು ಸುಮಾರು 1000 ವರ್ಷಗಳ ಕಾಲ ನಂಬಿದ್ದರು. ಗ್ಯಾಲನ್ ಬರೆದಿರುವ ಎಲ್ಲ ತಪ್ಪುಗಳನ್ನು ತಿದ್ದಿ, ಅಂಗರಚನೆಯ ಬಗ್ಗೆ ನಿಖರವಾದ ಮಾಹಿತಿ ಯನ್ನು ಆಂಡ್ರಿಯಸ್ ವೆಸಾಲಿಯಸ್ (1514-1568) ನೀಡಿದ. ಆದರೆ ವೆಸಾಲಿಯಸ್ ತನ್ನ ಅಧ್ಯಯನವನ್ನು ಮಾಡುವುದಕ್ಕೆ ಮೊದಲೇ ಹಲವರು ಗ್ಯಾಲನ್ ಮಾಡಿದ್ದ ಹಲವು ತಪ್ಪುಗಳನ್ನು ಎತ್ತಿ ತೋರಿಸಿದ್ದರು. ಅವರಲ್ಲಿ ಮಧ್ಯ ಯುಗದ ಅರಬ್ ವೈದ್ಯ ’ಇಬ್ನ್ ಅಲ್-ನಫೀಸ್’ ಮುಖ್ಯ ನಾದವನು.

ಅಲ್ ಅಲ್-ದಿನ್ ಅಬು ಅಲ್-ಹಸನ್ ಅಲಿ ಇಬ್ನ್ ಅಭಿ-ಹಜ಼್ಮ್ ಅಲ್-ಖರ್ಷಿ ಅಲ್-ದಿಮಾಷ್ಕಿ (1213-1288) ಎಂಬ ಸುದೀರ್ಘ
ಹೆಸರಿನ, ಆದರೆ ಮಧ್ಯಯುಗದ ವೈದ್ಯಕೀಯ ಸಾಹಿತ್ಯದಲ್ಲಿ ಇಬ್ನ್ ಅಲ್-ನಫೀಸ್ ಎಂದು ಹೆಸರಾದ ಈ ಅರಬ್ ಬಹುಶ್ರುತ ವಿದ್ವಾಂಸನು ಪ್ರಖ್ಯಾತ ವೈದ್ಯನಾಗಿದ್ದ. ಇಬ್ನ್ ಅಲ್-ನಫೀಸ್ ಡಮಾಸ್ಕಸ್ ನಗರದ ಬಳಿಯಲ್ಲಿದ್ದ ಕರಾಷಿಯ ಎಂಬ ಹಳ್ಳಿಯಲ್ಲಿ ಹುಟ್ಟಿದ. ಆರಂಭದಲ್ಲಿ ದೈವಶಾಸ್ತ್ರ, ದರ್ಶನಶಾಸ್ತ್ರ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಿದ.

೧16 ವರ್ಷಗಳಾಗುತ್ತಿರುವಂತೆಯೇ ಡಮಾಸ್ಕಸ್ ನಗರದಲ್ಲಿದ್ದ ನೂರಿ ಆಸ್ಪತ್ರೆಯನ್ನು ಸೇರಿ ಅಲ್ಲಿ 10 ವರ್ಷಗಳ ಕಾಲ ವೈದ್ಯಕೀಯ ವನ್ನು ಅಧ್ಯಯನ ಮಾಡಿದ. 1236ರಲ್ಲಿ ಇಬ್ನ್ ಅಲ್-ನಫೀಸ್ ಹಾಗೂ ಅವನ ಗೆಳೆಯರು ಈಜಿಪ್ಟಿಗೆ ಹೊರಟರು. ಅಯ್ಯುಬಿದ್ ಸುಲ್ತಾನ ಅಲ್-ಕಮಿಲ್ ಆಹ್ವಾನದ ಮೇರೆಗೆ ಅಲ್ಲಿದ್ದ ಅಲ್-ನೆಸೇರಿ ಆಸ್ಪತ್ರೆಯಲ್ಲಿ ಪ್ರಧಾನ ವೈದ್ಯನಾಗಿ ಕೆಲಸವನ್ನು ಮಾಡಲಾರಂಭಿಸಿದ. ತನ್ನ ಜೀವಮಾನದ ಬಹುಭಾಗವನ್ನು ಈಜಿಪ್ಟಿನಲ್ಲಿಯೇ ಕಳೆದ ಇಬ್ನ್ ಅಲ್ -ನಫೀಸ್ ಕೊನೆಗೆ ತನ್ನ 74ನೆಯ ವಯಸ್ಸಿನಲ್ಲಿ ಕೈರೋ ನಗರ
ದಲ್ಲಿ ಮರಣಿಸಿದ. ಇಬ್ನ್ ಅಲ್-ನಫೀಸ್ ತನ್ನ ಮನೆ ಹಾಗೂ ಗ್ರಂಥಭಂಡಾರವನ್ನು ಕಲಾವುನ್ ಆಸ್ಪತ್ರೆಗೆ ದಾನ ಮಾಡಿದ.

ಇಬ್ನ್ ಅಲ್-ನಫೀಸ್ ಬರೆದ ಪ್ರಖ್ಯಾತ ಗ್ರಂಥವೆಂದರೆ ಅಲ್-ಶಮಿಲ್ ಫಿ ಅಲ್-ತಿಬ್ (ಸಮಗ್ರ ವೈದ್ಯಕೀಯ ಗ್ರಂಥ) ಎನ್ನುವುದು. ಇಬ್ನ್ ಅಲ್-ನಫೀಸ್ ಒಟ್ಟು 300 ಸಂಪುಟಗಳನ್ನು ಬರೆಯಲು ಯೋಜನೆಯನ್ನು ಹಾಕಿಕೊಂಡಿದ್ದ. ಆದರೆ ಅವನು ತನ್ನ ಜೀವಮಾನದಲ್ಲಿ ಬರೀ
80 ಸಂಪುಟಗಳನ್ನು ಮಾತ್ರ ಬರೆಯಲು ಸಾಧ್ಯವಾಯಿತು. ಇದೇನೂ ಕಡಿಮೆ ಸಾಧನೆಯಲ್ಲ. ಆದರೆ ಇಬ್ನ್ ಅಲ್ -ನಫೀಸ್ ಪ್ರಖ್ಯಾತ ನಾದದ್ದು ಹಾಗೂ ಇಂದಿಗೂ ನಾವು ಅವನನ್ನು ಸ್ಮರಿಸುತ್ತಿರುವುದಕ್ಕೆ ಕಾರಣ ಆತನು ಮೊದಲ ಬಾರಿಗೆ ಶ್ವಾಸಕ ಪರಿಚಲನೆಯನ್ನು (ಪಲ್ಮನರಿ ಸರ್ಕ್ಯುಲೇಶನ್) ವಿವರಿಸಿದ.

ಶ್ವಾಸಕ ಪರಿಚಲನೆ ಎಂದರೆ ಏನು ಎನ್ನುವುದನ್ನು ತಿಳಿಯಲು ನಾವು, ನಮ್ಮ ದೇಹದಲ್ಲಿ ನಡೆಯುವ ರಕ್ತ ಪರಿಚಲನೆಯನ್ನು ಸ್ಥೂಲವಾಗಿ ತಿಳಿದುಕೊಳ್ಳಬೇಕು. ನಮ್ಮ ರಕ್ತ ಪರಿಚಲನೆಯಲ್ಲಿ ಎರಡು ಭಾಗಗಳಿವೆ. ‘ಕಾಯ ಪರಿಚಲನೆ’ (ಸಿಸ್ಟಮಿಕ್ ಸರ್ಕ್ಯುಲೇಶನ್) ಮತ್ತು ‘ಶ್ವಾಸಕ ಪರಿಚಲನೆ’. ಶ್ವಾಸಕ ಪರಿಚಲನೆಯೆಂದರೆ ಶರೀರದ ಎಲ್ಲ ಭಾಗಗಳಿಂದ ಸಂಗ್ರಹವಾಗಿದ್ದ ಆಕ್ಸಿಜನ್ ಕೊರತೆಯ (ಡಿ-ಆಕ್ಸಿ ಜೆನೇಟೆಡ್ ಬ್ಲಡ್) ರಕ್ತವು ಹೃದಯವನ್ನು ಪ್ರವೇಶಿಸಿ, ಅಲ್ಲಿಂದ ಶ್ವಾಸಕೋಶಗಳಿಗೆ ಹೋಗಿ, ಅಲ್ಲಿ ಆಕ್ಸಿಜನ್ನಿನಲ್ಲಿ ಮಿಂದು, ಆಕ್ಸಿಜನ್ ಭರಿತ ರಕ್ತವು (ಆಕ್ಸಿಜೆನೇಟೆಡ್ ಬ್ಲಡ್) ಮತ್ತೆ ಹೃದಯಕ್ಕೆ ಮರಳುವುದು ಇದು ಶ್ವಾಸಕ ರಕ್ತಪರಿಚಲನೆ.

ಹೃದಯವು ಪಂಪ್ ಮಾಡಿದಾಗ, ಹೃದಯದಲ್ಲಿದ್ದ ಆಕ್ಸಿಜನ್ ಭರಿತವಾದ ರಕ್ತವು ಮಹಾಧಮನಿಯ (ಅಯೋರ್ಟ) ಮೂಲಕ ಶರೀರದ ಎಲ್ಲ ಅಂಗಗಳಿಗೆ ಹಾಗೂ ಅಂಗವನ್ನು ರೂಪಿಸುವ ಪ್ರತಿಯೊಂದು ಜೀವಕೋಶಗಳಿಗೆ ಧಮನಿಗಳು ಮತ್ತು ಧಮನಿ ಲೋಮನಾಳಗಳ ಮೂಲಕ ಪೂರೈಕೆಯಾಗುತ್ತದೆ. ಹಾಗೆಯೇ ಶರೀರದ ಪ್ರತಿಯೊಂದು ಜೀವಕೋಶವು ಬಿಡುಗಡೆ ಮಾಡುವ ಕಾರ್ಬನ್ ಡೈಯಾಕ್ಸೈಡ್ ಭರಿತ ರಕ್ತ ಅಥವಾ ಆಕ್ಸಿಜನ್ ಕೊರತೆಯ ರಕ್ತವನ್ನು ಸಿರೆಯ ಲೋಮ ನಾಳಗಳು ಹಾಗೂ ಸಿರೆಗಳು ಹೃದಯಕ್ಕೆ ಮರಳಿ ತರುತ್ತವೆ.
ಇದನ್ನು ಕಾಯ ಪರಿಚಲನೆ ಎನ್ನುವರು.

ರಕ್ತ ಪರಿಚಲನೆಯನ್ನು ಎಲ್ಲರಿಗೂ ಅರ್ಥವಾಗುವ ಹಾಗೆ ಮೊದಲ ಬಾರಿಗೆ ವಿವರಿಸಿದ್ದು ಇಂಗ್ಲಿಷ್ ವೈದ್ಯ ಮತ್ತು ವಿಜ್ಞಾನಿ ವಿಲಿಯಂ ಹಾರ್ವೆ (1578-1657). ಆದರೆ ವಾಸ್ತವದಲ್ಲಿ ವಿಲಿಯಂ ಹಾರ್ವೇ ಕಾಯ ಪರಿಚಲನೆಯನ್ನು ಮಾತ್ರ ಕಂಡು ಹಿಡಿದ. ಅವನಿಗಿಂತಲೂ ಮೊದಲೇ ಶ್ವಾಸಕ ಪರಿಚಲನೆಯನ್ನು ಇಬ್ನ್ ಅಲ್-ನಫೀಸ್ ವಿವರಿಸಿದ್ದ. ಅವನ ನಂತರ ಸ್ಪ್ಯಾನಿಶ್ ವೈದ್ಯ ಮೈಕೇಲ್ ಸರ್ವೇಟಸ್ (1511-1553) ಮತ್ತೊಮ್ಮೆ ವಿಶದವಾಗಿ ಶ್ವಾಸಕ ಪರಿಚಲನೆಯನ್ನು ವರ್ಣಿಸಿದ. ಇಬ್ನ್ ಅಲ್-ನಫೀಸ್ ಹಾಗೂ ಮೈಕೇಲ್ ಸರ್ವೇಟಸ್ ಶ್ವಾಸಕ ಪರಿಚಲನೆಯನ್ನು ಸ್ವತಂತ್ರವಾಗಿ ವಿವರಿಸಿದರೂ, ಅವರಿಗೆ ಕಾಯ ಪರಿಚಲನೆಯ ಬಗ್ಗೆ ಯಾವುದೇ ತಿಳಿವಿರಲಿಲ್ಲ. ವಿಲಿಯಂ ಹಾರ್ವೇಯು ಕಾಯ ಪರಿಚಲನೆಯನ್ನು ಪತ್ತೆ ಮಾಡುತ್ತಿರುವಂತೆಯೇ ಆತನಿಗೆ ಇಡೀ ರಕ್ತ ಪರಿಚಲನೆಯ ಸ್ವರೂಪ ತಿಳಿಯಿತು.

ಅದನ್ನು ಎಲ್ಲರಿಗೂ ತಿಳಿಯುವ ಹಾಗೆ ತನ್ನ ಮೋಟೊ-ಡಿ ಕಾರ್ಡಿಸ್ ಎಂಬ ಗ್ರಂಥದಲ್ಲಿ ವಿವರಿಸಿದ. ವಿಲಿಯಂ ಹಾರ್ವೆ ರಕ್ತ ಪರಿಚಲನೆ ಯನ್ನು ಕಂಡು ಹಿಡಿದ ಎನ್ನುವ ಕೀರ್ತಿಗೆ ಪಾತ್ರನಾದ. ಆದರೆ ವಿಲಿಯಂ ಹಾರ್ವೇ ಕಂಡು ಹಿಡಿದದ್ದು ರಕ್ತಪರಿಚಲನೆಯ ಎರಡನೆಯ
ಅರ್ಧವನ್ನು ಮಾತ್ರ. ಮೊದಲ ಅರ್ಧವನ್ನು ಇಬ್ನ್ ಅಲ್ -ನಫೀಸ್ ಆಗಲೇ ಕಂಡು ಹಿಡಿದಿದ್ದ! ಹಾಗಾಗಿ ರಕ್ತ ಪರಿಚಲನೆಯನ್ನು ಕಂಡು ಹಿಡಿದ ಕೀರ್ತಿಯಲ್ಲಿ ಅರ್ಧ ಪಾಲು ಇಬ್ನ್ ಅಲ್-ನಫೀಸ್‌ಗೂ ಸಹ ಸಲ್ಲಬೇಕು.

ಇಬ್ನ್ ಅಲ್-ನಫೀಸ್ ಶವ ವಿಚ್ಛೇದನವನ್ನು ಮಾಡಿ, ಹೃದಯದ ನಡುತಡಿಕೆಯು ಘನವಾಗಿರುವುದನ್ನು ತೋರಿದ. ಹೃದಯದ ಬಲ ಭಾಗದಲ್ಲಿರುವ ರಕ್ತವು, ಹೃದಯದ ಎಡ ಭಾಗಕ್ಕೆ ಬರುತ್ತದೆ. ಎಡಭಾಗದಲ್ಲಿ ಜೀವಶಕ್ತಿಯು (ವೈಟಲ್ ಸ್ಪಿರಿಟ್) ಉತ್ಪಾದನೆಯಾಗುತ್ತದೆ.
ಆದರೆ ಹೃದಯದ ಈ ಎರಡೂ ಭಾಗಗಳ ನಡುವೆ ರಕ್ತವು ಹರಿಯಲು ಅದೃಶ್ಯ ರಂಧ್ರವಿಲ್ಲ. ಹಾಗಾಗಿ ಗ್ಯಾಲನ್ ಹೇಳಿದ ಹಾಗೆ ಸೂಕ್ಷ್ಮ ರಂಧ್ರಗಳ ಮೂಲಕ ರಕ್ತವು ಹೃದಯದ ಬಲ ಭಾಗದಿಂದ ಎಡಭಾಗಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಪುರಾವೆ ಸಹಿತ ನಿರೂಪಿಸಿದ. ರಕ್ತವು ಮತ್ತು ಹೇಗೆ ಹೃದಯದ ಎಡಭಾಗಕ್ಕೆ ಹೋಗುತ್ತದೆ ಎನ್ನುವುದಕ್ಕೆ ತನ್ನದೇ ಆದ ವಾದವನ್ನು ಮಂಡಿಸಿದ.

ರಕ್ತವು ಹೃದಯದ ಬಲಭಾಗದಿಂದ ಎಡಭಾಗಕ್ಕೆ ಧಮನಿಯ ಸಿರೆಯಿಂದ (ವೀನಾ ಆರ್ಟೀರಿಯೋಸ = ಶ್ವಾಸಕ ಧಮನಿ) ಶ್ವಾಸಕೋಶ ಗಳ ಒಳಗೆ ಹೋಗುತ್ತದೆ. ಅಲ್ಲಿಂದ (ಜೀವಶಕ್ತಿ ಬೆರೆತ) ರಕ್ತವು ಹೃದಯದ ಎಡ ಭಾಗಕ್ಕೆ ಶ್ವಾಸಕ ಸಿರೆಯ ಮೂಲಕ (ಆರ್ಟೀರಿಯ ವೀನೋಸ = ಪಲ್ಮನರಿ ವೇಯ್ನ್) ಬರುತ್ತದೆ. ಜೊತೆಗೆ ಶ್ವಾಸಕೋಶದಲ್ಲಿ ಜೀವಶಕ್ತಿಯು (ಆಕ್ಸಿಜನ್) ರಕ್ತದಲ್ಲಿ ಬೆರೆಯುತ್ತದೆ. ಹೀಗೆ ಬೆರೆತ ರಕ್ತವು ಹೃದಯದೊಳಗೆ ಬರುತ್ತದೆ. ಆದರೆ ರಕ್ತವು ಹೃದಯದ ಎಡ ಭಾಗದಿಂದ ಶ್ವಾಸಕೋಶಗಳ ಒಳಗೆ ಹೋಗುವುದಿಲ್ಲ ಎಂದು ಬರೆದ.

ಇಬ್ನ್ ಅಲ್-ನಫೀಸ್ ನೀಡಿದ ಮತ್ತೊಂದು ಅರಿವಿನ ಕೊಡುಗೆ ಎಂದರೆ ಹೃದಯವು ತನ್ನ ಕೆಲಸ ಕಾರ್ಯಗಳಿಗೆ ಅಗತ್ಯವಾದ ಶಕ್ತಿಯನ್ನು ಮಕುಟ ಧಮನಿಗಳ ಮೂಲಕ (ಕರೋನರಿ ಆರ್ಟೆರೀಸ್) ಪಡೆಯುತ್ತದೆ ಎನ್ನುವ ಒಳನೋಟ. ಅವಿಸೆನ್ನ ಹೇಳಿದಂತೆ ಹೃದಯದ ಬಲ ಭಾಗದಲ್ಲಿರುವ ರಕ್ತವು ಹೃದಯವನ್ನು ಪೋಷಿಸುವುದಿಲ್ಲವೆಂದ. ಜೊತೆಗೆ ಶ್ವಾಸಕ ಧಮನಿಗಳು ಹಾಗೂ ಶ್ವಾಸಕ ಸಿರೆಗಳ ನಡುವೆ ಯಾವುದೋ ಸೂಕ್ಷ್ಮರೀತಿಯ ಸಂಪರ್ಕವಿರಬೇಕು ಎಂದ. ಇದಾದ 400 ವರ್ಷಗಳ ನಂತರ ಲೋಮನಾಳಗಳ ಅಸ್ತಿತ್ವವನ್ನು ಕಂಡು
ಹಿಡಿದರು. ಗ್ಯಾಲನ್ ಹೇಳುವ ಹಾಗೆ, ನಾಡಿಯು ಧಮನಿಗಳ ಭಿತ್ತಿಯಿಂದ ಉತ್ಪಾದನೆಯಾಗುವುದಿಲ್ಲವೆಂದ. ಬದಲಿಗೆ ಹೃದಯವು ಮಿಡಿಯುವ ಕಾರಣ ನಾಡಿಯೂ ಮಿಡಿಯುತ್ತದೆಯೆಂದ. ಹೃದಯವು ಸಂಕುಚಿಸಿದಾಗ ನಾಡಿ ವ್ಯಾಕೋಚಿಸುತ್ತದೆ.

ಹೃದಯವು ವ್ಯಾಕೋಚಿಸಿದಾಗ ನಾಡಿಯು ಸಂಕುಚಿಸುತ್ತದೆ ಎನ್ನುವ ನಿಖರ ಮಾಹಿತಿಯನ್ನೂ ನೀಡಿದ. ಈ ಎಲ್ಲದರ ಜೊತೆಯಲ್ಲಿ ಶ್ವಾಸಕೋಶಗಳ ರಚನೆ ಮತ್ತು ಕಾರ್ಯದ ಮೇಲೂ ಮಾಹಿತಿಯನ್ನು ನೀಡಿದ. ವೈದ್ಯಕೀಯ ಇತಿಹಾಸದಲ್ಲಿ ಇಬ್ನ್ ಅಲ್-ನಫೀಸನ
ಹೆಸರು ಮಸುಕಾಗಿದೆ. ಆತನಿಗೆ ಸಲ್ಲಬೇಕಾದ ಗೌರವವು ಇನ್ನು ಮೇಲಾದರೂ ಸಲ್ಲಲಿ ಎಂದು ಆಶಿಸೋಣ.