Wednesday, 11th December 2024

ಮದುವೆಯೆಂಬ ಮೂರಕ್ಷರದ ಬಂಧನದ ನಡುವಿನ ಬದುಕು !

ಯಶೋ ಬೆಳಗು

ಯಶೋಮತಿ ಬೆಳೆಗೆರೆ

yashomathy@gmail.com

ಪತ್ರಿಕೆಯ ಮೊದಲ ವರ್ಷದ ವಾರ್ಷಿಕ ಸಂಭ್ರಮ ನ ಭೂತೋ ನ ಭವಿಷ್ಯತಿ ಎನ್ನುವಂತಿತ್ತು. ರವೀಂದ್ರ ಕಲಾಕ್ಷೇತ್ರ ಕಿಕ್ಕಿರಿದು ತುಂಬಿತ್ತು. ವೇದಿಕೆಯ ಮೇಲೆ ಖುಷ್ವಂತ್ ಸಿಂಗ್, ಶ್ಯಾಮರಾವ್, ಅನಂತಮೂರ್ತಿಯಂಥಾ ದಿಗ್ಗಜರಿದ್ದರು. ಯಶಸ್ಸು, ಸಂತೋಷ, ಸಂಭ್ರಮ ಒಂದೊಂದಾಗಿ ಹೊಸ್ತಿಲೊಳಗೆ ನಡೆದುಬರುತ್ತಿವೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು.

ಒಂದಾದ ಮೇಲೊಂದರಂತೆ ಬಿಡುವಿಲ್ಲದ ಕೆಲಸಗಳ ಜತೆಗೆ ಸುತ್ತಾಟಗಳೂ ಸೇರಿ ಅಂದುಕೊಂಡಿದ್ದ ಕೆಲಸಗಳು ಅರ್ಧದ ನಿಂತು ಹೋಗಿದೆ. ಮನೆಯ ಬೇಸ್ಮೆಂಟಿನ ಸಾಕಷ್ಟು ಸ್ಥಳಾವಕಾಶವಿರುವುದರಿಂದ ಅದರ ಮಕ್ಕಳಿಗೆ ನೃತ್ಯ, ಸಂಗೀತ, ನಾಟಕ ಗಳನ್ನು ಕಲಿಸುವ ಪುಟ್ಟ ಅಕಾಡೆಮಿಯನ್ನು ಆರಂಭಿಸಿ ನಾಲ್ಕು ವರ್ಷಗಳಾಗುತ್ತಿವೆ.

ನಡುವೆ ಕರೋನಾದಿಂದ ತರಗತಿಗಳೆಲ್ಲ ಸಂಪೂರ್ಣ ನಿಂತುಹೋಗಿದ್ದವು. ಈಗ ಮತ್ತೆ ಸಾಕಷ್ಟು enquiry ಗಳು ಬರುತ್ತಿರುವುದರಿಂದ ಅದನ್ನು ಮತ್ತೆ ಮುಂದುವರೆಸುವ ಸಿದ್ಧತೆ ನಡೆದಿದೆ. ರವಿಯನ್ನು ನಾನು ಯಾವಾಗಲೂ ‘ವೀ’ ಅಂತಲೇ ಕರೀತಿದ್ದುದು. ಅವರು ನನ್ನನ್ನು ‘ಶೂ’ ಅಂತ ಕರೀತಿದ್ರು. ಹೀಗಾಗಿ ಇಬ್ಬರ ಹೆಸರೂ ಸದಾ ಜತೆಗಿ ರುವಂತೆ ಅಕಾಡೆಮಿಗೆ ‘ಯಶಸ್ವೀ’ ಅನ್ನುವ ಹೆಸರಿಟ್ಟಿದ್ದೆ.

ರವಿಗೂ ಬಹಳ ಮೆಚ್ಚುಗೆಯಾಗಿತ್ತು. ಇಷ್ಟು ಶ್ರದ್ಧೆಯಿಂದ ಆರಂಭಿಸಿರುವ ನಿನ್ನ ಅಕಾ ಡೆಮಿ ಮುಗಿಲೆತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದರು ಕೂಡ. ಈಗ ಅವರ ಆಶಯದಂತೆ ಮತ್ತೆ ಆರಂಭಗೊಳ್ಳುತ್ತಿದೆ ಯಶಸ್ವೀ. ಈಗ ನಿವೃತ್ತ ಪ್ರಾಂಶುಪಾಲರೂ, ಕವಯಿತ್ರಿಯೂ ಆದ ಶಶಿಕಲಾ ವಸದ ಅವರೂ ಜತೆಗಿರುವುದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೊಸದಾಗಿ ಒಂದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬ ಇರಾದೆಯಿದೆ.

ಇನ್ನು ಆರಂಭಿಸಿದ ಬೆಸ್ಟ್ ಆಫ್ ಬೆಳಗೆರೆ youtube ಚಾನೆಲ್ಲಿಗೂ ಸಾಕಷ್ಟು ಮೆಚ್ಚುಗೆಗಳು ದೊರೆತಿವೆ. ಆದರೆ ಕೂತು ಕೆಲಸ ಮಾಡಲು ನನಗೇ ಪುರುಸೊತ್ತಿಲ್ಲ. ಏನಾದರೂ ಆಗಲಿ ಚಿಕ್ಕಮಗಳೂರಿನಲ್ಲಿ ನನ್ನ ಆತ್ಮೀಯ ಸಹೋದರಿಯ (cousin sister) ಮಗಳ ಮದುವೆ ಯೊಂದು ಮುಗಿಸಿ, ಹಾಗೆಯೇ ತಮ್ಮನ ಕುಟುಂಬದ ಬಂಧು-ಬಳಗವನ್ನು ನೋಡಿ ಮಾತಾಡಿಸಿಕೊಂಡು ಬಂದ ಮೇಲೆ ಮತ್ತೆಲ್ಲಿಗೂ ಹೋಗದಂತೆ ನನ್ನನ್ನು ನಾನೇ ನಿರ್ಬಂಧಿಸಿಕೊಂಡು ಕೆಲಸ ಮಾಡಬೇಕು ಅಂದುಕೊಳ್ಳುತ್ತಿರುವಾಗಲೇ ಆ ಆಲೋಚನೆಗಳಿಗೆಲ್ಲ ಬ್ರೇಕು ಬೀಳುವಂತೆ ಅಮ್ಮಾ, ನಿಮ್ಮ ಮದುವೆ ಆನಿವರ್ಸರಿ ಯಾವಾಗ? ಅನ್ನುವ ಮಗನ ಮಾತು ಕೇಳಿ ನೆನಪುಗಳೊಡನೆ ಗಾಳ ಹಾಕುತ್ತಾ
ಆಳಕ್ಕಿಳಿಯತೊಡಗಿತು ಮನಸು.

2005 ನವೆಂಬರ್ 28! ಆದರೆ ನವೆಂಬರ್ 25ರ ನಿನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಅದು ಪ್ರತಿ ವರ್ಷ ನೆನಪಿಗೇ ಬಾರದೆ ಕಳೆದು ಹೋಗುತ್ತದೆ ಅಂದಾಗ, ಪೆಚ್ಚುಮೋರೆ ಮಾಡಿಕೊಂಡು ಮದುವೆಗೆ ಯಾರೆಲ್ಲ ಬಂದಿದ್ರು? ಯಾವ ಛೌಲ್ಟ್ರಿಯಲ್ಲಿ ಆಗಿದ್ದು? ಅಂದ. ನಮ್ಮ ಮದುವೆಯಲ್ಲಿ ನಮ್ಮನ್ನು ಬಿಟ್ಟರೆ ಇದ್ದದ್ದು ಫೋಟೊಗ್ರಾಫರ್ ಶೃಂಗೇರಿ ಸತೀಶ್ ಹಾಗೂ ಅವರ ಪತ್ನಿ ದೀಪಾ ಅಷ್ಟೆ ಅಂದೆ. ಅಜ್ಜಿ-ತಾತ, ಚಿಕ್ಕಿ, ಮಾವ, ನಿನ್ನ ಫ್ರೆಂಡ್ಸ್, ಅಪ್ಪನ ಕಡೆಯವರು ಯಾರೂ ಇರಲಿಲ್ವಾ? ಎನ್ನುತ್ತಾ ಆಶ್ಚರ್ಯ ವ್ಯಕ್ತಪಡಿಸಿದ.

ಎಲ್ಲರಿಗೂ ಆಹ್ವಾನವಿತ್ತು, ಊಟ ಹಾಕಿಸಿ ಸಂಭ್ರಮ ಪಡುವಂತಿರಲಿಲ್ಲ ಆಗಿನ ಸಂದರ್ಭ. ಪತ್ರಿಕೆಯಲ್ಲಿ ಮಾಡುತ್ತಿದ್ದ ವರದಿಗಳಿಂದಾಗಿ ಸಾಕಷ್ಟು ಬಲಾಢ್ಯರು ಅವರಿಗೆ ಹೇಗಾದರೂ ಮುಖಭಂಗ ಮಾಡಬೇಕೆಂದು ಹೊಂಚು ಹಾಕುತ್ತಿದ್ದರು. ಅದೂ ಅಲ್ಲದೇ ಅಪ್ಪ was already married. And a father of three kids… ಅಂದೆ. ಮತ್ಯಾಕೆ ನೀನು ಅವರನ್ನೇ ಮದುವೆಯಾದೆ? It spoiled the
relationships ಅಲ್ವಾ? ಅಂದ. ಮ… ಸಾಕಷ್ಟು ತೊಂದರೆಗಳು, ಅವಮಾನಗಳಾದವು. ನನಗಿಂತ ಹೆಚ್ಚಾಗಿ ಅಪ್ಪ ತುಂಬಾ face ಮಾಡಬೇಕಾಯ್ತು. ಆದರೆ ಏನೇ ಆದ್ರೂ ಕೂಡ ಅವರು ಕೊನೆತನಕ ಜತೆಗೆ ಉಳಿದರು.

ಅವರಿಗಿದ್ದ ಕನೆಕ್ಷನ್ಸ್‌ಗೆ ಅವರು ನನ್ನನ್ನು ಏನು ಬೇಕಾದರೂ ಮಾಡಬಹುದಾಗಿತ್ತು. ಆದರೆ ಯಾರೂ ಒಂದು ಮಾತಾಡದಂತೆ ಜೋಪಾನ ಮಾಡಿದರು. All because of love. ಅಪ್ಪನ ಬರವಣಿಗೆಗೆ, ಅವರ ಮಾತಿನ ಮೋಡಿಗೆ, ಅವರ ಚೆಲುವಿಗೆ ಸಾಕಷ್ಟು ಹುಡುಗಿಯರಿಗೆ ಕ್ರಶ್ ಇತ್ತು. ಹುಡುಗಿಯರಷ್ಟೇ ಅಲ್ಲ. ಹುಡುಗರೂ ಕೂಡ ಅಷ್ಟೇ ಇಷ್ಟ ಪಡುತ್ತಿದ್ದರು. ಅಷ್ಟೆಲ್ಲ ಇದ್ದರೂ ಅವರು ಯಾಕೆ ನನ್ನನ್ನೇ ಅಷ್ಟು ಪ್ರೀತಿಸಿದರು? ಜಾತಿ, ಹಣ, ಅಽಕಾರದ ಯಾವ ಬೆಂಬಲವೂ ಇಲ್ಲದ ನನಗಾಗಿ ಎಷ್ಟೆಲ್ಲ ಜನರನ್ನು ಎದುರು ಹಾಕಿಕೊಂಡರು…. ಅಂತೆಲ್ಲ
ನೋಡುವಾಗ Its just a destiny ಅನ್ನಿಸುತ್ತೆ ನಂಗೆ.

ಇದಕ್ಕಿಂತ ತಮಾಷೆ ಅಂದರೆ ನನಗೆ ಮದುವೆಯ ಮೇಲೆ ಆಸಕ್ತಿಯೇ ಇರಲಿಲ್ಲ. ಯಾಕಂದ್ರೆ ಎಲ್ಲ ಬರೀ ವ್ಯವಹಾರಗಳಷ್ಟೆ. ಮಾರುಕಟ್ಟೆ ಯಲ್ಲಿ ಹಸುವನ್ನೋ, ಕುರಿಯನ್ನೋ, ಕೋಳಿಯನ್ನೋ ಕೊಂಡಕೊಳ್ಳುವ ಹಾಗೆ ಅದಕ್ಕೊಂದು ಬೆಲೆ ನಿಗದಿಪಡಿಸಿ ಮನೆಗೆ ಒಯ್ಯುವಂತೆ
ಹೆಣ್ಣಿನ ಸಮೇತ ಆಸ್ತಿ, ಒಡವೆ, ಕಾರು, ವರದಕ್ಷಿಣೆ ಅಂತೆಲ್ಲ ಮಾತುಕತೆಗಳಾಗುತ್ತಿದ್ದರೆ ನನಗೆ ಒಳಗೊಳಗೇ ಎಲ್ಲವುಗಳ ಬಗ್ಗೆ ತಿರಸ್ಕಾರ. ಅವರ ಸೇವೆಯನ್ನೂ ಮಾಡುತ್ತಾ, ಮನೆಯಲ್ಲಿ ಕಸಮುಸುರೆ ತೊಳೆಯುತ್ತಾ, ಅವರ ಮಕ್ಕಳಿಗೆ ಅಮ್ಮನಾಗಿ ಜೀವನ ಕಳೆಯುವುದು
ಸುತರಾಮ್ ಇಷ್ಟವಿರಲಿಲ್ಲ. ಅದಕ್ಕಿಂತ ಒಂಟಿಯಾಗಿರುವುದೇ ಉತ್ತಮ ಎನಿಸುತ್ತಿತ್ತು.

ಆದರೆ ಏನು ಮಾಡುವುದು? ಮನೆಗೆ ಹಿರಿಮಗಳು. ನನ್ನ ಹಿಂದೆ ತಂಗಿ ಬೇರೆ ಇದ್ದಾಳೆ. ಅವಳದ್ದೂ ಭವಿಷ್ಯ ಯೋಚನೆ ಮಾಡಬೇಕಲ್ಲ.
ಹೀಗಾಗಿ ಯಾರೇನೇ ಹೇಳಿದರೂ ಮಾತಾಡದೆ ಎಲ್ಲವನ್ನೂ ಸುಮ್ಮನೇ ಒಪ್ಪಿಕೊಳ್ಳುತ್ತಿದ್ದೆ. ಎಲ್ಲಕ್ಕೂ ಅಡ್ಡ ಬರುತ್ತಿದ್ದುದು ನನ್ನ ಜನ್ಮ ನಕ್ಷತ್ರವಾದ ಮೂಲಾ ನಕ್ಷತ್ರ! ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಮದುವೆಯಾಗುವ ಹುಡುಗನಿಗೆ ತಾಯಿ ಇರಬಾರದಂತೆ.
ಹೀಗಾಗಿ ಅತ್ತೆಯಿರದ ಮನೆಯ ಹುಡುಕಾಟದಲ್ಲಿ ಮದುವೆ ಮುಂದಕ್ಕೆ ಹೋಗುತ್ತಿದ್ದುದರಿಂದ ನಾನು ಹತ್ತಿರದ ಇದ್ದ ಹಾಯ್ ಬೆಂಗಳೂರ್! ಕಚೇರಿಗೆ ಸೇರಿದೆ.

ಕಚೇರಿಗೆ ಹೋದ ಮೊದಲ ದಿನ ಪತ್ರಿಕೆಯ ಸರ್ಕ್ಯುಲೇಷನ್ ವಿಭಾಗದಲ್ಲಿದ್ದ ಸಂತೋಷ್ ಕುಮಾರ್ ಹಾಗೂ ಅಕೌಂಟ್ಸ್ ವಿಭಾಗದಲ್ಲಿದ್ದ ಶಿವಕುಮಾರ್ ಇದ್ದರು. ‘ಅಮ್ಮನಿಗೆ ಆರೋಗ್ಯ ಸರಿಯಿಲ್ಲವಾದ್ದರಿಂದ ಸಾರ್ ಮನೆಗೆ ಹೋಗಿದ್ದಾರೆ. ಬರೋದು ತಡವಾಗಬಹುದು. ನೀವು ನಾಳೆ ಬನ್ನಿ ಅಂದಾಗ. ಪಾಪ! ಅವರಮ್ಮನಿಗೆ ಹುಷಾರಿಲ್ಲ ಅನ್ಸತ್ತೆ. ಅಂದುಕೊಂಡು ವಾಪಸ್ಸಾಗಿದ್ದೆ. ಮಾರನೆಯ ದಿನ ಆಗಸ್ಟ್ ಹದಿನೈದು. ಬಸವನಗುಡಿಯ ಉದ್ಯೋಗ ಕೇಂದ್ರವೊಂದರ ಕಾರ್ಯಕ್ರಮಕ್ಕೆ ಅತಿಥಿಯಾಗಿ ರವಿ ಬೆಳಗೆರೆಯವರು ಬರುತ್ತಾರೆ. ನೀನು
ಅ ಅವರನ್ನು ಭೇಟಿಯಾಗುವಿಯಂತೆ ಎಂದು ಹೇಳಿದ್ದರು ಅದರ ಸಂಸ್ಥಾಪಕಿ ಶೋಭಾ. ಆದರೆ ಅಂದು ಆ ಕಾರ್ಯಕ್ರಮಕ್ಕೆ ಅವರು ಬರಲೇ ಇಲ್ಲ. ಸರಿ, ಕಚೇರಿಗೆ ಫೋನು ಮಾಡಿದಾಗ ಸರ್ ಇದ್ದಾರೆ.

ನೀವು ಕೂಡಲೇ ಬಂದು ಭೇಟಿಯಾಗಿ ಅಂದರು. ಸರಿ ಗೆಳತಿಯರಾದ ಶೈಲಜಾ ಹಾಗೂ ಸಾವಿತ್ರಿಯರೊಡನೆ ಕಚೇರಿಗೆ ಹೋದೆ.
ಬಸ್ಸಿನಲ್ಲಿ ಕೊಟ್ಟ ಚಿಲ್ಲರೆಯೆಲ್ಲ -ಲಿನ mಟ್ಠ್ಚeನಲ್ಲಿ ಹಾಕಿಕೊಂಡಿದ್ದೆ. ಕಚೇರಿಯ ಹೊಸ್ತಿಲು ದಾಟಿ ಒಳಗೆ ಕಾಲಿಡುತ್ತಿದ್ದಂತೆಯೇ -ಲು ಉಲ್ಟಾ ಹಿಡಿದದ್ದರಿಂದ ಒಳಗಿದ್ದ ಚಿಲ್ಲರೆಯೆಲ್ಲ ಚೆಡಿಹೋಯ್ತು. ಬರ್ತಾ ಧನಕ್ಷ್ಮಿಯನ್ನೇ ಕರ್ಕೊಂಡು ಬಂದಂಗಿದೆ ಅಂತ ಮತ್ತದೇ ಸಂತೋಷ್ ಮೆಲುದನಿಯ ನಗೆಯಾಡಿದರು.

ಪಿಂಕ್ ಶರ್ಟಿನಲ್ಲಿ ಏನನ್ನೋ ಬರೆಯುತ್ತಾ ಕುಳಿತಿದ್ದವರು ತಲೆಯೆತ್ತಿ ನೋಡಿ ನನ್ನ -ಲ್‌ನಲ್ಲಿದ್ದ ರೆಕಾರ್ಡ್ಸ್ ಎಲ್ಲ ಪರಿಶೀಲಿಸಿ ಪಕ್ಕಕ್ಕಿಟ್ಟು, ನಿವೇದಿತಾರನ್ನು ಕರೆದು, ಇವರು ನಮ್ಮ ಸರ್ಕ್ಯುಲೇಷನ್ ಮ್ಯಾನೇಜರ್. ನೀನು ಇವರ ಜತೆಗಿರು. ಇವರು ನಿನಗೆ ಕೆಲಸ ಏನು ಅಂತ
ಹೇಳ್ತಾರೆ. ಈ ಆಫೀಸಲ್ಲಿ ಎಲ್ಲರ ಜತೆ ಹೊಂದಿಕೊಂಡು ಹೋಗಬೇಕು. ಆ ಕೆಲಸ ಮಾಡಲ್ಲ, ಈ ಕೆಲಸ ಮಾಡಲ್ಲ ಅಂತೆಲ್ಲ ಹೇಳ್ಬಾರ್ದು. ಯಾಕಂದ್ರೆ ಇದು ಆಫೀಸಿಗಿಂತ ಹೆಚ್ಚಾಗಿ ನಮ್ಮೆಲ್ಲರ ಮನೆ ಇದ್ದಂತೆ.

ನೀನು ಅದರ ಒಬ್ಬ ಸದಸ್ಯಳು. ನಿಮ್ಮನೇಲಿ ನೀನು ಕೆಲಸ ಮಾಡಲ್ವಾ? ಹಾಗೇನೇ… ಅಂದು, ಒಂದು ಸಾವಿರ ರುಪಾಯಿ ಸಂಬಳ ನಿಗದಿ ಪಡಿಸಿದರು. ಅಷ್ಟರಗಲೇ ನಾನು ಒಂದು ಟೈಪಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಟ್ಯೂಟರ್ ಆಗಿದ್ದವಳು. ಕನ್ನಡ, ಇಂಗ್ಲಿಷ್ ಫಸ್ಟ್ ಕ್ಲಾಸಿನಲ್ಲಿ ಪಾಸು ಮಾಡಿದ್ದವಳು. ಆದರೆ ಇಲ್ಲಿ ಬಂದರೆ ಎಲ್ಲ ಅಯೋಮಯ. ಕಲಿತದ್ದೆಲ್ಲ ಮರೆತು ಮತ್ತೆ ಮೊದಲಿಂದ ಕಲಿಯುವ ಪರಿಸ್ಥಿತಿ.

ಒಂದು ದಿನ ಕಷ್ಟಪಟ್ಟು ಕಲಿತವಳಿಗೆ ಸಾಕುಸಾಕೆನಿಸಿ ಮಾರನೆಯ ದಿನ ಮತ್ತೆದರೂ ಬೇರೆ ಕೆಲಸ ಹುಡುಕೋಣ ಅಂದುಕೊಳ್ಳುತ್ತಾ ಮನೆ ತಲುಪಿz. ಮಾರನೆಯ ದಿನ ಬರುಷ್ಟರಲ್ಲಿ ಕಚೇರಿಯ ತುಂಬಾ ಪೇಪರ್ ಕಟ್ಟಿಂಗ್ಸು, ಪಾಸಿಟಿವ್ ಕಟಿಂಗ್ಸ್ ಎಲ್ಲಾ ಅಲ್ಲ ಬಿದ್ದಿದೆ. ಅದನ್ಯಾರೂ ಇನ್ನೂ ಸ್ವಚ್ಛಗೊಳಿಸಿರಲಿಲ್ಲ. ಕಂಪ್ಯೂಟರ್ ಮುಂದೆಯೂ ಸಾಕಷ್ಟು ಪೇಪರುಗಳ ರಾಶಿ. ನಂತರ ತಿಳಿಯಿತು, ಅಂದು ಪತ್ರಿಕೆ ಪ್ರಕಟ ಗೊಳ್ಳುವ ದಿನವೆಂದು.

ಹೀಗಾಗಿ ರಾತ್ರಿಯೆಲ್ಲ ಕೆಲಸ ಮಾಡಿ ಬೆಳಗಿನ ಜಾವ ಪತ್ರಿಕೆಯನ್ನು ಪ್ರಿಂಟಿಗೆ ಕಳಿಸಲಾಗಿದೆ. ಹೀಗಾಗಿ ಈ ಅವಸ್ಥೆ ಎಂದು. ಕೆಲವು ಅಕ್ಷರಗಳಂತೂ ಆ ಭಗವಂತ ಇಳಿದು ಬಂದರೂ ಓದುವುದು ಕಷ್ಟವೆನಿಸುವಂತಿತ್ತು. ಅದರ ಸ್ಪಷ್ಟವಾದ ಅಕ್ಷರದೆಡೆಗೆ ಗಮನ ಹರಿಯಿತು. ಅದನ್ನು ಹಿಡಿದು ಓದುತ್ತಾ ಕಂಪೋಸ್ ಮಾಡಲು ಪ್ರಯತ್ನಿಸಿದೆ. ತೆಲುಗಿನ ಶ್ರೀ ಶ್ರೀಯವರ ಬಗ್ಗೆ ಬರೆದ ಲೇಖನವಾಗಿತ್ತದು. ಬರೆದವರು ಯಾರೆಂದು ಹೇಳಬೇಕೆ? ಓದುತ್ತಿದ್ದಂತೆಯೇ ಅವರು ಆರಿಸಿಕೊಂಡ ವಿಷಯ, ಅದರ ಓಘ, ಪದಬಳಕೆ ಎಲ್ಲದರಲ್ಲೂ ಒಂದು ವಿಶೇಷತೆ ಯಿದೆಯೆನ್ನಿಸುತ್ತಿತ್ತು. ಅದರೆಡೆಗೆ ಕುತೂಹಲ ಮೂಡುತ್ತಾ, ಆಸಕ್ತಿ ಅರಳಿಕೊಳ್ಳುತ್ತಾ ಹೋಯಿತು. ಅದಾದ ಒಂದು ತಿಂಗಳ ಪತ್ರಿಕೆಗೆ ವರುಷ ತುಂಬುವ ಸಂಭ್ರಮ.

ಅದರೊಂದಿಗೆ ಮಾಂಡೋವಿ ಹಾಗೂ ಖಾಸ್ ಬಾತ್ 96 ಪುಸ್ತಕ ಬಿಡುಗಡೆಯ ಕಾರ್ಯಕ್ರಮ! ಅದರ ನಡುವೆಯೇ ಎದುರಾದ ಗೌರೀ-ಗಣೇಶ ಚತುರ್ಥಿ! ಮೊದಲ ಬಾರಿಗೆ ಹಬ್ಬದ ದಿನ ಮನೆಮಂದಿಯೊಂದಿಗೆ ಒಟ್ಟಿಗೇ ಊಟ ಮಾಡದೇ ಕಚೇರಿಯ ಕಾರ್ಯನಿರತಳಾಗಿದ್ದೆ.
ಅದೆಂಥಾ ಆಫೀಸು ನಿಮ್ದು? ಹಬ್ಬಕ್ಕೂ ಒಂದಿನ ರಜೆ ಕೊಡಲ್ಲ ಅನ್ನೋದಾದ್ರೆ ನೀನು ಹೋಗೋದೇ ಬೇಡ ಅನ್ನುವ ಅಪ್ಪನ ಆಜ್ಞೆ!
ಪತ್ರಿಕೆಯ ಮೊದಲ ವರ್ಷದ ವಾರ್ಷಿಕ ಸಂಭ್ರಮ ನ ಭೂತೋ ನ ಭವಿಷ್ಯತಿ ಎನ್ನುವಂತಿತ್ತು. ರವೀಂದ್ರ ಕಲಾಕ್ಷೇತ್ರ ಕಿಕ್ಕಿರಿದು ತುಂಬಿತ್ತು. ವೇದಿಕೆಯ ಮೇಲೆ ಖುಷ್ವಂತ್ ಸಿಂಗ್, ಶ್ಯಾಮರಾವ್, ಅನಂತಮೂರ್ತಿಯಂಥಾ ದಿಗ್ಗಜರಿದ್ದರು.

ಯಶಸ್ಸು, ಸಂತೋಷ, ಸಂಭ್ರಮ ಒಂದೊಂದಾಗಿ ಹೊಸ್ತಿಲೊಳಗೆ ನಡೆದುಬರುತ್ತಿವೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಇಂದು ಅದೆಲ್ಲ ಘಟನೆಗಳು ನೆನಪಿಸಿಕೊಂಡರೇ ಮನಸ್ಸಿಗೆ ಅದೆಂಥಾ ಸಂತೋಷ…. ಅಮ್ಮಾ, ನೀನ್ಯಾಕೆ ಇದೆಲ್ಲದರ ಬಗ್ಗೆ ಇನ್ನೂ ಪುಸ್ತಕ ಬರೆದಿಲ್ಲ? ಕೇಳೋಕೆ ತುಂಬಾ interesting ಆಗಿದೆ ಅಂದಾಗ…. ಮ. ಇರೋ ಕೆಲಸ ಮಾಡೋಕೇ ಪುರುಸೊತ್ತಿಲ್ಲ. ಇನ್ನು ಪುಸ್ತಕ ಯಾವಾಗ ಬರೆಯೋದು ಪುಟ್ಟಾ? ಅನ್ನುತ್ತಾ ಮಾತು ಬದಲಿಸಿದೆ.