Wednesday, 11th December 2024

ಮರುಪರೀಕ್ಷೆ ನಡೆಯಲಿ

ಪಿಎಸ್‌ಐ ನೇಮಕ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರಿ ಅಕ್ರಮಗಳು ನಡೆದಿದ್ದು, ದಿನ ಕಳೆದಂತೆ ಒಂದೊಂದೇ ಸತ್ಯ ಹೊರಬರುತ್ತಿವೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು ಹಿಂದೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಅತ್ಯಂತ ಕಳಪೆಮಟ್ಟದ್ದಾಗಿತ್ತು. ಹಗಲಿರುಳು ಓದಿದ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ನೋಡಿ ಕಕ್ಕಾಬಿಕ್ಕಿಯಾಗಿದ್ದರು ಎಂಬ ಸುದ್ದಿ ಆಗಲೇ ಹರಿದಾಡಿತ್ತು. ಇದೀಗ ಆ ಪ್ರಶ್ನೆ ಪತ್ರಿಕೆ ರಚನೆ ಯಾಕೆ ಹಾಗಿತ್ತು ಎಂಬುದರ ಸತ್ಯ ಬಯಲಿಗೆ ಬಂದಿದೆ. ಪ್ರಶ್ನೆಗಳು ಕನಿಷ್ಠಪಕ್ಷ ಕೆ-ಸೆಟ್, ನೆಟ್ ಮಟ್ಟದಲ್ಲಿ ಇದ್ದಿದ್ದರೂ ವಿಷಯಜ್ಞಾನ ಹೊಂದಿದ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗುವ ಅವಕಾಶ ಹೆಚ್ಚಾಗಿ ರುತ್ತಿತ್ತು.

ಆದರೆ ಕೆಲವೇ ಜನರಿಗೆ ಅನುಕೂಲವಾಗುವಂತೆ ಪ್ರಶ್ನೆ ಪತ್ರಿಕೆ ರಚಿಸಲಾಗಿತ್ತು. ಆ ಕೆಲವೇ ಜನರು ಯಾರು ಎಂಬುದು ಇದೀಗ ಬಹಿರಂಗವಾಗಿದೆ. ಹೀಗಾಗಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಮರುಪರೀಕ್ಷೆ ನಡೆಸುವ ಮೂಲಕ ನಿಷ್ಠೆಯಿಂದ ಓದಿದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವತ್ತ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಗಮನಹರಿಸಬೇಕಿದೆ. ಇನ್ನೊಂದೆಡೆ ಕಳೆದ ಎರಡ್ಮೂರು ವರ್ಷಗಳಿಂದ ನಡೆಯದ ಪಿಎಸ್‌ಐ ನೇಮಕ ಈ ಬಾರಿ ನಡೆದಿದ್ದು, ಅದರಲ್ಲೂ ಭ್ರಷ್ಟಾಚಾರದ ವಾಸನೆ ಹೆಚ್ಚಾಗಿಯೇ ಹೊಡೆಯುತ್ತಿದೆ.

ಕೂಲಿ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ ಅನೇಕ ಪೋಷಕರಿಗೆ ತಮ್ಮ ಮಕ್ಕಳ ಪರೀಕ್ಷಾ ಫಲಿತಾಂಶ ನಿರಾಶೆ ಹುಟ್ಟಿಸಿದೆ. ಇದೇ ನೇಮಕ ಪ್ರಕ್ರಿಯೆಯನ್ನು ಸರಕಾರ ಒಪ್ಪಿಕೊಂಡು ಆಯ್ಕೆಯಾದವರಿಗೆ ನೇಮಕ ಪತ್ರ ನೀಡಿದರೆ ಮತ್ತೆ ಪಿಎಸ್‌ಐ ನೇಮಕಕ್ಕೆ ಅರ್ಜಿ ಆಹ್ವಾನಿಸಲು ವರ್ಷಗಳೇ ಕಳೆಯುವ ಸಾಧ್ಯತೆ ಇದೆ. ಹೀಗಾಗಿ ಪಿಎಸ್‌ಐ ನೇಮಕಕ್ಕೂ ಮತ್ತೊಮ್ಮೆ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ.

ಅಲ್ಲದೇ, ಇವೆರಡೂ ನೇಮಕ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ನಡೆಯಲು ಕಾರಣವಾದರನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ಕೊಡಿಸಬೇಕಿದೆ. ಆ ಮೂಲಕ ವ್ಯವಸ್ಥೆಯ ಬಗ್ಗೆ ಜನರಲ್ಲಿ ಭರವಸೆ ಮೂಡಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ.