Friday, 13th December 2024

ಈಗ ಯಾರೂ ನಮ್ಮನ್ನು ಕಡೆಗಣಿಸುವಂತಿಲ್ಲ

ಸಂಗತ 

ವಿಜಯ್‌ ದರ್‌ಡ

ಬೇರೆ ಬೇರೆ ರಾಜ್ಯಗಳ ನಾಯಕರುಗಳು ಈಗ ನಮ್ಮ ದೇಶದ ವಿದೇಶಾಂಗ ಸಚಿವರನ್ನು, ರಕ್ಷಣಾ ಸಚಿವರನ್ನು ಮತ್ತು ಇತರ ಕೇಂದ್ರ ಸಚಿವರನ್ನು ಭೇಟಿ ಮಾಡಲು ಆಸಕ್ತಿ ವ್ಯಕ್ತಪಡಿಸುತ್ತಾರೆ. ಹಿಂದೆ ಈ ಪದ್ಧತಿ ಅಮೆರಿಕದಲ್ಲಿ ಮಾತ್ರ ಇತ್ತು. ಈಗ ಅದು ನಮ್ಮ ದೇಶಕ್ಕೂ ಬಂದಿದೆ.

ಜಗತ್ತು ಎಷ್ಟು ಬೇಗ ಮತ್ತು ವೇಗವಾಗಿ ಬದಲಾವಣೆಗಳನ್ನು ಹೊಂದುತ್ತಿದೆ ಅಲ್ಲವೇ? ಯಾವ ದೇಶವನ್ನು 75 ವರ್ಷಗಳ ಹಿಂದೆ
ಬ್ರಿಟಿಷರು ಆಳ್ವಿಕೆ ನಡೆಸಿ ದಬ್ಬಾಳಿಕೆ ಮಾಡಿದ್ದರೋ, ಆ ಬ್ರಿಟನ್ ದೇಶದ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿ ಕಾರ್ಯಕ್ರಮದಲ್ಲಿ ಹಲವೆಡೆ ಓಡಾಡಿ ಭಾಷಣಗಳನ್ನು ಮಾಡಿ ನಮ್ಮ ಪ್ರಧಾನ ಮಂತ್ರಿಯನ್ನು ತನ್ನ ವಿಶೇಷ ಸ್ನೇಹಿತ ಎಂದು ಕೊಂಡಾಡುತ್ತಾರೆ.

ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೆಮ್ಮೆಯಿಂದಲೇ ಸಮತೂಕದ ಮಾತುಗಳನ್ನಾಡಿದ್ದಾರೆ. ಇಂದು ವಿಶ್ವ ನಕಾಶೆಯಲ್ಲಿ ನಮ್ಮ ದೇಶ ತನ್ನದೇ ಆದ ಸ್ವತಂತ್ರ ಅಸ್ತಿತ್ವ ಮತ್ತು ದೃಢತ್ವದೊಂದಿಗೆ ಗುರುತಿಸಿಕೊಂಡಿದೆ. ಯಾರೂ ನಮ್ಮನ್ನು ಕಡೆಗಣಿಸು ವುದು ಸಾಧ್ಯವಿಲ್ಲ ಎಂಬುದು ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ.

ಇನ್ನು ಬ್ರಿಟನ್ನಿನ ವಿಚಾರಕ್ಕೆ ಬರುವುದಾದರೆ ಅವರು ಒಂದಾನೊಂದು ಕಾಲದಲ್ಲಿ ವಿಶ್ವದ ಬಹುಪಾಲು ಭೂಭಾಗದಲ್ಲಿ ಸುದೀರ್ಘ ಕಾಲ ತಮ್ಮ ಆಳ್ವಿಕೆಯ ಪಾರಮ್ಯ ಮೆರೆದವರು. ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಹೆಸರು ಪಡೆದವರು. ಇಂದಿಗೂ ಬ್ರಿಟನ್ ಒಂದು ಬಹುಮುಖ್ಯ ರಾಷ್ಟ್ರ. ಅದರ ಮಾತಿಗೆ ವಿಶ್ವಾದ್ಯಂತ ಮನ್ನಣೆ ಇದೆ. ಎರಡು ದಿನಗಳ ಭೇಟಿಗೆ ಬೋರಿಸ್ ಜಾನ್ಸನ್ ಭಾರತಕ್ಕೆ ಬರುತ್ತಾರೆ ಎಂದಾಗ ಈ ಪ್ರವಾಸದ ಉದ್ದೇಶದ ಬಗ್ಗೆ ಎಲ್ಲರಲ್ಲೂ ಕುತೂಹಲವಿತ್ತು. ಈ ಭೇಟಿಯ ಹಿಂದಿರುವ ಮರ್ಮವೇನು ಮತ್ತು ಇಬ್ಬರೂ ಪ್ರಧಾನ ಮಂತ್ರಿಗಳ ಮಾತುಕತೆಯ ನಂತರ ಹೊರಹೊಮ್ಮವ ಫಲಿತಾಂಶವೇನು ಎಂಬುದು ಕುತೂಹಲಕ್ಕೆ ಕಾರಣ.

ಇಂತಹ ಉನ್ನತ ಮಟ್ಟದ ಮಾತುಕತೆಗಳಲ್ಲಿ ಕೆಲವೊಂದಿಷ್ಟು ಮಾತ್ರ ಪ್ರಕಟವಾಗುತ್ತವೆ ಮತ್ತು ಅದೆಷ್ಟೋ ಸಂಗತಿಗಳು ಬಹಿ ರಂಗವಾಗುವುದೇ ಇಲ್ಲ. ರಕ್ಷಣಾ, ಸಹಕಾರ ಅದರಲ್ಲೂ ಭೂಸೇನೆ, ವಾಯುಸೇನೆ, ನೌಕಾದಳ, ಅಂತರಿಕ್ಷ, ಸೈಬರ್ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸಹಕಾರ ಹಸ್ತ ಚಾಚುವ ಕುರಿತಾಗಿ ಮಾತುಕತೆ ನಡೆದಿದೆ ಎಂದು ಬೋರಿಸ್ ಜಾನ್ಸನ್ ಹೇಳಿ ಕೊಂಡಿದ್ದಾರೆ. ಎರಡೂ ರಾಷ್ಟ್ರಗಳಿಗೆ ಹೊಸದಾದ ಸಂಕೀರ್ಣ ಸಮಸ್ಯೆಗಳಿವೆ.

ಭೇಟಿಯ ನಂತರ ತಮ್ಮ ಉಲ್ಲಾಸದ ಕ್ಷಣಗಳನ್ನು ಹಂಚಿಕೊಂಡ ಬೋರಿಸ್- ನಾನು ಸಚಿನ್ ತೆಂಡೂಲ್ಕರ್‌ನಂತೆ ಎಲ್ಲವನ್ನೂ ಅನುಭವಿಸಿದೆ, ನನ್ನ ಮುಖ ಅಮಿತಾಭ್ ಬಚ್ಚನ್‌ರನ್ನು ಹೋಲುವಂತಿತ್ತು, ಎಲ್ಲೆಡೆ ನಾನೇ ಕಾಣುತ್ತಿದೇನೇನೋ ಎಂಬ ಭಾವ ನನ್ನಲ್ಲಿ ಆವರಿಸಿಕೊಂಡಿತ್ತು. ಹೌದು, ಭಾರತ ತನ್ನ ಸ್ವಾತಂತ್ರ್ಯೋತ್ಸವದ ೭೫ನೇ ವರ್ಷದ ಅಮೃತ ಮಹೋತ್ಸವಾಚರಣೆ ಯಲ್ಲಿರುವಾಗ ಭಾರತಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಮಿಸಿರುವುದು ಒಂದು ಸಕಾಲಿಕ ಮತ್ತು ಸಮಯೋಚಿತ ಸಂಗತಿ.

ಈ ಭೇಟಿಯ ಮೂಲಕ ಭಾರತವನ್ನು ಓಲೈಸುವ, ಇನ್ನೂ ಹತ್ತಿರ ಸೆಳೆದುಕೊಳ್ಳುವ ಉತ್ಸುಕತೆ ಎದ್ದು ಕಾಣುತ್ತಿತ್ತು. ಬ್ರಿಟನ್
ಮಾತ್ರವಲ್ಲ, ಇಂದು ಅಮೆರಿಕ, ರಷ್ಯಾ, ಜರ್ಮನಿ, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ ದೇಶಗಳು ಕೂಡ ಭಾರತದೊಂದಿಗೆ
ಸೌಹಾರ್ದದಿಂದಿರಲು ಬಯಸುತ್ತವೆ. ಸ್ವತಂತ್ರ್ಯಾ ನಂತರ ಕಷ್ಟ ಕಾಲದಲ್ಲಿದ್ದ ಭಾರತ ದೇಶಕ್ಕೆ ಪಂಡಿತ ಜವಾಹರಲಾಲ
ನೆಹರು ಅವರ ಅಲಿಪ್ತ ವಿದೇಶೀ ನೀತಿ ಒಂದು ಗಟ್ಟಿಯಾದ ತಳಪಾಯವನ್ನು ಹಾಕಿದೆ ಮತ್ತು ಇಂದಿರಾಜಿಯವರ ತಾಂತ್ರಿಕ ನಡೆ ಭಾರತವನ್ನು ಶಕ್ತಿಯುತಗೊಳಿಸಿದೆ.

ಇಂದಿರಾಜಿ ಮತ್ತು ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ ನಮ್ಮ ದೇಶದಲ್ಲಿ ನಡೆದ ಅಣು ಪರೀಕ್ಷಣೆಗಳು ನಮ್ಮ ಹಿರಿಮೆ-ಗರಿಮೆಗಳಿಗೆ ಗರಿಮೂಡಿಸಿದೆ. ಎಲ್ಲ ಒತ್ತಡಗಳ ನಡುವೆ ಮನಮೋಹನ್ ಸಿಂಗರು ಅಣ್ವಸ್ತ್ರ ತಾಂತ್ರಿಕತೆಯ ಅನುಷ್ಠಾನ ದಲ್ಲಿ ಯಶಸ್ವಿಯಾದರು. ಈ ನಡುವಣ ಅವಧಿಗಳಲ್ಲಿ ಬಂದ ಪ್ರಧಾನ ಮಂತ್ರಿಗಳು ನೀತಿ ನಿರೂಪಣೆಗಳಲ್ಲಿ ತಾಜಾತನ ತೋರಿ ದರು. ಅದೆಲ್ಲಕ್ಕಿಂತ ಮಿಗಿಲಾಗಿ ನಮ್ಮ ಈಗೀನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆ ಹಾರುವಂತೆ ಮಾಡಿದರು.

ಅಂತಾರಾಷ್ಟ್ರೀಯ ರಾಜತಾಂತ್ರಿಕ ವಿಚಾರಗಳು ಬಂದಾಗ ದೇಶದ ಆಂತರಿಕ ವಿಚಾರಗಳು ಅದಕ್ಕೆ ಅಡ್ಡಿಯಾಗಬಾರದು. ಇದನ್ನು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಮಂದಿರ-ಮಸೀದಿಯ ಗದ್ದಲಗಳ ನಡುವೆಯೂ ವಿದೇಶಿ ನೀತಿಯ ವಿಚಾರ ಬಂದಾಗ ಮೋದಿಜಿ ಅಚ್ಚರಿಯ ದೃಢತ್ವವನ್ನು ಸಾಬೀತುಪಡಿಸಿದ್ದಾರೆಂಬುದನ್ನು ಹಿಂಜರಿಕೆ ಇಲ್ಲದೆ ಹೇಳಬಲ್ಲೆ. ಒಂದು ಅತ್ಯುತ್ತಮವಾದ ವಾತಾವರಣವನ್ನು ಅವರು ನಿರ್ಮಿಸಿದ್ದಾರೆ. ಭಗವಾನ್ ಮಹಾವೀರ, ಬುದ್ಧ, ಮಹಾತ್ಮಾ ಗಾಂಧಿಯವರ ಚಿಂತನೆಗಳನ್ನು ಅವರು ವಿಶ್ವಾದ್ಯಂತ ಕೊಂಡೊಯ್ದಿದ್ದಾರೆ.

ನಮ್ಮ ದೇಶ ಅಹಿಂಸೆ ಮತ್ತು ಶಾಂತಿಯನ್ನು ಪ್ರತಿಪಾದಿಸುತ್ತ ಬಂದಿರುವ ದೇಶ ಎಂಬುದನ್ನು ಅವರು ಮತ್ತೆ ಮತ್ತೆ ಒತ್ತಿ ಹೇಳಿ ದ್ದಾರೆ. ಹಾಗಂತ ಎಂದಾದರೊಂದು ದಿನ ಯಾರಾದರೂ ನಮ್ಮನ್ನು ಕೆಣಕಿ ಬೆದರಿಕೆ ಒಡ್ಡಿದರೆ ನಾವು ಶಾಂತಿಯಿಂದ ಕುಳಿತು ಕೊಳ್ಳಬೇಕೆಂದು ಅರ್ಥಮಾಡಿಕೊಳ್ಳಲಾಗದು. ಅಮೆರಿಕ ಸೇರಿದಂತೆ ವಿಶ್ವದ ಉದ್ದಗಲ ಎಲ್ಲೆಡೆ ಭಾರತದ ಘನತೆಯನ್ನು ನರೇಂದ್ರ ಮೋದಿಯವರು ಉಜ್ವಲಗೊಳಿಸಿದ್ದಾರೆ.

ಒಂದೆಡೆ ಭಾರತ ಅಮೆರಿಕ ಜತೆಗೆ ಕೈಜೋಡಿಸಿದ್ದರೆ, ಇನ್ನೊಂದೆಡೆ ಜಪಾನ್ ಮತ್ತು ಆಸ್ಟ್ರೇಲಿಯಾ ಜತೆಗೂ ತನ್ನ ಬಾಂಧವ್ಯವನ್ನು ಬಲಪಡಿಸುವ ಮೂಲಕ ಚೀನಾಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದೆ. ಇನ್ನೊಂದೆಡೆ ಶಾಂಘಾಯ್ ಸಹಕಾರಿ ಸಂಸ್ಥೆಯ ಜತೆ ಗೂಡಿ ಅಮೆರಿಕ ಮೇಲೆ ಒತ್ತಡ ಹೇರುವ ಕೆಲಸವನ್ನೂ ಮಾಡುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದಾಗ ಭಾರತ ತನ್ನ ಸ್ವತಂತ್ರ ನೀತಿಗೆ ಅಂಟಿಕೊಂಡಿತ್ತು. ಇದು ಅಷ್ಟು ಸುಲಭದ ಕೆಲಸವಲ್ಲ. ಇದು ಸಾಧ್ಯವಾಗಿದ್ದು ನಮ್ಮ
ದೃಢತೆಯ ಕಾರಣದಿಂದ.

ರಷ್ಯಾದಿಂದ ನಾವು ತೈಲ ಮತ್ತು ಶಸ್ತ್ರಗಳನ್ನು ಅಬಾಧಿತವಾಗಿ ಖರೀದಿ ಮಾಡುತ್ತಲೇ ಇದ್ದೇವೆ. ನಾವು ರಷ್ಯಾದಿಂದ ಒಂದು ತಿಂಗಳಲ್ಲಿ ಖರೀದಿ ಮಾಡುವ ತೈಲದ ಪ್ರಮಾಣವನ್ನು ಗಮನಿಸಿದರೆ ಐರೋಪ್ಯ ರಾಷ್ಟ್ರಗಳಿಗೆ ಅಷ್ಟು ತೈಲ ಅರ್ಧ ದಿವಸಕ್ಕೆ ಬೇಕಾಗುತ್ತದೆ. ಅವರೂ ಅವಲಂಬಿಸಿರುವುದು ರಷ್ಯಾವನ್ನೇ. ನಮ್ಮ ವಿದೇಶಾಂಗ ವ್ಯವಹಾರ ಸಚಿವರು ಈ ಹೇಳಿಕೆಯನ್ನು ಕೊಟ್ಟ ನಂತರದಲ್ಲಿ ಯಾರೂ ತುಟಿ ಪಿಟಕ್ಕೆಂದಿಲ್ಲ. ರಷ್ಯಾದಿಂದ ಎಸ್-೪೦೦ ರಕ್ಷಣಾ ವ್ಯವಸ್ಥೆಯನ್ನು ಖರೀದಿ ಮಾಡಿದ್ದ ಕಾರಣಕ್ಕೆ ಟರ್ಕಿ ಮೇಲೆ ಅಮೆರಿಕ ನಿಷೇಧವನ್ನು ಹೇರಿತ್ತು. ಆದರೆ ಭಾರತದ ಮೇಲೆ ಅಂತಹ ಕ್ರಮಕೈಗೊಳ್ಳುವ ಧೈರ್ಯ ಅಮೆರಿಕಕ್ಕೆ ಇರಲಿಲ್ಲ.

ಜಾಗತಿಕವಾಗಿ ಬಲಯುತವಾಗಿರುವ ಭಾರತದ ಸಹಕಾರ ತನಗೆ ಎಂದೆಂದೂ ಬೇಕು ಎಂಬ ಅರಿವಿರುವ ಅಮೆರಿಕ ಅಂತಹ ನಿರ್ಧಾರವನ್ನು ಎಂದಿಗೂ ಕೈಗೊಳ್ಳದು. ಈ ಕಾರಣದಿಂದಲೇ ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಭಾರತದ ಸ್ವತಂತ್ರ ಅಸ್ತಿತ್ವವನ್ನು ಶ್ಲಾಘನೆ ಮಾಡಿದ್ದರು. ಮೊದಲೇ ಹೇಳಿದಂತೆ ಮೋದಿಯವರ ಆಡಳಿತದಲ್ಲಿ ಭಾರತದ ಘನತೆ ಉತ್ತುಂಗ ತಲುಪಿದೆ. ೨೦೧೭ರಲ್ಲಿ ಢೋಕ್ಲಾಮ್‌ನಲ್ಲಿ ನಡೆದ ಸಂಘರ್ಷದ ಸಂದರ್ಭದಲ್ಲಿ ಚೀನಾ ವಿರುದ್ಧ ನಮ್ಮ ಭೂಸೇನೆ ಬೃಹತ್ ತಡೆಗೋಡೆಯಾಗಿ ಎರಡೂವರೆ ತಿಂಗಳ ಕಾಲ ನಿಂತಿತ್ತು.

ಗಲ್ವಾನ್ ನಲ್ಲಿ ನಮಗಿರುವ ಸಂಘರ್ಷ ಮತ್ತು ಬೆದರಿಕೆಗಳ ಅರಿವೂ ನಮಗಿದೆ. ಸಂಘರ್ಷದಲ್ಲಿ ಚೀನಾದ ಸೈನಿಕರು ಹತರಾದರು
ಎಂಬುದನ್ನು ಸ್ವತಃ ಚೀನಾ ಒಪ್ಪಿಕೊಂಡು ತಲೆಬಾಗಿದೆ. ವಾದ ಮುಂದುವರಿದೇ ಇದೆ. ಆದರೆ ಇದು 1962ರ ಭಾರತ ಅಲ್ಲ
ಎಂಬುದನ್ನು ಚೀನಾಗೆ ಮನದಟ್ಟು ಮಾಡಿಯಾಗಿದೆ. ಕಳೆದ ತಿಂಗಳು ಚೀನಾದ ವಿದೇಶಾಂಗ ಸಚಿವ ವಾಂಗ್‌ಯಿ ಭಾರತಕ್ಕೆ ಬಂದಿದ್ದರು. ಅವರು ನಮ್ಮ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಇಚ್ಛೆಯುಳ್ಳವರಾಗಿದ್ದರು. ಆದರೆ ಮೋದಿ
ನಿರಾ ಕರಿಸಿದರು.

ಬೇರೆ ಬೇರೆ ರಾಜ್ಯಗಳ ನಾಯಕರುಗಳು ಈಗ ನಮ್ಮ ದೇಶದ ವಿದೇಶಾಂಗ ಸಚಿವರನ್ನು, ರಕ್ಷಣಾ ಸಚಿವರನ್ನು ಮತ್ತು ಇತರ ಕೇಂದ್ರ ಸಚಿವರನ್ನು ಭೇಟಿ ಮಾಡಲು ಆಸಕ್ತಿ ವ್ಯಕ್ತಪಡಿಸುತ್ತಾರೆ. ಹಿಂದೆ ಈ ಪದ್ಧತಿ ಅಮೆರಿಕದಲ್ಲಿ ಮಾತ್ರ ಇತ್ತು. ಈಗ ಅದು ನಮ್ಮ ದೇಶ ಕ್ಕೂ ಬಂದಿದೆ. ಭಾರತ ಇಂದು ದೇಶಿ ಹೂಡಿಕೆಗೆ ಪ್ರಶಸ್ತವಾದ ಮತ್ತು ಅತ್ಯಂತ ಲಾಭದಾಯಕವಾದ ತಾಣ ಎಂಬುದನ್ನು ಮೋದಿ ಯವರು ವಿಶ್ವ ಸಮುದಾಯಕ್ಕೆ ಮನದಟ್ಟು ಮಾಡಿದ್ದಾರೆ.

ಹಾಗಾಗಿಯೇ ವಿಶ್ವದ ಮೂಲೆಮೂಲೆಗಳಿಂದ ಜನರು ಬಂಡವಾಳ ಹೂಡಿಕೆಗೆ ನಮ್ಮ ದೇಶಕ್ಕೆ ಓಡೋಡಿ ಬರುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ನಡುವೆ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ನಾವೆಲ್ಲರೂ ಒಟ್ಟುಸೇರಿ ದೇಶವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯ ಬೇಕಿದೆ. ಇದನ್ನು ಮಾಡಲು ನಾವು ಸಮರ್ಥರಾದರೆ ಭಾರತ ವಿಶ್ವಗುರು ಎನಿಸಿಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ.