ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ನೇಮಕದ ಮರುಪರೀಕ್ಷೆ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಪಿಎಸ್ಐ ನೇಮಕಕ್ಕೆ ಸಂಬಂಧಿಸಿದಂತೆ ನಡೆದಿರುವ ಬೃಹತ್ ಭ್ರಷ್ಟಾಚಾರದ ಬೆನ್ನಲ್ಲೇ, ರಾಜ್ಯ ಸರಕಾರ ಇಡೀ ಆಯ್ಕೆ ಪ್ರಕ್ರಿಯೆ ಯನ್ನೇ ರದ್ದುಗೊಳಿಸಿ ಮರು ಪರೀಕ್ಷೆಗೆ ತೀರ್ಮಾನಿಸಿದೆ. ಸರಕಾರದ ಈ ತೀರ್ಮಾನ, ಕಾನೂನಾತ್ಮಕವಾಗಿ ಹಾಗೂ ಮೇಲ್ನೋಟಕ್ಕೆ
ಸರಿಯಾಗಿಯೇ ಇದೆ.
ಆದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು, ಪಾಸಾದ ಅಭ್ಯರ್ಥಿಗಳ ಕಥೆಯೇನು ಎನ್ನುವ ಪ್ರಶ್ನೆ ಬಂದಾಗ ಭಾರಿ ಚರ್ಚೆಗಳು ಆರಂಭವಾಗಿದೆ. ಅಕ್ರಮ ಘಮಟಿನಲ್ಲಿಯೇ ನಡೆದಿರುವ ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಮುಂದುವರಿಸಿದರೆ, ಕಾನೂನಾತ್ಮಕ ಸಮಸ್ಯೆಯ ಜತೆಗೆ ರಾಜ್ಯದಲ್ಲಿ ಹಲವರು ನೈತಿಕವಾಗಿಯೂ ಸರಕಾರವನ್ನು ಪ್ರಶ್ನಿಸುತ್ತಾರೆ. ಇದೇ ಪ್ರಕರಣವನ್ನು ಇಟ್ಟುಕೊಂಡು ಹೈಕೋರ್ಟ್ಗೆ ಹೋದರೂ ಅಚ್ಚರಿಯಿಲ್ಲ. ಆದ್ದರಿಂದ ದಿವ್ಯಾ ಹಾಗರಗಿ ಬಂಧಿಸಿದ ಬೆನ್ನಲ್ಲೇ, ಇಡೀ ಆಯ್ಕೆ
ಪ್ರಕ್ರಿಯೆಯನ್ನೇ ರದ್ದುಗೊಳಿಸಿ, ಮರುಪರೀಕ್ಷೆ ನಡೆಸಲು ಸರಕಾರದ ಆದೇಶಿಸಿದೆ. ಈ ರೀತಿ ತೀರ್ಮಾನವೂ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ.
೫೬ ಸಾವಿರ ಅಭ್ಯರ್ಥಿಗಳಲ್ಲಿ ಬಹುತೇಕರು, ನಾವು ನಿಯತ್ತಾಗಿ ಬರೆದಿದ್ದೆವು. ಈ ಅಕ್ರಮ ನಡೆಯದಿದ್ದರೆ ನಾವು ನೇಮಕ ವಾಗುತ್ತಿದ್ದೇವು ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಆದ್ದರಿಂದ ಅವರ ದೃಷ್ಟಿಯಿಂದ ಸರಕಾರ ಈ ತೀರ್ಮಾನ ಸರಿಯಾಗಿಯೇ ಇದೆ. ಆದರೆ ಕಷ್ಟಪಟ್ಟು ಪರೀಕ್ಷೆಯನ್ನು ಪಾಸಾಗಿರುವ ಅಭ್ಯರ್ಥಿಗಳಿಗೆ ಇದರಿಂದ ನಷ್ಟವಾಗಲಿದೆ.
೫೪೫ರಲ್ಲಿ ನೂರು ಮಂದಿ ಅಕ್ರಮವಾಗಿ ನೇಮಕವಾಗಿದ್ದರೂ, ಇನ್ನುಳಿದ ೪೪೫ ಅಭ್ಯರ್ಥಿಗಳು ಕಷ್ಟಪಟ್ಟು ಪಾಸಾಗಿರುತ್ತಾರೆ. ಆದ್ದರಿಂದ ಸರಕಾರದ ಈ ತೀರ್ಮಾನದಿಂದ, ಈ ಅಭ್ಯರ್ಥಿಗಳಿಗೆ ನಷ್ಟವಾಗುವುದಿಲ್ಲವೇ ಎನ್ನುವ ಪ್ರಶ್ನೆಗಳು ಶುರುವಾಗಿದೆ.
ಸರಕಾರಕ್ಕೆ ಅವಕಾಶವಿಲ್ಲ
ಆದರೆ ಅಕ್ರಮ ನಡೆದಿರುವುದು ತನಿಖೆಯಲ್ಲಿ ಸ್ಪಷ್ಟವಾಗಿರುವುದರಿಂದ ಈ ರೀತಿಯ ತೀರ್ಮಾನ ಕೈಗೊಳ್ಳದೇ ಬೇರೆ ದಾರಿಯೇ ಇರಲಿಲ್ಲ ಎನ್ನುವ ಮಾತನ್ನು ಹಿರಿಯ ವಕೀಲರೊಬ್ಬರು ಹೇಳಿದ್ದಾರೆ. ಒಂದು ವೇಳೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸದಿದ್ದರೆ, ಕಾನೂನಾತ್ಮಕ ಲೋಪವಾ ಗುತ್ತಿತ್ತು. ಒಂದು ವೇಳೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದರೂ, ಇದೇ ರೀತಿಯ ತೀರ್ಪು ಬರಬಹುದು ಎನ್ನುವ ಮಾತನ್ನು ಹೇಳಿದ್ದಾರೆ.
ಮತ್ತೆ ಆಯ್ಕೆಯಾಗುವ ನಂಬಿಕೆಯೂ ಅನೇಕರಲ್ಲಿಲ್ಲ
ಈ ಬಾರಿ ಆಯ್ಕೆಯಾಗಿರುವ ಅನೇಕರು, ಪುನಃ ಪರೀಕ್ಷೆ ಬರೆಯಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟು ದಿನ ಶ್ರಮವಹಿಸಿ ಪರೀಕ್ಷೆಗೆ
ತಯಾರಿ ನಡೆಸಿದ್ದೆವು. ಇದೀಗ ಪುನಃ ಪರೀಕ್ಷೆಯೆಂದರೆ, ಮತ್ತೊಮ್ಮೆ ಸಿದ್ಧತೆ ನಡೆಸಬೇಕು. ಈ ಬಾರಿಯ ಅದೃಷ್ಠದಲ್ಲಿಯೂ ಆಯ್ಕೆ ಯಾಗಿರುವ ಸಾಧ್ಯತೆಯಿರುತ್ತದೆ. ಹೀಗಿರುವಾಗ, ಒಂದು ವೇಳೆ ಮರು ಪರೀಕ್ಷೆಯಲ್ಲಿ ಆಯ್ಕೆಯಾಗದಿದ್ದರೆ ನಮಗೆ ಅನ್ಯಾಯ ವಾಗುತ್ತದೆ ಎನ್ನುವ ವಾದವನ್ನು ಪ್ರಾಮಾಣಿಕ ಅಭ್ಯರ್ಥಿಗಳು ಮಂಡಿಸುತ್ತಿದ್ದಾರೆ.
ಬಿಪಿಎಲ್ ಕಾರ್ಡು ರದ್ದು, ನೇಮಕವೂ ರದ್ದು
ಪಿಎಸ್ಐ ನೇಮಕದಲ್ಲಿ ಬೆಳಗಾವಿ ಜಿಲ್ಲೆಯ ಕೂಲಿ ಮಕ್ಕಳ ಮಗನೊಬ್ಬನೂ ಆಯ್ಕೆಯಾಗಿದ್ದ. ಸಿಂಧುತ್ವ ಪ್ರಕ್ರಿಯೆಯೂ ಪೂರ್ಣ ಗೊಂಡಿತ್ತು. ಸರಕಾರಿ ಕೆಲಸಕ್ಕೆ ಆಯ್ಕೆಯಾಗಿದ್ದರಿಂದ ಆ ಕುಟುಂಬಕ್ಕೆ ಸಿಗುವ ಬಿಪಿಎಲ್ ಕಾರ್ಡ್ ಸೌಲಭ್ಯವನ್ನು
ಸ್ಥಗಿತಗೊಳಿಸಲಾಗಿತ್ತು. ಆದರೀಗ, ಪಿಎಸ್ಐ ನೇಮಕ ಪರೀಕ್ಷೆಯನ್ನೇ ರದ್ದುಪಡಿಸಿರುವುದರಿಂದ ಈ ಕಡೆ ಸರಕಾರಿ ಕೆಲಸವೂ ಇಲ್ಲದಂತಾಗಿದ್ದು, ಅತ್ತ ಬಿಪಿಎಲ್ ಕಾರ್ಡ್ ಸಹ ಇಲ್ಲವಾಗಿದೆ. ಇದರಿಂದಾಗಿ, ದಿನದ ಊಟಕ್ಕೂ ಪರದಾಡುತ್ತಿದ್ದ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ, ಮನೆಯ ಕಿರಿ ಮಗನನ್ನು ಪಿಎಸ್ಐ ಮಾಡಬೇಕು ಎನ್ನುವ ಕಾರಣಕ್ಕೆ, ಮನೆಯ ಜಮೀನನ್ನು ಮಾರಿ ನಾಲ್ಕು ವರ್ಷಗಳ ಕಾಲ ತರಬೇತಿ ಕೊಡಿಸಿದ್ದರು. ಆದರೀಗ ಮಾರಾಟ ಮಾಡಿದ ಜಮೀನು ಹೋಯ್ತು, ಕೆಲಸವೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ವಯೋಮಿತಿಯ ಸಮಸ್ಯೆ
ಈಗ ರಾಜ್ಯ ಸರಕಾರ ಪಿಎಸ್ಐ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆಗೆ ತೀರ್ಮಾನಿಸಿದೆ. ಆದರೆ ಇಡೀ ಪ್ರಕ್ರಿಯೆ ನಡೆಸುವುದಕ್ಕೆ ಕನಿಷ್ಠ ಆರೆಂಟು ತಿಂಗಳು ಅಗತ್ಯವಿದೆ. ಒಂದು ವೇಳೆ ಯಾರಾದರೂ ಕೋರ್ಟ್ಗೆ ಹೋದರೆ, ಒಂದೆರೆಡು
ವರ್ಷವಾದರೂ ಅಚ್ಚರಿಯಿಲ್ಲ. ಹೀಗಾದರೆ, ಈಗಾಗಲೇ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ವಯೋಮಿತಿ ಅಡ್ಡಿಯಾಗುತ್ತದೆ. ಅಕ್ರಮದಲ್ಲಿ ಭಾಗಿಯಾದವರಿಗೆ ಹೇಗಿದ್ದರೂ, ಅವಕಾರವಿರುವುದಿಲ್ಲ. ಆದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆ ಯಾದವರ ಅವಕಾಶ ವಂಚನೆಯಾಗುತ್ತದೆ ಎನ್ನುವ ವಾದ ಅಭ್ಯರ್ಥಿಗಳದ್ದು.
ಖಾಲಿ ಹುದ್ದೆ ಪ್ರಮಾಣ ಹೆಚ್ಚಳ
ಪಿಎಸ್ಐ ನೇಮಕ ಹಗರಣಕ್ಕೆ ಸಂಬಂಧಿಸಿದಂತೆ ಮರು ಪರೀಕ್ಷೆ ಮಾಡಲು ಮುಂದಾಗಿರುವ ಸರಕಾರದ ತೀರ್ಮಾನವನ್ನು ಆಯ್ಕೆಯಾದ ಅಭ್ಯರ್ಥಿಗಳು ಸಹಜವಾಗಿಯೇ ಕೋರ್ಟ್ ಮೆಟ್ಟಿಲೇರುತ್ತಾರೆ. ಈ ರೀತಿಯಾದಾಗ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದರೆ, ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಆದರೆ ವಯೋಕಾರಣದಿಂದ ಇಲಾಖೆಯಲ್ಲಿರುವವರು ನಿವೃತ್ತಿ ಹೊಂದುತ್ತಾರೆ. ಹೊಸದಾಗಿ ನೇಮಕವಾಗದೇ, ಹಳಬರು ನಿವೃತ್ತರಾದರೆ ಇಲಾಖೆಯಲ್ಲಿ ಹುದ್ದೆಗಳು ಖಾಲಿಯಾಗುತ್ತದೆ.
ಕೋರ್ಟ್ಗೆ ಹೋದರೆ ವಿಳಂಬ
ಅಭ್ಯರ್ಥಿಗಳು ಕೋರ್ಟಿಗೆ ಹೋದರೆ, ಪರೀಕ್ಷಾ ನೇಮಕದಲ್ಲಿ ಆಗಿರುವ ಅಕ್ರಮವನ್ನು ಮುಂದಿಟ್ಟುಕೊಂಡು ಅರ್ಜಿಯನ್ನು
ವಜಾಗೊಳಿಸಬಹುದು. ಇಲ್ಲವೇ, ೫೪೫ರಲ್ಲಿ ಬಹುತೇಕರು ಪ್ರಾಮಾಣಿಕರಿದ್ದು, ಅವರಿಗೆ ಅನ್ಯಾಯವಾಗಬಾರದು ಎನ್ನುವ ಕಾರಣಕ್ಕೆ ಆದೇಶಕ್ಕೆ ತಡೆಯಾಜ್ಞೆ ನೀಡುವ ಸಾಧ್ಯತೆಯಿದೆ. ಒಂದು ವೇಳೆ ಈ ರೀತಿ ತಡೆಯಾಜ್ಞೆ ನೀಡಿದರೆ, ಇಡೀ ಪ್ರಕರಣದ
ವಿಚಾರಣೆ ಮುಗಿಯುವ ತನಕ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ನಡೆಸಿದರೂ, ಈ ೫೪೫ ಹುದ್ದೆಗಳನ್ನು ಖಾಲಿ ಬಿಟ್ಟು ಪರೀಕ್ಷೆ ನಡೆಸಬೇಕು. ಇದರಿಂದ ಅಭ್ಯರ್ಥಿಗಳಿಗೆ ಹಾಗೂ ಇಲಾಖೆಗೆ ಸಮಸ್ಯೆ.
ಇದೇ ಮೊದಲ ಬಾರಿಗೆ ಮರುಪರೀಕ್ಷೆ
ಹಾಗೇ ನೋಡಿದರೆ, ಪಿಎಸ್ಐ ಆಯ್ಕೆಗೆ ಮರು ಪರೀಕ್ಷೆ ಮಾಡಲು ಸರಕಾರ ತೀರ್ಮಾನಿಸಿರುವುದು ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ. ಈ ಹಿಂದೆ ಹಲವು ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕಾರಣಕ್ಕೆ ಅಥವಾ ತಾಂತ್ರಿಕ ದೋಷದ ಕಾರಣಕ್ಕೆ ಮರುಪರೀಕ್ಷೆ ನಡೆಸಿದ ಉದಾಹರಣೆಯಿದೆ. ಆದರೆ ಪರೀಕ್ಷೆ ಪೂರ್ಣಗೊಂಡು, ಆಯ್ಕೆ ಪ್ರಕ್ರಿಯೆ, ಸಿಂಧುತ್ವ ಪ್ರಕ್ರಿಯೆ
ಪೂರ್ಣಗೊಂಡು ನೇಮಕ ಆದೇಶ ನೀಡುವ ಹೊಸ್ತಿಲಲ್ಲಿ ಈ ರೀತಿ ಮರುಪರೀಕ್ಷೆ ಮಾಡಿದ ಉದಾಹರಣೆ ಕೆಪಿಎಸ್ಸಿ ಇತಿಹಾಸದಲ್ಲಿಯೇ ಇಲ್ಲ ಎನ್ನುವ ಮಾತನ್ನು ತಜ್ಞರು ಹೇಳಿದ್ದಾರೆ.
***
ಪಿಎಸ್ಐ ಮುಖ್ಯ ಪರೀಕ್ಷೆಗೆ ರಾಜ್ಯಾದ್ಯಂತ ೫೪,೨೮೯ ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಈಗಾಗಲೇ ಕೆಲವರು
ನೇಮಕವೂ ಆಗಿದ್ದರು. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ತನಿಖೆಯಿಂದ ಕಂಡುಬಂದಿರುವುದರಿಂದ ಇಡೀ ಪರೀಕ್ಷೆ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಮರು ಪರೀಕ್ಷೆಗೆ ಆಯ್ಕೆಯಗಿರುವ ಅಭ್ಯರ್ಥಿಗಳು ಹಾಜರಾಗಬೇಕು. ಆಪಾದಿತರನ್ನು ಬಿಟ್ಟು ಅರ್ಜಿ ಸಲ್ಲಿಸಿದ್ದವರು ಅವಕಾಶ ನೀಡಲಾಗುವುದು.
– ಆರಗ ಜ್ಞಾನೇಂದ್ರ, ಗೃಹ ಸಚಿವ
**
ಅಭ್ಯರ್ಥಿಗಳ ವಾದವೇನು?
ಕೆಲವರು ಮಾಡಿದ ತಪ್ಪಿಗೆ ಇಡೀ ಪರೀಕ್ಷೆ ರದ್ದು ಮಾಡಿದ್ದೇಕೆ
ವಿಚಾರಣಾ ಹಂತವೇ ಪೂರ್ಣವಾಗದಿರುವಾಗ ಈ ರೀತಿಯ ನಿರ್ಧಾರ ಕೈಗೊಂಡಿದ್ದೇಕೆ?
ಈಗ ಪರೀಕ್ಷೆ ನಡೆಸುವುದು ವಿಳಂಬವಾಗಿ, ನಮ್ಮ ವಯೋಮಿತಿ ಮೀರಿದರೆ ನಾವೇನು ಮಾಡಬೇಕು?
ಅಕ್ರಮದಲ್ಲಿರುವ ಅಭ್ಯರ್ಥಿಗಳ ವಿರುದ್ಧ ಕ್ರಮವಹಿಸಬೇಕು.
ಇಡೀ ಪರೀಕ್ಷೆಯನ್ನೇ ರದ್ದು ಮಾಡದೇ, ಅಕ್ರಮದಲ್ಲಿರುವವರ ನೇಮಕವನ್ನು ಮಾತ್ರ ರದ್ದುಪಡಿಸಬೇಕು
ಸರಕಾರದ ವಾದವೇನು?
ಪರೀಕ್ಷೆ ಬರೆದ ಒಬ್ಬರ ಅಂಕ ಪರಿಗಣಿಸುವುದು, ಇನ್ನೊಬ್ಬರನ್ನು ಅನೂರ್ಜಿತಗೊಳಿಸುವುದು ಸರಿಯಲ್ಲ
ಯಾರ್ಯಾರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ
ಮರು ಪರೀಕ್ಷೆ ನಡೆಸದೇ, ಹಾಗೆಯೇ ನೇಮಕ ಮಾಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ಹೋಗಲಿದೆ.
ಆಯ್ಕೆಯಾದವರಿಗಿಂದ ೫೬ ಸಾವಿರ ಅಭ್ಯರ್ಥಿಗಳ ಭವಿಷ್ಯ ಮುಖ್ಯ.
ಇಷ್ಟು ದೊಡ್ಡ ಪ್ರಮಾಣದ ಅಕ್ರಮ ನಡೆದಾಗ, ಪ್ರಕ್ರಿಯೆಯನ್ನು ರದ್ದುಗೊಳಿಸದೇ ಬೇರೆ ದಾರಿಯಿಲ್ಲ.
***
ಈ ಹಿಂದಿನ ವಿವಾದಗಳು
೧೯೯೮ರಲ್ಲಿ ಕೆಎಎಸ್ ಅಧಿಕಾರಿಗಳ ನೇಮಕದಲ್ಲಿ ಅಂದಿನ ಕೆಪಿಎಸ್ಸಿ ಅಧ್ಯಕ್ಷರೇ ಶಾಮೀಲಾಗಿದ್ದರು. ಬಳಿಕ ಸುಪ್ರೀಂ ಕೋಟ್
ತನಕ ವಿಷಯ ಹೋಗಿ, ಬಳಿಕ ೧೧ ಅಽಕಾರಿಗಳಿಗೆ ಹಿಂಬಡ್ತಿ ನೀಡಲಾಯಿತು.
೨೦೧೧ರಲ್ಲಿ ಕೆಪಿಸಿಎಸ್ಯಿಂದ ನಡೆದ ಗೆಜೆಟೆಡ್ ಅಧಿಕಾರಿಗಳ ನೇಮಕದಲ್ಲಿ, ಭಾರಿ ಅಕ್ರಮ ನಡೆದಿತ್ತು. ಈ ವೇಳೆ ಆಯ್ಕೆ
ಪ್ರಕ್ರಿಯೆನ್ನು ರಾಜ್ಯ ಸರಕಾರ ರದ್ದುಗೊಳಿಸಿತ್ತು. ಬಳಿಕ ಅಭ್ಯರ್ಥಿ ಗಳು, ಹೈಕೋರ್ಟ್ ಮೊರೆ ಹೋಗಿ ಸರಕಾರದ ತೀರ್ಮಾನವನ್ನು ಪ್ರಶ್ನಿಸಿದ್ದರು. ಆ ವೇಳೆ ಹೈಕೋರ್ಟ್ ಸರಕಾರದ ಆದೇಶವನ್ನು ರದ್ದುಗೊಳಿಸುವಂತೆ ಆದೇಶ ನೀಡಿ, ವಿಚಾರಣೆ ನಡೆಸಿತ್ತು.
ಇದಾದ ಬಳಿಕ ತಪ್ಪಿತಸ್ಥರನ್ನು ಹೊರತು, ಇನ್ನುಳಿದವರನ್ನು ಸೇವೆಯಲ್ಲಿ ಮುಂದುವರಿಸುವ ತೀರ್ಮಾನಕ್ಕೆ ಸರಕಾರ ಬಂದಿದ್ದರೂ, ಇತ್ತಿಚಿನ ತನಕ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವಿತ್ತು. ಸರಿಸುಮಾರು ೧೦ ವರ್ಷಗಳ ಕಾಲ ಅಭ್ಯರ್ಥಿಗಳ ಕೆಲಸ ತೂಗುಗತ್ತಿಯಲ್ಲಿತ್ತು. ಆದರೀಗ ವಿಶೇಷ ಪ್ರಕರಣವೆಂದು ಪರಿಗಣಿಸಿ, ಅರ್ಹರನ್ನು ಮುಂದುವರಿಸಲು ಸರಕಾರದ ಕಾಯಿದೆ ರೂಪಿಸಿತ್ತು.
ಪೊಲೀಸ್ ಕನಸು ಹೊತ್ತು ಎಂಎನ್ಸಿ ತೊರೆದಿದ್ದ
ಪೊಲೀಸರಿಗೆ ಇರುವ ಖದರ್ ಮಾರಿ ಹೋಗಿ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯುವಕನೊಬ್ಬ ಕೈತುಂಬ ಸಂಬಳ ಸಿಗುತ್ತಿದ್ದ ಎಂಎನ್ಸಿ ಕಂಪನಿಯನ್ನು ತೊರೆದು, ಪಿಎಸ್ಐ ಆಗುವ ಹಂಬಲದೊಂದಿಗೆ ಪರೀಕ್ಷೆ ಬರೆದಿದ್ದ. ಈ ಹಿಂದೆ ಎರಡು ಬಾರಿ ಆಯ್ಕೆಯಾಗಿರಲಿಲ್ಲ. ಆದರೆ ಈ ಬಾರಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದ. ಕಠಿಣ ಶ್ರಮದಿಂದ ಎರಡನೇ ಸ್ಥಾನ ಪಡೆದು, ಪಿಎಸ್ಐ ಆಗುವ ಕನಸು ಇದೀಗ ನುಚ್ಚುನೀರಾಗಿದೆ.
ಈ ಬಗ್ಗೆ ವಿಶ್ವವಾಣಿಯೊಂದಿಗೆ ಮಾತನಾಡಿದ ಕಿರಣ್, ಮನೆಯಲ್ಲಿ ಬಡತನವಿದ್ದರೂ, ಪಿಎಸ್ಐ ಆಗಬೇಕು ಎನ್ನುವ
ಹಂಬಲ ದೊಂದಿಗೆ ಖಾಸಗಿ ಸಂಸ್ಥೆಯ ಕೆಲಸ ಬಿಟ್ಟು ಪರೀಕ್ಷೆಗೆ ತಯಾರಿ ನಡೆಸಿದೆ. ಎರಡನೇ ರ್ಯಾಂಕ್ ಪಡೆದಿದ್ದರಿಂದ ಖುಷಿಯೂ ಆಗಿತ್ತು. ಆದರೀಗ ಪುನರ್ ಪರೀಕ್ಷೆ ಮಾಡಲು ಸರಕಾರ ಮುಂದಾಗಿದೆ. ಇದರಿಂದ, ನಾನು ಕಷ್ಟಪಟ್ಟು ಓದಿದ್ದೆಲ್ಲ ವ್ಯರ್ಥವಾಯಿತು.
ಮತ್ತೊಮ್ಮೆ ಪರೀಕ್ಷೆ ಬರೆದಾಗ ಒಂದು ವೇಳೆ ಇಷ್ಟು ಒಳ್ಳೆಯ ಅಂಕ ಬರದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮವಾಗಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಯಾವುದೇ ತಪ್ಪು ಮಾಡದಿರುವ ನಮ್ಮಂತ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಏಕೆ ಅನ್ಯಾಯವಾಗಬೇಕು. ಅಕ್ರಮದಲ್ಲಿ ಶಾಮೀಲಾಗಿರುವ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಎಲ್ಲರ ವಿರುದ್ಧ ಕ್ರಮಕೈಗೊಳ್ಳುವುದು ಸರಿಯಲ್ಲ. ಸಚಿವ ಸಂಪುಟದಲ್ಲಿ ಯಾವುದಾದರೂ ಒಬ್ಬ ಸಚಿವ ತಪ್ಪು ಮಾಡಿದರೆ, ಅವನನ್ನು ಸಂಪುಟದಿಂದ ಕೈಬಿಡಬೇಕು. ಆದರೆ ಅದನ್ನು ಮಾಡದೇ ಇಡೀ ಸಂಪುಟವನ್ನೇ ವಿಸರ್ಜನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೋರ್ಟ್ ಮೊರೆ ನಿಶ್ಚಿತ
ರಾಜ್ಯ ಸರಕಾರ ಪಿಎಸ್ಐ ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲು ಮುಂದಾಗಿರುವುದಕ್ಕೆ ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಚರ್ಚಿಸಿದ್ದು, ಸೋಮವಾರ ಅಥವಾ ಮಂಗಳವಾರದ ವೇಳೆ ಸರಕಾರ ತೀರ್ಮಾನವನ್ನು ಪ್ರಶ್ನಿಸಿ, ಆಯ್ಕೆಯಾಗಿರುವ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗುವುದು ಬಹುತೇಕ ನಿಶ್ಚಿತ.
ಸರಕಾರ ಪಿಎಸ್ಐ ನೇಮಕದಲ್ಲಿ ನಡೆದಿರುವ ಅಕ್ರಮ ಮಾಡಿದ ವರ ವಿರುದ್ಧ ಕ್ರಮವಹಿಸಲು ತನಿಖೆ ನಡೆಸಿದೆ. ಈ ಪ್ರಕರಣದ ಕಿಂಗ್ ಪಿನ್ ಆಗಿದ್ದ ದಿವ್ಯಾ ಹಾಗರಗಿ ಅವರನ್ನು ಬಂಧಿಸಿದೆ. ಆದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು, ಪಾಸಾಗಿದ್ದ
ಅಭ್ಯರ್ಥಿಗಳಿಗೆ ಯಾವ ನ್ಯಾಯ ಕೊಟ್ಟಿದೆ? ಸರಕಾರದ ತೀರ್ಮಾನದಿಂದ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗುವುದಿಲ್ಲವೇ?
– ಕಿರಣ್ ಪಠಾರ್, ಪಿಎಸ್ಐ
ಪರೀಕ್ಷೆಯ ಎರಡನೇ ರ್ಯಾಂಕ್ ಪಡೆದ
ಅಭ್ಯರ್ಥಿ
***
ದೇಶದ ಕಾನೂನಿನಲ್ಲಿ ಒಬ್ಬ ಅಪರಾಧಿ ತಪ್ಪಿಸಿಕೊಂಡರೂ ಪರವಾಗಿಲ್ಲ. ನೂರು ನಿರಾಪರಾಧಿಗಳಿಗೆ ಶಿಕ್ಷೆಯಾಗಬಾರದು
ಎಂದಿದೆ. ಆದರೀಗ ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆ ನಡೆಸುವುದರಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುವುದಿಲ್ಲವೇ? ಯಾರೋ ಕೆಲವರು ಮಾಡಿದ ತಪ್ಪಿಗೆ ಎಲ್ಲರನ್ನು ಹೊಣೆ ಮಾಡುವುದು ಸರಿಯಲ್ಲ.
– ಶಿವರಾಜ್ ಬಡಿಗೇರ್, ವಿದ್ಯಾಕಾಶಿ ಕೋಚಿಂಗ್ ಸೆಂಟರ್