Saturday, 14th December 2024

ಭಯೋತ್ಪಾದಕರು ಹೆದರುವುದು ಇದಕ್ಕೆ ಮಾತ್ರ

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

dhyapaa@gmail.com

ವಲೀದ್ ಖಾನ್ ಬರ್ಮಿಂಗ್‌ಹ್ಯಾಮ್‌ನ ವಿದ್ಯಾಲಯವೊಂದರಲ್ಲಿ ಓದು ಮುಂದುವರಿಸಿದ್ದಾನೆ. ಕಣ್ಣೆದುರಿನ ಸಾವನ್ನಪ್ಪಿದವರನ್ನು ನೆನೆದು, ಯಾರೂ ಅವರಂತೆ ಪ್ರಾಣ ಕಳೆದುಕೊಳ್ಳಬಾರದು ಎಂದು ವೈದ್ಯನಾಗಲು ನಿರ್ಧರಿಸಿದ್ದಾನೆ. ಜತೆಗೆ ಸಾಮಾಜಿಕ ಕಾರ್ಯಕರ್ತನಾಗಿ ಜನರಲ್ಲಿ ಅರಿವು ಮೂಡಿಸುವ ಮಹದಾಸೆಯನ್ನೂ ಇಟ್ಟುಕೊಂಡಿದ್ದಾನೆ.

ಕಳೆದ ವಾರದ ಅಂಕಣದಲ್ಲಿ ಉಕ್ಕಿನ ಮಹಿಳೆ ಮುನಿಬಾ ಮಜಾರಿ ಬಲೂಚಿ ಕುರಿತು ಬರೆದಿದ್ದೆ. ಆದರೆ ಆ ಲೇಖನ ಅಪೂರ್ಣ ಎಂದೆನಿಸಿತು. ಅದಕ್ಕೆ ಕಾರಣವೂ ಇದೆ. ಅವಳೇ ಒಂದು ಸ್ಫೂರ್ತಿಯ ಚಿಲುಮೆ ಎಂಬುದು ನಿಜವಾದರೂ ಅವಳಿಗೆ ಸ್ಫೂರ್ತಿ ಯಾರಾದರೂ ಇರಬಹುದೇ ಎಂದರೆ, ಇದ್ದಾರೆ. ಆಕೆಯೇ ಹೇಳುವಂತೆ, ಆ ಸಂದರ್ಭ ದಲ್ಲಿ ಅವಳಿಗೆ ಮೂರು ಜನ ಜೀವಂತ ಸ್ಫೂರ್ತಿಯಾಗಿದ್ದರಂತೆ. ಅವಳ ಅಮ್ಮ, ಅವಳ ಮಗ ಮತ್ತು ವಲೀದ್ ಖಾನ್.

ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾಗ ಸಾಕಷ್ಟು ಜನ ಮುನೀಬಾಳನ್ನು ನೋಡಲು ಬರುತ್ತಿದ್ದರು. ಬಂದವರೆಲ್ಲ ಕಣ್ಣೀರಿಡು ತ್ತಿದ್ದರು. ಕನಿಕರದ, ಸಾಂತ್ವನದ ಮಾತನ್ನಾಡಿ ಹೋಗುತ್ತಿದ್ದರು. ಅವಳ ಅಮ್ಮ ಮಾತ್ರ ಒಮ್ಮೆಯೂ ಅವಳ ಮುಂದೆ ಅಳಲಿಲ್ಲ. ಬದಲಾಗಿ ಅವಳಲ್ಲಿ ಸ್ಫೂರ್ತಿ ತುಂಬುವ ಮಾತಾಡುತ್ತಿದ್ದಳು. ‘ದೇವರು ನಿನಗಾಗಿ ಬೇರೆ ಏನನ್ನೋ ಯೋಚಿಸಿದ್ದಾನೆ. ಏನೆಂದು ಈಗ ತಿಳಿಯುತ್ತಿಲ್ಲ ವಾದರೂ, ಅದು ಮಹತ್ವದ್ದಾಗಿರುತ್ತದೆ.

ನೀನು ಅದಕ್ಕೆ ಸಿದ್ಧಳಾಗಬೇಕು’ ಎಂದು ಆಗಾಗ ಹೇಳುತ್ತಿದ್ದಳು. ಆ ನುಡಿಗಳು ಮುನಿಬಾಳ ಒಳಗೆ ಹುದುಗಿದ್ದ, ಬದುಕಿ, ಸಾಧನೆ ಮಾಡಬೇಕೆಂಬ ಚಿಗುರಿಗೆ ಆಗಾಗ ನೀರು ಹನಿಸುತ್ತಿದ್ದವು. ಎರಡನೆಯವನಾಗಿ ಅವಳ ಮಗ ನೈಲ್. ನೈಲ್‌ಗೆ ಫುಟ್‌ಬಾಲ್ ಎಂದರೆ ತುಂಬಾ ಇಷ್ಟ. ನಾಲ್ಕು ವರ್ಷದವನಾಗಿದ್ದಾಗ ನೈಲ್ ಒಂದು ಫುಟ್‌ಬಾಲ್ ಕೊಂಡು ತಂದಿದ್ದ. ಮನೆಗೆ ಬಂದವನೇ ಚೆಂಡನ್ನು
ಮುನಿಬಾಳ ಕಡೆ ಎಸೆದು ತುಳಿಯುವಂತೆ ಕೇಳಿದ.

ಕಟಿಯ ಕೆಳಗೆ ಕಾಲು ಬಿಡಿ, ಒಂದು ಬೆರಳೂ ಕೂಡ ತನ್ನ ಮಾತು ಕೇಳದ ಪರಿಸ್ಥಿತಿಯಲ್ಲಿ ಅವಳು ಚೆಂಡು ತುಳಿಯುವುದಾದರೂ ಹೇಗೆ? ಮೊದಲ ಬಾರಿ ಅವಳಿಗೆ ತನ್ನ ವೈಕಲ್ಯದ ಬಗ್ಗೆ ಪಶ್ಚಾತ್ತಾಪವಾಗಿ ಕಣ್ಣಂಚಿನಿಂದ ನೀರು ಒಸರಿತ್ತು. ಆದರೆ ಹತ್ತಿರ ಬಂದ ನೈಲ್ ಚೆಂಡನ್ನು ಮೇಲಕ್ಕೆತ್ತಿ, ‘ನಿನಗೆ ಚೆಂಡು ತುಳಿಯಲಾಗದಿದ್ದರೇನಂತೆ? ನಿನ್ನ ಎರಡೂ ಕೈಗಳು ಚೆನ್ನಾಗಿಯೇ ಇವೆಯಲ್ಲ, ನಾವು ಚೆಂಡನ್ನು ಕೈಯಲ್ಲಿ
ಹಿಡಿದು ಎಸೆಯುವ (ಕ್ಯಾಚ್ ಕ್ಯಾಚ್) ಆಟ ಆಡಬಹುದಲ್ಲ!’ ಎಂದಿದ್ದ.

ಅಂದು ಅವಳಿಗೆ, ಅರ್ಧ ತುಂಬಿರುವ ಪಾತ್ರೆಯನ್ನು ನೋಡಿ, ‘ಅರ್ಧ ಖಾಲಿ ಇದೆ ಎನ್ನುವುದಕ್ಕಿಂತ ಅರ್ಧ ತುಂಬಿದೆ’ ಎನ್ನುವ ಮಾತಿನ ಅರಿವಾಗಿತ್ತು. ಹೇಗೆ ಮಕ್ಕಳನ್ನು ಅರ್ಥಮಾಡಿಕೊಳ್ಳುವ ತಾಯಂದಿರು ಇರುತ್ತಾರೆಯೋ ಹಾಗೆಯೇ ತಾಯಂದಿರನ್ನು ಅರ್ಥ ಮಾಡಿ ಕೊಳ್ಳುವ ಮಕ್ಕಳೂ ಇರುತ್ತಾರೆ ಎಂದು ಅವಳಿಗೆ ಅರ್ಥವಾಗಿತ್ತು. ಸಹನೆ ಎಂದರೆ ಏನು ಎಂಬುದನ್ನು ತನ್ನ ಮಗನಿಂದ ಕಲಿತೆ ಎನ್ನುತ್ತಾಳೆ ಮುನಿಬಾ.

ಈಗ ಇಂದಿನ ಅಂಕಣದ ನಾಯಕ ವಲೀದ್ ಖಾನ್ ವಿಷಯಕ್ಕೆ ಬರೋಣ. ಮುನಿಬಾಳ ತಾಯಿ ಮತ್ತು ಮಗ ಸ್ಫೂರ್ತಿ ಎಂದಾಗ ಅಷ್ಟೊಂದು ನನಗೆ ಆಶ್ಚರ್ಯವಾಗಲಿಲ್ಲ. ಕಾರಣ, ಬಹುತೇಕ ಎಲ್ಲರಿಗೂ ಅಮ್ಮ ಎಂದರೆ ಮಾದರಿ, ಸ್ಫೂರ್ತಿ, ಸಹನೆಯ ಶಿಖರ, ಕರುಣೆಯ ಕಡಲು, ದೇವತೆ ಎಲ್ಲವೂ ಹೌದು. ಬಹುಶಃ ಒಬ್ಬ ಸ್ತ್ರೀಯನ್ನು ಕುರಿತು ಇಷ್ಟೆಲ್ಲ ಹೇಳುವುದನ್ನು ಉಳಿಸುವುದಕ್ಕಾಗಿಯೇ ‘ತಾಯಿ’ ಎಂಬ ಒಂದೇ ಪದ (ಅಥವಾ ವ್ಯಕ್ತಿ) ಹುಟ್ಟಿಕೊಂಡಿತು ಎಂದೆನಿಸುತ್ತದೆ.

ಮಗನೂ ಹಾಗೆಯೇ, ಲೋಕಕ್ಕೇ ಕೆಟ್ಟವನಾದರೂ ತಾಯಿಗೆ ಮಾತ್ರ ಅವಳ ಮಗನೇ ಇಂದ್ರ, ಚಂದ್ರ ಎಲ್ಲವೂ. ಮಕ್ಕಳು ಏನು
ಮಾಡಿದರೂ ಚೆಂದವೇ, ಸರಿಯೇ. ಆ ಮಗನಿಗೂ ಅಷ್ಟೇ, ತನ್ನ ಅಮ್ಮ ಎಲ್ಲರಿಗಿಂತ ಒಳ್ಳೆಯವಳು. ಗಾಲಿ ಕುರ್ಚಿಯಲ್ಲಿ ಕುಳಿತು, ಮಲ ಮೂತ್ರ ಶೇಖರಿಸುವ ಚೀಲವನ್ನು ಕಟ್ಟಿಕೊಂಡು ಓಡಾಡುವ ಮುನಿಬಾಳಿಗೆ ಇಬ್ಬರೂ ಸೂರ್ತಿಯಷ್ಟೇ ಅಲ್ಲ, ಆಧಾರ ಸ್ಥಂಭವಾಗಿ
ನಿಂತದ್ದೂ ಹೌದು ಎನ್ನಿ. ಅಷ್ಟಕ್ಕೂ ಅವರು ಹತ್ತಿರದ ಸಂಬಂಽಗಳು. ನನಗೆ ಕುತೂಹಲ ಹುಟ್ಟಿಸಿದ್ದು, ಇವರಿಬ್ಬರ ನಡುವೆ ಸೇರಿಕೊಂಡ ಮೂರನೆಯ ವ್ಯಕ್ತಿ, ವಲೀದ್ ಖಾನ್ ಹೆಸರು.

ಪಾಕಿಸ್ತಾನದ ಪೇಶಾವರದಲ್ಲಿರುವ ಸೇನಾ ಸಾರ್ವಜನಿಕ ಶಾಲೆಗೆ ಮುನಿಬಾ ಒಮ್ಮೆ ಅತಿಥಿಯಾಗಿ ಹೋಗಿದ್ದಳು. ಭಯೋತ್ಪಾದಕರ ದಾಳಿಗೆ ಒಳಗಾಗಿದ್ದ ಆ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಒಂದಲ್ಲ ಒಂದು ಅಂಗವನ್ನು ಕಳೆದುಕೊಂಡಿದ್ದರು. ಭಾರವಾದ ಹೃದಯದಿಂದ ಅವರೊಂದಿಗೆ ಸಂವಾದ ಕಾರ್ಯಕ್ರಮ ಮುಗಿದ ನಂತರ ಆಯೋಜಕರು ಮುನಿಬಾ ಅವರನ್ನು ಹತ್ತಿರದ ಆಸ್ಪತ್ರೆಯಲ್ಲಿ
ದಾಖಲಾಗಿರುವ ವಿದ್ಯಾರ್ಥಿ ವಲೀದ್ ಖಾನ್‌ನನ್ನು ಭೇಟಿಯಾಗುವಂತೆ ಕೇಳಿಕೊಂಡರು. ಅದಕ್ಕೆ ಒಪ್ಪಿದ ಮುನಿಬಾ, ಆಸ್ಪತ್ರೆಗೆ ಬಂದು ಕಾಯುತ್ತಿರುವಾಗ ಹನ್ನೊಂದು ವರ್ಷದ ವಲೀದ್ ಖಾನ್ ವೀಲ್‌ಚೇರ್ ನಲ್ಲಿ ಕುಳಿತು ಮುನಿಬಾಳ ಬಳಿಗೆ ಬಂದ. ಅವನನ್ನು ನೋಡು ತ್ತಿದ್ದಂತೆ ಮುನಿಬಾ ಬೆಚ್ಚಿಹೋದಳು.

ಛಿದ್ರವಾಗಿದ್ದ ಅವನ ಮುಖಕ್ಕೆ ಅಲ್ಲಲ್ಲಿ ಹೊಲಿಗೆ ಹಾಕಿದ್ದರು. ಆತನ ಬಾಯಿ ಬೊಚ್ಚಾಗಿತ್ತು. ಕೈ ಕಾಲುಗಳು ಶಕ್ತಿ ಕಳೆದುಕೊಂಡಿದ್ದವು. ಈ ಪರಿಸ್ಥಿತಿಯಲ್ಲಿರುವ ಬಾಲಕನನ್ನು ಹೇಗೆ ಮಾತಾಡಿಸುವುದು, ಅವನಿಗೆ ಏನು ಹೇಳುವುದು ಎಂದು ಮುನಿಬಾ ಯೋಚಿಸುತ್ತಿರುವಾಗ, ‘ನೀವು ಮುನಿಬಾ ಮಜಾರಿ ಅಲ್ಲವೇ?’ ಎಂದು ಅವನೇ ಕೇಳಿದ. ಅವನ ಬಾಯಿಂದ ಹೊರಟ ಅಸ್ಪಷ್ಟ ನುಡಿಗಳನ್ನು ಕೇಳಿ, ಆ ಸಂದರ್ಭ ದಲ್ಲೂ ಅವನ ಮುಖದಲ್ಲಿರುವ ನಗುವನ್ನು ಕಂಡು ಚಕಿತಳಾದ ಮುನಿಬಾ ‘ಹೌದು’ ಎಂಬಂತೆ ತಲೆ ಆಡಿಸಿದಳು.

ತಕ್ಷಣ ಆತ ಹೇಳಿದ, ‘ಬನ್ನಿ ಒಂದು ಸೆಲ್ಫಿ ತೆಗೆದುಕೊಳ್ಳೋಣ..’ ಅವನ ಮಾತು ಕೇಳಿದ ಮುನಿಬಾಳಿಗೆ ತನ್ನ ಅಸಹಾಯಕತೆ ಏನೂ ಅಲ್ಲ
ಅನಿಸಿತು. ಆತನಲ್ಲಿಯ ಜೀವನೋತ್ಸಾಹ ನನ್ನಲ್ಲಿ ಇನ್ನಷ್ಟು ಚೈತನ್ಯ ತುಂಬಿತು ಎನ್ನುತ್ತಾಳೆ ಮುನಿಬಾ. ವಲೀದ್ ಖಾನ್ ಪೇಶಾವರದ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿದ್ದ. ಆ ಶಾಲೆಯಲ್ಲಿ ಶೇಕಡಾ ಐವತ್ತರಷ್ಟು ಸೇನೆಯಲ್ಲಿ ಕೆಲಸ ಮಾಡುವವರ ಮಕ್ಕಳಿಗೆ, ಉಳಿದ ಅರ್ಧ ಸಾರ್ವಜನಿಕರ ಮಕ್ಕಳಿಗೆ ಪ್ರವೇಶವಿತ್ತು.

ಸಾರ್ವಜನಿಕರ ಮಕ್ಕಳು ಶುಲ್ಕ ನೀಡಬೇಕಾಗಿತ್ತಾದ್ದರಿಂದ, ವಲೀದ್ ಮತ್ತು ಅವನ ತಮ್ಮ ಶುಲ್ಕ ನೀಡಿ ಓದುತ್ತಿದ್ದರು. ಸ್ವಲ್ಪ ಕಷ್ಟವಾದರೂ
ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲೆಂದು ಪಾಲಕರು ಮಕ್ಕಳನ್ನು ಆ ಶಾಲೆಗೆ ಸೇರಿಸಿದ್ದರು. ಅಂದು ಡಿಸೆಂಬರ್ ೧೬, ೨೦೧೪. ವಲೀದ್‌ಗೆ ಆರೋಗ್ಯ ಚೆನ್ನಾಗಿರಲಿಲ್ಲ. ಅಂದು ಶಾಲೆಗೆ ಹೋಗಬಾರದೆಂದು ನಿರ್ಧರಿಸಿದ್ದ. ಆದರೆ ಅವನ ತಮ್ಮ ತೀರಾ ಚಿಕ್ಕವನಾಗಿದ್ದು, ಅಣ್ಣ ಜತೆಗಿಲ್ಲದಿದ್ದರೆ ಅವನೂ ಹೋಗುತ್ತಿರಲಿಲ್ಲ. ಅದಕ್ಕಾಗಿ ಒಲ್ಲದ ಮನಸ್ಸಿನಿಂದಲೇ ಅಂದು ಶಾಲೆಗೆ ಬಂದಿದ್ದ ವಲೀದ್.

ತರಗತಿಯಲ್ಲಿ ಒಂದೆರಡು ವಿಷಯಗಳ ಪಾಠವಾದ ನಂತರ, ಮಕ್ಕಳೆಲ್ಲ ಸಭಾಂಗಣದಲ್ಲಿ ಸೇರುವಂತೆ ಶಿಕ್ಷಕರು ಆದೇಶಿಸಿದ್ದರು. ವಲೀದ್ ಅವನ ತರಗತಿಯ ವಿದ್ಯಾರ್ಥಿಗಳ ಮುಖ್ಯಸ್ಥ(ಕ್ಲಾಸ್ ಮಾನಿಟರ್)ನಾಗಿದ್ದ. ವಿದ್ಯಾರ್ಥಿಗಳನ್ನು ಕರೆದುಕೊಂಡು ಸಭಾಂಗಣಕ್ಕೆ ಹೋಗು ತ್ತಿರುವಾಗ ದೂರದಲ್ಲಿ ಗುಂಡಿನ ಸಪ್ಪಳ ಕೇಳಿಸುತ್ತಿತು. ಹೇಳಿ ಕೇಳಿ ಆರ್ಮಿ ಸ್ಕೂಲ್, ಹತ್ತಿರದ ಮಿಲಿಟರಿ ತರಬೇತಿ ನಡೆಯುತ್ತಿರ ಬೇಕೆಂದು ಊಹಿಸಿ ಮಕ್ಕಳೆಲ್ಲ ಮುಂದುವರಿದರು. ಅವರು ಸಭಾಂಗಣ ತಲುಪುತ್ತಿದ್ದಂತೆ ಗುಂಡಿನ ಸದ್ದು ಜೋರಾಗುವುದರ ಜತೆಗೆ ಹತ್ತಿರವೂ ಆಗುತ್ತಿತ್ತು. ಅಂದು ತಾಲಿಬಾನ್ ಕಡೆಯ ಆರು ಮಂದಿ ಉಗ್ರರು ಶಾಲೆಯ ಒಳಗೆ ನುಗ್ಗಿದ್ದರು.

ಶಿಕ್ಷಕರೊಂದಿಗೆ ವಲೀದ್ ಕೂಡ ಸಭಾಂಗಣದ ವೇದಿಕೆಯ ಮೇಲೆ ನಿಂತಿದ್ದ. ಬಾಗಿಲನ್ನು ಮುರಿದು ಒಳಗೆ ನುಗ್ಗಿದ ಉಗ್ರರು ಯದ್ವಾ ತದ್ವಾ ಗುಂಡು ಹಾರಿಸುತ್ತಿದ್ದರು. ಮೊದಲ ಮೂರು ಗುಂಡು ಮುಖಕ್ಕೆ ಬಡಿದಾಗ ವಲೀದ್ ನೆಲಕ್ಕೆ ಬಿದ್ದಿದ್ದ. ಅವನೊಂದಿಗಿದ್ದ ಶಿಕ್ಷಕರೂ ನೆಲಕ್ಕೆ ಉರುಳಿದ್ದರು. ವಲೀದ್ ಕತ್ತು ತಿರುಗಿಸಿ ನೋಡಿದಾಗ ತನ್ನ ಸಹಪಾಠಿಗಳೂ ಗುಂಡಿಗೆ ಬಲಿಯಾಗಿ ಕುರ್ಚಿಯ ಮೇಲಿಂದ ನೆಲಕ್ಕೆ ಉರುಳು ತ್ತಿರುವುದನ್ನು ಕಂಡ.

ವಲೀದ್‌ನಲ್ಲಿ ಇನ್ನೂ ಜೀವ ಇರುವುದನ್ನು ಕಂಡ ಉಗ್ರ ಆತನ ಕೈ ಕಾಲುಗಳಿಗೆ ಇನ್ನೂ ಐದು ಗುಂಡು ಹೊಡೆದ. ಒಟ್ಟೂ ಎಂಟು ಗುಂಡು ನಾಟಿದ ವಲೀದ್ ದೇಹದಿಂದ ರಕ್ತ ಧಾರಾಕಾರ ಹರಿಯುತ್ತಿತ್ತು. ಆತನ ಕೈಕಾಲುಗಳು ತ್ರಾಣ ಕಳೆದುಕೊಂಡಿದ್ದವು. ಅಂಥದ್ದರಲ್ಲಿ ವಲೀದ್‌ ನಲ್ಲಿ ಜೀವ ಇದೆಯೋ ಇಲ್ಲವೋ ಎಂದು ನೋಡಲು, ಉಗ್ರ ತನ್ನ ಬೂಟಿನಿಂದ ವಲೀದ್‌ನ ಎದೆಯ ಮೇಲೆ ಎರಡು ಸಲ ಒದ್ದು ನೋಡಿದ್ದ. ಆಗಲೇ ಅರೆಪ್ರಜ್ಞಾವಸ್ಥೆಯಲ್ಲಿ ಇದ್ದುದರಿಂದ ವಲೀದ್ ಬಚಾವಾದ.

ಅಂದಿನ ಉಗ್ರರ ದಾಳಿಗೆ ಒಟ್ಟೂ ನೂರನಲವತ್ತೊಂಬತ್ತು ಜನ ಸಾವನ್ನಪ್ಪಿದ್ದರು. ಅದರಲ್ಲಿ ನೂರಮೂವತ್ತೆರಡು ಮಕ್ಕಳಿದ್ದರು. ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಭಯೋತ್ಪಾದನೆಯ ಭೂತ ತಲೆಯೊಳಗೆ ಹೊಕ್ಕರೆ ಹಾಗೆಯೇ. ಅವರಿಗೆ ಶಾಲೆ, ಮಕ್ಕಳು, ಮಹಿಳೆ ಯರು, ಗುರುಗಳು… ಊಹೂ… ಯಾವುದೇ ಭಿಡೆ, ದಯೆ, ದಾಕ್ಷಿಣ್ಯ, ಅನುಕಂಪ ಏನೇನೂ ಇರುವುದಿಲ್ಲ. ಇಲ್ಲವಾದರೆ, ಅವರದ್ದೇ ದೇಶ, ಅವರದ್ದೇ ಜನ, ಅವರದ್ದೇ ಶಾಲೆ.

ಮಕ್ಕಳ ಮೇಲೆ, ಶಿಕ್ಷಕರ ಮೇಲೆ ಗುಂಡು ಹಾರಿಸುವುದಕ್ಕೆ ಯಾರ ಮನಸ್ಸು ಒಪ್ಪೀತು? ಉಗ್ರರಿಗೆ, ಭಯೋತ್ಪಾದಕರಿಗೆ ಯಾವುದೇ ಧರ್ಮ, ಜಾತಿ ಇಲ್ಲ ಎನ್ನುತ್ತಾರಲ್ಲ, ಅವರಿಗೆ ಕಡೇ ಪಕ್ಷ ಮನುಷ್ಯತ್ವವೂ ಇರುವುದಿಲ್ಲ. ಹಿಂದಿನ ಯುಗಗಳಲ್ಲಿ ರಾಕ್ಷಸರು ಇದ್ದರು ಎನ್ನುವು ದಕ್ಕೆ ಸಾಕ್ಷಿ ಇಂದಿನ ಉಗ್ರರು. ಇಂಥವರ ಆಕ್ರಮಣದಿಂದ ಸ್ವತಃ ಪಾಕಿಸ್ತಾನವೂ ಹೊರತಲ್ಲ. ಉಗ್ರರಿಂದ ಆ ದೇಶವೂ ಸಾಕಷ್ಟು
ಅನುಭವಿಸಿದೆ. ದುರಂತವೆಂದರೆ ಆ ದೇಶಕ್ಕೆ ಇನ್ನೂ ಬುದ್ಧಿ ಬರಲಿಲ್ಲ.

ತನ್ನ ದೇಶದೊಳಗೆ ಉಗ್ರರಿಗೆ ತರಬೇತಿ ನೀಡುವುದು ಎಂದರೆ ನಮ್ಮ ಅಡುಗೆಮನೆಯಲ್ಲಿ ಪಟಾಕಿ ತಯಾರಿಸಿದಂತೆಯೇ, ಅದು ಯಾವ ಕ್ಷಣಕ್ಕೂ ಸಿಡಿಯಬಹುದು ಎಂಬುದು ಆ ದೇಶಕ್ಕೆ ಎಂದು ಅರ್ಥವಾದೀತು? ಆ ವಿಷಯ ಬಿಡಿ, ವಲೀದ್ ಹೇಗೋ ತೆವಳಿಕೊಂಡು ಸಭಾಂಗಣದಿಂದ ಹೊರಗೆ ಬಂದ. ಬದುಕಿ ಉಳಿದವರೆಲ್ಲ ಆಘಾತಕ್ಕೊಳಗಾಗಿದ್ದರಿಂದ ಇವನ ಕಡೆ ಯಾರೂ ಗಮನ ಹರಿಸಲಿಲ್ಲ. ಸಹಾಯಕ್ಕೆ ಯಾರನ್ನಾದರೂ ಕೂಗೋಣವೆಂದು ಎರಡು ಬಾರಿ ಆತ ಪ್ರಯತ್ನಿಸಿದ.

ಎರಡೂ ಸಲ ಬಾಯಿಂದ ಒಂದಷ್ಟು ರಕ್ತ ಹೊಟ್ಟೆಗೆ ಹೋಯಿತು ವಿನಾ ಬೇರೆ ಏನೂ ಪ್ರಯೋಜನವಾಗಲಿಲ್ಲ. ಸುಮಾರು ಹತ್ತು ನಿಮಿಷದ ನಂತರ ಸ್ಥಳಕ್ಕೆ ಆಗಮಿಸಿದ ಸೇನೆಯವರು ಗಾಯಾಳುಗಳನ್ನೆಲ್ಲ ವಾಹನದಲ್ಲಿ ತುಂಬಿಕೊಂಡು ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆ ತಲುಪುವ ಹೊತ್ತಿಗೆ ವಲೀದ್‌ನ ದೇಹದಲ್ಲಿ ಯಾವ ಸಂಚಾರವೂ ಇರಲಿಲ್ಲ. ಇಡೀ ದೇಹವೇ ಪಾರ್ಶ್ವವಾಯು ಹೊಡೆದಂತಿತ್ತು. ವೈದ್ಯರು ಆತ ಸತ್ತಿದ್ದಾನೆಂದು ತಿಳಿದು, ಹೆಣಗಳ ಜತೆ ಸೇರಿಸಿದರು.

ಕಣ್ಣಿಂದ ಇದನ್ನೆಲ್ಲ ನೋಡುತ್ತಿದ್ದರೂ ಏನೂ ಹೇಳಲಾಗದ ಸ್ಥಿತಿ ಅವನದ್ದಾಗಿತ್ತು. ಹೇಗೋ ಒಮ್ಮೆ ಪ್ರಯತ್ನಿಸೋಣವೆಂದು ಜೋರಾಗಿ ಉಸಿರು ಎಳೆದು ಕೂಗಲು ಪ್ರಯತ್ನಿಸಿದ. ಶಬ್ದ ಬಾಯಿಂದ ಹೊರಗೆ ಬರಲಿಲ್ಲ. ಆದರೆ ರಕ್ತವೇ ತುಂಬಿಕೊಂಡಿದ್ದ ಮುಖದಿಂದ ಗುಳ್ಳೆಗಳು ಹೊರಬಂದವು. ಅದನ್ನು ಕಂಡ ನರ್ಸ್ ಒಬ್ಬಳು ಕೂಡಲೇ ವೈದ್ಯರನ್ನು ಕರೆತಂದು ವಲೀದ್‌ನನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಸೇರಿಸಿದರು.

ಅಲ್ಲಿ ತಲುಪುವಷ್ಟರಲ್ಲಿ ಆತ ಸಂಪೂರ್ಣ ಪ್ರಜ್ಞೆ ಕಳೆದುಕೊಂಡು ಕೋಮಾಕ್ಕೆ ತೆರಳಿದ್ದ. ಆತ ಪುನಃ ಕಣ್ಣು ಬಿಡುವಾಗ ಹತ್ತು ದಿನ ಕಳೆದಿದ್ದವು. ಸುಮಾರು ಎರಡು ತಿಂಗಳ ಕಾಲ ಆತ ಪೇಶಾವರದ ಆಸ್ಪತ್ರೆಯಲ್ಲಿದ್ದ. ಅಲ್ಲಿಯೇ ಆತ ಮುನಿಬಾಳನ್ನು ಭೇಟಿಯಾದದ್ದು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಇಂಗ್ಲೆಂಡಿಗೆ ಕಳಿಸಲಾಯಿತು. ಅಲ್ಲಿ ಸತತ ಎರಡು ವರ್ಷ ಚಿಕಿತ್ಸೆಯ ನಂತರ ನಡೆದಾಡಲು,
ಮಾತಾಡಲು ಯೋಗ್ಯನಾದ.

ಸದ್ಯ ವಲೀದ್ ಖಾನ್ ಬರ್ಮಿಂಗ್‌ಹ್ಯಾಮ್‌ನ ವಿದ್ಯಾಲಯವೊಂದರಲ್ಲಿ ಓದು ಮುಂದುವರಿಸಿದ್ದಾನೆ. ಕಣ್ಣೆದುರಿನ ಸಾವನ್ನಪ್ಪಿದ ಸಹಪಾಠಿಗಳನ್ನು, ಶಿಕ್ಷಕರನ್ನು ನೆನೆದು, ಯಾರೂ ಅವರಂತೆ ಪ್ರಾಣ ಕಳೆದುಕೊಳ್ಳಬಾರದು ಎಂದು ವೈದ್ಯನಾಗಲು ನಿರ್ಧರಿಸಿದ್ದಾನೆ. ಜತೆಗೆ ಸಾಮಾಜಿಕ ಕಾರ್ಯಕರ್ತನಾಗಿ ಜನರಲ್ಲಿ ಅರಿವು ಮೂಡಿಸುವ ಮಹದಾಸೆಯನ್ನೂ ಇಟ್ಟುಕೊಂಡಿದ್ದಾನೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲರಿಗೂ ಶಿಕ್ಷಣ ದೊರಕಬೇಕು ಎನ್ನುತ್ತಾನೆ. ನನ್ನ ಮುಖದ ಮೇಲಿರುವುದು ಗಾಯದ ಗುರುತುಗಳಲ್ಲ, ಅವು ನನಗೆ ಸಿಕ್ಕ ಪದಕಗಳು ಎನ್ನುತ್ತಾನೆ.

ಆತನ ಪ್ರಕಾರ ಶಿಕ್ಷಣದಿಂದ ಮಾತ್ರ ಆತಂಕವಾದದ ಅಂತ್ಯ ಸಾಧ್ಯ. ‘ಉಗ್ರರು ಸೇನೆಗೆ ಹೆದರುವುದಿಲ್ಲ. ಬಂದೂಕು, ಗುಂಡು, ಬಾಂಬು ಗಳಿಗೆ ಅಂಜುವುದಿಲ್ಲ. ಅವರು ಹೆದರುವುದೇನಿದ್ದರೂ ಶಿಕ್ಷಣಕ್ಕೆ. ಒಂದು ವೇಳೆ ಎಲ್ಲರೂ ಶಿಕ್ಷಿತರಾದರೆ ಉಗ್ರರ ವಾದವನ್ನು ಯಾರೂ ಕೊಂಡುಕೊಳ್ಳುವುದಿಲ್ಲ ಎಂಬುದು ಅವರಿಗೂ ಗೊತ್ತು. ಆದ್ದರಿಂದ ಅವರು ಹೆಚ್ಚಿನ ಜನ ಅಶಿಕ್ಷಿತರಾಗಿರಲಿ ಎಂದು ಬಯಸುತ್ತಾರೆ. ಈ ಯುದ್ಧದಲ್ಲಿ ನಾವು ಅವರನ್ನು ಸೋಲಿಸಬೇಕು.

ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕು’ ಎನ್ನುತ್ತಾ ಮಾದರಿಯಾಗಿದ್ದನೇ ವಲೀದ್ ಖಾನ್. ಆತನಿಗೆ ದೊಡ್ಡದೊಂದು
ಚಪ್ಪಾಳೆಯೊಂದಿಗೆ, ಆಲ್ ದಿ ಬೆಸ್ಟ್!