Friday, 13th December 2024

ತನ್ನ ಬಾಲಕ್ಕೇ ಬೆಂಕಿ ಹಚ್ಚಿಕೊಂಡ ಲಂಕೆ

ವಿಶ್ವ ವಿಹಾರ

ಜಗದೀಶ ಮಾನೆ

ನಿನ್ನೆಯವರೆಗೂ ಚೆನ್ನಾಗಿದ್ದ ಲಂಕಾದಲ್ಲಿ ದಿಢೀರನೆ ಈ ಸ್ಥಿತಿ ಉಂಟಾಗಿರುವುದಕ್ಕೆ ಕಾರಣ ಅವರ ವಿದೇಶದ ಮೇಲಿನ ಹೆಚ್ಚಿನ ಅವಲಂಬನೆ. ಶ್ರೀಲಂಕಾ ಅಕ್ಕಿಯಿಂದ ಹಿಡಿದು ಬಹುತೇಕ ಆಹಾರ ಪದಾರ್ಥಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತದೆ.

ರಾವಣನ ಕಾಲದಲ್ಲಿ ನಡೆದಿದ್ದ ಲಂಕಾ ದಹನವನ್ನಂತೂ ನಾವ್ಯಾರು ನೋಡಿಲ್ಲ. ಆದರೆ ಇಂದು ಲಂಕಾ ತನ್ನ ಬಾಲಕ್ಕೆ ತಾನೇ ಬೆಂಕಿ
ಹಚ್ಚಿಕೊಂಡು ದಹದಹಿಸುತ್ತಿದೆ. ನಮ್ಮ ನೆರೆ ರಾಷ್ಟ್ರವಾದ ಶ್ರೀಲಂಕಾ, ಇಂದು ಯಾರೊಬ್ಬರೂ ನಿರೀಕ್ಷೆ ಮಾಡಲು ಸಾಧ್ಯವಾಗದ ಮಟ್ಟಿಗೆ ಬೆಂದು ಹೊಗುತ್ತಿದೆ. ಇದಕ್ಕೆ ಕಾರಣ ಅಲ್ಲಿನ ಆಡಳಿತ ಸರಕಾರದ ತಪ್ಪು ನಿರ್ಧಾರಗಳು.

ವಿದೇಶದಿಂದ ಪೆಟ್ರೋಲ್, ಡೀಸೆಲ್, ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ನಿತ್ಯ ಬಳಕೆಯ ವಸ್ತುಗಳು ಜನರಿಗೆ ಸರಿಯಾಗಿ ಸಿಗುತ್ತಿಲ್ಲ, ಅಲ್ಪ ಸ್ವಲ್ಪ ಇರುವ ಆಹಾರ ಪದಾರ್ಥಗಳ ಬೆಲೆಯಂತೂ ಹತ್ತರಷ್ಟು ಹೆಚ್ಚಾಗಿದೆ. ಅಲ್ಲಿನ ಜನರು ಇಂದು ಅಥವಾ ನಾಳೆ ಬೆಲೆ ಕಡಿಮೆ ಆಗಬಹುದು ಅಂತ ಆರಂಭದಲ್ಲಿ ಇದೆಲ್ಲವನ್ನೂ ಸಹಿಸಿಕೊಂಡಿದ್ದರು. ಆದರೆ ತಿಂಗಳು ಕಳೆದಂತೆ ಬೆಲೆ ಮತ್ತಷ್ಟು ಹೆಚ್ಚಾಗುತ್ತಲೇ ಹೋಯಿತು. ಶ್ರೀಲಂಕಾ ಅದೆಷ್ಟರ ಮಟ್ಟಿಗೆ ಆರ್ಥಿಕ ದಿವಾಳಿ ಆಗಿದೆ ಅಂದ್ರೆ, ಅಲ್ಲಿ ಕೇವಲ ಸಾಮಾನ್ಯ ಜನರಷ್ಟೇ ಅಲ್ಲ, ಶ್ರೀಮಂತರಿಗೂ ಕೂಡಾ ಬದುಕು ನಡೆಸೊದಕ್ಕೆ ಕಷ್ಟವಾಗುತ್ತಿದೆ.

ಆಹಾರದಿಂದ ಹಿಡಿದು ಔಷಧದವರೆಗೆ ಪ್ರತಿಯೊಂದರ ಬೆಲೆಗಳೂ ಗಗನಕ್ಕೇರಿವೆ. ಇದೆಲ್ಲದಕ್ಕೂ ಕಾರಣವಾಗಿರುವ ರಾಜಪಕ್ಸೆ, ಮಂತ್ರಿ ಗಳು, ಸಂಸದರು, ಅಧ್ಯಕ್ಷ ಗೊಟಬಯ ಅವರ ವಿರುದ್ಧ ಸಮಸ್ತ ಲಂಕೆಯ ಜನರೆಲ್ಲ ಸೇರಿಕೊಂಡು ದುರಾಡಳಿತ ನಡೆಸುತ್ತಿದ್ದ
ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಫಳಫಳ ಹೊಳೆಯುವ ಬಟ್ಟೆ ಹಾಕಿಕೊಂಡು, ಉತ್ತಮ ಆಡಳಿತ ಹಾಗೂ ಉತ್ತಮ ಭವಿಷ್ಯದ, ಆರ್ಥಿಕ ಅಭಿವೃದ್ಧಿಯ ಕುರಿತಾಗಿ ಅಂದ ಚಂದದ ಭಾಷಣ ಬಿಗಿಯುತ್ತ, ಪ್ರಧಾನಿ ಹುದ್ದೆಯಲ್ಲಿ ಗೂಟಾ ಹೊಡೆದುಕೊಂಡು ಕುಳಿತು ದೇಶವನ್ನು ಆರ್ಥಿಕವಾಗಿ ಅಧಃಪತನಕ್ಕೆ ನೂಕಿದ ಭ್ರಷ್ಟ ಪ್ರಧಾನಿಯ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಶುಕ್ರವಾರ ಗೊಟಬಯ ರಾಜಪಕ್ಸೆ, ಲಂಕೆ ಯಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಹೇರಿದ್ದರು. ಅದು ಹೋರಾಟದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು.

ಪ್ರಧಾನಿಯ ರಾಜೀನಾಮೆಗೆ ಜನ ಪಟ್ಟು ಹಿಡಿದು ಸರಕಾರಿ ಕಚೇರಿ, ವಾಹನಗಳ ಮೇಲೆ ದಾಳಿ ಮಾಡಿದ್ದರ ಪರಿಣಾಮವಾಗಿ ಜನರ ಆಕ್ರೋಶಕ್ಕೆ ಬೆದರಿದ ಪ್ರಧಾನಿ ರಾಜಪಕ್ಸೆ ಕೂಡಲೆ ತನ್ನ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟು, ಕುಟುಂಬ ಸಮೇತವಾಗಿ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಇದರಿಂದ ತೃಪ್ತರಾಗದ ಜನರು ಅಧ್ಯಕ್ಷ ಗೊಟಬಯ ಅವರ ರಾಜೀನಾಮೆಗೂ ಪಟ್ಟು ಹಿಡಿದು ಹೋರಾಟ ನಡೆಸುತ್ತಿ
ದ್ದಾರೆ. ಹೋರಾಟ ತೀವ್ರ ಸ್ವರೂಪ ಪಡೆದ ಕಾರಣ ಅದನ್ನು ನಿಯಂತ್ರಿಸಲು ಪೊಲೀಸರಿಂದಲೂ ಸಾಧ್ಯವಾಗುತ್ತಿಲ್ಲ.

ಜನಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಪ್ರಧಾನಿಯ ಬೆಂಬಲಿಗರು ಪ್ರತಿಭಟನಾಕಾರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಇದಾದ ಕೆಲವೇ ಗಂಟೆಗಳಲ್ಲಿ ಪ್ರತಿಕಾರಕ್ಕಾಗಿ ಸೇರಿದ ಜನಸಾಮಾನ್ಯರ ವ್ಯಾಪಕ ಗುಂಪು ಪ್ರಧಾನಿ, ಸಂಸದರು, ಮಂತ್ರಿಗಳ ನಿವಾಸಕ್ಕೆ ಬೆಂಕಿ ಹಚ್ಚಿದ್ದಲ್ಲದೆ ಪ್ರಧಾನಿಯ ಪುಂಡರನ್ನು ಅಟ್ಟಾಡಿಸಿಕೊಂಡು ಹೊಡೆದರು. ಆರ್ಥಿಕ ದುಸ್ಥಿತಿಯ ಪರಿಣಾಮವಾಗಿ ಶ್ರೀಲಂಕಾದ ಜನರು ಆಕ್ರೋಶ ಭರಿತರಾಗಿ ಕಂಗೆಟ್ಟಿದ್ದರ ಪರಿಣಾಮ ಅಲ್ಲಿ ಈ ರೀತಿಯ ಅನಾಹುತಗಳು ಸಂಭವಿಸುತ್ತಿವೆ.

ನಿನ್ನೆಯವರೆಗೂ ಚೆನ್ನಾಗಿದ್ದ ಲಂಕಾದಲ್ಲಿ ದಿಢೀರನೇ ಈ ಸ್ಥಿತಿ ಉಂಟಾಗಿರುವುದಕ್ಕೆ ಕಾರಣ ಅವರ ವಿದೇಶದ ಮೇಲಿನ ಹೆಚ್ಚಿನ ಅವಲಂಬನೆ. ಶ್ರೀಲಂಕಾ ಅಕ್ಕಿಯಿಂದ ಹಿಡಿದು ಬಹುತೇಕ ಆಹಾರ ಪದಾರ್ಥಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತದೆ. ಅದರಲ್ಲೂ ಅವರಿಗೆ ಅವಶ್ಯಕ ಪ್ರಮಾಣದಲ್ಲಿನ ಶೇ. ೩೦ರಷ್ಟು ಅಕ್ಕಿಯನ್ನು ಭಾರತದಿಂದಲೇ ಆಮದು ಮಾಡಿಕೊಳ್ಳುತ್ತದೆ. ಒಟ್ಟಾರೆ ಲಂಕಾ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪಟ್ಟಿ ಬಹಳ ದೊಡ್ಡದಿದೆ. ಅವರ ಒಟ್ಟು ಪದಾರ್ಥಗಳಲ್ಲಿ ಭಾರತದಿಂದ ಶೇ. ೨೪ರಷ್ಟು ಆಮದು ಮಾಡಿಕೊಳ್ಳುತ್ತಾರೆ.

ಕಳೆದ ವರ್ಷ ಅವರು ರಫ್ತು ಮಾಡಿದ ವಸ್ತುಗಳಿಗಿಂತ ಆಮದು ಮಾಡಿಕೊಂಡ ಪದಾರ್ಥಗಳ ಮೊತ್ತ ೫.೮ ಬಿಲಿಯನ್ ಡಾಲರ್‌ನಷ್ಟು. ಅದರಲ್ಲೂ ಯಾವುದೇ ರಾಷ್ಟ್ರ ಹೆಚ್ಚಿನ ಪ್ರಮಾಣದ ಆಮದನ್ನು ಮಾಡಿಕೊಳ್ಳುತ್ತಾ ಹೋದಾಗ ಅದರ ಫಾರಿನ್ ರಿಸರ್ವ್ ಖಾಲಿ ಆಗುತ್ತಾ
ಹೋಗುತ್ತದೆ. ಸಾಮಾನ್ಯವಾಗಿ ವಿದೇಶಿ ವ್ಯವಹಾರಗಳು ಡಾಲರ್‌ನಲ್ಲಿ ನಡೆಯುವುದರಿಂದ ದೇಶದ ರಫ್ತು ಹೆಚ್ಚಾದರೆ ಆ ದೇಶಗಳ ಆದಾಯ ಕೂಡಾ ಹೆಚ್ಚಾಗುತ್ತದೆ. ಅದು ಡಾಲರ್‌ಗಳಲ್ಲಿ ಬರುವುದರಿಂದ ದೇಶದ ಫಾರಿನ್ ರಿಸರ್ವ್ ಹೆಚ್ಚಾಗುತ್ತಾ ಹೋಗುತ್ತದೆ. ಸದ್ಯಕ್ಕೆ ಲಂಕಾದ ಸೆಂಟ್ರಲ್ ಬ್ಯಾಂಕ್‌ನಲ್ಲಿ ವಿದೇಶಿ ಕರೆನ್ಸಿಯಂತೂ ಬಹುತೇಕ ಖಾಲಿ ಆಗಿದೆ.

ಅಲ್ಲಿ ಕೇವಲ ೨.೮ ಬಿಲಿಯನ್ ಡಾಲರ್ ಮಾತ್ರ ಸದ್ಯಕ್ಕಿದೆ. ಅಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಈ ವರ್ಷಾಂತ್ಯಕ್ಕೆ ಅದು ಕೂಡಾ ಖಾಲಿ ಆಗುತ್ತದೆ. ಲಂಕಾದ ಇವತ್ತಿನ ಪರಿಸ್ಥಿತಿಗೆ ಕಾರಣ ಅಂದ್ರೆ, ಒಂದು ದೇಶದ ಸಾಲ ತೀರಿಸಲು ಮತ್ತೊಂದು ದೇಶದ ಬಳಿ ಸಾಲ
ಮಾಡುತ್ತ ಹೊದ ಶ್ರೀಲಂಕಾ ಇಂದಿಗೆ ಸರಿಸುಮಾರು ೬೫ ಬಿಲಿಯನ್ ಡಾಲರ್‌ನಷ್ಟು ಸಾಲ ಮಾಡಿದೆ. ಅದರಲ್ಲಿ ಶೇ.೪೩ ದೇಶಿಯ ಮೂಲದ ಸಾಲ, ಉಳಿದಿದ್ದು ವಿದೇಶಿ ಸಾಲ.

ಆ ಪೈಕಿ ಶೇ. ೧೫ರಷ್ಟು ಸಾಲವನ್ನು ಚೀನಾದಿಂದ ಪಡೆದುಕೊಂಡಿದೆ. ಚೀನಾದಿಂದ ಸಾಲ ಪಡೆದುಕೊಳ್ಳುವುದೆಂದರೆ, ಒಂದು ರೀತಿ ಗೋಡೆಯಲ್ಲಿರುವ ಗೂಟಕ್ಕೆ ಹೋಗಿ ಅಂಡು ಕೊಟ್ಟಂತೆ. ಚೀನಾ ಕೇವಲ ಸಾಲ ಮಾತ್ರ ಕೊಡುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಾಲ ಪಡೆದುಕೊಂಡ ದೇಶದಲ್ಲಿ ಖನಿಜ ಸಂಪತ್ತು ಇರುವ ಭೂಮಿ, ಬಂದರು ಪ್ರದೇಶ, ಅಲ್ಲಿನ ಗಣಿಗಳು ಹೀಗೆ ಆದಾಯ ಬರುವ ಮೂಲಗಳನ್ನು ತನ್ನ ವಶಮಾಡಿಕೊಳ್ಳುತ್ತದೆ. ಈಗ ಲಂಕಾದಲ್ಲಿ ಆಗಿದ್ದು ಕೂಡಾ ಅದೆ.

೨೦೧೯ರಲ್ಲಿ ಲಂಕಾ ಚೀನಾದ ಬಳಿ ೧.೫೦ ಬಿಲಿಯನ್ ಡಾಲರ್‌ನಷ್ಟು ಸಾಲ ಪಡೆದಿತ್ತು. ವಿಶ್ವದ ಯಾವುದೇ ರಾಷ್ಟ್ರ ಚೀನಾದ ಬಳಿ ಸಾಲ ಮಾಡಿದೆ ಅಂದ್ರೆ, ಆ ದೇಶ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಮತ್ತು ಜಗತ್ತಿನ ಯಾವುದೇ ರಾಷ್ಟ್ರದ ಬಳಿ ಅವರಿಗೆ ಸಾಲ ಸಿಕ್ಕಿಲ್ಲ ಅಂತಲೇ ಅರ್ಥ. ಚೀನಾದ ಸಹವಾಸ ಮಾಡಿದ್ದರ ಪರಿಣಾಮ ಶ್ರೀಲಂಕಾದ ಹಂಬನ್ ತೋಟದಲ್ಲಿ ಸಣ್ಣದೊಂದು ಚೀನಾ ನಿರ್ಮಾಣ ವಾಗಿದೆ. ಇದೀಗ ಚೀನಾಕ್ಕೆ ಬಡ್ಡಿ ಕೂಡಾ ತೀರಿಸಲಾಗದ ಸ್ಥಿತಿಯಲ್ಲಿದೆ ಲಂಕಾ. ೨೦೨೧ರಲ್ಲಿ ಅಲ್ಲಿನ ಸರಕಾರ ಎಲ್ಲ ರೀತಿಯ ರಾಸಾ ಯನಿಕ ಗೊಬ್ಬರಗಳ ಮೇಲೆ ನಿಷೇಧವನ್ನು ಹೇರಿ, ರೈತರೆಲ್ಲರೂ ಸಾವಯವ ಕೃಷಿ ಮಾಡಬೇಕು ಅಂತ ಕರೆ ಕೊಟ್ಟಿತು.

ಇದ್ದಕ್ಕಿದ್ದಂತೆ ಸರಕಾರ ಕೈಗೊಂಡ ಈ ನಿರ್ಣಯದಿಂದಾಗಿ ಲಂಕೆಯಲ್ಲಿ ಆಹಾರ ಸಮಸ್ಯೆ ಕಾಣಿಸಿಕೊಂಡಿತು. ಸಾವಯವ ಕೃಷಿ ಉತ್ತಮವೇ, ಆದರೆ ಯಾವುದೇ ಪ್ಲ್ಯಾನ್‌ಗಳಿಲ್ಲದೆ ಸಡನ್ ಆಗಿ ಅದನ್ನು ಅಳವಡಿಸಿಕೊಳ್ಳುವುದು ಬಹಳ ಕಷ್ಟಕರ. ಲಂಕಾದಂತಹ ದೇಶದಲ್ಲಿ ವಾಣಿಜ್ಯ ಬೆಳೆಗಳ ಪ್ರಭಾವ ಹೆಚ್ಚಾಗಿದ್ದರ ಪರಿಣಾಮ ಅಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುವವರ ಸಂಖ್ಯೆ ಬಹಳಷ್ಟು ಕಡಿಮೆ ಆಗಿದೆ.

ಹೀಗಿರುವ ಸ್ಥಿತಿಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಗಳಾಗಲಿ, ಮುಂದಾಲೋಚನೆಗಳಾಗಲಿ ಇಲ್ಲದೇ ಏಕಾಏಕಿ ಸಾವಯವ ಕೃಷಿಯ ಕರೆಯ ಪರಿಣಾಮ ಆಹಾರ ಉತ್ಪಾದನೆಯ ಮೇಲೆ ಬಹಳಷ್ಟು ನೆಗೆಟಿವ್ ಪರಿಣಾಮ ಬೀರಿದೆ. ಇದನ್ನು ಅರಿತ ಪ್ರಧಾನಿ ರಾಜಪಕ್ಸೆ ರಾಸಾಯನಿಕ ಗೊಬ್ಬರಗಳ ಮೇಲೆ ಹೇರಿದ್ದ ಎಲ್ಲ ನಿರ್ಬಂಧಗಳನ್ನು ಮತ್ತೆ ಹಿಂಪಡೆದಿದ್ದರು. ಆದರೆ ಅಷ್ಟೊತ್ತಿಗೆ ಸಮಯ ಮೀರಿ ಹೋಗಿ
ಆಹಾರ ಕೊರತೆ ಹೆಚ್ಚಾಗುವ ಮೂಲಕ ಕೃಷಿ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿತ್ತು.

ಈ ಹಿಂದೆ ಭಾರತ ಲಂಕೆಗೆ ಆಹಾರ ಪದಾರ್ಥಗಳು, ಔಷಧ, ತೈಲ ಎಲ್ಲ ಸಹಾಯವನ್ನು ಮಾಡಿತ್ತು. ಆದರೂ ಈ ಸಹಾಯ ಲಂಕಾದ ಜನಗಳ ಹಸಿದ ಹೊಟ್ಟೆಗೆ ಕೇವಲ ಒಂದು ಲೋಟ ಮಜ್ಜಿಗೆ ಕೊಟ್ಟಂತ್ತಾಗಿದ್ದರೂ ಈಗಿನ ರಾಜಪಕ್ಸೆಗಳು ಭಾರತವನ್ನು ಬಿಟ್ಟು ಚೀನಾದ ಕಡೆಗೆ ವಾಲಿದ ನಂತರ ಭಾರತ ಮತ್ತು ಲಂಕಾ ಸಂಬಂಧ ಹೇಳಿಕೊಳ್ಳುವಷ್ಟು ಚೆನ್ನಾಗಿ ಉಳಿದಿಲ್ಲ. ಆದರೂ ಭಾರತ ಈ ರಾಷ್ಟ್ರವನ್ನು ಸಂಪೂರ್ಣವಾಗಿ ಕೈ ಬಿಟ್ಟಿಲ್ಲ.

ಇದೀಗ ಅಲ್ಲಿ ಉಂಟಾಗಿರುವ ಸಮಸ್ಯೆ ಭಾರತಕ್ಕೊಂದು ಅವಕಾಶ. ಯಾಕೆಂದರೆ ಲಂಕಾದಲ್ಲಿ ಚೀನಾದ ಪ್ರಾಬಲ್ಯ ಮತ್ತು ಪ್ರಭಾವ ಹೆಚ್ಚಾದಂತೆ ಅದು ಭಾರತದ ಪಾಲಿಗೆ ಅತ್ಯಂತ ಅಪಾಯಕಾರಿ ಬೆಳವಣಿಗೆ. ಹಾಗಾಗಿ ಭಾರತ ಅಲ್ಲಿನ ಚೀನಾದ ಪ್ರಾಬಲ್ಯಕ್ಕೆ
ತಡೆಯೊಡ್ಡ ಬೇಕಿದೆ. ಅದಕ್ಕಾಗಿ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮುಂತಾದ ಕ್ವಾಡ್ ಸದಸ್ಯ ರಾಷ್ಟ್ರಗಳ ಜತೆ ಭಾರತ ಮಾತುಕತೆ ನಡೆಸಿ ಲಂಕೆಗೆ ಸಹಾಯ ಮಾಡುವ ಮೂಲಕ ಚೀನಾದ ಪ್ರಾಬಲ್ಯ ಹೆಚ್ಚಾಗದ ಹಾಗೆ, ತನ್ನ ಬಲವನ್ನು ಹೆಚ್ಚು ಮಾಡಿಕೊಳ್ಳುವ ಕಡೆಗೆ ಭಾರತ ಗಮನ ಹರಿಸಬೇಕು.

ಇದು ಒಂದಿಷ್ಟು ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಲು ಭಾರತಕ್ಕೊಂದು ಸುವರ್ಣ ಅವಕಾಶ.