Saturday, 23rd November 2024

ಯುಎಇ ಅಧ್ಯಕ್ಷರ ನಿಧನಕ್ಕೆ ರಾಜ್ಯದಲ್ಲಿ ಇಂದು ಶೋಕಾಚರಣೆ

ಬೆಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ನಿಧನರಾಗಿದ ಹಿನ್ನೆಲೆ ಯಲ್ಲಿ ಕರ್ನಾಟಕ ಸರ್ಕಾರ ಒಂದು ದಿನ ಶೋಕಾಚರಣೆ ಆಚರಿಸಲು ಆದೇಶ ಹೊರಡಿಸಿದೆ.

ಮೇ 13ರಂದು ನಿಧನರಾಗಿದ್ದ ಶೇಖ್ ಅವರ ಗೌರವಾರ್ಥವಾಗಿ ಭಾರತ ಸರ್ಕಾರದಿಂದ ಕೂಡ ಒಂದು ದಿನ ಶೋಕಾಚರಣೆ ಆಚರಿಸಲು ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದಿಂದಲೂ ಸಹ ಶೋಕಾಚರಣೆ ಆಚರಿಸಲು ಆದೇಶ ಮಾಡಿದೆ.

ಶೋಕಾಚರಣೆಯಲ್ಲಿ ರಾಜ್ಯದಲ್ಲಿ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮ ಗಳು ಇರುವುದಿಲ್ಲ. ಅಲ್ಲದೆ, ನಿಯತವಾಗಿ ರಾಷ್ಟ್ರಧ್ವಜ ಹಾರಿಸಲ್ಪಡುವ ಸರಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಶೇಖ್ ಖಲೀಫಾ ಅವರು ಯುಎಇ ಅಧ್ಯಕ್ಷರಾಗಿ ಮತ್ತು ಅಬುಧಾಬಿಯ ಆಡಳಿತಗಾರ ರಾಗಿ ನವೆಂಬರ್ 3, 2004 ರಿಂದ ಸೇವೆ ಸಲ್ಲಿಸಿದರು. ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಹಿಸ್ ಹೈನೆಸ್ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕಾಗಿ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು 40 ದಿನಗಳ ಶೋಕಾಚರಣೆ ಘೋಷಿಸಿದೆ.

ದಿವಂಗತ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್, ಅವರು 1971 ರಲ್ಲಿ ಒಕ್ಕೂಟದಿಂದ ಯುಎಇಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, 2004ರ ನವೆಂಬರ್ 2 ರಂದು ನಿಧನರಾಗಿದ್ದರು.