ಕರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಆರಂಭವಾಗಲಿವೆ. ಶಾಲೆಗಳ ಪುನಾರಂಭಕ್ಕೆ ಸರಕಾರ ವೇನೋ ಉತ್ಸಾಹ ತೋರಿದೆ. ಆದರೆ ಪಾಲಕರಲ್ಲಿ ಆತಂಕ ಇನ್ನೂ ಇದೆ.
ಆದ್ದರಿಂದ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣವನ್ನೂ ಸರಕಾರ ಕಲ್ಪಿಸಬೇಕು. ಕರೋನಾ ಆತಂಕದ ಕಾರಣ ದಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿರುವ ಪೋಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಮೊದಲು ಮಾಡಬೇಕು. ಐದರಿಂದ ಹನ್ನೆರಡು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲಸಿಕೆಯನ್ನು ಶಾಲೆಗಳಲ್ಲಿಯೇ ನೀಡಲು ವ್ಯವಸ್ಥೆ ಮಾಡುವ ಮೂಲಕ, ಮಕ್ಕಳನ್ನು ಸುರಕ್ಷತಾ ವಲಯದೊಳಗೆ ತರುವುದನ್ನು ಸರಕಾರ ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು. ರಾಜ್ಯದ ಕೆಲವು ಭಾಗಗಳು ತೀವ್ರ ಬಿಸಿಲಿನ ಝಳದ ಬಾಧೆಗೊಳಗಾಗಿವೆ.
ಆ ಪ್ರತಿಕೂಲ ಪರಿಸ್ಥಿತಿ ಮಕ್ಕಳನ್ನು ಗಾಸಿಗೊಳಿಸದಂತೆಯೂ ಎಚ್ಚರ ವಹಿಸಬೇಕಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಗಸೂಚಿಯು ಅಗತ್ಯವಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ಮುಂಜಾನೆಯಿಂದ ಮಧ್ಯಾಹ್ನದವರೆಗೆ ನಡೆಸಬಹುದು ಎಂದು ಸೂಚಿಸಿದೆ. ಈ ಸಾಧ್ಯತೆಯನ್ನು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ರಾಜ್ಯದಲ್ಲೂ ಅನುಸರಿಸಬಹುದು. ಕರೋನಾ ನಿಯಂತ್ರಣಕ್ಕಾಗಿ ಜಾರಿಗೆ ತಂದಿದ್ದ ಲಾಕ್ಡೌನ್- ಸಮಯದಲ್ಲಿ ಅನೇಕ ಮಕ್ಕಳು ಬೇರೆ ಬೇರೆ ಕಾರಣ ಗಳಿಂದಾಗಿ ಶಾಲೆಗಳಿಂದ ಹೊರಗುಳಿದಿದ್ಧಾರೆ.
ವಲಸೆ ಕಾರ್ಮಿಕ ಕುಟುಂಬಗಳಲ್ಲಿನ ಎಳೆಯರು ಕಲಿಕೆಯನ್ನು ಬಿಟ್ಟು ಪೋಷಕರೊಂದಿಗೆ ದುಡಿಮೆಗೆ ಕೈಜೋಡಿಸಿದ್ಧಾರೆ. ಅಂಥ ಮಕ್ಕಳನ್ನು ಗುರುತಿಸಿ ಶಾಲೆಗಳಿಗೆ ಮರಳಿ ಕರೆತರುವ ನಿಟ್ಟಿನಲ್ಲಿ ಸರಕಾರ ಎಲ್ಲ ಪ್ರಯತ್ನಗಳನ್ನೂ ನಡೆಸಬೇಕಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಮಕ್ಕಳ ಕಲಿಕೆಯ ಮನಃಸ್ಥಿತಿಗಷ್ಟೇ ಧಕ್ಕೆಯಾ ಗಿಲ್ಲ, ಶಿಕ್ಷಕರ ಕಲಿಸುವ ಮನಃಸ್ಥಿತಿಗೂ ಪೆಟ್ಟುಬಿದ್ದಿದೆ. ಬೋಧನೆಗಿಂತಲೂ ಅನ್ಯಕಾರ್ಯಗಳೇ ಶಿಕ್ಷಕರನ್ನು ಹಣ್ಣಾಗಿಸಿವೆ. ಮಕ್ಕಳ ಜತೆಗೆ ಶಿಕ್ಷಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹುರಿದುಂಬಿಸುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ.
ಬೋಧನೆಯನ್ನು ಹೊರತುಪಡಿಸಿದ ಕಾರ್ಯಕ್ರಮಗಳಿಂದ ಈ ವರ್ಷವಾದರೂ ಶಿಕ್ಷಕರನ್ನು ಹೊರಗಿಟ್ಟು, ಅವರ ಸಂಪೂರ್ಣ ಶಕ್ತಿ ಶೈಕ್ಷಣಿಕ ಚಟುವಟಿಕೆಗಳಿಗೆ ದೊರೆಯುವಂತೆ ನೋಡಿಕೊಳ್ಳುವುದು ಮಕ್ಕಳ ಹಿತಾಸಕ್ತಿಯ ದೃಷ್ಟಿಯಿಂದ ಅಗತ್ಯ.