Saturday, 23rd November 2024

ದಿ ಫಾಸ್ಟ್ ಅಂಡ್ ಫ್ಯೂರಿಯಸ್ ಪ್ರೇರಣೆ: ಐಷಾರಾಮಿ ಕಾರು ಕಳ್ಳರ ಬಂಧನ

ನವದೆಹಲಿ: ಹಾಲಿವುಡ್ ಚಲನಚಿತ್ರ ‘ದಿ ಫಾಸ್ಟ್ ಅಂಡ್ ಫ್ಯೂರಿಯಸ್’ ನಿಂದ ಪ್ರೇರೇಪಿತರಾಗಿ ಜಿಪಿಎಸ್ ಜಾಮರ್ ಸೇರಿದಂತೆ ಹೈಟೆಕ್ ಉಪಕರಣ ಬಳಸಿ ಕೊಂಡು 40 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದ ಮೂವರು ಕಳ್ಳರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಉತ್ತಮ್ ನಗರದ ನಿವಾಸಿಗಳಾದ ಮನೀಶ್ ರಾವ್ (42) ಮತ್ತು ಜಗದೀಪ್ ಶರ್ಮಾ (43) ಹಾಗೂ ಮೀರತ್ ಮೂಲದ ಆಸ್ ಮೊಹ ಮ್ಮದ್ (40) ಎಂದು ಗುರುತಿಸಲಾಗಿದೆ. ಬಂಧಿತರು ‘ರವಿ ಉತ್ತಮ್ ನಗರ್ ಗ್ಯಾಂಗ್’ನ ಸದಸ್ಯರಾಗಿದ್ದಾರೆ.

ಹಾಲಿವುಡ್ ಚಲನಚಿತ್ರ ‘ದಿ ಫಾಸ್ಟ್ ಆಂಡ್ ದಿ ಫ್ಯೂರಿಯಸ್’ ನಿಂದ ಪ್ರೇರಿತರಾಗಿದ್ದರು. ಕೆಲವೇ ನಿಮಿಷಗಳಲ್ಲಿ ಕಾರುಗಳನ್ನು ಅನ್ಲಾಕ್ ಮಾಡಲು ಸ್ಕ್ಯಾನರ್ ಗಳನ್ನು ಬಳಸು ತ್ತಿದ್ದರು. ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದರೆ ಅದನ್ನು ನಿಷ್ಕ್ರಿಯಗೊಳಿಸಲು ಜಾಮರ್ ಬಳಸುತ್ತಿದ್ದರು ಎಂದು ದೆಹಲಿ ಡಿಸಿಪಿ ಹೇಳಿದ್ದಾರೆ. ಆರೋಪಿಗಳು ಎಷ್ಟು ಚಾಲಾಕಿ ಗಳೆಂದರೆ ಕೇವಲ ಎರಡರಿಂದ ಮೂರು ನಿಮಿಷಗಳಲ್ಲಿ ಕಾರುಗಳನ್ನು ಕದಿಯುತ್ತಿದ್ದರು.

ಮೂವರು ಆರೋಪಿಗಳು ತಮ್ಮ ನಾಯಕ ರವಿಯೊಂದಿಗೆ ಉತ್ತಮ ನಗರ, ತಿಲಕ್ ನಗರ, ಸುಭಾಷ್ ನಗರ, ಪಾಶಿಮ್ ವಿಹಾರ್, ಮುನಿರ್ಕಾ, ದ್ವಾರಕಾ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಕಳೆದ ಏಪ್ರಿಲ್‌ನಿಂದ 40 ಕ್ಕೂ ಹೆಚ್ಚು ಕಾರುಗಳನ್ನು ಕದ್ದು ರಾಜಸ್ಥಾನ ಹಾಗೂ ಮೀರತ್‌ ನಗರಗಳಲ್ಲಿ ಮಾರಾಟ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿ ದ್ದಾರೆ.

“ಕಾರನ್ನು ಕದ್ದ ನಂತರ, ಅವರು ಅದನ್ನು ಸೊಸೈಟಿಗಳ ಹೊರಗೆ, ಆಸ್ಪತ್ರೆಗಳ ಬಳಿ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸದ ಸ್ಥಳಗಳಲ್ಲಿ ಪಾರ್ಕಿಂಗ್‌ ಮಾಡುತ್ತಿದ್ದರು. ಬಳಿಕ ಬೇಡಿಕೆಗೆ ಅನುಗುಣವಾಗಿ ವಾಹನವನ್ನು ಖರೀದಿದಾರರಿದ್ದಲ್ಲಿಗೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಎರಡು ಪಿಸ್ತೂಲ್‍ಗಳು, ಸೆನ್ಸಾರ್ ಕಿಟ್, ಮ್ಯಾಗ್ನೆಟ್, ಟೂಲ್ ಕಿಟ್‌ಗಳು, ಹ್ಯಾಕಿಂಗ್ ಸಾಧನ, ಕಾರುಗಳ 30 ಕೀಗಳು ಮತ್ತು ಕದ್ದ ಏಳು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.