Friday, 13th December 2024

ಕೆಚ್ಚಿಲ್ಲದ ಹೋರಾಟಗಳಿಂದ ಬರೀ ಕಿಚ್ಚು !

ಅಭಿವ್ಯಕ್ತಿ

ವಿನಯ್‌ ಖಾನ್

vinaykhan078@gmail.com

ಭಾರತ ಮೊದಲಿನ ಸ್ಥಿತಿಯಲ್ಲಿಲ್ಲ. ಲಕ್ಷಾಂತರ ಕೋಟಿ ಹೂಡಿಕೆ ಭಾರತವನ್ನು ಹುಡುಕಿಕೊಂಡು ಬರುತ್ತಿದೆ. ವಿಶ್ವದ ಅತಿದೊಡ್ಡ
ಮಾರುಕಟ್ಟೆಯೂ ಭಾರತವೇ ಆಗಿದೆ. 2021-2022ರಲ್ಲಿ ನಮ್ಮ ದೇಶಕ್ಕೆ 83.57 ಬಿಲಿಯನ್ ಡಾಲರ್ ಹೂಡಿಕೆ ಬಂದಿದೆ.

ಮೊನ್ನೆ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬಂದಾಗ ಕೆಲವೊಂದಿಷ್ಟು ಜನ ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆ ಮಾಡಿದರು. ಈ ಪ್ರತಿಭಟನೆಗಳೂ ಪ್ರಜಾಪ್ರಭುತ್ವದ ಒಂದು ಅಂಗವೇ. ಹಾಗೆ ನೋಡಿದರೆ ನಮಗೆ ಸ್ವಾತಂತ್ರ್ಯ ಬಂದಿದ್ದೇ ಪ್ರತಿಭಟನೆಗಳ ಮೂಲಕ.

ನಮ್ಮ ದೇಶದ ನಾಯಕರುಗಳೆಲ್ಲರೂ ಬೆಳೆದಿದ್ದು ಪ್ರತಿಭಟನೆಗಳ ಮೂಲಕವೇ, ಅದು ಗಾಂಧಿ, ನೆಹರೂ, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್… ಕೊನೆಗೆ ನರೇಂದ್ರ ಮೋದಿಯವರು ನಾಯಕರಾಗಿ ಹೊರಹೊಮ್ಮಿದ್ದೂ ಹೋರಾಟಗಳಲ್ಲೇ.

ಇವರುಗಳೆಲ್ಲವೂ ಗುರುತಿಸಿಕೊಂಡಿದ್ದು ಪ್ರತಿಭಟನೆಗಳ ಮೂಲಕವೇ. ದೇಶ ಅಂದಿನಿಂದ ಇಂದಿನವರೆಗೆ ಹಲವಾರು ಪ್ರತಿಭಟನೆಗಳನ್ನು ನೋಡಿದೆ, ಸಹಕರಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿಯವರ ಮಾತಿಗೆ ದೇಶದ ಕೋಟ್ಯಂತರ ಜನ ಬೀದಿಗಿಳಿದು ಬ್ರಿಟಿಷರ ವಿರುದ್ಧ ರಣಕಹಳೆಯನ್ನೂದಿದ್ದನ್ನು ಕೇಳಿದ್ದೇವೆ. ಸುಭಾಷ್ ಚಂದ್ರ ಬೋಸರ ಕರೆಗೆ ಓಗೊಟ್ಟು ಲಕ್ಷಾಂತರ ಜನ ತಮ್ಮ ಪ್ರಾಣವನ್ನು ಅರ್ಪಿಸಲು ಸಿದ್ಧರಾಗಿ ಬಂದಿದ್ದರು. ಆ ಕಾಲದ ಹೋರಾಟಗಳಿಗೆ ಒಂದು ಧ್ಯೇಯವಿತ್ತು.

ನಿಸ್ವಾರ್ಥ ಭಾವನೆಯಿತ್ತು, ಭಾರತವನ್ನು ಸ್ವತಂತ್ರಗೊಳಿಸಿಯೇ ತೀರುತ್ತೇವೆ ಎನ್ನುವ ಛಲ-ಬದ್ಧತೆಯಿತ್ತು. ಅದೇ ರೀತಿ ರಾಮ ಮಂದಿರ ಕ್ಕಾಗಿನ ಪ್ರತಿಭಟನೆ ಇರಬಹುದು, ಎಮರ್ಜನ್ಸಿ ಕಾಲದ ಹೋರಾಟಗಳು ಇರಬಹುದು. ಇವೆಲ್ಲ ಹೋರಾಟಗಳು ಒಂದು ಕಾಲಘಟ್ಟದಲ್ಲಿ ಮಾಡಲೇ ಬೇಕಾದ ಸನ್ನಿವೇಶದಲ್ಲಿ ರೂಪುಗೊಂಡವು. ಇಂದಿಗೂ ಇದೆ, ಇವತ್ತಿಗೂ ಹೋರಾಟಗಳು ನಡೆಯುತ್ತಿವೆ, ಆದರೆ ಏಕೆ? ಹೇಳಬೇಕೆಂದರೆ, ಇವತ್ತಿನ ದಿನಮಾನದ ಹೋರಾಟಗಳೆಲ್ಲವೂ ‘ವಿರೋಧ’ ಪಕ್ಷ ಪ್ರೇರಿತ, ಆಡಳಿತಾರೂಢರ ವಿರುದ್ಧವೇ; ರಾಜಕೀಯ ಪ್ರೇರಿತವೇ.

ಬೆಲೆ ಏರಿಕೆಯಿಂದ ಆರಂಭಿಸಿ, ಇಡಿ ವಿಚಾರಣೆಗೆ ವಿರೋಧದವರೆಗೆ ಎಲ್ಲದಕ್ಕೂ ಪ್ರತಿಭಟನೆಗಳೇ. ಇನ್ನೂ ವಿಶೇಷವೆಂದರೆ ಹೀಗೆ ದೇಶದ
ಆಂತರಿಕವಾಗಿ ಪ್ರಜೆಗಳು ಎತ್ತುವ ದನಿಗೆ ಇದ್ದಕ್ಕಿದ್ದಂತೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ, ಅಂತಾರಾಷ್ಟ್ರೀಯ ಮೀಡಿಯಾಗಳಲ್ಲೂ ಅದೇ ಸುದ್ದಿ! ಯಾವುದೇ ಪಕ್ಷ ಅಥವಾ ಸಂಘಟನೆ ಯಾವುದೋ ಹೋರಾಟ, ಆಗ್ರಹ ಮಾಡಲಿ, ಉಗ್ರ ಹೋರಾಟ ರೂಪಿಸಲಿ. ಆದರೆ ಎಲ್ಲ ಹೋರಾಟಗಳೂ ಗಲಭೆ, ಹಿಂಸಾಚಾರದ ಸ್ವರೂಪ ಪಡೆದುಕೊಳ್ಳುತ್ತಿರುವುದರ ಹಿಂದಿನ ಮರ್ಮವೇನು? ಹೀಗಾಗಿ ಸಾತ್ವಿತೆಯಿಂದ ದೂರವುಳಿದಿರುವ ಹೋರಾಟಗಳ ತಾತ್ವಿಕತೆಯನ್ನು ಪ್ರಶ್ನಿಸಬೇಕಾಗಿದೆ.

ಹೋರಾಟಗಳ ಹಿಂದಿನ ಅಜೆಂಡಾಗಳು, ಅದರ ಹಿಂದಿನ ಪ್ರೇರಣೆ ಎಲ್ಲವೂ ಕಾಂಗ್ರೆಸ್-ಎಡಪಕ್ಷಗಳದ್ದೇ ಆಗಿರುವಂತಿರುವುದು ಏಕೆ? ಅಥವಾ ಹೋರಾಟಗಳು ದಿಕ್ಕುತಪ್ಪಿ ಬೇರೆಯದೇ ಅಜೆಂಡಾದ ಅನುಷ್ಠಾನಕ್ಕೆ ವೇದಿಕೆಗಳಾಗುತ್ತಿರುವುದನ್ನು ಏನೆಂದು ಗುರುತಿಸಬೇಕು?
ಸರಳವಾಗಿ ಹೇಳಬೇಕೆಂದರೆ, ಕೆಲ ತಿಂಗಳ ಹಿಂದೆ ರಾಕೇಶ್ ಟಿಕಾಯಿತ್ ಅವರ ನಾಯಕತ್ವ(?!)ದಲ್ಲಿ ಕೃಷಿ ಕಾಯಿದೆಗಳ ತಿದ್ದುಪಡಿ ಖಂಡಿಸಿ ರೈತ ಚಳವಳಿಗಳು ನಡೆದವು. ಅದೂ ದೇಶಾದ್ಯಂತ ವಿಸ್ತರಿಸಿತು. ಕೊನೆಗೆ ಜನವರಿ ೨೬ ರಂದು ಕೆಂಪುಕೋಟೆಯ ಮುಂದೆ ದೊಡ್ಡ ಹೋರಾಟ ನಡೆದು, ಅಲ್ಲಿ ಲಕ್ಷಾಂತರ ಜನರೂ ಸೇರಿದ್ದರು.

ಅದರಲ್ಲಿ ಕೆಲವೊಂದಿಷ್ಟು ಜನ ಭಾರತದ ತ್ರಿವರ್ಣ ಧ್ವಜವನ್ನು ಅವರೋಹಣ ಮಾಡಿ, ಖಲಿಸ್ತಾನಿ ಧ್ವಜವನ್ನು ಆರೋಹಣ ಮಾಡಿಬಿಟ್ಟರು. ಅದೇ ಪ್ರತಿಭಟನೆಯಲ್ಲಿ ದೇಶ ವಿಭಜನೆ ಮಾಡಿ, ಖಲಿಸ್ತಾನಕ್ಕಾಗಿ ತಮ್ಮ ಕೂಗು ಎಬ್ಬಿಸಿದ್ದನ್ನೂ ಕೇಳಿದ್ದೇವೆ. ಸಿಎಎ- ಎನ್‌ಆರ್‌ಸಿ
ವಿರುದ್ಧವಾಗಿ ನಡೆದ ಹೋರಾಟಗಳಲ್ಲೂ ಅಷ್ಟೇ, ಅಲ್ಲಿ ಹೋರಾಟವನ್ನು ಕಂಡಿದ್ದಕ್ಕಿಂತ ಬೂಟಾಟಿಕೆ, ಹಿಂಸೆ, ಹಲ್ಲೆ, ಧಂಗೆಗಳನ್ನೇ ನೋಡಿದ್ದು ಹೆಚ್ಚು. ಹಾಗೆಯೇ ಹಿಜಾಬ್ ವಿಷಯ ಆಗಿರಬಹುದು.

ಇತ್ತೀಚಿನ ‘ನೂಪುರ್ ಶರ್ಮಾ’ ಪ್ರಕರಣದ ಹೋರಾಟ ಇರಬಹುದು. ಇವೆಲ್ಲವೂ ಆಯಾ ಕಾಲಕ್ಕೆ, ವಿಷಯಕ್ಕೆ ಹುಟ್ಟಿಕೊಂಡರೂ
ಅದರಲ್ಲಿ ಮೂಲ ವಿಷಯಕ್ಕಿಂತ ಬೇರೇಯದೇ ಹಿತಾಸಕ್ತಿಗಳು ಕೆಲಸ ಮಾಡಿದ್ದೇ ಹೆಚ್ಚು. ಇಲ್ಲೆಲ್ಲ ವ್ಯಕ್ತವಾಗಿದ್ದು, ಆಗುತ್ತಿರುವುದು ಪ್ರತಿಭಟನೆಗಿಂತ ದ್ವೇಷವೇ ಹೆಚ್ಚು. ಅದರಿಂದ ಬೇಡಿಕೆ ಪೂರೈಸಿಕೊಂಡಿರುವುದಕ್ಕಿಂತ, ಸಾರ್ವಜನಿಕ ಆಸ್ತಿಪಾಸ್ತಿ, ಹಲವರ ಪ್ರಾಣ ಹಾನಿಯಾಗಿದ್ದೇ ಹೆಚ್ಚು.

ಕರ್ನಾಟಕದಲ್ಲಿಯೇ ನಡೆದ ಅಖಂಡ ಶ್ರೀನಿವಾಸ್ ಅವರ ಅಳಿಯನ ವಿರುದ್ಧ ನಡೆದ ಹಿಂಸಾಕೃತ್ಯ ಇರಬಹುದು, ಹುಬ್ಬಳ್ಳಿಯ ಹುಡುಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದ ಪೋಸ್ಟ್ ವಿರುದ್ಧದ ಹಿಂಸಾಚಾರ, ಕೋಲಾರದಲ್ಲಿನ ಐಫೋನ್ ಉತ್ಪಾದನಾ ಘಟಕಕ್ಕೆ ಮಾಡಿದ ಹಾನಿಯೂ ಇರಬಹುದು. ಕರೋನಾ ಪಿಡುಗಿನ ವೇಳೆ ಡಿಜೆ ಹಳ್ಳಿ ಕೆಜೆಹಳ್ಳಿಯಲ್ಲಿ ನಡೆದ ಘಟನೆಗಳೇ ಇರಬಹುದು… ಇಂಥ ಉದಾಹರಣೆಗಳು ಅನೇಕ. ಇವೆಲ್ಲ ನಡೆದದ್ದು ಯಾವುದೋ ದೊಡ್ಡ ವಿಚಾರದ ವಿರುದ್ಧ ಅಲ್ಲ. ಆದರೆ, ಸಾವಿರಾರು ಜನ ಸೇರಿ
ಕೋಟ್ಯಂತರ ಆಸ್ತಿ ಪಾಸ್ತಿ ನಾಶ ಮಾಡಿದ್ದಲ್ಲದೇ ಹಲವರು ಅಮಾಯಕರು ಗಾಯಗೊಂಡರು.

ಕೆಲವರ ಸಾವಿಗೂ ಕಾರಣವಾಗಿದ್ದಿದೆ. ಇದೆಲ್ಲ ಮುಗಿದ ಮೇಲೆ ಕೆಲವು ರಾಜಕೀಯ ನಾಯಕರುಗಳ ಬೇಳೆ ಬೇಯಿಸಿಕೊಳ್ಳುವ ಕಾರ್ಯಕ್ರಮವೂ ಇರುತ್ತದೆ ಬಿಡಿ!. ಇಂಥ ಪ್ರತಿಭಟನೆಗಳ ಪಟ್ಟಿಯಲ್ಲಿ ಕಾಂಗ್ರೆಸ್‌ನ ಕೊಡುಗೆಯೂ ಇಲ್ಲದಿಲ್ಲ. ಬಿಜೆಪಿ ಸರಕಾರ ಬಂದಾಗಿ ನಿಂದ ಕಾಂಗ್ರೆಸ್ ಬಿಟ್ಟೂ ಬಿಡದೆ ಹೋರಾಟಗಳನ್ನು ನಡೆಸುತ್ತಲೇ ಬಂದಿದೆ. ಅದು ಒಳ್ಳೆಯದೇ, ಪ್ರತಿಪಕ್ಷವಾಗಿ ಸರಕಾರವನ್ನು
ನಿಯಂತ್ರಿಸಲು ಇಂಥ ಹೋರಾಟಗಳ ಅಗತ್ಯ ಇದ್ದೇ ಇದೆ.

ಆದರೆ ಆ ಹೋರಾಟಗಳು ಒಂದಾದರೂ ತಲೆ ಕಂಡವೇ? ಜನರಲ್ಲಿ ಭರವಸೆಯನ್ನು ಮೂಡಿಸಿದವೇ? ಚಳವಳಿಗಳು ಜನರ ವಿಶ್ವಾಸಕ್ಕೆ ಘಾಸಿ ಮಾಡುವಂತಹದ್ದಾಗಬಾರದು. ಹೆಚ್ಚೂ ಕಡಿಮೆ ಕಾಂಗ್ರೆಸ್ ಮಾಡುತ್ತಿರುವ ಎಲ್ಲ ಹೋರಾಟಗಳಲ್ಲಿ ಮೋದಿ ವಿರೋಧ ಬಿಟ್ಟು ಬೇರಿನ್ನೇನೂ ಕಾಣಿಸುತ್ತಲೇ ಇಲ್ಲ. ಈಗ ನಡೆಯುತ್ತಿರುವ ರಾಹುಲ್ ಇಡಿ ವಿಚಾರಣೆ ವಿರುದ್ಧದ ಹೋರಾಟವೂ ಇದೇ ಹಾದಿಯದ್ದು. ೨೦೧೨ರಲ್ಲಿ ಹೊರಬಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಸಲುವಾಗಿ ಜಾರಿ ನಿರ್ದೇಶನಾಲಯ ರಾಹುಲ್ ಮತ್ತು ಸೋನಿಯಾ ಗಾಂಧಿ ಯವರ ವಿಚಾರಣೆ ನಡೆಸುತ್ತಿದೆ. ಇದನ್ನು ವಿರೋಧಿಸಿ, ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವುದರಲ್ಲಿ ಏನಿದೆ ಹೇಳಿ ಅರ್ಥ? ವಿಪರ್ಯಾಸ ಎಂದರೆ, ಕಾಂಗ್ರೆಸ್ ಇದನ್ನೂ ವಿರೋಧ ಮಾಡುತ್ತಿದೆ. ದೇಶಾದ್ಯಾಂತ ಹೋರಾಟಗಳನ್ನೂ ನಡೆಸುತ್ತಿದೆ. ಆರೋಪಿ ಸ್ಥಾನದಲ್ಲಿರುವವರ ರಕ್ಷಣೆಗಾಗಿ ‘ಮೋದಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ’ ಎಂಬ ಬಣ್ಣಕಟ್ಟಲಾಗುತ್ತಿದೆ.

ಹಾಗಾದರೆ ಕಾಂಗ್ರೆಸ್‌ನವರು ತಮ್ಮ ಸರಕಾರ ಇದ್ದಾಗಲೂ ಸಹ ಇಂಥದ್ದೇ ದ್ವೇಷ ರಾಜಕಾರಣ ಮಾಡಿದ್ದರೇ? ಆಗಿನ ವಿಚಾರಣೆ ಗಳೆಲ್ಲವೂ ರಾಜಕೀಯ ಕಾರಣಕ್ಕೆ ನಡೆದದ್ದೇ? ಇಲ್ಲಿ ನೋಡ ಬೇಕಾದ ಸಂಗತಿ ಏನೆಂದರೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯಿಂದ ಯಾವುದೇ ಅಪರಾಧವಾಗಿಲ್ಲವೆಂದಾದರೆ ಹೊರಾಟವನ್ನೇಕೆ ಮಾಡಬೇಕು? ಭ್ರಷ್ಟಾಚಾರ ಪ್ರಕರಣದಲ್ಲಿ ಚಿದಂಬರಂ, ಹಾಗೂ ಅವರ ಪುತ್ರನ ಮೇಲಿನ ತನಿಖೆಯೂ ಅವರ ಪ್ರಕಾರ ದ್ವೇಷ ರಾಜಕಾರಣವೇ? ಹಾಗಿದ್ದರೆ ಭ್ರಷ್ಟಾಚಾರದ ವಿರುದ್ಧ ತನಿಖೆಯೇ ಅಪರಾಧವೇ? ಇದೀಗ ಅಗ್ನಿಪಥ್ ಹೋರಾಟ ನಡೆದಿದೆ. ಸೇನೆಯ ಆಂತರಿಕ ನೇಮಕ ವಿಚಾರವೂ ಇವರಿಗೆ ರಾಜಕೀಯ ವಿರೋಧದ ಸಂಗತಿ!

ಕೆಲವೊಂದಿಷ್ಟು ತಿಂಗಳಿನಿಂದ ಸರಣಿಯಲ್ಲಿ ಹೋರಾಟಗಳು ನಡೆದುಕೊಂಡೇ ಬರುತ್ತಿವೆ. ಆಂದೋಲನ ಜೀವಿಗಳಿಗಂತೂ ಬಿಡು(?!) ವಿಲ್ಲದ ಕೆಲಸ. ವಿಚಾರಗಳು ಬೇರೆಬೇರೆ ಯಾಗಿರಬಹುದು, ಆದರೆ, ಆ ಹೋರಾಟಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರಿಗೆ ನಷ್ಟವಂತೂ ಆಗುತ್ತಿದೆ ಎಂಬುದು ಗಮನಾರ್ಹ. ಹಾಗೆ ದೇಶದ ಘನತೆಗೆ ಕುಂದು ತರುವುದೇ ಉದ್ದೇಶವೇ? ಹೋರಾಟಗಳು ಯಾವಾಗಲೂ ಸರಕಾರದ ಕಿವಿಹಿಂಡುವ ಕೆಲಸ ಮಾಡಬೇಕೆ ಹೊರತು, ದೇಶದ ಮಾನ ಹಾನಿ ಮಾಡುವ ಕೆಲಸವನ್ನಲ್ಲ.

ಭಾರತ ಮೊದಲಿನ ಸ್ಥಿತಿಯಲ್ಲಿಲ್ಲ. ಲಕ್ಷಾಂತರ ಕೋಟಿ ಹೂಡಿಕೆ ಭಾರತವನ್ನು ಹುಡುಕಿಕೊಂಡು ಬರುತ್ತಿದೆ. ವಿಶ್ವದ ಅತಿದೊಡ್ಡ
ಮಾರುಕಟ್ಟೆಯೂ ಭಾರತವೇ ಆಗಿದೆ. ೨೦೨೧-೨೦೨೨ರಲ್ಲಿ ನಮ್ಮ ದೇಶಕ್ಕೆ ೮೩.೫೭ ಬಿಲಿಯನ್ ಡಾಲರ್ ಹೂಡಿಕೆ ಬಂದಿದೆ. ಹಾಗೆಯೇ ಇಲ್ಲಿರುವ ನಿರುದ್ಯೋಗದ ಸಮಸ್ಯೆ, ಹಣದುಬ್ಬರದಂಥವೂ ಅಂತಾರಾಷ್ಟ್ರೀಯ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಆಶ್ಚರ್ಯವಾಗಬಹುದು!. ಆದರೆ ನೆನಪಿಡಿ, ನಿರುದ್ಯೋಗವಿಲ್ಲದೇ, ಹಣದುಬ್ಬರವಿಲ್ಲದೇ ಇದ್ದರೆ, ಅಂತಹ ದೇಶದಲ್ಲಿ ಯಾವ ಕಂಪನಿಯೂ ತನ್ನ ಉತ್ಪಾದನಾ ಘಟಕ ತೆರೆಯುವುದಿಲ್ಲ.

ಏಕೆಂದರೆ, ಕೆಲಸ ಮಾಡಲು ಸರಿಯಾದ ಉದ್ಯೋಗಿಗಳು ಸಿಗದೆ ಇರುವ ದೇಶದಲ್ಲಿ ಅವರು ಹೇಗೆ ತಾನೆ ತಮ್ಮ ಸಂಸ್ಥೆಯನ್ನು ನಡೆಸ ಬೇಕು? ಯಾವುದೇ ಪ್ರಜಾತಂತ್ರ ರಾಷ್ಟ್ರವಿರಬಹುದು ಅಲ್ಲಿ ಹೋರಾಟಗಳು ನಡೆದರೆ ತಪ್ಪಿಲ್ಲ. ಆ ಹೋರಾಟಗಳಿಗೂ ತಾರ್ಕಿಕ ಅಂತ್ಯ ಇರಬೇಕು, ಅದರಲ್ಲಿ ಲಾಜಿಕ್ ಸಹ ಇರ ಬೇಕು. ಬರೀ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಡುತ್ತಿದ್ದರೆ, ಅದನ್ನು ಹೇಗೆ ತಾನೆ ಹೋರಾಟ ಎಂದು ವ್ಯಾಖಾನಿಸುವುದು ವಿರೋಧ ಮಾಡುವುದಕ್ಕೂ ಸಹ ಒಂದು ಇತಿಮಿತಿ ಇರುತ್ತದೆ, ವಿನಾ ಕಾರಣ ಅದನ್ನು ಮೀರಿ
ದೇಶದ ಹೆಸರಿಗೆ ಆ ಹೋರಾಟಗಳು ಕಪ್ಪು ಚುಕ್ಕೆಗಳಾಗಿ ಮಾರ್ಪಾಡಾಗಬಾರದು.