ವಿವಿಗಳು ಕೈಜೋಡಿಸಿದ ಪಿಇಎಸ್ ಪರಿಕಲ್ಪನೆಯ ಮಹತ್ಕಾರ್ಯಕ್ಕೆ ಮುಖ್ಯಮಂತ್ರಿ, ಶಾಸಕರ ನಿರಾಸಕ್ತಿ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಲದಲ್ಲಿ ದೇಶದ ಗಮನ ಸೆಳೆದಿದ್ದ ಸರಕಾರಿ ಶಾಲೆಗಳ ದತ್ತು ಕಾರ್ಯಕ್ರಮ ಹಳ್ಳ ಹಿಡಿಯುತ್ತಿದ್ದು, ಇದರಿಂದ ಶಾಲೆಗಳು ಪುನಃ ದುಃಸ್ಥಿತಿಯ ದಾರಿಯಲ್ಲಿವೆ.
ರಾಜ್ಯದಲ್ಲಿ ಸುಮಾರು ೪೮ ಸಾವಿರ ಸರಕಾರಿ ಶಾಲೆಗಳಿದ್ದು, ಇವುಗಳ ಪೈಕಿ ಶೇ.೨೦ರಷ್ಟು ಶಾಲೆಗಳು ಮಾತ್ರ ಮಕ್ಕಳ ವ್ಯಾಸಂಗಕ್ಕೆ ಯೋಗ್ಯವಾಗಿವೆ. ಉಳಿದ ಬಹುತೇಕ ಶಾಲೆಗಳಲ್ಲಿ ಕಟ್ಟಡವಿದ್ದರೆ, ಕಾಂಪೌಂಡ್ ಇಲ್ಲ. ಕಾಂಪೌಂಡ್ ಇದ್ದರೆ ಶಿಕ್ಷಕರೇ ಇಲ್ಲ ಎನ್ನುವ ಸ್ಥಿತಿ. ಇನ್ನು ಬಹುತೇಕ ಕಡೆ ಶೌಚಾಲಯಗಳನ್ನು ಕೇಳುವಂತೆಯೇ ಇಲ್ಲ. ಅದರಲ್ಲೂ ಕೋವಿಡ್ ನಂತರ ಸರಕಾರಿ ಶಾಲೆಗಳ ಬಗ್ಗೆ ಸೂಕ್ತ ಕಾಳಜಿಯೇ ಇಲ್ಲವಾಗಿದ್ದು, ಬಹುತೇಕ ಶಿಥಿಲಾವಸ್ಥೆಯಲ್ಲಿವೆ.
ಇಷ್ಟಾದರೂ ರಾಜ್ಯ ಬಿಜೆಪಿ ಸರಕಾರ ಶಾಲೆಗಳ ದತ್ತು ಪಡೆಯುವ ತನ್ನದೇ ಕಾರ್ಯಕ್ರಮ ವನ್ನು ಅನಾಥ ಮಾಡಿ ಸುಮ್ಮನಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಸಲಹೆಗಾರರಾಗಿದ್ದ ಎಂ.ಆರ್.ದೊರಸ್ವಾಮಿ ನಾಯ್ಡು ಶಾಲಾದತ್ತು ಪರಿಕಲ್ಪನೆ ಯನ್ನು ಜಾರಿಗೊಳಿಸಿ ಸ್ವತಃ ಸುಮಾರು ೫ ಕೋಟಿ ರು. ವೆಚ್ಚದಲ್ಲಿ ೧೦ಕ್ಕೂ ಅಧಿಕ ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದರು. ಇದೇ ರೀತಿ ಶಾಸಕರು, ಪರಿಷತ್ ಸದಸ್ಯರು ಹಾಗೂ ಸಂಸದರು ಶಾಲೆಗಳನ್ನು ದತ್ತು ಪಡೆಯುವಂತೆ ಪ್ರೇರೇಪಿಸಿದ್ದರು.
ಇದಕ್ಕೆ ಓಗೊಟ್ಟ ಶಾಸಕರಾದ ರಾಮಲಿಂಗಾ ರೆಡ್ಡಿ, ಜಾರ್ಜ್, ಡಿ.ಸಿ.ತಮ್ಮಣ್ಣ ಹಾಗೂ ಸಚಿವ ಸೋಮಣ್ಣ ಸೇರಿದಂತೆ ಕೆಲವರು ಈ
ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ಅಭಿವೃದ್ಧಿ ಮಾಡಿದ್ದು
ಇಂದಿಗೂ ಮಾದರಿಯಾಗಿವೆ. ಹಾಗಿದ್ದು ಬಹುತೇಕ ಶಾಸಕರು ದತ್ತು ಕಾರ್ಯಕ್ರಮವನ್ನು ಪರಿಗಣಿಸಿಯೇ ಇರಲಿಲ್ಲ. ಈ ಹಿನ್ನಲೆ ಯಲ್ಲಿ ದೊರೆಸ್ವಾಮಿ ನಾಯ್ಡು ಸ್ವತಃ ಎಲ್ಲ ಶಾಸಕರಿಗೂ ಪತ್ರ ಬರೆದು ದತ್ತುಕಾರ್ಯದ ಅನಿವಾರ್ಯ ಮನವರಿಕೆ ಮಾಡಲು ಪ್ರಯತ್ನಿಸಿದರೂ ಹೆಚ್ಚಿನ ಪ್ರಯೋಜನವಾಗಿರಲಿಲ್ಲ. ಕೊನೆಗೆ ವಿಶ್ವವಿದ್ಯಾಲಯಗಳ ಮೊರೆ ಹೋಗಿ ಶಾಲೆಗಳನ್ನು ಅಭಿವೃದ್ಧಿ
ಪಡಿಸುವಲ್ಲಿ ಯಶಸ್ವಿಯಾಗಿದ್ದರು.
ಸುಮಾರು ೩೦ ವಿಶ್ವವಿದ್ಯಾಲಯಗಳು ರಾಜ್ಯದ ನಾನಾ ಶಾಲೆಗಳನ್ನು ದತ್ತು ಪಡೆದಿದ್ದವು. ಇದಕ್ಕಾಗಿ ಹಿಂದಿನ ಮುಖ್ಯಮಂತ್ರಿ ನೇತೃತ್ವದಲ್ಲಿ ವಿಧಾನಸೌಧದ ದೊಡ್ಡ ಕಾರ್ಯಕ್ರಮ ಆಯೋಜಿಸಿ ವಿವಿ ಕುಲಪತಿಗಳನ್ನು ಶಾಲೆಗಳ ಅಭಿವೃದ್ಧಿಗೆ ಬದ್ಥ ರಾಗುವಂತೆ ಮಾಡಿದ್ದರು. ಮಂಗಳೂರು, ಮೈಸೂರು, ಆರ್ಡಿಪಿಆರ್ ವಿವಿ ಸೇರಿದಂತೆ ಅನೇಕ ವಿವಿಗಳು ಶಾಲೆಗಳನ್ನು ಪಡೆದು ಗಮನಾರ್ಹ ರೀತಿಯಲ್ಲಿ ಅಭಿವೃದ್ಧಿಪಡಿಸಿವೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕವೂ ಶಾಲಾ ದತ್ತು
ಕಾರ್ಯಕ್ರಮ ಮುಂದುವರಿಸುವಂತೆ ನಾಯ್ಡು ಅವರು ವಿನಂತಿಸಿದ್ದು, ಈತನಕ ಅದನ್ನು ಮುಖ್ಯಮಂತ್ರಿ ಅವರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಇದರೊಂದಿಗೆ ಬಿಜೆಪಿ ಸರಕಾರವೇ ರೂಪಿಸಿದ್ದ ಕಾರ್ಯಕ್ರಮವನ್ನು ಅನಾಥ ಮಾಡಿ ಬಡಮಕ್ಕಳು ಕಲಿಯುವ ಶಾಲೆಗಳಿಗೆ ಅನ್ಯಾಯ ಮಾಡಿದಂತಾಗಿದೆ ಎನ್ನುತ್ತಾರೆ ಶಿಕ್ಷಣ ತಜ್ಞರು.