ಯಶೋ ಬೆಳಗು
yashomathy@gmail.com
ಅವರು ಮನೆಗೆ ಬರುವಾಗ ಕಾರಿನ ಸದ್ದು ರಸ್ತೆಯ ತಿರುವಿಗೆ ಬರುವಾಗಲೇ ಸಿದ್ದುಗೆ ತಿಳಿದುಬಿಡುತ್ತಿತ್ತು. ಅದರ ಒಂದೇ ಸಮನೆ ಬೊಗಳಾಟಕ್ಕೆ ಬಜ್ಜು ಕೂಡ ದನಿ ಸೇರಿಸುತ್ತಿತ್ತು. ಇವೆರಡರ ಸಂಭ್ರಮವನ್ನು ನೋಡುವುದೇ ಖುಷಿ. ಮನುಷ್ಯರಿಗಿಂತ ಪ್ರಾಣಿಗಳೇ ಮೇಲು. ಒಂದು ಹಿಡಿ ಪ್ರೀತಿ ಕೊಟ್ಟರೆ ಜೀವನಪೂರ್ತಿ ಅವು ನಮ್ಮ ನೆರಳಾಗಿ ನಮ್ಮನ್ನು ಕಾಯುತ್ತವೆ.
ಸದ್ದು-ಗದ್ದಲ-ಕರ್ಕಶ ಶಬ್ದಗಳಿಂದ ಮೊದಲಿಂದಲೂ ದೂರ. ಅಪ್ಪ ಶಿಲ್ಪಿಯೂ ಆಗಿದ್ದ ರಿಂದ ತಾವೇ ಮೇಣದಲ್ಲಿ ತಿದ್ದಿದ ದೇವರ ರೂಪ ಗಳಿಗೆ ಮಣ್ಣಿನ ಒಪ್ಪಡ ಕಟ್ಟಿ, ಲೋಹ ವನ್ನು ಹದವಾಗಿ ಕಾಯಿಸಿ ಆ ಒಪ್ಪಡದೊಳಗೆ ಕಾದ ಲೋಹವನ್ನು ಸುರಿದು ಸುಂದರ ಮೂರ್ತರೂಪ ವನ್ನು ಕೊಟ್ಟು ಆನಂತರ ಅದಕ್ಕೆ ಅಲಂಕಾರದ ಕುಸುರಿ ಕೆಲಸವನ್ನು ಆರಂಭಿಸುವಾಗ ಅಗಾಧವಾದ ಶಬ್ದ ಉಂಟಾಗುತ್ತಿತ್ತು… ಇದ್ದ ಪುಟ್ಟ ಮನೆಯಲ್ಲಿ ಅದು ಪ್ರತಿಧ್ವನಿಸುತ್ತಾ ಮನೆಯೊಳಗೆಲ್ಲ ಸುತ್ತುತ್ತಿದ್ದರೆ ನನಗೆ ತಡೆಯಲಾಗದಂಥ ವಿಪರೀತಿ ಕಿವಿ ನೋವು. ಕೀರಲು ದನಿ, ವಾಹನಗಳ ಹಾರ್ನ್.
ದೊಡ್ಡ ದನಿಯಲ್ಲಿ ಕೂಗುತ್ತಾ ಬರುವ ತಳ್ಳುಗಾಡಿಯ ವ್ಯಾಪಾರಿಗಳ ದನಿ, ಸಭೆ-ಸಮಾರಂಭಗಳಲ್ಲಿ ಮೊಳಗುವ ಮೈಕಿನ ದನಿ, ಮಕ್ಕಳ ರೋಧನ, ಗಿಜಿಗುಡುವ ಜನ, ರಸ್ತೆಯಲ್ಲಿನ ಜಗಳ, ಪಟಾಕಿಯ ಶಬ್ದ, ಸಿಡಿಲಿನ ಆರ್ಭಟ, ನಾಯಿಯ ಬೊಗಳುವಿಕೆ, ಮನೆಕಟ್ಟುವಾಗ ಉಂಟಾಗುವ ಮರಗೆಲಸ, ಫೇರ್ ಪಾಲಿಶಿಂಗ್, ಡ್ರಿಲ್ಲಿಂಗ್, ಸಾಲ್ಡರಿಂಗ್ನ ಶಬ್ದ, ಮನೆಯಲ್ಲಿ ಅಡುಗೆ ಕೆಲಸಗಳಲ್ಲಿ ಬಳಸುವ ಮಿಕ್ಸರ್ನ ಶಬ್ದಗಳೆಲ್ಲವೂ ನನ್ನಿಂದ ಸಹಿಸಲಾಗದೆ ಕಿರಿಕಿರಿಯನ್ನುಂಟು ಮಾಡುವಂಥ ಶಬ್ದ ತರಂಗಗಳು. ಹೀಗಾಗಿ ಇಂದಿನ ನಮ್ಮ ಜೀವನಶೈಲಿಯ ಅನಿವಾರ್ಯ ಭಾಗವಾಗಿ ಹೋಗಿರುವ ಮೊಬೈಲ್ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಆಗಿಯೇ ಇರುತ್ತದೆ. ಬ್ಲೂ ಟೂತ್, ಹೆಡ್ ಫೋನ್, ear phone ಗಳಿಂದ ಸದಾ ದೂರ.
ಪುಣ್ಯಕ್ಕೆ ಮಗ ಹೆಚ್ಚು ಗಲಾಟೆಯವನಲ್ಲ. ಹಟ ಮಾಡುವುದು, ಸಿಟ್ಟು ಮಾಡಿಕೊಳ್ಳುವುದು, ರಂಪಾಟ ಮಾಡುವ ಗುಣಗಳಿಲ್ಲ. ಅವನ ಕೆಲವು ಅಗತ್ಯಗಳನ್ನು ಪೂರೈಸಿಬಿಟ್ಟರೆ ಅವನ ಪಾಡಿಗೆ ಅವನು ಖುಷಿಖುಷಿಯಾಗಿದ್ದು ಬಿಡುತ್ತಾನೆ. ಆದರೆ ಅಪ್ಪನಂತೆ pet lover.
ಆಪ್ಪನ ಅಫೀಸೆಂದರೆ ಅದು ಅವನಿಗೆ ಫುಲ್ ಫ್ರೀಡಮ್ ಇದ್ದಂಥ ಜಾಗ. ಅವರ ಕುರ್ಚಿ, ಟೇಬಲ್ಲು, ಪುಸ್ತಕ- ಪೆನ್ನುಗಳೇ ಅವನ ಆಟಿಕೆಗಳು. ಒಂದು ದಿನಕ್ಕೂ ರವಿ ಅವನ ತಂಟೆಗಳಿಗೆ ರೋಸಿ ಗದರಲಿಲ್ಲ.
ಹೊಚ್ಚ ಹೊಸ ಪುಸ್ತಕ ಓದಲೆಂದು ಮನೆಗೆ ತಂದರೆ ಅದನ್ನು ಪಟಕ್ಕನೆ ಕಿತ್ತುಕೊಂಡು ಅದರ ಪುಟವನ್ನು ಪರ್ರನೆ ಹರಿದು ರುಚಿ ನೋಡಿ ಬಿಡುತ್ತಿದ್ದ. ಆದರೂ ಮಗು ಅವನಿಗೇನು ತಿಳಿಯುತ್ತೆ ಬಿಡು ಅನ್ನುತ್ತಾ ಅದರ ಮೇಲೊಂದು ಅವನಿಗೆ ಆಟೋಗ್ರಾಫ್ ಹಾಕಿಟ್ಟು ಮತ್ತೊಂದು ಪುಸ್ತಕವನ್ನು ತರಿಸಿಕೊಳ್ಳುತ್ತಿದ್ದರು. ತಮ್ಮ ಕಚೇರಿಯ ಟೆರೇಸಿನ ಮೇಲೆ ಹದಿನೈದಕ್ಕೂ ಹೆಚ್ಚು ವಿವಿಧ ತಳಿಯ ಶ್ವಾನಗಳನ್ನು ಪೋಷಿಸು ತ್ತಿದ್ದರು. ಅದರ ಪುಟ್ಟ ಪುಟ್ಟ ಮರಿಗಳನ್ನು ನೋಡಿ ಮುದ್ದಾಡುವುದರಲ್ಲಿ ಮಗನಿಗೆ ಅಪರಿಮಿತ ಖುಷಿ. ನಾವು ಹೊಸಮನೆಗೆ ಬಂದಾಗಲೂ ಅವನಿಗೆ ಜತೆಗೆ ಆಡಲೆಂದು ಒಂದು ಲ್ಯಾಬ್ರೆಡಾರ್ ಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು.
ಹೀಗೆ ನಮ್ಮ ಮನೆಯೊಳಗೆ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡ ಮುದ್ದು ಲ್ಯಾಬ್ರೆಡಾರ್ ಮರಿಗೆ ಗುರುಸಿದ್ದ ಎಂದು ನಾಮಕರಣ ಮಾಡಿ ದರು. ಅರೆ, ಇಷ್ಟು ಮುದ್ದಾದ ಮರಿಗೆ ಅದೇನು ಗುರುಸಿದ್ದ ಅಂತ ಹೆಸರಿಟ್ಟಿದ್ದಾರಲ್ಲ? ಎಂದು ಅದರ ಡಾಕ್ಟರು ನಗುತ್ತಲೇ ಅದನ್ನು ಟ್ರೀಟ್ ಮಾಡುತ್ತಿದ್ದರು. ನಾವೆಲ್ಲ ಅದನ್ನು ಪ್ರೀತಿಯಿಂದ ಸಿದ್ದು ಅಂತಲೇ ಕರೆಯುತ್ತಿದ್ದೆವು. ಸಿದ್ದು ಕೂಡ ಮನೆಗೆ ಬಹಳ ಚೆನ್ನಾಗಿ ಹೊಂದಿ ಕೊಂಡು ಬಿಟ್ಟಿತ್ತು. ಅದು ಗೇಟಿನಲ್ಲಿದ್ದರೆ ನಾವು ಆತಂಕ ಬಿಟ್ಟು ನೆಮ್ಮದಿಯಾಗಿ ಮನೆಯೊಳಗೆ ನಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಬಹು ದಾಗಿತ್ತು. ಶಾಲೆಯಿಂದ ಬಂದ ಕೂಡಲೆ ಅಪ್ಪನ ಕಚೇರಿಗೆ ಹೋಗಿ ಒಮ್ಮೆ ಅಪ್ಪನನ್ನು ಮಾತಾಡಿಸಿ ಬರುವುದು ಮಗನ ದೈನಂದಿನ ಅಭ್ಯಾಸಗಳಲ್ಲಿ ಒಂದಾಗಿತ್ತು. ಹೀಗೇ ಒಮ್ಮೆ ಹೋದಾಗ ಕಚೇರಿಯಲ್ಲಿದ್ದ ಭಜಗೋವಿಂದಂ ಅನ್ನುವ shitzu ಮರಿಗೆ ಮೈತುಂಬ tics ಆಗಿರುವುದನ್ನು ಕಂಡು ಅದನ್ನು ಮನೆಗೆ ಕರೆದುಕೊಂಡು ಬಂದ. ಇದರಿಂದ ವಿಪರೀತ ಅಸಹನೆಗೊಳಗಾದ ಸಿದ್ದು ನಮ್ಮ ಗಮನ ಸೆಳೆಯಲು ಹೆಚ್ಚು ಬೊಗಳಲು ಶುರು ಮಾಡಿತು.
ನೋಡಲು ಪುಟ್ಟ ದೇಹವಾದರೂ ಭಜಗೋವಿಂದಂನ ಶೌರ್ಯಕ್ಕೇನೂ ಕಡಿಮೆಯಿಲ್ಲ. ಅದೂ ಸಹ ಅದಕ್ಕೆ ಸರಿಸಮನಾಗಿ ಬೊಗಳುತ್ತಾ ಮನೆಯಲ್ಲಿದ್ದ ನೆಮ್ಮದಿಯೆಲ್ಲ ಚೆದುರಿಹೋಯಿತು. ನೋಡು ಪುಟ್ಟ, ಒಂದು ನಾಯಿಯನ್ನು ನೋಡಿಕೊಳ್ಳುವುದೇ ಕಷ್ಟ. ಅದರ ಜತೆಗೆ ಇನ್ನೊಂದು ಬಂದರೆ ಎರಡರ ಆರೈಕೆ ಮಾಡುವುದು ಇನ್ನೂ ಕಷ್ಟ. ಅದಕ್ಕೆ ಬೇಕಾದ ಟ್ರೀಟ್ಮೆಂಟ್ ಕೊಡಿಸಿ ಮತ್ತೆ ಅದನ್ನು ಅಪ್ಪನ
ಕಚೇರಿಯ ಬಿಟ್ಟು ಬಾ. ಅದ್ರೆ ಜನರಿದ್ದಾರೆ ಅದನ್ನ ನೋಡಿಕೊಳ್ಳಲು. ಇಲ್ಲಿ ಎಲ್ಲವನ್ನೂ ನನಗೊಬ್ಬಳಿಗೇ ನೋಡಿಕೊಳ್ಳುವುದು ಕಷ್ಟವಾಗತ್ತೆ ಎಂದಾಗ ಆಯ್ತಮ್ಮ ಎಂದವನು ಲಿಫ್ಟಿನಲ್ಲಿ ಕರೆದುಕೊಂಡು ಹೋಗುವಾಗ ಅದರ ಕುತ್ತಿಗೆಗೆ ಹಾಕಿದ್ದ ಬೆಲ್ಟಿನ ಹುಕ್ ಮೇಲಿನ ಮಹಡಿಯ ಲಿಫ್ಟ್ ಬಾಗಿಲಿನ ಸಿಕ್ಕಹಾಕಿಕೊಂಡು ಬಿಟ್ಟಿತು.
ಬಟನ್ ಒತ್ತಿದ್ದ ಕಾರಣ ಲಿಫ್ಟ್ ಬೇಸ್ಮೆಂಟಿನ ಕಡೆಗೆ ಚಲಿಸಲಾರಂಭಿಸಿದ್ದನ್ನು ಕಂಡು ಜೀವವೇ ಬಾಯಿಗೆ ಬಂದಂತಾಯ್ತು. ಅಷ್ಟೇ ಇವತ್ತು ಈ ಭಜಗೋವಿಂದಂ ಕತೆ ಎಂದು ಮೈಕೈಯೆಲ್ಲ ತಣ್ಣಗಾಗಿ ಕಣ್ಣು ಕತ್ತಲೆ ಬರುವಂತಾಯ್ತು. ಆದರೆ ಅದೃಷ್ಟವಶಾತ್ ಅದರ ಕೊರಳಲ್ಲಿದ್ದ ಬೆಲ್ಟ ತುಂಡಾಗಿ ಭಜಗೊಂವಿಂದಂಗೆ ಏನೂ ತೊಂದರೆಯಾಗಲಿಲ್ಲ. ಆದರೆ ಈ ಘಟನೆಯಿಂದ ಅದರೆಡೆಗೊಂದು ಅಟಾಚ್ಮೆಂಟ್ ಬೆಳೆಯಿತು. ಇನ್ನಷ್ಟು ಮುತುವರ್ಜಿ ವಹಿಸಿ ಅದರ ಆರೈಕೆ ಮಾಡುತ್ತಾ ಎರಡನ್ನೂ ಮನೆಯ ಇಟ್ಟುಕೊಂಡು ಪ್ರೀತಿಯಿಂದ ಅದನ್ನು ಬಜ್ಜು ಎಂದು ಕರೆಯಲು ಶುರು ಮಾಡಿದೆವು.
ಆದರೆ ಬಜ್ಜು ಮಹಾನ್ ಕಿಡಿಗೇಡಿ. ಸಿದ್ದುವನ್ನು ಕಂಡಾಗಲೆಲ್ಲ ಇದರ ಆರ್ಭಟ ಹೆಚ್ಚಾಗುತ್ತಿತ್ತು. ಮೊದಲೆರಡು ದಿನ ಅಸಹನೆಗೊಂಡರೂ ಆನಂತರ ಅದನ್ನು ನಿರ್ಲಕ್ಷಿಸಿ ತನ್ನ ಪಾಡಿಗೆ ತಾನಿರತೊಡಗಿತು ಸಿದ್ದು. ಯಾಕೀರೀತಿ ಇವೆರಡೂ ಕಿತ್ತಾಡುತ್ತವೆ? Lets make a friendship between them ಅಂದುಕೊಂಡು ಒಮ್ಮೆ ಎರಡನ್ನೂ ಒಟ್ಟಿಗೆ ಆಟವಾಡಿಸುತ್ತ ನೋಡೋವೆಂದು ಎರಡರ ಕುತ್ತಿಗೆಗೆ ಹಾಕಿದ್ದ ಬೆಲ್ಟನ್ನು ಬಿಚ್ಚಿ ಬಿಟ್ಟಿದ್ದೇ ತಡ ಅದೇನು ಆಕ್ರೋಶವಿತ್ತೋ ಸಿದ್ದು ಒಮ್ಮೆಲೇ ಭಜಗೋವಿಂದಂನ ಕುತ್ತಿಗೆಗೆ ಬಾಯಿ ಹಾಕಿಬಿಟ್ಟಿತ್ತು. ಅಂಗೈಯಗಲದ ಪುಟ್ಟ ಬಜ್ಜು ಅದರ ದಾಳಿಗೆ ತತ್ತರಿಸಿಹೋಗಿ ಕುಂಯ್ಗುಡತೊಡಗಿತು.
ಇದನ್ನು ಕಂಡು ಹೆದರಿದ ಮಗ ಜೋರಾಗಿ ಅಳಲು ಶುರು ಮಾಡಿದ. ಹರಸಾಹಸ ಮಾಡಿ ಅದರಿಂದ ದೂರ ಮಾಡುವಷ್ಟರಲ್ಲಿ ನಮಗೆ ಸಾಕುಸಾಕೆನಿಸಿಹೋಗಿತ್ತು. ಆದರೆ ರವಿ ಎರಡನ್ನೂ ಅಷ್ಟೇ ಪ್ರೀತಿಯಿಂದ ನೊಡಿಕೊಳ್ಳುತ್ತಿದ್ದರು. ಅವರು ಕಚೇರಿಗೆ ಹೋಗುವಾಗ ಎರಡರ ಜತೆಗೂ ಸ್ವಲ್ಪ ಸಮಯ ಕಳೆದು ಹೋಗುತ್ತಿದ್ದರು. ಅವರು ಮನೆಗೆ ಬರುವಾಗ ಕಾರಿನ ಸದ್ದು ರಸ್ತೆಯ ತಿರುವಿಗೆ ಬರುವಾಗಲೇ ಸಿದ್ದುಗೆ ತಿಳಿದುಬಿಡುತ್ತಿತ್ತು. ಅದರ ಒಂದೇ ಸಮನೆ ಬೊಗಳಾಟಕ್ಕೆ ಬಜ್ಜು ಕೂಡ ದನಿ ಸೇರಿಸುತ್ತಿತ್ತು. ಇವೆರಡರ ಸಂಭ್ರಮವನ್ನು ನೋಡುವುದೇ ಖುಷಿ. ಮನುಷ್ಯರಿಗಿಂತ ಪ್ರಾಣಿ ಗಳೇ ಮೇಲು. ಒಂದು ಹಿಡಿ ಪ್ರೀತಿ ಕೊಟ್ಟರೆ ಜೀವನಪೂರ್ತಿ ಅವು ನಮ್ಮ ನೆರಳಾಗಿ ನಮ್ಮನ್ನು ಕಾಯು ತ್ತವೆ.
ನೋಡಿದ್ದೆಲ್ಲವೂ ಬೇಕೆನ್ನಿಸುವುದು ಸಹಜ. ಆದರೆ ತಂದ ಮೇಲೆ ಅದಕ್ಕೆ ತಕ್ಕಂತೆ ಅದನ್ನು ಕಾಪಾಡುವ ಶಕ್ತಿ ನಮ್ಮಲ್ಲಿದೆಯಾ ಅನ್ನುವು ದನ್ನೂ ಕೇಳಿಕೊಳ್ಳಬೇಕಾಗುತ್ತದೆ. ಸಿದ್ದು ದಷ್ಟಪುಷ್ಟವಾಗಿಯೂ ಸಾಕಷ್ಟು ಬಲಶಾಲಿಯಾಗಿಯೂ ಇತ್ತು. ಅದನ್ನು ವಾಕಿಂಗ್ಗೆ ಕರೆದು ಕೊಂಡು ಹೋಗಲು ಅಷ್ಟೇ ಶಕ್ತಿಯುತರಾದವರು ಬೇಕು. ನನ್ನಿಂದ ಅದು ಸಾಧ್ಯವಿಲ್ಲವೆನ್ನಿಸಿ ಅದರ ಊಟೋಪಚಾರದಿಂದ ಹಿಡಿದು ಎಲ್ಲ ಆರೈಕೆಯನ್ನೂ ನಮ್ಮ ಸೆಕ್ಯುರಿಟಿ ಗಾರ್ಡ್ ನದ್ದೇ ಕೆಲಸ. ಹಾಗೆ ಬಂದ ಇಬ್ಬರು ಮೂರು ಜನರನ್ನು ಬೀಳಿಸಿ ಬೆನ್ನು ಮೂಳೆ ಮುರಿದಿದೆ. ಅದನ್ನು ಪಳಗಿಸುವುದೂ ಒಂದು ಕಲೆಯೇ.
ಹೀಗಾಗಿ ಅದನ್ನು ನೋಡಿಕೊಳ್ಳುವುದರ ಜತೆಗೆ ಅದರ ಮೇಲೆ ಪ್ರೀತಿಯಿರುವಂತಹ ದಲಿದತ್ ಭಟ್ ಅನ್ನುವವರನ್ನು ನೇಮಕ ಮಾಡಿ ದರು. ಅಲ್ಲಿಗೆ ಅದರ ಜವಾಬ್ದಾರಿಯಿಂದ ಬಿಡುಗಡೆ ಸಿಕ್ಕು ಅರ್ಧ ತಲೆ ನೋವು ತಪ್ಪಿತ್ತು. ಆದರೆ ಕೆಲವು ದಿನಗಳ ನಂತರ ಒಂದು
ಕುಟುಂಬವನ್ನು ನಮ್ಮ ಸಹಾಯಕ್ಕೆಂದು ಜತೆಯಲ್ಲಿಟ್ಟುಕೊಂಡರೆ ಸಮಯದ ನಿರ್ಬಂಧವಿಲ್ಲದೆ ಎಲ್ಲವನ್ನೂ ಸುಲಭವಾಗಿ ನಿರ್ವಹಿಸ ಬಹುದೆನ್ನುವ ಲೆಕ್ಕಾಚಾರದ ಮೇಲೆ ಒಂದು ಕುಟುಂಬವನ್ನು ನಮ್ಮೊಡನೆ ಇಟ್ಟುಕೊಂಡೆವು.
ನೋಡು, ಬಂದಿರುವವರು ಹೊಸಬರು. ಅವರು ನಮ್ಮ ರೀತಿ-ನೀತಿಗಳಿಗೆ ಹೊಂದಿಕೊಳ್ಳುವವರೆಗೂ ಇರುವವರನ್ನು ಕೆಲಸದಿಂದ ತೆಗೆಯಬೇಡ. ಅವರೂ ಜತೆಗೇ ಇರಲಿ ಎಂದಾಗ ಅದೂ ನಿಜವೇ ಅಂದುಕೊಂಡು ಸುಮ್ಮನಾಗಿದ್ದೆ. ಮನೆಯಲ್ಲಿ ಮನೆಯವರಿಗಿಂತ ಹೊರಗಿನವರೇ ಹೆಚ್ಚಾಗಿ ಹೋಗಿದ್ದರು. ಆದರೆ ಅನಿರೀಕ್ಷಿತವಾಗಿ ರವಿಯ ನಿರ್ಗಮನದಿಂದ ಉಂಟಾದ ಬದಲಾವಣೆಗಳಿಂದಾಗಿ ಎಲ್ಲವನ್ನೂ ನಿಭಾಯಿಸುವುದು ನನಗೆ ಬಹಳ ಕಷ್ಟವೆನಿಸತೊಡಗಿತು. ಹೀಗಾಗಿ ದಲಿದತ್ ಭಟ್ನ್ನು ಮರಳಿ ಕಚೇರಿಗೆ ಕಳಿಸಿದೆ. ಕೆಲವು ದಿನಗಳ ಕಾಲ ರವಿಯ ಫೋಟೋಗೆ ಹೂವಿನ ಹಾರವನ್ನು ಹಾಕಿ ದೀಪ ಹಚ್ಚಿಡುವಾಗ ಅಷ್ಟು ಗಲಾಟೆ ಮಾಡುತ್ತಿದ್ದ ಸಿದ್ದು-ಬಜ್ಜು ಎರಡೂ ಮೌನವಾಗಿ ರೋಧಿಸುತ್ತಾ, ಕಣ್ಣೀರು ಹಾಕುತ್ತಾ ಕಾಲು ಮಡಚಿ ಅವರ ಫೋಟೋವನ್ನೇ ದಿಟ್ಟಿಸುತ್ತ ಕುಳಿತುಬಿಡುತ್ತಿದ್ದವು.
ರಾತ್ರಿ ಹನ್ನೆರಡು ಗಂಟೆಯಾಯಿತೆಂದರೆ ಲಿಫ್ಟಿನ ಬಾಗಿಲು ತನ್ನಷ್ಟಕ್ಕೆ ತಾನೇ ತೆರೆದಂತೆ ಸದ್ದಾಗುತ್ತಿತ್ತು. ಸಿದ್ದುವಿನ ಊಳಿಡುತ್ತಾ
ಅಳುವ ದನಿಯನ್ನು ಕಂಡು ಬಜ್ಜು ಪಿಳಿಪಿಳಿ ಕಣ್ಣು ಬಿಡುತ್ತಾ ಅತ್ತಿಂದಿತ್ತ ಅಸಹನೆಯಿಂದ ಓಡಾಡತೊಡಗುತ್ತಿತ್ತು. ಮಗನ ಭವಿಷ್ಯವೊಂದು ಕಣ್ಣೆದುರಿಗಿದೆಯಲ್ಲ ಹೀಗಾಗಿ ನಾನಂತೂ ಒಂದಷ್ಟು ದಿನಗಳು ನಿದ್ರೆಮಾತ್ರೆಗಳಿಗೆ ಶರಣಾಗಿ ಎಲ್ಲ ನೋವನ್ನೂ ಮರೆಯುವ ಪ್ರಯತ್ನ
ಮಾಡುತ್ತಿz. ನೆನಪುಗಳು ಕಾಡದಂತೆ ಬೇರೆದರೂ ಹೋಗೋಣವೆಂದರೆ ಅಪ್ಪ ಇದ್ದ ಮನೆ ಬಿಟ್ಟು ನಾನೆಲ್ಲಿಗೂ ಬರಲ್ಲ ಅನ್ನುವ ಮಗನ ಹಟ. ಹೀಗಾಗಿ ಇದ್ದ ಮನೆಯನ್ನೇ ಚಲನಚಿತ್ರದ ಚಿತ್ರೀಕರಣಕ್ಕೆಂದು ಕೊಟ್ಟೆ. ಚಿತ್ರೀಕರಣದ ಸಮಯದಲ್ಲಿ ನಾಯಿ ಬೊಗಳಿದರೆ ರೆಕಾರ್ಡಿಂಗಿಗೆ ಕಷ್ಟವಾಗುತ್ತದೆ ಎಂದಾಗ ಅದನ್ನು ಯಾರಾದರೂ ಚೆನ್ನಾಗಿ ನೊಡಿಕೊಳ್ಳುವವರಿಗೆ ಕೊಟ್ಟುಬಿಡೋಣವೆಂದೆ.
ಬೇಡವೆಂದು ಮಗ ಅಳೋಕೆ ಶುರು ಮಾಡಿದ. ಯಾವುದನ್ನು ನಿಭಾಯಿಸಲಿ? ಮನೆಯನ್ನಾ? ಮಗನನ್ನಾ? ಸಾಕುಪ್ರಾಣಿಗಳನ್ನಾ? ಸಾಲದ್ದಕ್ಕೆ ಕರೋನಾ…. ದಿಕ್ಕುತೋಚದಂತೆ ಸುಮ್ಮನೆ ಕುಳಿತುಬಿಟ್ಟೆ..