Saturday, 23rd November 2024

ಭೂಕುಸಿತ: ಗುಂಡ್ಯದಿಂದ ಆಲೂರುವರೆಗೆ ವಾಹನ ಸಂಚಾರ ನಿರ್ಬಂಧ

ಹಾಸನ: ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ ಬಳಿ ರಾ.ಹೆದ್ದಾರಿ 75 ರ ಕೆಳಭಾಗದಲ್ಲಿ ಗುರುವಾರ ಮತ್ತೆ ಭೂಕುಸಿತ ಉಂಟಾಗಿದ್ದು, ಗುಂಡ್ಯದಿಂದ ಆಲೂರುವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸ ಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಕಲೇಶಪುರ ಉಪ ವಿಭಾಗಾಧಿಕಾರಿ ಪ್ರತೀಕ್‌ ಭಾಯಲ್‌, ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಪ್ರಯಾಣಿಕ ವಾಹನಗಳಿಗೆ ಸಂಚಾರಕ್ಕೆ ಅವಕಾಶವಿದೆ ಎಂದರು.

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದು, ಮಣ್ಣಿನ ಸಂರಚನೆಯಿಂದಾಗಿ ಈ ಸ್ಥಳವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ಬಾರಿಯೂ ಮಳೆ ಸುರಿಯು ತ್ತಿರುವುದರಿಂದ ಮೇಲ್ಭಾಗದಿಂದ ನೀರು ಹರಿದು ಬರುತ್ತಿದೆ. ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಭೂಕುಸಿತ ಉಂಟಾಗುತ್ತಿದೆ ಎಂದು ತಿಳಿಸಿದರು.

ಎಲ್ಲ ರೀತಿಯ ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ, ಈ ಸ್ಥಳದಲ್ಲಿ ಚೆಕ್‌ಪೋಸ್ಟ್‌ ಮಾದರಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸ ಲಾಗುವುದು. ಭೂಕುಸಿತ ಆಗುತ್ತಿರುವ ಸ್ಥಳದಲ್ಲಿ ಏಕಮುಖ ಸಂಚಾರ ಇರಲಿದೆ. ಒಂದು ಬದಿಯ ವಾಹನಗಳು ಸಾಗಿದ ನಂತರ ಇನ್ನೊಂದು ಬದಿಯ ವಾಹನಗಳು ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಸಮಿತಿ ವರದಿ ನೀಡುವವರೆಗೆ ಈ ಸ್ಥಳದಲ್ಲಿ ಸಂಚಾರ ನಿಯಂತ್ರಿಸುವುದು ಅಗತ್ಯವಾಗಿದೆ. ಭೂಕುಸಿತದಿಂದಾಗಿ ಇದುವರೆಗೆ ಯಾವುದೇ ಜೀವ, ಆಸ್ತಿ ಹಾನಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ವ‌ರ್ಷವೂ ಇದೇ ಸ್ಥಳದಲ್ಲಿ ಭೂಕುಸಿತ ಉಂಟಾಗಿತ್ತು. ಶಾಶ್ವತ ತಡೆಗೋಡೆ ನಿರ್ಮಾಣ ಮಾಡದ ಗುತ್ತಿಗೆದಾರರ ನಿರ್ಲಕ್ಷ್ಯ ದಿಂದ ಮತ್ತೊಮ್ಮೆ ಭೂಕುಸಿತ ಆಗಿದೆ. ಇದರಿಂದ ವಾಹನ ಸಂಚಾರ ಸ್ಥಗಿತ ಆಗುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.